StoryMirror Feed

Children Stories

4.0  

StoryMirror Feed

Children Stories

ಮಕ್ಕಳ ಕಥೆ: ದೊಡ್ಡವರ ಹೋಮ್‌ ವರ್ಕ್‌

ಮಕ್ಕಳ ಕಥೆ: ದೊಡ್ಡವರ ಹೋಮ್‌ ವರ್ಕ್‌

2 mins
11.6K


ಅಣ್ಣ ತಂಗಿ ಚೇತನ್‌ ಮತ್ತು ಚೈತ್ರಾ ನಡುವೆ ನಡೆಯುತ್ತಿದ್ದ ಜಗಳ ಬಲು ಮೋಜಿನದಾಗಿರುತ್ತಿತ್ತು. ಕಿಟಕಿ ಮುಚ್ಚಲು ಜಗಳ, ತೆರೆಯಲು ಜಗಳ, ಲೈಟ್‌ ಹಚ್ಚಲು ಜಗಳ, ಆರಿಸಲೂ ಜಗಳವಾಡುತ್ತಿದ್ದರು. ಜಗಳದ ಕಿಡಿ ಸಿಡಿಯಬಾರದೆಂದು ಅವರ ಅಪ್ಪ ಅವ್ವ ಇಬ್ಬರಿಗೂ ಒಂದೇ ಕಲರಿನ ಕಂಪಾಸ್‌ ಬಾಕ್ಸ್‌, ಒಂದೇ ಸೈಜಿನ ಟಿಫಿನ್‌ ಬಾಕ್ಸ್‌, ಒಂದೇ ಅಳತೆಯ ಚಾಕಲೇಟ್‌ಗಳನ್ನು ತರುತ್ತಿದ್ದರು. ಅವರು ಎಷ್ಟೇ ಮುತುವರ್ಜಿ ವಹಿಸಿದರೂ ಪುಟಾಣಿಗಳು ಜಗಳವಾಡುತ್ತಿದ್ದರು. ಒಮ್ಮೆ ಪಡಸಾಲೆಯಲ್ಲಿ ಚೇತನ್‌ ಹರಿದು ಹಾಕಿದ ಹಾಳೆಗಳನ್ನು ಅವನೇ ಎತ್ತಿ ಹಾಕಲಿ ಎಂದು ಚೈತ್ರಾಳೂ, ಆ ಹಾಳೆಗಳಲ್ಲಿ ಅವಳದೂ ಒಂದು ತುಣುಕು ಸೇರಿದೆಯೆಂದು ಅವನೂ ಮುಖ ಉಬ್ಬಿಸಿದ್ದನು. ಅವಳ ತುಣುಕು ಯಾವುದು ಎಂದು ಹುಡುಕಲಿಕ್ಕೆ ಕುಳಿತರೆ, ಅದೊಂದು ರಾಮಾಯಣ ಎಂದು ಅವ್ವ ಬಂದು ಮಕ್ಕಳಿಬ್ಬರನ್ನೂ ಎಬ್ಬಿಸಿ ತಾನೇ ಕಸಬರಿಗೆ ತೆಗೆದುಕೊಳ್ಳುವಳು. ಆಗ ಅವರು, ತಾಯಿ ಸಿಟ್ಟು ಮಾಡಿಕೊಂಡಿದ್ದಾಳೆ. ಇನ್ನು ಒಂದು ತಾಸು ತಮ್ಮೊಡನೆ ಮಾತಾಡಲಿಕ್ಕಿಲ್ಲ. ಚಪಾತಿಗೆ ಬೆಲ್ಲ ತುಪ್ಪ ಹಚ್ಚಿ ತುತ್ತು ಮಾಡಿ ಇಡಲಿಕ್ಕಿಲ್ಲ. ಸಂಜೆಗೆ ಶೇಂಗಾ ಹುರಿದು ಕೊಡಲಿಕ್ಕಿಲ್ಲ ಎಂದು ಅವಳ ಸಿಟ್ಟನ್ನು ಇಳಿಸಲು ಅವಳ ಎಡಗಡೆಗೊಬ್ಬರು, ಬಲಗಡೆಗೊಬ್ಬರು ತಳಕು ಹಾಕಿಕೊಳ್ಳುತ್ತ ಅವಳ ಕೈಯಿಂದ ಕಸಬರಿಗೆ ಕಸಿದುಕೊಂಡು ತಾವೇ ಕಸ ಹೊಡೆದು ಧೂಳು ಕೊಡವಿ ಪುಸ್ತಕಗಳನ್ನು ಚೆಂದಾಗಿ ಹೊಂದಿಸಿಟ್ಟುಕೊಳ್ಳುತ್ತಿದ್ದರು. 


