Vaman Acharya

Others

4  

Vaman Acharya

Others

ಡಾಕ್ಟರ್ ಅಂದರೆ ಹೀಗಿರಬೇಕು ಭಾಗ 2

ಡಾಕ್ಟರ್ ಅಂದರೆ ಹೀಗಿರಬೇಕು ಭಾಗ 2

4 mins
249



       ಮುಂದುವರೆದ ಚಿಕ್ಕ ಕಥೆ 

       


ಹನುಮನಹಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿ ವರೆಗೆ ಕಾಂಕ್ರೀಟ್ ರೋಡ್ ಆದಮೇಲೆ ಒಂದು ದಿವಸ ಡಾ.ಸುಮನ್ ತನ್ನ ಪತಿಗೆ,

"ಅನಿ, ಇನ್ನೂ ಮುಂದೆ ನೀನು ಹನುಮನ ಹಳ್ಳಿಗೆ ಪ್ರತಿ ಭಾನುವಾರ ರೋಗಿಗಳ ಚಿಕಿತ್ಸೆಗೆ ಹೋಗುವ ಅವಶ್ಯಕತೆ ಇಲ್ಲ. ಪ್ರಸ್ತುತ ಗ್ರಾಮಸ್ಥರಿಗೆ ಪವನಪೂರಕ್ಕೆ ಬರಲು ತುಂಬಾ ಅನುಕೂಲವಾಗಿದೆ."


"ಸುಮ, ನೀನು ಹೇಳುವದು ನಿಜ. ಆದರೆ ಆ ಗ್ರಾಮಕ್ಕೆ ನನ್ನ ಅವಶ್ಯಕತೆ ಇದೆ. ನನಗೆ ವಹಿಸಿರುವ ಜವಾಬ್ದಾರಿ ಮುಗಿಯುವವರೆಗೆ ನಾನು ಅಲ್ಲಿಗೆ ಹೋಗುವದು ಅನಿವಾರ್ಯ." 

"ಅದೇ ಅಲ್ಲಿ ಆಸ್ಪತ್ರೆ ಕಟ್ಟುವದು ತಾನೆ?"


"ಹೌದು."


"ಆಸ್ಪತ್ರೆ ಕಟ್ಟಡದ ಬಗ್ಗೆ ನೀನು ಚಿಂತೆ ಮಾಡುವದು ಬೇಡ. ಗ್ರಾಮಸ್ಥರು ಸಮರ್ಥರಿದ್ದಾರೆ. ಅವರು ಎಲ್ಲ ಕೆಲಸ ಮಾಡಿಕೊಳ್ಳುವರು. ಡಾಕ್ಟರ್ ಆದ ನಿನ್ನ ಕೆಲಸ ರೋಗಿಗಳ ಆರೈಕೆ ಮಾಡುವದು. ಅದನ್ನು ಮಾಡಿ ಆಯಿತು. ಈಗಾಗಲೇ ಆ ಗ್ರಾಮದಲ್ಲಿ ಬಹಳಷ್ಟು ರೋಗಿಗಳು ನಿರೋಗಿ ಆಗಿರುವರು.  ನಮ್ಮ ಆಸ್ಪತ್ರೆ ಯಲ್ಲಿ ನಿನಗೆ ಬೇಕಾದಷ್ಟು ಕೆಲಸ ಇದೆ. ಇಲ್ಲಿಯ ಕೆಲಸ  ನೀನು ಅಲಕ್ಷ್ಯ ಮಾಡಿದರೆ ರೋಗಿಗಳು ಬೇರೆ ಆಸ್ಪತ್ರೆಗೆ ಹೋಗುವರು."


"ಸುಮ, ನಾನು ಈಗಾಗಲೇ ಗ್ರಾಮಸ್ಥರಿಗೆ ವಚನ ಕೊಟ್ಟಿದ್ದೇನೆ. ಅದನ್ನು ಮುಗಿಸುವದು ನನ್ನ ಕರ್ತವ್ಯ. ನಿನಗೆ ಎಲ್ಲವೂ ಗೊತ್ತಿದ್ದರೂ ಮತ್ತೆ ಕೇಳುತ್ತಿ."


