ಕಂಗ್ಲಿಷ್ ಮಾಧ್ಯಮ
ಕಂಗ್ಲಿಷ್ ಮಾಧ್ಯಮ
ಅದೊಂದು ಕರ್ನಾಟಕದ ಮಧ್ಯದಲ್ಲಿರುವ ಅಚ್ಚ ಕನ್ನಡದ ಒಂದು ಪುಟ್ಟ ಪಟ್ಟಣ, ಪುಟ್ಟಣ ಅನ್ನೋಣವೇ? ಅಲ್ಲೊಂದು ಸರಕಾರಿ ಶಾಲೆ. ಅಧ್ಯಾಪಕರು ಚೆನ್ನಾಗಿಯೇ ಪಾಠ ಮಾಡಿಕೊಂಡು ಹೋಗುತ್ತಿದ್ದಾರೆ. ಈಗ ಇದ್ದಕ್ಕಿದ್ದ ಹಾಗೆ ಎಲ್ಲರಿಗೂ ಇಂಗ್ಲಿಷ್ ವ್ಯಾಮೋಹ ಉಕ್ಕಿ ಉಕ್ಕಿ ಹರಿದು, ಅದು ಈ ಪುಟ್ಟಣಕ್ಕೂ ಹಬ್ಬಿತು. ೨೦೦೦ ವರ್ಷ ಹಳೆಯ ಇತಿಹಾಸವಿರುವ ಕನ್ನಡ ಭಾಷೆ ಗೊತ್ತಿದ್ದರೂ, ತಮಗೂ ಇಂಗ್ಲಿಷ್ ಮಾಧ್ಯಮ ಬೇಕು ಎಂದು ಹಠ ಹಿಡಿದರು. ಹಿಡಿದರು ಅನ್ನುವುದಕ್ಕಿಂತ ಹಿಡಿಸಿದರು ಅನ್ನಬಹುದು. ಆ ಅಧ್ಯಾಪಕರಿಗೆ ನೀವು ಇಂಗ್ಲಿಷ್ನಲ್ಲಿಯೇ ಪಾಠ ಹೇಳಿಕೊಡಿ ಎಂದು ದುಂಬಾಲು ಬಿದ್ದರು. “ಕನ್ನಡದಲ್ಲೇ ಹೇಳಿಕೊಟ್ಟರೆ ಮಕ್ಕಳು ಸುಲಭವಾಗಿ ಕಲಿಯುತ್ತಾರೆ, ಸುಮ್ಮನೆ ಇಂಗ್ಲಿಷ್ ಯಾಕೆ?” ಎಂದು ಆ ಅಧ್ಯಾಪಕ ಹೇಳಿದಾಗ ಅವರೆಲ್ಲಾ “ದೊಡ್ಡ ಪಟ್ಟಣದವರಿಗೆ ಮಾತ್ರ ಇಂಗ್ಲೀಷು, ನಮಗೆ ಮಾತ್ರಾ ಕನ್ನಡ, ನಿನಗೆ ಆದರೆ ಹೇಳಿಕೊಡು, ಇಲ್ಲವಾದರೆ ಗಲಾಟೆ ಮಾಡಿ ಇನ್ನೊಬ್ಬನನ್ನು ಕರೆಸುತ್ತೇವೆ” ಎಂದರು.
“ನನಗೇ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ, ಇನ್ನು ಮಕ್ಕಳಿಗೇನು ಕಲಿಸುವುದು?” ಎಂದು ತನ್ನ ಬಂಡವಾಳ ಗೊತ್ತಿದ್ದ ಅಧ್ಯಾಪಕ ಮನದಲ್ಲೇ ಅಂದುಕೊಂಡು, ಬಂದವರಿಗೆಲ್ಲ “ಸರಿ, ಸರಿ, ನಾನು ನನಗೆ ತಿಳಿದಿರುವಷ್ಟನ್ನು ಹೇಳಿಕೊಡುತ್ತೇನೆ” ಎಂದು ಗೋಣು ಅಲ್ಲಾಡಿಸಿದ. ಅವನಿಂದ ಮಕ್ಕಳು ಹರಕು ಮುರುಕು ಇಂಗ್ಲಿಷ್ ಕಲಿತವು.