ತಾಯಿಯನ್ನು ಇನ್ನೂ ಖುಷಿ ಪಡಿಸಲು ಅವರು ಪಡಸಾಲೆಯಲ್ಲಿ ತುಂಬಿಟ್ಟಿದ್ದ ಪಾತೇಲಿಯಿಂದ ನೀರು ತುಂಬಿಕೊಂಡು ಹೂವಿನ ಕುಂಡಗಳಿಗೆ ಹಣಿಸುವರು. ತಮ್ಮ ಕೈಯಾರೆ ಹಚ್ಚಿದ ಹೂವಿನ ಕಂಟಿಗಳಿಗೆ ನೀರುಣಿಸುತ್ತ ನಾ ಮೊದಲು ತಾ ಮೊದಲು ಎಂದು ಕಿತ್ತಾಡುತ್ತ ಗಿಡ ಮರಗಳ ಜೊತೆಗೆ ಅವರೂ ಒದ್ದೆಯಾಗುತ್ತಿದ್ದರು. ಮನೆಯ ಸುತ್ತಲೂ ಹಸಿರಿರಬೇಕು, ಅದು ನೀರುಂಡು ನಳನಳಿಸುತ್ತಿರಬೇಕು ಎಂದು ಶಾಲೆಯಲ್ಲಿ ಹೇಳಿದ್ದನ್ನು ಚೇತನ್‌ ಪದೇ ಪದೆ ಅವ್ವನಿಗೆ ಹೇಳುತ್ತಿದ್ದ. ಅದಕ್ಕೆ ಆಕೆ 'ಅದನ್ನು ನಿಮ್ಮಪ್ಪನಿಗೆ ಹೇಳು. ಮನಿಯೊಳಗ ರಾಡಿ, ರೊಜ್ಜು ಆಗ್ತೈತಿ ಅಂತ ವಟಗುಟ್ಟತಿರತಾರ' ಎಂದು ಹೇಳುತ್ತಿದ್ದಳು. ಕೊನೆಗೆ 'ಮನಿಗೆ ಸ್ವಲ್ಪ ತಂಪಿರಬೇಕೋ ಬ್ಯಾಡೋ? ನೆಳ್ಳು ಬೇಕೋ ಬ್ಯಾಡೋ? ದೇವರಿಗೆ ಅಂತ ಅಂಗಳದಾಗ ಒಂದೆರಡು ಹೂವು ಅಳ್ಳಬೇಕೋ ಬ್ಯಾಡೊ? ಎಂದು ಗಂಡನಿಗೆ ಎರಡ್ಮೂರು ದಿನ ಹೇಳಿದರು. 


ಮಕ್ಕಳಿಬ್ಬರಲ್ಲಿ ಹಾಕ್ಯಾಟ ಶುರುವಾಯಿತೆಂದರೆ ಅಪ್ಪನಿಗೆ ಎಲ್ಲಿಲ್ಲದ ಸಿಟ್ಟು. ಆಗ ಮಕ್ಕಳ ಕಣ್ಣುಗಳಿಂದ ದಳದಳ ನೀರು ಸುರಿಯಿತ್ತಿತ್ತು. 'ಅವ್ವ, ನೋಡಿಲ್ಲಿ. ಅಪ್ಪ ನಮ್ಮನ್ನ ಹೊಡಿಲಿಕ್ಕೆ ಹತ್ತ್ಯಾನ. ಪುಟ್ಟಿ ಗೊಂಬಿನ ಹೊರಗ ಒಗದ' ಎಂದು ಮಕ್ಕಳು ಅಂದಾಗ ಅವ್ವ ಅಪ್ಪನಿಗೆ 'ಏನ್ರೀ ನೀವು, ಪಾಪ ಅವರು ಎಷ್ಟು ಚೆಂದ ಒಂದ ನಿಮಿಷದಾಗ ಜಗಳಾಡ್ತಾರು, ಮತ್ತೊಂದು ನಿಮಿಷದಾಗ ಪ್ರೀತಿ ಮಾಡ್ತಿರತಾರು. ಅಷ್ಟೂ ತಿಳಿಯೂದಿಲ್ಲೇನು ನಿಮಗ?' ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. ಇದೇ ಸಮಯಕ್ಕೆ ಮಕ್ಕಳು ಅಪ್ಪ ಮಾಡದ ಹೋಮ್‌ ವರ್ಕ್‌ ಬಗ್ಗೆ ಅವ್ವನಿಗೆ ದೂರು ಕೊಡುವರು. ಮೊನ್ನೆ ಅವ್ವ ಊರಿಗೆ ಹೋದಾಗ ಅಪ್ಪ ಅಂಗಳದ ಗಿಡ ಮರಗಳಿಗೆ ನೀರು ಹಾಕಲಿಲ್ಲವೆಂದು ತಾವು ಹಾಕಲು ಹೋದರೆ ಹಾಳು ಮಾಡುತ್ತೇವೆಂದು ಗದರಿ ಪೈಪು ತೆಗೆದಿಟ್ಟನೆಂದೂ ಒಂದೇ ಉಸುರಿಗೆ ಹೇಳಿದರು. ಆಗ ಅವ್ವ 'ನೋಡ್ರೀ, ಹ್ಯಾಂಗ್‌ ಸಿಕ್ಕಬಿದ್ದಿರಿ. ದೊಡ್ಡವರೇ ಹೋಮ್‌ ವರ್ಕ್‌ ಮಾಡದಿದ್ರ ಮಕ್ಕಳು ಹೆಂಗ ಮಾಡಬೇಕು?' ಎಂದು ನಗುತ್ತ ಅಪ್ಪನೆಡೆಗೆ ನೋಡಿದಳು. ಆತ ಕ್ಷ ಣಮಾತ್ರದಲ್ಲಿ ಕೈತೋಟದಲ್ಲಿ ಮರೆಯಾಗಿ ನೀರು ನಿಲ್ಲಲು ಗಿಡಮರಗಳಿಗೆ ಪಾತಿಗಳನ್ನು ಮಾಡಲು ಆರಂಭಿಸಿದ. 
Rate this content
Log in