StoryMirror Feed

Children Stories

2  

StoryMirror Feed

Children Stories

ಮಕ್ಕಳ ಕಥೆ: ಹಾಗಲಕಾಯಿಯಲ್ಲಿ ಮಾವಿನ ರುಚಿ ಬಯಸಬಾರದು

ಮಕ್ಕಳ ಕಥೆ: ಹಾಗಲಕಾಯಿಯಲ್ಲಿ ಮಾವಿನ ರುಚಿ ಬಯಸಬಾರದು

2 mins
11.8K


ಒಂದೂರಿನಲ್ಲಿ ಕಧೀರ ಮತ್ತು ಮಾಸತಿ ಎಂಬ ದಂಪತಿಯಿದ್ದರು. ಅವರಿಗೆ ಒಬ್ಬ ಮುದ್ದಾದ ಮಗನಿದ್ದ. ಆತ ತುಂಬಾ ಹಠ ಮತ್ತು ಕೀಟಲೆಯ ಹುಡುಗನಾಗಿದ್ದ. ನೆರೆಹೊರೆಯವರಿಂದ ದೂರುಗಳು ಬಂದರೆ ಚಿಕ್ಕ ಹುಡುಗ ಮುಂದೆ ದೊಡ್ಡವನಾದ ಮೇಲೆ ಸರಿ ಹೋಗುತ್ತಾನೆ ಎಂದು ಹೆತ್ತವರು ಸಮಾಧಾನ ಮಾಡಿ ಕಳಿಸುತ್ತಿದ್ದರು. 


ಆ ಹುಡುಗ ಬೆಳೆದು ದೊಡ್ಡವನಾದ. ಬರುಬರುತ್ತಾ ತಂದೆ ತಾಯಿಯ ಮಾತುಗಳನ್ನು ಕೇಳದಿದ್ದಾಗ ಹೆತ್ತವರು ಒಬ್ಬ ಸನ್ಯಾಸಿಯ ಆಶ್ರಮದಲ್ಲಿ ಆತನನ್ನು ಪಾಠ ಪ್ರವಚನ ಕಲಿಯಲು ಬಿಟ್ಟರು. ಅಲ್ಲಿ ಸಹ ಆತ ಗುರುಗಳ ಮಾತನ್ನು ಧಿಕ್ಕರಿಸುತ್ತಿದ್ದ. ಶಾಂತ ಮೂರ್ತಿಯಾದ ಗುರುಗಳು ತಾಳ್ಮೆಯಿಂದ ಎಲ್ಲವನ್ನೂ ಸಹಿಸಿ ಸಂಸ್ಕಾರ ಭೋದನೆ ಮಾಡಿದರು. ಸ್ವಲ್ಪ ದಿನದ ನಂತರ ತನ್ನ ವಿಧ್ಯಾಭ್ಯಾಸವನ್ನು ಮುಗಿಸಿ ಆತ ಮನೆಗೆ ಹಿಂತಿರುಗಿದ. 


