ಮಕ್ಕಳ ಕತೆ: ಒಳ್ಳೆಯ ಕೆಲಸ
ಮಕ್ಕಳ ಕತೆ: ಒಳ್ಳೆಯ ಕೆಲಸ
ಅದೊಂದು ಹಳ್ಳಿ. ಅಲ್ಲೊಂದು ಸರಕಾರಿ ಶಾಲೆ. ಬಡ ಕುಟುಂಬಗಳಿಗೆ ಸೇರಿದವರು ಮತ್ತು ರೈತರ ಮಕ್ಕಳು ಅಲ್ಲಿಗೆ ಕಲಿಯಲು ಬರುತ್ತಿದ್ದರು. ಇವರಿಗೆ ವಿದ್ಯೆ ಕಲಿಸಲು ಒಬ್ಬ ಉತ್ತಮ ಮೇಷ್ಟ್ರಿದ್ದರು. ಅವರಿಗೆ ಮಕ್ಕಳೆಂದರೆ ತುಂಬ ವಾತ್ಸಲ್ಯ. ಪ್ರೀತಿಯಿಂದ ಪಾಠ ಹೇಳಿಕೊಡುವರು. ಗದರದೆ ತಿದ್ದಿ ತೀಡುವರು. ಬಡ ಮಕ್ಕಳು ಬುತ್ತಿ ತರಲು ಗತಿಯಿಲ್ಲದೆ ಮಧ್ಯಾಹ್ನ ಉಪವಾಸವಿರುವುದು ಗೊತ್ತಾದರೆ ಅವರು ತಂದ ಊಟದಲ್ಲಿ ಪಾಲು ಕೊಡುವ ಮಾತೃ ಹೃದಯ ಅವರದಾಗಿತ್ತು. ಮಕ್ಕಳಿಗೆ ನೋವಾದರೆ ತಾವೇ ಅತ್ತುಬಿಡುವರು.
ಒಂದು ದಿನ ಮೇಷ್ಟ್ರು ಸಂಜೆ ಶಾಲೆ ಬಿಟ್ಟು ತುಂಬ ಹೊತ್ತಾದ ಮೇಲೆ ಪೇಟೆಯ ಬೀದಿಯಲ್ಲಿ ನಡೆಯುತ್ತ ಹೋಗುತ್ತಿದ್ದರು. ಆಗ ಅವರ ದೃಷ್ಟಿ ಒಂದು ಕಬ್ಬಿನ ರಸದ ಅಂಗಡಿಯತ್ತ ನೆಟ್ಟಿತು. ಅಲ್ಲಿ ಅವರ ಶಾಲೆಯ ಒಬ್ಬ ವಿದ್ಯಾರ್ಥಿಯನ್ನು ಕಂಡು ಹಾಗೆಯೇ ನಿಂತರು. ಅವನು ಪ್ರಯಾಸದಿಂದ ಕೈಯಲ್ಲಿ ಗಾಣ ತಿರುಗಿಸಿ ಕಬ್ಬಿನ ರಸ ತೆಗೆದು ಲೋಟಕ್ಕೆ ಸುರಿದು ಬಂದ ಗಿರಾಕಿಗಳಿಗೆ ಕುಡಿಯಲು ಕೊಡುತ್ತಿದ್ದ. ಬಳಿಕ ಲೋಟವನ್ನು ತೊಳೆಯುವುದರಲ್ಲಿ ನಿರತನಾಗಿದ್ದ. ಅರೆಕ್ಷ ಣ ನಿಂತು ಮೇಷ್ಟ್ರು ಅವನ ಕಾಯಕವನ್ನೇ ತದೇಕಚಿತ್ತರಾಗಿ ನೋಡಿದರು. ಬಳಿಕ ಅಲ್ಲಿಗೆ ಹೋಗಿ ಎದುರಿನ ಬೆಂಚಿನ ಮೇಲೆ ಕುಳಿತುಕೊಂಡರು.
ಮೇಷ್ಟ್ರನ್ನು ಕಂಡು ವಿದ್ಯಾರ್ಥಿಗೆ ಮಿಂಚು ಎರಗಿದ ಅನುಭವವಾಯಿತು. ಗೌರವದ ಬದುಕಿನ ಬಗೆಗೆ ನಿತ್ಯವೂ ಪಾಠ ಮಾಡುವ ಮೇಷ್ಟ್ರ ಮುಂದೆ ತಾನು ಕಬ್ಬಿನ ಹಾಲಿನ ಅಂಗಡಿಯಲ್ಲಿ ನಿಂತಿರುವ ಅಪರಾಧಿ ಭಾವದಲ್ಲಿ ಚಡಪಡಿಸಿದ. ಮೇಷ್ಟ್ರಿಗೆ ಸಹ್ಯವಾಗದ ಕೆಲಸ ಮಾಡಿದರೆ ಅವರು ಎಷ್ಟು ಕಠೋರರೆಂಬುದು ಅವನಿಗೆ ತಿಳಿದಿತ್ತು. ಮೇಷ್ಟ್ರು ತನಗೆ ಅವನ ಗುರುತಿರುವಂತೆ ತೋರಿಸಿಕೊಳ್ಳಲಿಲ್
ಲ. 'ಒಂದು ಲೋಟ ಕಬ್ಬಿನ ಹಾಲು ಬೇಕು' ಎಂದು ಕೇಳಿ ತರಿಸಿ ಕುಡಿದರು. ಮಾಲಕನ ಬಳಿ ಹಣ ಕೊಟ್ಟು ಹೊರಟುಹೋದರು.
