StoryMirror Feed

Children Stories

5.0  

StoryMirror Feed

Children Stories

ಮಕ್ಕಳ ಕಥೆ: ಕೋಗಿಲೆ ಮತ್ತು ನವಿಲಿನ ಗೆಳೆತನ

ಮಕ್ಕಳ ಕಥೆ: ಕೋಗಿಲೆ ಮತ್ತು ನವಿಲಿನ ಗೆಳೆತನ

2 mins
3.4K


ದೊಡ್ಡ ಕಾಡಿನೊಳಗೆ ಒಂದು ದೊಡ್ಡ ಮರವಿತ್ತು. ಆ ಮರದಲ್ಲಿ ಕೋಗಿಲೆಯೊಂದು ವಾಸವಾಗಿತ್ತು. ಅದು ಮುಂಜಾನೆ ಸಂಗೀತಾಭ್ಯಾಸ ಮಾಡುವ ಶಬ್ದ ಕಾಡಿನ ತುಂಬಾ ಕೇಳಿಸುತ್ತಿತ್ತು. ಇದರಿಂದ ತಮಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಕಾಡಿನ ಬೇರೆ ಪ್ರಾಣಿಗಳು ಆ ಕೋಗಿಲೆ ವಿರುದ್ಧ ಕಿಡಿಕಾರುತ್ತಿದ್ದವು. ಹೇಗಾದರು ಮಾಡಿ ಆ ಕೋಗಿಲೆಯನ್ನು ಆ ಕಾಡಿನಿಂದ ಓಡಿಸಬೇಕೆಂದು ಪ್ರಯತ್ನಿಸುತ್ತಿದ್ದವು. 


ಅದೇ ಕಾಡಿನೊಳಗೆ ನವಿಲೊಂದು ವಾಸವಾಗಿತ್ತು. ಅದು ಪ್ರತಿದಿನ ಕೋಗಿಲೆಯ ಗಾನಕ್ಕೆ ಕುಣಿದು ಕುಪ್ಪಳಿಸುತ್ತಿತ್ತು. ಒಂದು ದಿನ ಪ್ರಾಣಿಗಳೆಲ್ಲಾ ಆ ಕಾಡಿನ ಮುಖ್ಯ ಪ್ರಾಣಿ ಹತ್ತಿರ ಹೋಗಿ ಕೋಗಿಲೆ ವಿರುದ್ಧ ದೂರು ನೀಡುತ್ತವೆ. ಇದನ್ನು ಸ್ವೀಕರಿಸಿದ ಮುಖ್ಯ ಪ್ರಾಣಿ ಆ ಕೋಗಿಲೆಯು ಪಂಚಾಯಿತಿ ಕಟ್ಟೆಗೆ ಬರಬೇಕೆಂದು ಡಂಗುರ ಸಾರಿಸುತ್ತದೆ. ನವಿಲು ಮತ್ತು ಇತರ ಪ್ರಾಣಿಗಳು ಪಂಚಾಯಿತಿ ಕಟ್ಟೆಗೆ ಬರುತ್ತವೆ. 


ಪಂಚಾಯಿತಿ ಕಟ್ಟೆಯಲ್ಲಿ ಪ್ರತಿ ಪ್ರಾಣಿಯೂ ಕೋಗಿಲೆಯನ್ನು ದೂರಿ ಸುಳ್ಳು ಆರೋಪಗಳನ್ನು ಮಾಡಲು ಆರಂಭಿಸುತ್ತವೆ. ಎಲ್ಲರ ದೂರು ಕೇಳಿದ ಮುಖ್ಯ ಪ್ರಾಣಿಯು ದೂರು ನೀಡಿದ ಪ್ರಾಣಿಗಳೆಲ್ಲಾ ಇಲ್ಲಿರುವಿರಿ. ಆದರೆ ದೂರಿನ ಪ್ರತಿವಾದಿ ಕೋಗಿಲೆಯೇ ಬಂದಿಲ್ಲವೆಂದು ಹೇಳಿ ಈಗಲೇ ಕೋಗಿಲೆಯನ್ನು ಕರೆದುಕೊಂಡು ಬನ್ನಿ ಎಂದು ಹೇಳುತ್ತದೆ. 


