ಮಕ್ಕಳ ಕಥೆ: ಸಾಲ ಕೊಟ್ಟ ಬಾತುಕೋಳಿ
ಮಕ್ಕಳ ಕಥೆ: ಸಾಲ ಕೊಟ್ಟ ಬಾತುಕೋಳಿ


ಒಂದು ಕೆಸರಿನ ಕೊಳದಲ್ಲಿಹೆಣ್ಣು ಬಾತುಕೋಳಿಯೊಂದು ಸುಖವಾಗಿತ್ತು. ಒಮ್ಮೆ ಆ ದೇಶದ ರಾಜ ಆ ಕೊಳದ ಬಳಿಗೆ ಬಂದು ಕೊಳಕ್ಕೆ ಹಾರಿ ಜೀವ ಕಳೆದುಕೊಳ್ಳಲು ಮುಂದಾದ. ಆಗ ಆ ಬಾತುಕೋಳಿ ಅಡ್ಡ ನಿಂತು 'ಆತ್ಮಹತ್ಯೆ ಮಹಾಪಾಪವಲ್ಲವೆ? ನನ್ನನ್ನು ನೋಡು, ನಾನು ಈ ಕೆಸರಿನಲ್ಲಿಸುಖದಿಂದ ಬದುಕುತ್ತಿದ್ದೇನೆ. ನೀನು ನೋಡಿದರೆ ರಾಜನ ಹಾಗೆ ಕಾಣಿಸುತ್ತಿರುವೆ. ಯಾಕೆ ಸಾಯುತ್ತೀಯಾ?' ಎಂದಿತು. ಅದಕ್ಕೆ ರಾಜ 'ಈ ವರ್ಷ ಕ್ಷಾಮ ಬಂದಿದೆ. ಈ ಕಾರಣ ಹೇಳಿ ಪ್ರಜೆಗಳು ತೆರಿಗೆ ಕೊಟ್ಟಿಲ್ಲ. ಅರಮನೆಯ ಪರಿವಾರದವರಿಗೆ ಊಟ ಮಾಡಲು ಹಿಡಿ ಕಾಳುಗಳೂ ಇಲ್ಲ. ಶತ್ರುಗಳು ಬಂದರೆ ಎದುರಿಸಲು ಸೈನಿಕರಿಗೆ ಕೊಡಬೇಕಾದ ಸಂಬಳಕ್ಕೂ ಗತಿಯಿಲ್ಲ. ಇಂತಹ ಅವಮರ್ಯಾದೆಯಿಂದ ಬದುಕುವ ಬದಲು ಸಾಯುವುದೇ ಮೇಲಲ್ಲವೆ?' ಎಂದ. ಅದಕ್ಕೆ ಬಾತುಕೋಳಿ 'ನಾನು ಹಲವು ಚೀಲಗಳಲ್ಲಿತುಂಬಾ ಕಾಳು ಸಂಗ್ರಹಿಸಿಟ್ಟಿದ್ದೇನೆ. ನಿನಗೆ ಎಷ್ಟು ಬೇಕು ಹೇಳು. ಅಷ್ಟನ್ನು ಸಾಲವಾಗಿ ಕೊಡುತ್ತೇನೆ' ಎಂದಿತು.
