Vijaya Bharathi

Children Stories Fantasy

2  

Vijaya Bharathi

Children Stories Fantasy

ಹಕ್ಕಿಯ ಕನಸು

ಹಕ್ಕಿಯ ಕನಸು

2 mins
108


ಬೇಸಿಗೆ ರಜ ಬಂದ ಕೂಡಲೇ ಪಟ್ಟಣಗಳಿಂದ ಮಕ್ಕಳು ತಮ್ಮ ಅಜ್ಜನ ಮನೆಗೆ ಹೋಗುವುದು ಸರ್ವೇ ಸಾಮಾನ್ಯ. ಇದರಂತೆ ಪುಟ್ಟ ಮತ್ತು ಪುಟ್ಟಿಯೂ ಬೆಂಗಳೂರಿನಿಂದ ತಮ್ಮ ಅಜ್ಜನ ಊರು,ಶ್ರೀರಂಗ ಪಟ್ಟಣಕ್ಕೆ ಹೊರಟರು. ನಗರದ ಶಿಸ್ತಿನ ವಾತಾವರಣದಿಂದ ಬೇಸತ್ತಿದ್ದ ಪುಟ್ಟ ಮತ್ತು ಪುಟ್ಟಿಗೆ ಆ ಪುಟ್ಟ ಐತಿಹಾಸಿಕ ಸುಂದರ ದ್ವೀಪವನ್ನು ನೋಡಿ ಖುಶಿಯಾಗುತ್ತಿತ್ತು.ಜೊತೆಗೆ ಪ್ರೀತಿಯ ಅಜ್ಜ ಅಜ್ಜಿಯರು, ತಾವು ಏನು ಮಾಡಿದರೂ ಬಯ್ಯುವುದಿಲ್ಲವೆಂಬ ಭರವಸೆ ಬೇರೆ. ಇಬ್ಬರೂ ಸ್ವತಂತ್ರವಾಗಿ ನೆಮ್ಮದಿಯಿಂದ ರಜವನ್ನು ಕಳೆಯುತ್ತಿದ್ದರು.


ಅಜ್ಜ ಅಜ್ಜಿಯ ಜೊತೆ ರಂಗನಾಥನ ದೇವಸ್ಠಾನ,ಕಾವೇರಿ ನದಿ ತೀರ, ನದಿಸ್ನಾನ ,ಪಕ್ಷಿಧಾಮ ,ದರಿಯದವಲತ್,ಗುಂಬಸ್,

ನಿಮಿಷಾಂಬ ದೇವಸ್ಥಾನ,ಸಂಗಮ ಅಂತ ದಿನಕ್ಕೊಂದು ಕಡೆ ತಿರುಗುತ್ತಾ, ಅಜ್ಜಿ ಮಾಡಿಕೊಡುತ್ತಿದ್ದ ಕುರುಕಲು ತಿಂಡಿಗಳನ್ನು ತಿನ್ನುತ್ತಾ, ಅಜ್ಜನ ಬಾಯಿಯಿಂದ ಕತೆಗಳನ್ನು ಕೇಳುತ್ತಾ ಕಾಲ ಕಳೆಯುತ್ತಿದ್ದರು. ಪ್ರತಿದಿನ ರಾತ್ರಿ ಪುಟ್ಟ ಪುಟ್ಟಿ ಯರಿಗೆ ಅವರ ಅಜ್ಜ ಮಲಗುವ ಮುಂಚೆ ಅನೇಕ ರೋಚಕ ಕತೆಗಳು, ಪೌರಾಣಿಕ ಐತಿಹಾಸಿಕ ಕತೆಗಳು, ಸ್ಪೂರ್ತಿದಾಯಕ ಕಥೆಗಳನ್ನು ಹೇಳುತ್ತಿದ್ದರು.


ಇಂದು ಪುಟ್ಟ್ ಪುಟ್ಟಿ ಇಬ್ಬರೂ ತಮ್ಮ ಅಜ್ಜನ ಮನೆಯ ಅಂಗಳದಲ್ಲಿ ಒಂದು ಮಾವಿನ ಮರದ ಮೇಲಿದ್ದ ಹಕ್ಕಿಗೂಡನ್ನು ನೋಡಿದ್ದರು. ಅವರು ಅಜ್ಜನನ್ನು ಹಕ್ಕಿಗಳ ಕಥೆ ಹೇಳುವಂತೆ ಪೀಡಿಸಿದಾಗ ,ಅವರ ಅಜ್ಜ ಹಕ್ಕಿಗಳ ಕತೆಯನ್ನು ಹೇಳಿದರು.