ಹುಡುಗನ ಒರಟುತನದಲ್ಲಿ ಯಾವ ಬದಲಾವಣೆಯೂ ಕಾಣಿಸಲಿಲ್ಲ. ಆತನ ತಂದೆಗೆ ಗುರುಗಳ ಮೇಲೆ ತುಂಬಾ ಕೋಪ ಬಂತು. ಅವರು ಗುರುಗಳ ಬಳಿಗೆ ಹೋಗಿ 'ನೀವು ನಮ್ಮ ಮಗನಿಗೆ ಸರಿಯಾದ ಸಂಸ್ಕೃತಿ, ನೀತಿ ಭೋದನೆ ಮಾಡಿಲ್ಲ. ನನ್ನ ಮಗನಿಗೆ ನೀವು ಒಳ್ಳೆಯ ನಡತೆ ಕಲಿಸಿಲ್ಲ. ಗುರುಗಳು ಹೀಗೆಲ್ಲ ತಪ್ಪು ಮಾಡಬಾರದು' ಎಂದು ಆರೋಪಿಸಿದ. ಎಲ್ಲವನ್ನು ಬಲ್ಲ ಗುರು ಮಂದಸ್ಮ್ಮಿತರಾಗಿ 'ನಾನು ಹೇಳಿದ ಹಾಗೆ ಮರು ಮಾತನಾಡದೆ ಮಾಡುವುದಾದರೆ ಮಾತ್ರ ನಿನ್ನ ಪ್ರಶ್ನೆಗೆ ಉತ್ತರ ಹೇಳುತ್ತೇನೆ' ಎಂದರು. ಅವನು ಆಗಲಿ ಎಂದು ತಲೆಯಾಡಿಸಿದ. ನನ್ನೊಡನೆ ಬಾ ಎಂದು ಕೋಣೆಯೊಳಗೆ ಕರೆದುಕೊಂಡು ಹೋಗಿ 'ಇಲ್ಲಿ ಹಲವಾರು ರೀತಿಯ ವೃಕ್ಷ , ಬಳ್ಳಿ, ಹಣ್ಣುಗಳ ಬೀಜಗಳಿವೆ. ನಿನಗೆ ಬೇಕಾದ್ದನ್ನು ನೀನೇ ಆಯ್ಕೆ ಮಾಡಿಕೋ' ಎಂದರು. ಅದರಂತೆ ಆತ ಹಲವಾರು ರೀತಿಯ ಆಕರ್ಷಕ ಬಣ್ಣದ ಬೀಜಗಳನ್ನು ತೆಗೆದುಕೊಂಡ. ಗುರುಗಳು 'ನೀನು ಮತ್ತು ನಿನ್ನ ಮಗ ಸೇರಿ ಈ ಬೀಜಗಳನ್ನು ಉತ್ತಿ ಬೆಳೆ ಬೆಳೆದ ನಂತರ ಇಲ್ಲಿಗೆ ಬನ್ನಿ' ಹೇಳಿ ಒಳ ನಡೆದರು. 


ಗುರುಗಳ ಮಾತನ್ನು ಅಂಗೀಕರಿಸಿ ತನ್ನ ಮಗನಿಗೂ ಅದನ್ನು ಹೇಳಿ ಭೂಮಿಯನ್ನು ಒಳ್ಳೆಯ ಹದ ಮಾಡಿ ಉತ್ತು, ಬೀಜಗಳನ್ನು ಬಿತ್ತಿದ. ಕೆಲ ದಿನಗಳಲ್ಲೇ ಅವುಗಳು ಚಿಗುರಿ ದೊಡ್ಡವಾದವು. ಅದರಲ್ಲಿ ಮುಳ್ಳಿನ ಗಿಡ, ವಿಷದ ಹಣ್ಣುಗಳು ಬಿಡತೊಡಗಿದವು. ಕೆಲವೇ ಕೆಲವು ಮಾತ್ರ ತಿನ್ನಲು ಯೋಗ್ಯವಾದ ಹಣ್ಣು ಮತ್ತು ಹೂಗಳು ಅರಳಿದ್ದವು. ಇದಕ್ಕೆ ಮಾಸತಿಯ ಸಹಕಾರವೂ ಇತ್ತು. ಆದರೆ ಮಗನ ಅಹಂಕಾರ ಮಾತ್ರ ಅಳಿಯಲಿಲ್ಲ. ಹೀಗೆ ಕೆಲಸಕ್ಕೆ ಬಾರದ ವಿಷದ ಬೀಜಗಳನ್ನು ಕೊಟ್ಟ ತಂದೆ ಮೇಲೆ ಮಗನಿಗೆ ಕೋಪ ಬಂತು. ತಂದೆ ಗುರುಗಳ ಬಳಿಗೆ ಹೋಗಿ 'ನೀವು ಕೊಟ್ಟ ಬೀಜಗಳಿಂದ ನಮ್ಮ ಶ್ರಮ ವ್ಯರ್ಥವಾಗಿದೆ. ಒಳ್ಳೆಯ ಬೀಜಗಳನ್ನು ಕೊಟ್ಟಿದ್ದರೆ ನಾವೂ ಚೆನ್ನಾಗಿರುತ್ತಿದ್ದೆವು' ಎಂದು ಹೇಳಿದ. ತಂದೆಯ ಮಾತಿಗೆ ಮಗನೂ ಧ್ವನಿಗೂಡಿಸಿದ. 