ಈ ರೀತಿ ಡಾಕ್ಟರ್ ದಂಪತಿ ಅನೇಕ ಸಲ ಸಂಭಾಷಣೆ ಅಲ್ಲ ವಾಗ್ವಾದ ಮಾಡಿ ಪರಿಹಾರ ಕಂಡುಕೊಳ್ಳದೇ ವಿಫಲರಾದರು. 

"ಅನಿ, ನಿನಗೆ ನಾನು ಬೇಕಾ ಇಲ್ಲವೇ ಹನುಮನ ಹಳ್ಳಿಯ ಆಸ್ಪತ್ರೆ ಕಟ್ಟಡ ಬೇಕಾ? ಯಾವುದಾದರೂ ಒಂದನ್ನು ಆಯ್ಕೆ ಮಾಡು."


"ಸುಮ, ನನಗೆ ಎರಡೂ ಬೇಕು."


ಮುಂದೆ ಇವರ ಮನಸ್ತಾಪ ತಾರಕಕ್ಕೇ ಏರಿತು. ಸ್ವಲ್ಪ ದಿವಸ ಮಾತನಾಡುವದನ್ನು ಬಿಟ್ಟರು. 

ಒಂದು ತಿಂಗಳು ಆದಮೇಲೆ ಡಾ. ಅನಿಕೇತ ಹಿಂದಿನ ದಿವಸ ಒಬ್ಬನ ಹೃದ್ರೋಗ ಶಸ್ತ್ರಚಿಕಿತ್ಸೆ ಮುಗಿಸಿ ಮನೆ ಬರುವದಕ್ಕೆ ಮಧ್ಯ ರಾತ್ರಿ. ಬೆಳಗ್ಗೆ ಏಳಲು ವಿಳಂಬ ಆಯಿತು. ಅದೇ ಸಮಯಕ್ಕೆ ಯಾರೋ ಬಾಗಿಲು ಬಡಿದ ಶಬ್ದ ಕೇಳಿಸಿತು. ಬಾಗಿಲು ತೆಗೆದು ಯಾರು ಎಂದು ನೋಡಿದರೆ ಅವನು ಹನುಮನ ಹಳ್ಳಿಯ ಮಹಾದೇವ.


"ಮಹಾದೇವ, ಇದೇನು ಇಲ್ಲಿಗೆ?"


"ಡಾಕ್ಟರ್ ಸಾಹೇಬರೇ, ನೀವು ಅನುಮತಿ ಕೊಟ್ಟರೆ ಒಳಗೆ ಬರಬಹುದೇ?"


ಅನಿಕೇತ ಅವನಿಗೆ ಒಳಗೆ ಬರಲು ಹೇಳಿದ. ಆಸನದಮೇಲೆ ಕುಳಿತ.

"ಡಾಕ್ಟರ್ ಜೀ, ಅಂದು ನನಗೆ ಕುಡುಕ ಎಂದು ಎಲ್ಲರೂ ಹಾಸ್ಯ ಮಾಡಿದಿರಿ. ಕುಡಿದಾಗ ಮನುಷ್ಯ ಸತ್ಯವನ್ನೇ ಹೇಳುವನು. ಕಾನೂನು ಪ್ರಕಾರ ಆಸ್ಪತ್ರೆ ಕಟ್ಟುವ ಆ ಒಂದು ಎಕರೆ ಜಮೀನಿನ ಕಾಗದ ಪತ್ರಗಳು ದೋಷ ಯುಕ್ತವಾಗಿದೆ. ಇದರಿಂದ ಬ್ಯಾಂಕ್ನಲ್ಲಿ ಲೋನ ಸಿಗುವದಿಲ್ಲ. ಶಿವಕುಮಾರ್ ಗೋಮುಖ ವ್ಯಾಘ್ರ ಇರುವನು. ಯಾವುದಕ್ಕೂ ನೀವು ಲಾಯರ್ ಜೊತೆಗೆ ಮಾತಾಡಿ," ಎಂದು ಹೇಳಿ ಹೊರಟೇ ಬಿಟ್ಟ. 