ನರಿಯೊಂದು ಕೋಗಿಲೆಯನ್ನು ಕರೆತರಲು ಹೋಗುತ್ತದೆ. ಆ ಕೋಗಿಲೆಗೆ ಯಾವ ವಿಷಯವೂ ತಿಳಿದಿರುವುದಿಲ್ಲ. ಅದು ಗೊಂದಲದಲ್ಲಿಯೇ ಪಂಚಾಯಿತಿ ಕಟ್ಟೆಗೆ ಬರುತ್ತದೆ. ಆಗ ಮುಖ್ಯ ಪ್ರಾಣಿ ಕೋಗಿಲೆಗೆ, ನಿನ್ನ ವಿರುದ್ಧ ಕಾಡಿನ ಪ್ರಾಣಿಗಳೆಲ್ಲಾ ದೂರು ನೀಡಿವೆ. ನಿನ್ನ ಸಂಗೀತಾಭ್ಯಾಸದಿಂದ ಈ ಕಾಡಿನ ಪ್ರಾಣಿಗಳಿಗೆ ತೊಂದರೆಯಾಗುತ್ತಿದ್ದು, ಅದಕ್ಕಾಗಿ ನಿನ್ನನ್ನು ಈ ಕಾಡಿನಿಂದ ಹೊರದೂಡಬೇಕೆಂದು ಅವು ಹೇಳುತ್ತಿವೆ. ಇದಕ್ಕೆ ನೀನು ಏನು ಹೇಳುವೆ ಎಂದು ಕೇಳಿತು. 


ಆಗ ಕೋಗಿಲೆಯು ನಾನೇನು ಮಾಡಲಿ? ಗಾನ ಕೋಗಿಲೆಯೆಂಬ ನಾಮಾಂಕಿತದಿಂದಲೇ ನನ್ನ ಜನನವಾಗಿರುವಾಗ ನನ್ನ ಗಾನವನ್ನು ನಿಲ್ಲಿಸಲು ಸಾಧ್ಯವೇ ಹೇಳಿ. ನನ್ನ ಗಾನಕ್ಕೆ ನೃತ್ಯ ಮಾಡಲು ಹಾತೊರೆಯುವ ಅದೆಷ್ಟೋ ಮನಸ್ಸುಗಳು ಇವೆ. ಹಾಗಿರುವಾಗ ನನ್ನ ಗಾಯನದಿಂದ ತೊಂದರೆಯಾಗಲು ಹೇಗೆ ಸಾಧ್ಯ ಎಂದು ಕೇಳಿತು. ಆಗ ಮುಖ್ಯ ಪ್ರಾಣಿಯು ಉಳಿದ ಪ್ರಾಣಿಗಳಿಗೆ, ಈಗೇನು ಮಾಡುವುದು? ಕೋಗಿಲೆಯ ಗಾನ ಎಲ್ಲರಿಗೂ ತೊಂದರೆಯಾಗುತ್ತಿದೆಯಾ ಎಂದು ಮತ್ತೆ ಕೇಳಿತು. 