ಈಗ ಈ ಪುಟ್ಟಣದಲ್ಲಿಯೂ ಇಂಗ್ಲಿಷ್ ಮಾಧ್ಯಮ ಆರಂಭವಾಯಿತು. ಅಲ್ಲಿಗೆ ಹೇಳಿಕೊಡಲು ಈಗ ಇನ್ನೂ ಒಂದಿಬ್ಬರನ್ನು ನೇಮಿಸಲಾಯಿತು. ಅವರೋ, ಹೇಗೋ ಏನೋ, ಕೆಲಸ ಗಿಟ್ಟಿಸಿದ್ದರು. ಜ್ಞಾನ ಮಾತ್ರ ಸೊನ್ನೆ. ಅವರು ಠುಸ್, ಪುಸ್ ಅಂತ ಇಂಗ್ಲಿಷ್ನಲ್ಲಿ ಮಾತನಾಡಿದರೆ, ಈ ಪುಟ್ಟಣದ ಜನರಿಗೆ ಏನೋ ಹಿಗ್ಗು. ತಮ್ಮ ಮಕ್ಕಳೂ ಹಾಗೆಯೆ ಇಂಗ್ಲಿಷ್ ಮಾದ್ಯಮದಲ್ಲಿ ಕಲಿತು ಕರ್ನಾಟಕವನ್ನು ಉದ್ಧಾರ ಮಾಡುತ್ತಾರೆ ಎಂಬ ಕನಸನ್ನು ಕಂಡರು. ಬೆಂಗಳೂರಿನವರಿಗಿಂತ ನಾವೇನು ಕಮ್ಮಿ ಎಂದು ಬೀಗಿದರು. ಆ ಹೊಸ ಅಧ್ಯಾಪಕರು ಮಕ್ಕಳಿಗೆ ಇಂಗ್ಲಿಷನ್ನು ಹೇಳಿಕೊಡಲು ಹರಸಾಹಸ ಮಾಡಿದರು. ತಾವು ಮಾಡಿದ್ದೆ ಸರಿಯಾದ ಉಚ್ಚಾರಣೆ ಎಂದು ಆ ಮಕ್ಕಳ ಮೆದುಳಿಗೆ ತಮ್ಮ ಜ್ಞಾನವನ್ನು ತುಂಬಿದರು. ಕನ್ನಡವನ್ನೇ ಕಲಿಯಲು ಒದ್ದಾಡುತ್ತಿದ್ದ ಆ ಮಕ್ಕಳು ಈಗ ಪರಕೀಯ ಭಾಷೆಯನ್ನು ಕಲಿಯಲು ಪರದಾಡಿ ಅಪ್ಪನಿಂದ, ಅಮ್ಮನಿಂದ, ಅಧ್ಯಾಪಕರಿಂದ ಏಟನ್ನು ತಿಂದು ಸುಸ್ತಾದವು. ಆಗ ಆ ಮಕ್ಕಳು “ಕನ್ನಡವೇ ವಾಸಿ” ಎಂಬ ತೀರ್ಮಾನಕ್ಕೆ ಬಂದರೂ, ಕನ್ನಡ ಅಲ್ಲಿ ನಿಷಿದ್ಧವಾಗಿತ್ತು. ಒಂದೊಂದು ಶಬ್ದಕ್ಕೂ ಸ್ಪೆಲ್ಲಿಂಗ್ ಜೋಡಿಸುವುದೇ ಆ ಮಕ್ಕಳಿಗೆ ಹಿಮಾಲಯ ಹತ್ತಿದ ಅನುಭವವಾಯಿತು. ಸೈಲೆಂಟ್ ಏಕೆ? ಹೇಳುವುದೊಂದು, ಬರೆಯುವುದೊಂದು ಏಕೆ? ಸಿ ಗೂ ಎಸ್ ಗೂ ವ್ಯತ್ಯಾಸವೇನು? ವಿ ಯಾಕೆ, ಡಬ್ಲ್ಯೂ ಏಕೆ? ಸಿ ಏಕೆ, ಕೆ ಏಕೆ? ಎಂದು ಗೊಂದಲಕ್ಕೊಳಗಾದುವು. ಅಧ್ಯಾಪಕರನ್ನು ಕೇಳಿದರೆ ಹೊಡೆತ. ಹೊಡೆಸಿಕೊಂಡು ಮೈಯೆಲ್ಲ ಬಾಸುಂಡೆ ಎಬ್ಬಿಸಿಕೊಂಡು ಅಂತೂ ಪುಟ್ಟಣದ ಇಂಗ್ಲಿಷ್ ಕಲಿತವು.