ಅನಿಕೇತನಿಗೆ ಸಿಟ್ಟು ಮತ್ತು ಚಿಂತೆ ಒಂದೇ ಸಲ ಬಂದಿತು. ಶಿವಕುಮಾರನಿಗೆ ಅನಾವಶ್ಯಕ ಬೈದ ಸಿಟ್ಟು. ಚಿಂತೆ ಆಗಿರುವದು ಜಮೀನಿನ ಕಾಗದ ಪತ್ರ ದೋಷಯುಕ್ತ. 

ಪತ್ನಿ ಮಾತು ಕೇಳಬೇಕೇ ಇಲ್ಲವೇ ಗ್ರಾಮಸ್ಥರಿಗೆ ಕೊಟ್ಟ ವಚನ ನಡೆಸಿಕೊಡದೇ ವಚನ ಭ್ರಷ್ಟನಾಗಬೇಕೇ?

ಮರುದಿನ ಬೆಳಗ್ಗೆ ಮನಶ್ಶಾಂತಿ ಆಗಲು ಸಮೀಪದ ಗಣಪತಿ ದೇವಾಲಯಕ್ಕೆ ಹೋಗಿ ದರ್ಶನ ಆದಮೇಲೆ ಅಲ್ಲಿಯೇ ಕೆಲವು ನಿಮಿಷ ಕುಳಿತ. ಅಷ್ಟರಲ್ಲಿ ಅರ್ಚಕರು ಬಂದು ಅನಿಕೇತನಿಗೆ ತೀರ್ಥ ಪ್ರಸಾದ ಕೊಟ್ಟು ಆತನಲ್ಲಿ ಲವಲವಿಕೆ ಇಲ್ಲದಿರುವದನ್ನು ಗಮನಿಸಿ 


"ಡಾ. ಅನಿಕೇತ ಅವರೇ, ಚಿಂತೆಯಲ್ಲಿ ಇದ್ದೀರಾ?"


"ಹೌದು ಅರ್ಚಕರೇ."


"ಚಿಂತೆ ಬೇಡ.  ನಿಮ್ಮ ಗ್ರಹ ಬಲ ಸಧ್ಯ ಒಂದು ತಿಂಗಳು ಸರಿಯಾಗಿ ಇಲ್ಲ. ಆಮೇಲೆ ನಿಮಗೆ ಒಳ್ಳೆಯದು ಆಗುವದು. ಅಲ್ಲಿಯವರೆಗೆ ಯಾವದೇ ದೊಡ್ಡ ಕೆಲಸ ಮಾಡಬೇಡಿ. ನಿಮಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ," ಎಂದು ಆಶೀರ್ವಾದ ಮಾಡಿದರು.


ಪವನಪೂರದ ಹಿರಿಯ ಲಾಯರ್ ರಾಜಾರಾಮ್ ಅವರ ಭೇಟಿ ಆಗಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡ.

ಅದರಂತೆ ಅವರಿಗೆ ದೂರವಾಣಿ ಕರೆ ಮಾಡಿದ. ಅವರು ಮಧ್ಯಾಹ್ನ ಎರಡು ಗಂಟೆಗೆ ಆಫೀಸ್ ಗೆ ಬರಲು ಹೇಳಿದರು. ಸರಿಯಾದ ಸಮಯಕ್ಕೆ ಲಾಯರ್ ಭೇಟಿ ಆಯಿತು. ಅವರ ಜೊತೆಗೆ ಚರ್ಚೆ ಮಾಡಿದ ಬಳಿಕ  ಜಮೀನಿಗೆ ಸಂಭಧ ಇರುವ ಕಾಗದ ಪತ್ರಗಳ ಯಾದಿ ಕೊಟ್ಟರು. ಇವುಗಳನ್ನು ತಂದುಕೊಟ್ಟ ಮೇಲೆ ಪರಿಶೀಲನೆ ಮಾಡಿ ವರದಿ ಕೊಡುವೆ ಎಂದರು.