ಮರುದಿನ ವಿದ್ಯಾರ್ಥಿ ಅಳುಕುತ್ತಲೇ ಶಾಲೆಗೆ ಹೋದ. ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ 'ಹೋಗಿ ಮೇಷ್ಟ್ರನ್ನು ಕಾಣಬೇಕಂತೆ' ಎಂಬ ಕರೆ ಬಂತು. ತಾನು ಶಾಲೆ ಬಿಟ್ಟ ಬಳಿಕ ಅಂಗಡಿಗೆ ಹೋಗಿ ದುಡಿಯದಿದ್ದರೆ ಶಾಲೆಯ ಪುಸ್ತಕ, ಶುಲ್ಕಗಳಿಗೆ ತನ್ನ ತಂದೆ ಹಣ ಕೊಡಲು ಶಕ್ತರಲ್ಲ. ತಾಯಿಯ ವೈದ್ಯಕೀಯದ ವೆಚ್ಚ, ಮನೆ ಖರ್ಚುಗಳಿಗೆ ತನ್ನ ದುಡಿಮೆಯ ಹಣ ಅನಿವಾರ್ಯ. ಈ ಕೆಲಸ ಮಾಡಿದ್ದಕ್ಕೆ ಮೇಷ್ಟ್ರು ಬೈಯಬಹುದು, ಹೊಡೆಯಬಹುದು. ಅಗ ಸತ್ಯ ಸ್ಥಿತಿ ತಿಳಿಸುವುದು ಎಂದು ಯೋಚಿಸುತ್ತ ವಿದ್ಯಾರ್ಥಿ ಭಂಡ ಧೈರ್ಯ ತಂದುಕೊಂಡು ಮೇಷ್ಟ್ರ ಬಳಿಗೆ ಹೋದ. ಉಳಿದ ವಿದ್ಯಾರ್ಥಿಗಳು 'ಪಾಠ ಸರಿಯಾಗಿ ಓದದೆ ಅಂಗಡಿ ಕೆಲಸಕ್ಕೆ ಹೋಗ್ತಾನಲ್ಲ, ಅದಕ್ಕೆ ಮೇಷ್ಟ್ರು ಬೆನ್ನಿಗೆ ಇಸ್ತ್ರಿ ಮಾಡಿ ಕಳಿಸುತ್ತಾರೆ' ಎಂದು ಹೇಳಿಕೊಂಡರು.
ತನ್ನ ಬಳಿಗೆ ಬಂದ ವಿದ್ಯಾರ್ಥಿಯೊಂದಿಗೆ ಮೇಷ್ಟ್ರು ತರಗತಿಗೆ ಬಂದರು. ಅವರು ಎಲ್ಲರ ಮುಂದೆ ಅವನ ಬೆನ್ನು ತಟ್ಟಿ ಬಿಗಿಯಾಗಿ ಎದೆಗವಚಿಕೊಂಡರು. 'ಎಲ್ಲರೂ ನೋಡಿ ಮಕ್ಕಳೇ, ಇವನು ನಮ್ಮ ದೇಶದ ಭವಿಷ್ಯದ ನಿಜವಾದ ಪ್ರಜೆ. ಕಲಿಯುವುದರ ಜೊತೆಗೆ ಯಾರಿಗೂ ಭಾರವಾಗದೆ ಸ್ವಾವಲಂಬನೆಯಿಂದ ದುಡಿದು ಗಳಿಸುವ ಇವನ ಸಾಧನೆಯನ್ನು ನೋಡಿ ಕಲಿಯಿರಿ. ಇಂದು ಅವನು ಕಬ್ಬಿನ ಹಾಲಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿರಬಹುದು. ಆದರೆ ಮುಂದಿನ ದಿನಗಳಲ್ಲಿ ದೊಡ್ಡ ಧನಿಕನಾಗಿ ಸುಖದಿಂದ ಬದುಕುವ ದಾರಿಯಲಿ ಮೊದಲ ಹೆಜ್ಜೆಯನ್ನಿಟ್ಟಿದ್ದಾನೆ' ಎಂದು ಎದೆದುಂಬಿ ಹೊಗಳಿದರು. ಮೇಷ್ಟ್ರ ಭವಿಷ್ಯ ಸುಳ್ಳಾಗಲಿಲ್ಲ. ಆ ವಿದ್ಯಾರ್ಥಿ ಮುಂದೆ ದೊಡ್ಡ ಉದ್ಯಮಿಯಾಗಿ ಹೆಸರು ಮಾಡಿ ಗುರುಗಳ ಮಾತನ್ನುಳಿಸಿದ.