ಆಗ ಪ್ರಾಣಿಗಳ ಮಧ್ಯೆಯಿದ್ದ ನವಿಲು, ಇಲ್ಲ. ನನಗೇನು ಇದುವರೆಗೂ ಕೋಗಿಲೆಯ ಗಾನದಿಂದ ತೊಂದರೆಯಾಗಿಲ್ಲ. ಅದರ ಗಾನ ಸುಮಧುರವಾಗಿದೆ. ಅದರ ನಿನಾದಕ್ಕೆ ನಾನು ಪ್ರತಿಬಾರಿಯೂ ಗರಿ ಬಿಚ್ಚಿ ಲೋಕವನ್ನೇ ಮರೆತು ಕುಣಿಯುತ್ತೇನೆ ಎಂದು ಹೇಳುತ್ತದೆ. ಆಗ ಮುಖ್ಯ ಪ್ರಾಣಿ, ನವಿಲೊಂದು ಮಾತ್ರ ಕೋಗಿಲೆಯ ಗಾನದಿಂದ ತೊಂದರೆ ಇಲ್ಲವೆಂದು ಹೇಳುತ್ತಿದೆ. ಆದರೆ ಒಬ್ಬರ ಹೇಳಿಕೆಯಿಂದಾಗಿ ಉಳಿದ ಪ್ರಾಣಿಗಳ ಮಾತನ್ನು ಧಿಕ್ಕರಿಸಲಾರೆ ಎಂದು ಹೇಳಿ ನಾನೊಂದು ಗಾನ ಕಛೇರಿ ಏರ್ಪಡಿಸುತ್ತೇನೆ. ಅದರಲ್ಲಿ ಆ ಕೋಗಿಲೆ ಹಾಡಬೇಕು. ಅದಾದ ಬಳಿಕ ಏನು ಮಾಡಬೇಕು ಎಂದು ನಾನು ತೀರ್ಮಾನ ಮಾಡುತ್ತೇನೆ ಎಂದು ಹೇಳಿತು. 


ಗಾನ ಕಛೇರಿ ಏರ್ಪಡಿಸಿದ ಮುಖ್ಯ ಪ್ರಾಣಿ, ಉಳಿದ ಪ್ರಾಣಿಗಳೂ ಈ ಕಛೇರಿಯಲ್ಲಿ ಉಪಸ್ಥಿತರಿರಬೇಕು ಎಂದು ಆದೇಶ ನೀಡಿತು. ಅಲ್ಲಿ ಕೋಗಿಲೆ ಹಾಡಲು ಶುರು ಮಾಡಿತು. ಅದರ ಗಾನಕ್ಕೆ ಮೈ ಮರೆತು ಕುಳಿತೇ ಬಿಟ್ಟಿದ್ದ ಮುಖ್ಯ ಪ್ರಾಣಿಗೆ ಗಾನ ಮುಗಿದದ್ದೂ ಅರಿವಿಗೆ ಬರಲಿಲ್ಲ. ಕೋಗಿಲೆಯ ಗಾನ ನಿಂತಾಗಲೇ ಅದಕ್ಕೆ ಎಚ್ಚರವಾಗಿ ಕೋಗಿಲೆಯನ್ನು ತಬ್ಬಿ ಮೆಚ್ಚುಗೆ ವ್ಯಕ್ತಪಡಿಸಿತು ಮತ್ತು ಕೋಗಿಲೆ ವಿರುದ್ಧ ನೀಡಿದ ದೂರನ್ನು ಧಿಕ್ಕರಿಸಿತು. ಇನ್ನು ಮುಂದೆ ಕಾಡಿನಲ್ಲಿ ಯಾವುದೇ ಸಮಾರಂಭ ನಡೆದರೂ ಅಲ್ಲಿ ಕೋಗಿಲೆಯ ಗಾನವಿರಬೇಕು. ಅದನ್ನು ಎಲ್ಲರೂ ಗೌರವದಿಂದ ಕಾಣಬೇಕೆಂದು ತೀರ್ಪು ನೀಡಿತು. ಕೋಗಿಲೆಗೆ ಖುಷಿಯಾಗಿ ತನ್ನ ಕಷ್ಟಕ್ಕೆ ನೆರವಾದ ನವಿಲಿಗೆ ಧನ್ಯವಾದ ಹೇಳಿತು. ಅಂದಿನಿಂದ ಕೋಗಿಲೆ ಮತ್ತು ನವಿಲು ಒಳ್ಳೆಯ ಗೆಳೆಯರಾಗಿ ಕಾಡಿನೊಳಗೆ ಸಂತೋಷದಿಂ¨ ಬದುಕಿದವು. 


ನೀತಿ: ಒಳ್ಳೆಯತನವೊಂದೇ ಕೊನೆಗೆ ಉಳಿಯುತ್ತದೆ. 


Rate this content
Log in