ಲಾಕ್ ಡೌನ್ ವ್ಯಥೆ
ಲಾಕ್ ಡೌನ್ ವ್ಯಥೆ
ಮುಂಜಾನೆ ವೇಳೆಯಲ್ಲಿ ಶಂಕರಣ್ಣ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅಷ್ಟೋತ್ತಿಗೆ ರಾಮಣ್ಣನವರು ಎದುರಾದರು. "ಹಾ ನಮಸ್ಕಾರ ರಾಮಣ್ಣ ಎಲ್ಲಿಗೆ ಇಷ್ಟೋತ್ತಿಗೆ ರಭಸದಲ್ಲಿ ಹೋಗುತ್ತೀರಾ?".ಎಂದು ಶಂಕರಣ್ಣ ವಿಚಾರಿಸಿದರು. "ಶಂಕರಣ್ಣ ನಿಮಗೆ ಗೊತ್ತಿಲ್ಲವೇ !ನಾಳೆಯಿಂದ ಇಡೀ ಭಾರತ್ ಲಾಕ್ ಡೌನ್ ಅಂತೆ, ಅದಕ್ಕೆ ಇವತ್ತೇ ಎಲ್ಲಾ ಸಾಮಾನುಗಳನ್ನು ಕೊಂಡು ಕೊಳ್ಳಲು ಪೇಟೆಗೆ ದಾರಿ ಹಿಡಿದಿದ್ದೇನೆ "."ಹಾ ಹೌದಾ ನನಗೆ ಗೊತ್ತೇ ಇಲ್ಲ . ನನಗೂ ಸಾಮಾನು ಖರೀದಿಸ್ಬೇಕಿತ್ತು".ಹಾಗೆ ಶಂಕರಣ್ಣನವರು ತನ್ನ ಮನೆಗೆ ನಡೆದರು.ಶಂಕರಣ್ಣನವರದ್ದು ಬಡ ಕುಟುಂಬ ಹೆಂಡತಿ ಮತ್ತೆ ಇಬ್ಬರು ಮಕ್ಕಳು ಇದು ಶಂಕರಣ್ಣರ ಪುಟ್ಟ ಕುಟುಂಬ. ಮಕ್ಕಳು ಇಬ್ಬರೂ ಕಲಿಯುತ್ತಿರುವರು. "ಶಾರದಾ... ಶಾರದಾ... ಎಲ್ಲಿದ್ದೀಯ ನಾಳೆಯಿಂದ ಲಾಕ್ ಡೌನ್ ಅಂತೆ ದಾರಿ ಮಧ್ಯೆ ರಾಮಣ್ಣನವರು ಹೇಳಿದರು. ಮನೆಯಲ್ಲಿ ಸಾಮಾನು ಮುಗಿದಿದೆ ಅನ್ನುತ್ತಿದ್ದೆ ಅಲ್ಲ ಚೀಟಿ ಬರೆದು ಕೊಡು ತಗೊಂಡು ಬರುತ್ತೇನೆ".ಎಂದು ಶಂಕರಣ್ಣನವರು ಬೊಬ್ಬಿಟ್ಟರು. ಹೆಂಡತಿ ಶಾರದೆ ಉದ್ದದ ಚೀಟಿ ತಂದು ಶಂಕರಣ್ಣನವರ ಮುಂದಿಟ್ಟಳು.ಅದನ್ನು ಕಂಡ ಕೂಡಲೇ ಶಂಕರಣ್ಣನವರು ಒಮ್ಮೆಲೇ ತನ್ನ ಕಿಸೆಗೆ ಕೈ ಇಟ್ಟುಕೊಂಡು "ಇದೆಂಥ ಪಟ್ಟಿಯಲ್ಲಿ ಇಷ್ಟೆಲ್ಲಾ ಇದೆ ! ಇಷ್ಟು ಸಾಕ ಇಲ್ಲ ಇನ್ನೂ ಏನಾದ್ರು ಮರೆತಿದ್ದೀಯಾ ಹೇಗೆ?"