ಮುಂದೆ ಒಂದು ವಾರದ ನಂತರ ಶಿವಕುಮಾರಗೆ ಫೋನ್ ಮಾಡಿ ಬೇಕಾಗುವ ಕಾಗದ ಪತ್ರಗಳು ತಂದು ಕೊಡುವಂತೆ ಹೇಳಿದ. ಅವನು ಅವುಗಳನ್ನು ತಂದು ಕೊಡಲು ಹಿಂದೇಟು ಹಾಕಿದ. ಅನಿಕೇತ ನಿಗೆ ಆಶ್ಚರ್ಯ ವಾಯಿತು. ಇದಕ್ಕೆ ಏನಾದರೂ ಕಾರಣ ಇರಲೇಬೇಕು ಎಂದು ಅನುಮಾನ ಪ್ರಾರಂಭವಾಯಿತು. ಮಹಾದೇವ ಹೇಳಿದ್ದು ನೆನಪು ಬಂದಿತು. ಏನೇ ಆಗಲಿ ಹನುಮನ ಹಳ್ಳಿಗೆ ಹೋಗಿ ಶಿವಕುಮಾರ್ ಭೇಟಿ ಆದರೆ ವಸ್ತು ಸ್ಥಿತಿ ಗೊತ್ತಾಗುವದು ಎಂದು ಮರುದಿವಸ ಹೊರಟೇ ಬಿಟ್ಟ. ಅನಿಕೇತ 

ಅಲ್ಲಿಗೆ ಹೋದಮೇಲೆ ಶಿವಕುಮಾರ್ ಕಾಗದ ಪತ್ರಗಳು ಕೊಡಲಿಲ್ಲ ಹಾಗೂ ಭೇಟಿಯೂ ಆಗಲಿಲ್ಲ. ಒಂದುವೇಳೆ ಶಿವಕುಮಾರ್ ಕಾಗದಪತ್ರಗಳನ್ನು ಕೊಡದಿದ್ದರೆ, ಆಸ್ಪತ್ರೆ ಕಟ್ಟುವ ಕೆಲಸದ ಯೋಜನೆ ಕೈಬಿಡಬೇಕಾಗುವ ಪರಿಸ್ಥಿತಿ ಬರುವದು.


ಶಿವಕುಮಾರ್ ಹೀಗೇಕೆ ಮಾಡಿದ?

ಅನಿಕೇತನಿಗೆ ವಸ್ತು ಸ್ಥಿತಿ ತಿಳಿಯಲು ಆತ ಗ್ರಾಮದ ಇತರ ಪ್ರಮುಖರನ್ನು ಭೇಟಿ ಆದ. ವಿಷಯ ತಿಳಿದು ಅನಿಕೇತ ನಿಗೆ ಏನು ಮಾಡಬೇಕು ಎನ್ನುವುದು ತಿಳಿಯಲಿಲ್ಲ.  ಮುಂದೆ ತಿಳಿದು ಬಂದಿತು ಒಂದು ಎಕರೆ ಭೂಮಿ ಸರಕಾರದ್ದು. ಶಿವಕುಮಾರ್ ಆ ಜಮೀನು ಒಡೆತನ ಕಾನೂನು ಬಾಹಿರ ಮಾಡಿಕೊಂಡಿದ್ದ. ಅವನ ತಂದೆ ತಾಯಿ ತುಂಬಾ ಸಾತ್ವಿಕರು ಇದ್ದರೆ ಮಗ ಅವರ ತದ್ವಿರುದ್ಧ. 


ಒಂದು ತಿಂಗಳು ಕಳೆಯಿತು. ಹನುಮನ ಹಳ್ಳಿ ಗ್ರಾಮ ಪವನಪುರ ತಾಲೂಕಿನಲ್ಲಿ ಬರುವದರಿಂದ ತಹಸೀಲ್ ಆಫೀಸಿನಲ್ಲಿ ಸಂಭಂಧ ಪಟ್ಟ ಅಧಿಕಾರಿಗಳನ್ನು ಅನಿಕೇತ ಭೇಟಿ ಆಗಿ ವಿಷಯ ತಿಳಿಸಿದ. ಅವರು ಮೂರು ತಿಂಗಳು ಸಮಯ ತೆಗೆದುಕೊಂಡು ಆ ಒಂದು ಎಕರೆ ಜಮೀನು ಸರಕಾರದ್ದು ಎನ್ನುವದು ಖಚಿತವಾಯಿತು. ಅಲ್ಲದೆ ಸರಕಾರ ಆ ಭೂಮಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವೈದ್ಯರ ನಿವಾಸ ಹೀಗೆ ಅಂದಾಜು ಎರಡು ಕೋಟಿ ರೂಪಾಯಿ ಯೋಜನೆ ಮಂಜೂರು ಆಗಿರುವದಾಗಿ ಹೇಳಿದರು. ಅನಿಕೇತನಿಗೆ ಸಂತೋಷವಾಗಿ ಗ್ರಾಮದ ಹಿರಿಯರಿಗೆ ತಿಳಿಸಿದ.