ಒಮ್ಮೆ ಅಲ್ಲಿಗೆ ಬಂದ ಕ್ವಿಜ್ ತಂಡದವರು ಆ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಿದಾಗ, ಇದು ಯಾವ ಭಾಷೆ, ನಮಗೆ ಆಂಗ್ಲ ಭಾಷೆಯಲ್ಲಿ ಕೇಳುತ್ತಿಲ್ಲವಲ್ಲಾ? ಎಂದು ಆಶ್ಚರ್ಯ ಪಟ್ಟವು. ಆ ಕ್ವಿಜ್ ತಂಡದವರು ತಾವು ಆಂಗ್ಲ ಭಾಷೆಯಲ್ಲಿ ಕೇಳಿದ ಪ್ರಶ್ನೆಯನ್ನು ಕನ್ನಡಕ್ಕೆ ಭಾಷಾಂತರಿಸಿದರೆ ಈ ಮಕ್ಕಳಿಗೆ ಕನ್ನಡವೂ ಅರ್ಥವಾಗಲಿಲ್ಲ. ವೈಟಮಿನ್ ಎಂದಾಗ ಕಣ್ಣು ಕಣ್ಣು ಬಿಟ್ಟವು, ಜೀವಸತ್ವ ಎಂದಾಗ ಹಾಗೆಂದರೇನು? ಎಂದು ಕೇಳಿದವು. ಕಡೆಗೆ ಆ ಕ್ವಿಜ್ ತಂಡದವರು ಇದೆಂತ ಶಿಕ್ಷಣ, ಕನ್ನಡವೂ ಬರಲ್ಲ, ಇಂಗ್ಲಿಷ್ ಸಹ ಕಲಿತಿಲ್ಲ ಎಂದು ತಲೆ ಚಚ್ಚಿ ಕೊಂಡರು. ಕಂಗ್ಲಿಷ್ ಮಾಧ್ಯಮ ಎಂಬ ಒಂದು ತ್ರಿಶಂಕು ಮಾಧ್ಯಮದಲ್ಲಿ ಈ ಪುಟ್ಟಣದ ಮಕ್ಕಳು ಕಲಿಯುತ್ತಿವೆ ಎಂದು ನಂತರ ಗೊತ್ತಾಗಿ, ಅಲ್ಲಿಂದ ಕಾಲ್ಕಿತ್ತರು.