ರಾಜ 'ಎಲ್ಲಿದೆ, ಬೇಗ ತೋರಿಸು. ಬಂಡಿಗಳನ್ನು ಕಳುಹಿಸಿ ಅರಮನೆಗೆ ಸಾಗಿಸುತ್ತೇನೆ' ಎಂದಾಗ ಬಾತುಕೋಳಿ, 'ಕೊಂಡುಹೋದುದನ್ನು ಮತ್ತೆ ಯಾವಾಗ ತಂದು ಕೊಡುತ್ತಿ ಎಂಬುದನ್ನು ಹೇಳಬೇಕಲ್ಲ' ಎಂದಾಗ ಆತ 'ಈಗ ತಾನೇ ಮಳೆ ಬಂದಿದೆ. ರೈತರು ಬಿತ್ತನೆ ಆರಂಭಿಸಿದ್ದಾರೆ. ನಾಲ್ಕು ತಿಂಗಳಲ್ಲಿಕೊಯ್ಲುಆಗುತ್ತದೆ. ನಿನ್ನ ಸಾಲಕ್ಕೆ ಬಡ್ಡಿ ಸೇರಿಸಿ ಇಲ್ಲಿಗೇ ತಂದುಕೊಟ್ಟು ಹೋಗುತ್ತೇನೆ' ಎಂದು ಭರವಸೆ ನೀಡಿದಾಗ ಬಾತುಕೋಳಿಯು ಕಾಳಿನ ದೊಡ್ಡ ರಾಶಿಯನ್ನೇ ರಾಜನಿಗೆ ಸಾಲ ಕೊಟ್ಟಿತು. ಎಲ್ಲವನ್ನೂ ರಾಜ ಅರಮನೆಗೆ ಸಾಗಿಸಿ ಎಲ್ಲಪ್ರಜೆಗಳಿಗೂ ಹಂಚಿ ತಾನೂ ಬಳಸಿದ. ಆದರೆ ದಿನಗಳು ಸರಿದರೂ ಆತ ಸಾಲ ಮರಳಿಸಲಿಲ್ಲ. ಬಾತುಕೋಳಿ ಅರಮನೆಗೆ ಬಂದು 'ನನ್ನ ಸಾಲವನ್ನು ಈಗಲೇ ಮರಳಿಸು' ಎಂದು ಕೇಳಿತು. ರಾಜ ತನಗೊಂದೂ ನೆನಪೇ ಇಲ್ಲದಂತೆ ನಟಿಸಿದ. ರಾಜನ ಮೋಸ ತಿಳಿದ ಬಾತುಕೋಳಿಗೆ ದುಃಖ ಮತ್ತು ಸಿಟ್ಟು ಉಕ್ಕಿ 'ಮೋಸ ಮಾಡಬೇಡ. ನನಗೂ ಹಲವು ಸ್ನೇಹಿತರಿದ್ದಾರೆ. ನೀನು ನನ್ನ ಸಾಲ ಮರಳಿಸದಿದ್ದರೆ ಅವರನ್ನು ಕರೆದುಕೊಂಡು ಬರುತ್ತೇನೆ' ಎಂದಾಗ ರಾಜ ನಕ್ಕು 'ನಿನಗೆ ಅಂತಹ ಸ್ನೇಹಿತರಿರುವರೆ? ಅಬ್ಬಬ್ಬ, ನೀನು ಯಾವ ದೇಶದ ರಾಣಿ?' ಎಂದ.
ನಿರಾಶೆಯಿಂದ ಬಾತುಕೋಳಿ ಮರಳಿ ಕೊಳಕ್ಕೆ ಬಂದಿತು. ಅದು ಕೊಳದೊ
ಂದಿಗೆ ' ನನ್ನ ಸಾಲವನ್ನು ರಾಜನಿಂದ ವಸೂಲು ಮಾಡಲು ನನಗೆ ಸಹಾಯ ಮಾಡುವೆಯಾ?' ಎಂದಾಗ ಕೊಳದ ನೀರು 'ಖಂಡಿತ. ಆದರೆ ನನ್ನನ್ನು ಜೊತೆಗೆ ಹೇಗೆ ಕರೆದುಕೊಂಡು ಹೋಗುವೆ?' ಎಂದಿತು. ಅದಕ್ಕೆ ಬಾತುಕೋಳಿ ಕೊಳದ ಎಲ್ಲನೀರನ್ನು ಚೀಲದೊಳಗೆ ತುಂಬಿಕೊಂಡು ಹೊರಟಿತು. ಆಗ ಅದಕ್ಕೆ ಕಣಜದ ಹುಳ ಎದುರಾಯಿತು. ಬಾತುಕೋಳಿ ಅದರಿಂದ ಸಹಾಯ ಕೇಳಿದಾಗ ಅದೂ ಒಪ್ಪಿತು. ಕಣಜದ ಹುಳಗಳನ್ನು ಚೀಲದಲ್ಲಿತುಂಬಿಸಿ ಬಾತುಕೋಳಿ ಅರಮನೆಗೆ ತಲಪಿತು. 'ಮತ್ತೆ ಯಾಕೆ ಬಂದೆ?' ರಾಜ ಕೋಪದಿಂದ ಕೇಳಿದಾಗ ಬಾತುಕೋಳಿ 'ಕೊಟ್ಟ ಸಾಲ ಮರಳಿ ಪಡೆಯೋದಕ್ಕೆ ನನ್ನ ಕೆಲವು ಗೆಳೆಯರನ್ನೂ ಕರೆದುಕೊಂಡು ಬಂದಿದ್ದೇನೆ' ಎಂದಿತು.