ಎಂದು ಮುಗುಳ್ನಗೆಯಿಂದ ತನ್ನ ಹೆಂಡತಿಯಲ್ಲಿ ಕೇಳಿದರು. ಶಾರದೆಯು ಏನೂ ಉತ್ತರ ಕೊಡದೆ ಸುಮ್ಮನಾದಳು. ಹಾಗೆ ಶಂಕರಣ್ಣನವರು ಶಾರದೆ ಕೊಟ್ಟ ಚೀಲವನ್ನು ಕೂಡ ತೆಗೆದುಕೊಂಡು ಪೇಟೆಗೆ ಹೊರಟರು. ಹೆಂಡತಿ ಪಟ್ಟಿ ಮಾಡಿ ಕೊಟ್ಟ ಸಾಮಾನುಗಳೆಲ್ಲವನ್ನೂ ತರಲು ಅಷ್ಟೊಂದು ದುಡ್ಡು ತನ್ನಲ್ಲಿ ಇಲ್ಲದಿದ್ದರೂ ಸಾದ್ಯವಾದಷ್ಟನ್ನು ಶಂಕರಣ್ಣ ಖರೀದಿಸಿದರು. ಹಾಗೆ ಮನೆಗೆ ಹಿಂತಿರುಗಿದರು. ದೂರದಿಂದ ತಂದೆ ಬರುವುದನ್ನು ಕಂಡಾಗಲೇ ಮಕ್ಕಳಾದ ರಾಜು ಮತ್ತು ಗೀತಾಳ ಮುಖ ಖುಷಿಯಿಂದ ಅರಳಿತು. "ಹೇ ಅಪ್ಪ ಬಂದ್ರು "ಎಂದು ಕೂಗ ತೊಡಗಿದರು."ಇಷ್ಟು ಬೇಗ ಬಂದ್ರ? "ಎಂದು ಶಾರದೆ ವಿಚಾರಿಸಿದಳು. "ಯಪ್ಪಾ ಸಾಕಾಯ್ತು, ಅಂಗಡಿಗೆ ಹೋದಲ್ಲಿ ಹೋದಲ್ಲಿ ಕೈ ತೊಳೆಯಬೇಕು,ಅಲ್ಲದೆ 1ಮೀಟರ್ ಅಂತರದಲ್ಲಿ ನಿಲ್ಲಬೇಕಂತೆ ನಿಂತು ನನ್ನ ಎರಡು ಕಾಲುಗಳನ್ನೂ ಕೂಡ ಮೇಲಕ್ಕೆತ್ತಲು ಸಾಧ್ಯವಾಗುತ್ತಿಲ್ಲ. ಹೀಗೂ ಉಂಟೆ !ಈ ಕೊರೋನ
ಾ ಮಹಾಮಾರಿಯಿಂದ ನಮ್ಮಂಥ ಜನರಿಗೆ ನೆಮ್ಮದಿಯಿಂದ ದುಡಿಯಲೂ ಆಗುತ್ತಿಲ್ಲ, ಹೊರಗಡೆ ಇಳಿದು ಹೋಗಲೂ ಆಗುತ್ತಿಲ್ಲ."