"ನೋಡಿ ಮಕ್ಕಳಾ,ಮನುಷ್ಯನಂತೆ ಪ್ರಾಣಿ ಪಕ್ಷಿಗಳೂ ಸಹ ತಮ್ಮ ಮರಿಗಳನ್ನು ಬೆಳೆಸುವುದು,ಅದಕ್ಕಾಗಿ ಆಹಾರವನ್ನು ಸಂಗ್ರಹಿಸುವುದು, ಎಲ್ಲವನ್ನೂ ಮಾಡುತ್ತವೆ. ಪ್ರಕೃತಿ ಸಹಜವಾಗಿ ಹಸಿವು,ಬಾಯಾರಿಕೆ, ನಿದ್ರೆ,ಕನಸುಗಳು ಎಲ್ಲವೂ ಅವುಗಳಿಗೂ ಉಂಟು" ಕತೆ ಹೇಳುತ್ತಿದ್ದಾಗ,ಮಧ್ಯದಲ್ಲಿ ಪುಟ್ಟಿ ತಾತನನ್ನು "ತಾತ,ಅವುಗಳಿಗೇಕೆ ಮಾತನಾಡಲು ಬರುವುದಿಲ್ಲ?"ಎಂದು ಪ್ರಶ್ನೆ ಕೇಳಿದಾಗ, ಪುಟ್ಟ ತನ್ನ ಪ್ರಶ್ನೆ ಯನ್ನೂ ಕೇಳಿದ "ತಾತ, ಹಿಂದಿನ ಕಾಲದಲ್ಲಿ ಪ್ರಾಣಿ ಪಕ್ಷಿಗಳು ಮಾತನಾಡುತ್ತಿದ್ದವಂತೆ, ಈಗೇಕೆ ಮಾತನಾಡುವುದಿಲ್ಲ?" ಎಂದು ತನ್ನ ಪ್ರಶ್ನೆಯನ್ನೂ ಕೇಳಿದ್ದ,.ಆಗ ಅವನ ಅಜ್ಜಮಕ್ಕಳ ಕುತೂಹಲಕ್ಕೆ ಖುಶಿ ಪಡುತ್ತಾ ಕತೆಯನ್ನು ಮುಂದುವರಿಸಿದ. "ಮಕ್ಕಳೆ, ನಿಮಗೆ ಎಲ್ಲವನ್ನೂ ತಿಳಿದುಕೊಳ್ಳಬೇಕೆಂಬ ಕುತೂಹಲ ಎಷ್ಟೊಂದು ಇದೆ. ತುಂಬಾ ಸಂತೋಷ, ಈಗ ನಾನು ನಿಮ್ಮ ಪ್ರಶ್ನೆಗೆ ಉತ್ತರ ಹೇಳುತ್ತೇನೆ.ಈ ಪ್ರಾಣಿ ಪಕ್ಷಿಗಳೂ ಸಹ ನಮ್ಮನಿಮ್ಮಂತೆಯೇ ಯಾವಾಗಲೂ ಮಾತನಾಡುತ್ತವೆ. ಆದರೆ ನಮ್ಮ ಪೂರ್ವಿಕರಿಗೆ ಅವುಗಳ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ವಿದ್ಯೆ ಕರಗತವಾಗಿತ್ತು. ಆದರೆ ಇಂದು ನಮಗೆ ಪ್ರಾಣಿಗಳ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ವಿದ್ಯೆ ಮರೆತುಹೋಗಿದೆ. ಹೀಗಾಗಿ ನಮಗೆ ಅವುಗಳ ಕೂಗು ಅರ್ಥವಾಗದು. ಹಕ್ಕಿಗಳು ಕನಸು ಕಾಣುತ್ತವೆ. ಈಗ ನಾವು ಹಕ್ಕಿಗಳ ಕನಸಿನ ಕತೆಯನ್ನು

ಮುಂದುವರಿಸೋಣವೆ?’"


"ಆಗಲಿ ಅಜ್ಜ,ನೀವು ಮುಂದುವರೆಸಿ" ಎಂದು ಪುಟ್ಟ ಪುಟ್ಟಿ ಇಬ್ಬರೂ ಒಕ್ಕೊರಲಿನಿಂದ ಹೇಳಿದಾಗ ಅಜ್ಜನ ಕತೆ ಹೇಳುವಿಕೆ ಮುಂದೆ ಸಾಗಿತು. "ಬೀನ್ ಎಂಬ ಹಕ್ಕಿ ತನ್ನ ಮರಿಗಳೊಡನೆ ಗೂಡಿನಲ್ಲಿ ಮಲಗಿ ನಿದ್ರೆ ಮಾಡುತ್ತಿತ್ತು. ಹಗಲೆಲ್ಲಾ ಆಹಾರ ಸಂಗ್ರಹಣೆಗಾಗಿ ಸುತ್ತಾಡಿದ್ದ ಹಕ್ಕಿಗೆ ತುಂಬಾ ಆಳವಾದ ನಿದ್ರೆ ಹತ್ತಿತು. ನಿದ್ರೆಯಲ್ಲಿ ಕನಸು ಕಾಣತೊಡಗಿತು.