ರಾಜ ಸೇವಕರನ್ನು ಕರೆದು 'ಬೆಂಕಿ ಧಗಧಗ ಉರಿಯುವ ಒಲೆಯ ಮೇಲೆ ಮಡಕೆಯನ್ನಿಟ್ಟು ಅದರೊಳಗೆ ಈ ಬಾತುಕೋಳಿಯನ್ನು ಹಾಕಿ ಬೇಯಿಸಿ' ಎಂದು ಆಜ್ಞಾಪಿಸಿದ. ಸೇವಕರು ಹಾಗೆ ಮಾಡಲು ಮುಂದಾದಾಗ ಬಾತುಕೋಳಿ, 'ನೀರಣ್ಣಾ, ಬಾ ಕಾಪಾಡು' ಎಂದು ಕೂಗಿತು. ಆಗ ಚೀಲದಲ್ಲಿಕಟ್ಟಿಕೊಂಡು ಬಂದಿದ್ದ ನೀರು ಧಾರಾಕಾರವಾಗಿ ಸುರಿದು ಬೆಂಕಿ ಆರಿಸಿತು. ಆಗ ರಾಜ ಬಾತುಕೋಳಿಯ ಕತ್ತು ಹಿಡಿದು ಕೊಯ್ಯಲು ಮುಂದಾದಾಗ ಬಾತುಕೋಳಿ 'ಕಣಜಣ್ಣಾ ಬಾ' ಎಂದು ಕರೆಯಿತು. ಆಗ ಗೂಡಿನಿಂದ ಸಾವಿರಾರು ಹುಳಗಳು ಬಂದು ರಾಜನಿಗೆ ಒಂದೇ ಸವನೆ ಕುಟುಕಲಾರಂಭಿಸಿದವು. ಅದರ ವಿಷದಿಂದ ರಾಜನ ಇಡೀ ದೇಹ ಕುಂಬಳಕಾಯಿಯಂತೆ ಊದಿಕೊಂಡಿತು.
ರಾಜ ಗೋಳಾಡುತ್ತ 'ನನ್ನ ಜೀವ ಉಳಿಸು. ನಿನ್ನ ಸಾಲ ಮರಳಿ ಕೊಡ್ತೀನಿ' ಎಂದು ಬೇಡಿದಾಗ 'ನಿನ್ನ ಖಜಾನೆಯ ಬೀಗದ ಕೀಲಿಕೈಯ ಗೊಂಚಲು ತಂದುಕೊಟ್ರೆ ಜೀವವುಳಿಸುತ್ತೇನೆ' ಎಂದು ಬಾತುಕೋಳಿ ಹೇಳಿತು. ರಾಜ ಕೀಲಿ ಕೈಯನ್ನು ಅದರ ಕೈಗೆ ತಂದುಕೊಟ್ಟಾಗ ಅದನ್ನು ಹಿಡಿಯುತ್ತಲೇ ಬಾತುಕೋಳಿ ಚಂದದ ರಾಜಕುಮಾರಿಯಾಯಿತು. ರಾಜನಿಗೆ ಅಚ್ಚರಿಯಾಗಿ ' ಬಾತುಕೋಳಿ ಹೆಣ್ಣಾಗುವುದೆಂದರೇನು? ನೀನು ಯಾರು?' ಎಂದು ಕೇಳಿದ. ಅದಕ್ಕೆ ಆ ರಾಜಕುಮಾರಿ 'ನಿನ್ನ ಅಪ್ಪ ಮಾಟಗಾತಿಯರ ಮೂಲಕ ನಮ್ಮ ರಾಜ್ಯವನ್ನು ಕಬಳಿಸಲು ನನ್ನನ್ನು ಬಾತುಕೋಳಿಯನ್ನಾಗಿ ಮಾಡಿದ. ಈ ಕೀಲಿಕೈಯ ಗೊಂಚಲಲ್ಲಿಆ ರಾಜ್ಯದ ಕೀಲಿಕೈಯೂ ಇದೆ. ಅದು ಕೈ ಸೇರಿದ ಕೂಡಲೇ ನನಗೆ ಮೊದಲಿನ ಜನ್ಮ ಬರುತ್ತದೆಂದು ನನಗೆ ತಿಳಿದಿತ್ತು. ಈಗ ಮೊದಲಿನ ರೂಪ ಬಂದಿದೆ. ನಾನು ನನ್ನೂರಿಗೆ ಹೋಗುತ್ತೇನೆ' ಎಂದು ಹೇಳಿ ಹೊರಟುಹೋದಳು.