ಗುರುಗಳು ಅವರನ್ನು ಕುಳ್ಳಿರಿಸಿ ಹಣ್ಣು ಹಂಪಲು ನೀಡಿ ಸತ್ಕರಿಸಿದ ನಂತರ 'ನೀವು ಒಳ್ಳೆಯ ಬೀಜ ಬಿತ್ತಿದರೆ ಅದರಂತೆ ಫಲ ನೀಡುತ್ತದೆ. ಅದೇ ರೀತಿ ನಮ್ಮ ನಡೆ, ನುಡಿ, ವ್ಯಕ್ತಿತ್ವಗಳೂ ಇರುತ್ತವೆ. ನಾವು ನಮ್ಮ ಮಕ್ಕಳಿಗೆ ಸಾತ್ವಿಕ ಆಚಾರಗಳನ್ನು ಮನಸ್ಸಿಗೆ ತುಂಬಿದರೆ ಅವರು ಒಳ್ಳೆಯ ಮಕ್ಕಳಾಗುತ್ತಾರೆ. ಬೆಳೆದ ಹಾಗಲಕಾಯಿಯಲ್ಲಿ ಮಾವಿನ ರುಚಿ ಬಯಸುವುದು ತಪ್ಪು. ಹಾಗೇ ನಿಮ್ಮ ಮಗನನ್ನು ಬೆಳೆವ ಮೊಳಕೆಯಲ್ಲಿ ನೀತಿವಂತನಾಗಿ ಮಾಡದೆ, ತಿದ್ದಿ ಬುದ್ಧಿ ಹೇಳದೆ, ಈಗ ನನ್ನನ್ನು ದೂರಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು. 


ತಂದೆಗೆ ತನ್ನ ತಪ್ಪಿನ ಅರಿವಾಗಿ ತಲೆ ತಗ್ಗಿಸಿದ. ಅದನ್ನು ಕಂಡ ಮಗನಿಗೆ ತನ್ನ ದುರ್ನಡತೆಯೇ ಇದಕ್ಕೆಲ್ಲ ಕಾರಣ ಎಂದು ಕ್ಷ ಮಾಪಣೆ ಕೇಳಿದ. ಆಗ ತಂದೆ 'ಇದರಲ್ಲಿ ನನ್ನ ತಪ್ಪು ಕೂಡಾ ಇದೆ. ಚಿಕ್ಕಂದಿನಲ್ಲಿ ನಿನಗೆ ಬುದ್ಧಿ ಹೇಳಿ ಸರಿಯಾದ ದಾರಿಗೆ ತರದೆ ಈಗ ಒಳ್ಳೆಯತನ ಬಯಸಿದರೆ ಹೇಗೆ? ಅಂದೇ ನಿನ್ನನ್ನು ತಿದ್ದಬೇಕಿತ್ತು' ಎಂದು ಹೇಳಿದರು. ಆಗ ಗುರುಗಳು 'ಮಗು, ಈಗಲೂ ನಿನ್ನ ನಡೆಯಲ್ಲಿ ವಿನಯ, ಶ್ರದ್ಧೆ, ಸಾತ್ವಿಕ ಮನೋಭಾವವಿದ್ದರೆ ಸಾಕು. ಅದರಂತೆ ನಡೆ' ಎಂದು ಹೇಳಿ ಆರ್ಶಿವಾದ ಮಾಡಿ ಕಳುಹಿಸಿದರು. ಅಂದಿನಿಂದ ಮಗನ ನಡವಳಿಕೆಯಲ್ಲಿ ಸ್ವಲ್ಪ ಸ್ವಲ್ಪವೇ ವಿನಯವಂತಿಕೆ ಬಂದು ಆತ ಬದಲಾಗುತ್ತಿದ್ದದ್ದನ್ನು ಕಂಡು ದಂಪತಿ ಸಂತಸ ಪಟ್ಟರು. ಮುಂದೆ ಅವರೆಲ್ಲರೂ ಸುಖವಾಗಿ ನೀತಿವಂತರಾಗಿ ಬಾಳಿದರು. 


Rate this content
Log in