ಸರಕಾರದ ಯೋಜನೆ ಯಾವಾಗ ಪೂರ್ತಿ ಆಗುವದು ಎನ್ನುವ ಗೋಜಿಗೆ ಅನಿಕೇತ ಹೋಗದೇ ಸುಮ್ಮನಾದ. ಅನಿಕೇತ ಮನಸ್ಸಿನಲ್ಲಿ ಅಂದುಕೊಂಡ ಹನುಮನ ಹಳ್ಳಿಯಲ್ಲಿ ಆಸ್ಪತ್ರೆ ಆಗುವದು ಹಾಗೂ ಪತ್ನಿ ಇಚ್ಚೆಯಂತೆ ಅಲ್ಲಿಗೆ ಹೋಗುವದನ್ನು ಸ್ಥಗಿತಗೊಳಿಸಿದ್ದು ಇದು ಆತನಿಗೆ  ಖುಷಿ ತಂದಿತು. 

ಪತಿ ಪತ್ನಿ ಇಬ್ಬರ ಸಂಭಂಧ ಮೊದಲಿನಂತೆ ಉತ್ತಮವಾಯಿತು.


ಒಂದು ದಿವಸ ಡಾ. ಸುಮನ್,

"ಅನಿ, ಆ ಕಹಿ ದಿವಸಗಳು ಮತ್ತೆ ಬರಬಾರದು. ನೀನು ನನ್ನ ಮಾತು ಕೇಳಿ ಹನುಮನ ಹಳ್ಳಿಗೆ ಹೋಗುವದನ್ನು ಸ್ಥಗಿತಗೊಳಿಸಿರುವದು ಒಳ್ಳೆಯ ನಿರ್ಧಾರ. ನನಗೆ ಆನಂದವಾಯಿತು."


"ಸುಮ, ಕೊನೆಗೆ ನೀನೇ ಗೆದ್ದೆ. ನಾನು ಸೋತೆ."


"ಅನಿ, ಸೋಲು, ಗೆಲವು ಪ್ರಶ್ನೆ ಇಲ್ಲ. ಇಂತಹ ಸಂದರ್ಭ ಬಂದಾಗ ಜಾಣತನದಿಂದ ಬಗೆಹರಿಸಬೇಕು. ಒಂದು ಮಾತು ನಿಜ. ಅಂದು ಶಿವಕುಮಾರ್ ನಿನಗೆ 'ಡಾಕ್ಟರ್ ಅಂದರೆ ಹೀಗಿರಬೇಕು' ಎಂದು ತನ್ನ ಸ್ವಾರ್ಥಕ್ಕಾಗಿ ಹೇಳಿದ. ಈಗ ನಾನು ಅದನ್ನು ಮನ:ಪೂರ್ವಕವಾಗಿ ಹೇಳುತ್ತಿದ್ದೇನೆ."


ಅನಿಕೇತ ಹಸನ್ಮುಖಿ ಆಗಿ 'ಮಡದಿ ಅಂದರೆ ಸುಮನ್ ಹಾಗೆ ಇರಬೇಕು,'  ಎಂದ.


ಇದರಿಂದ ಹಾಸ್ಯ ಪ್ರಸಂಗ ಉದ್ಭವ ಆಗಿ ಡಾಕ್ಟರ್ ದಂಪತಿ  ನಕ್ಕಿದ್ದೆ ನಕ್ಕಿದ್ದು. 



Rate this content
Log in