ಇನ್ನೊಮ್ಮೆ ಕನ್ನಡದ ಹಾಗೂ ಆಂಗ್ಲಭಾಷೆಯ ಖ್ಯಾತ ಮಕ್ಕಳ ಸಾಹಿತಿಗಳಾದ ಕು ರಾ ಜಿ ಅವರನ್ನು ಮಕ್ಕಳಿಗೆ ಮಾರಲ್ ಸ್ಟೋರೀಸ್ ಹೇಳಲು ಕರೆಸಿದ್ದರು. ಅವರು ಬಂದು ಮಕ್ಕಳನ್ನು ಮಾತನಾಡಿಸತೊಡಗಿದರು. ಇದು ಆಂಗ್ಲ ಮಾಧ್ಯಮ ಎಂದು ಗೊತ್ತಾಗಿ ಒಂದು ಹುಡುಗಿಯನ್ನು “ವಾಟ್ ಈಸ್ ಯುವರ್ ನೇಮ್?” ಎಂದು ಸ್ಟೈಲಾಗಿ ಇಂಗ್ಲಿಷ್ ಅಕ್ಸೆಂಟ್ ನಲ್ಲಿ ಕೇಳಿದರು. ಹುಡುಗಿ ಗಪ್ಚುಪ್. ಆಗ ಮತ್ತೆ, “ನಿನ್ನ ಹೆಸರೇನೇ?” ಎಂದು ಗದರಿದಾಗ, ಪಟಕ್ ಅಂತ “ವಸ್ತಲಾ” ಎಂದಿತು. ಇಂಗ್ಲೀಷಿನಲ್ಲಿ ಹೇಳೇ ಎಂದಾಗ “ಮೈ ನೇಮು, ನೇಮು” ಎಂದು ತಡವರಿಸಿ “ಮೈ ನೇಮು ವಸ್ತಲಾ” ಎಂದಿತು. ಇನ್ನೊಬ್ಬ ಹುಡುಗನನ್ನು “ವೇರ್ ಐಸ್ ಯುವರ್ ಹೌಸ್?” ಎಂದರು. ಅದು ಹಾಗೆ ನಿಂತಿತ್ತು. ಇನ್ನೊಂದು ಹುಡುಗನನ್ನು “ಎಲ್ಲೋ ನಿನ್ನ ಮನೆ” ಎಂದರೆ ಥಟ್ ಅಂತ “ಇಲ್ಲೇ ವಡ್ಡರ ಹಳ್ಳಿಯಲ್ಲಿ, ರೇಲು ಟೇಸನ್ ತಾವ” ಎಂದಿತು. ಇಂಗ್ಲಿಷ್ನಲ್ಲಿ ಹೇಳೋ ಎಂದಾಗ ತಡವರಿಸಿ, ಕಡೆಗೆ “ಹಿಯರ್ರು, ವಡ್ರಿಲೇಜು, ರೇಲು ಟೇಸನ್ ನಿಯರ್ರು” ಎಂದಿತು. ಕು ರಾ ಜಿ ಅವರಿಗೆ ರೇಗಿ ಹೋಯಿತು. ಅಲ್ಲಿನ ಟೀಚರನನ್ನು “ಸುಮ್ಮನೆ ಕನ್ನಡಲ್ಲಿ ಹೇಳಿಕೊಡ್ರಿ, ಇದೆಂತ ಭಾಷೆ” ಎಂದು ಬೈದರು. ಆಗ ಆತ “ಸ್ವಾಮಿ, ಇದನ್ನು ನಾನು ಹೇಳಿದರೆ ನನ್ನ ಕೆಲಸ ಹೋಗುತ್ತೆ, ನೀವು ಹೇಳಿದರೆ ಬದಲಾಗಬಹುದು” ಎಂದ. ಕು ರಾ ಜಿ ತಲೆ ಚಚ್ಚಿಕೊಂಡು ನೀತಿಕಥೆಗಳನ್ನು ಕನ್ನಡದಲ್ಲಿ ರಸವತ್ತಾಗಿ ಹೇಳಿ ಮಕ್ಕಳನ್ನು ರಂಜಿಸಿ, ಮನೆಗೆ ಹೋಗಿ ಸರಕಾರಕ್ಕೆ ಒಂದು ಧೀರ್ಘವಾದ ಪತ್ರ ಬರೆದರು .