ಪುಟ್ಟದೊಂದು ಅರಮನೆಯಲ್ಲಿ ಉಗ್ರಾಣದ ತುಂಬಾ ವಿಧವಿಧವಾದ ಕಾಳುಗಳು, ದವಸ ಧಾನ್ಯಗಳು, ತುಂಬಿ ತುಳುಕುತ್ತಿವೆ. ಬೀನ್ ಹಕ್ಕಿ ಮಹಾರಾಜನಂತೆ, ಎಲ್ಲ ಹಕ್ಕಿಗಳಿಗೂ, ತನ್ನ ಕಣಜದಿಂದ ಬೊಗಸೆ ಬೊಗಸೆ ಧಾನ್ಯವನ್ನು ದಾನ ಮಾಡುತ್ತಿದೆ. ದಾನ ಪಡೆದ ಹಕ್ಕಿಗಳೆಲ್ಲಾ, "ಮಹಾರಾಜನಿಗೆ ಜೈ" ಎನ್ನುತ್ತಾ ಜೈಕಾರ ಕೂಗುತ್ತಾ ಹೋಗುತ್ತಿದ್ದರೆ,ಬೀನ್ ಹಕ್ಕಿಗೆ ಖುಷಿಯೋ ಖುಷಿ. ದಾನ ಮಾಡಿ ಮಾಡಿ ಉಗ್ರಾಣವೆಲ್ಲ ಖಾಲಿಯಾದಾಗ,ಮಹಾರಾಜ ಬೀನ್ ಗೆ ಯೋಚನೆಯಾಗುತ್ತದೆ. ತಾಯಿಯ ಪಕ್ಕದಲ್ಲಿ ಮಲಗಿದ್ದಪುಟ್ಟ ಮರಿ ಹಕ್ಕಿಗಳು ಚೀಂವ್ ಚೀಂವ್ ಚೀಂವ್ ಎಂದು ಅಳಲು ಪ್ರಾರಂಭಿಸಿದಾಗ, ದಢಕ್ಕನೆ ಕಣ್ಣು ಬಿಟ್ಟ ಬೀನ್ ಹಕ್ಕಿ ಸುತ್ತಲೂ ನೋಡಿದಾಗ, ಆ ಅರಮನೆ, ದವಸ ತುಂಬಿದ ಕಣಜ ಎಲ್ಲವೂ ಕನಸು ಎಂದು ತಿಳಿಯುತ್ತದೆ. ’ಅಯ್ಯೋ,ಅದು ಕನಸು ,ಇಂದು ನಮ್ಮ ಮನೆಯಲ್ಲಿ ಒಂದು ಕಾಳು ದವಸವೂ ಇಲ್ಲ, ಈಗ ನಾನು ಇಂದಿನ ಆಹಾರಕ್ಕಾಗಿ ಹೊರಗೆ ಹೋಗಲೇಬೇಕು’ ಎಂದುಕೊಳ್ಳುತ್ತಾ, ಅಳುತ್ತಿರುವ ತನ್ನ ಮರಿ ಹಕ್ಕಿಗಳನ್ನು ತಬ್ಬಿಕೊಂಡು ಗುಟುಕು ತರಲು ಗೂಡಿನಿಂದ ಹೊರಗೆ ಹಾರಿತು."


"ಕೇಳಿದಿರಾ ಮಕ್ಕಳಾ, ಹಕ್ಕಿಯ ಕನಸನ್ನು. ಈ ಕಥೆ ನಾನು ನಿಮಗೆ ನೆನ್ನೆ ಹೇಳಿದ ನಮ್ಮ "ತಿರುಕನ ಕನಸು" ಪದ್ಯದ

ಕಥೆಯನ್ನೇ ಸ್ವಲ್ಪ ಹೋಲುತ್ತದೆ ಅಲ್ಲವಾ?.ಸರಿ ಈಗ ಮಲಗೋಣ" ಇಬ್ಬರು ಮೊಮ್ಮಕಳನ್ನು ಅಕ್ಕ ಪಕ್ಕ ಮಲಗಿಸಿಕೊಂಡು ಅಜ್ಜನೂ ಮಲಗಿದರು. ಈ ರೀತಿ ತಾತನ ಮನೆಯಲ್ಲಿ ಬೇಸಿಗೆ ರಜ ಪೂರ್ತಿ, ಹಲವಾರು ಕಥೆ ಕೇಳಿ, ಆಡುತ್ತ, ತಿರುಗುತ್ತ, ಅಜ್ಜಿಯ ಕೈ ತುತ್ತನ್ನು ಉಣ್ಣೂತ್ತಾ,ಮಜವಾಗಿ ಕಾಲ ಕಳೆದು, ರಜ ಮುಗಿದು ಮತ್ತೆ ಬೆಂಗಳೂರಿಗೆ ಮನಸ್ಸಿಲ್ಲದಮನಸ್ಸಿನಿಂದ ಹೊರಟರು.


Rate this content
Log in