ಎಂದು ಕೊಂಡು ಶಂಕರಣ್ಣ ಒಳಗಡೆ ಹೋದರು. ಮರುದಿನ ಬೆಳಗ್ಗೆ ಇಡೀ ವಾತಾವರಣವೇ ಸ್ತಬ್ಧವಾಗಿತ್ತು. ಒಂದು ಪಿನ್ನು ಬಿದ್ದರೆ ಕೇಳುವಷ್ಟೂ ನಿಶಬ್ಧ. ಆದ್ದರಿಂದ ಮಕ್ಕಳೆಲ್ಲರಿಗೂ ಖುಷಿ. ಬೆಳಗ್ಗೆನೇ ರಸ್ತೆಯಲ್ಲಿ ಕ್ರಿಕೆಟ್ ಆಡಲು ಹೊರಟಿದ್ದರು . ಜೊತೆಗೆ ರಾಜು ಮತ್ತೆ ಗೀತಾ ಇಬ್ಬರೂ ಹೊರಟರು. ಸ್ವಲ್ಪ ಕಳೆದಾಗ ರಾಮಣ್ಣನವರು ಶಂಕರಣ್ಣ ನವರ ಮನೆಗೆ ಬಂದರು. "ಹಾ ರಾಮಣ್ಣ ಏನು ಇತ್ತ ಕಡೆ ಪಯಣ? ".ಎಂದು ಶಂಕರಣ್ಣ ವಿಚಾರಿಸಿದರು. "ಏನೆಂದು ಹೇಳಲಿ ಶಂಕರಣ್ಣ ಮನೆಯಲ್ಲಿ ಕುಳಿತು ಬೋರ್ ಅಯ್ತು ಅದಕ್ಕೆ ನಿಮ್ಮಲ್ಲಿ ಸ್ವಲ್ಪ ಮಾತನಾಡಿ ಹೋಗುವ ಅಂತ ಬಂದೆ ".ರಾಮಣ್ಣ ಮರುತ್ತರಿಸಿದರು. "ಹೌದು ರಾಮಣ್ಣ ನನಗೂ ಅಷ್ಟೆ ಇಲ್ಲಿ. ಪೇಟೆಗಾದರು ಹೋಗುವ ಅಂದ್ರೆ ಅದೂ ಆಗಲ್ಲ. ವಠಾರೆ ಬಾವಿಯಲ್ಲಿರುವ ಕಪ್ಪೆಯ ತರ ಆಗಿದೆ ಈಗ."ಎನ್ನುತಾ ಮುಗುಳ್ನಕ್ಕರು ಶಂಕರಣ್ಣ. "ಅದೂ ಕೂಡ ಸರಿ ಶಂಕರಣ್ಣ ಈ ಕೊರೋನಾ ಎಂಬ ಮಹಾಮಾರಿ ಯಾವಾಗ ಸಂಪೂರ್ಣವಾಗಿ ನಶಿಸುವುದು ಎಂದು ಆ ದೇವನಿಗೆ ಗೊತ್ತು. ಎಷ್ಟೆಷ್ಟು ಜೀವಗಳು ಬಲಿಯಾದವು ಈ ಹೆಮ್ಮಾರಿಗೆ!.ಕಲಿಯುಗದ ಜನರು ಮಾಡುವಂತಹ ದುಷ್ಟ ಕೆಲಸಕ್ಕೆ ತಕ್ಕ ಶಿಕ್ಷಿಸಲು ಆ ದೇವನೇ ರೂಪ ತಾಳಿ ಬಂದದ್ದೇನೋ ಅಂತ ಅನಿಸುತ್ತಿದೆ !".ಎಂದರು ರಾಮಣ್ಣ. "ಹೌದೇನೋ ರಾಮಣ್ಣ ಈ ಹೆಮ್ಮಾರಿ ಇಡೀ ಜಗತ್ತನ್ನೇ ಅಳಿಸದೆ ಹೋಗದು. ಈ ಮಕ್ಕಳಿಗೂ ಕೂಡ ಶಾಲೆ ಇಲ್ಲದಂತಾಯಿತು. ನಾವಂತೂ ಕಲಿತಿಲ್ಲ ನಮ್ಮ ಮುಂದಿನ ಪೀಳಿಗೆಯನ್ನಾದರೂ ಕಲಿಸುವ ಎಂದಾದರೆ ಅದೂ ಆಗುತ್ತಿಲ್ಲ . ಇದನ್ನೆಲ್ಲಾ ಆ ದೇವನೇ ಪರಿಹರಿಸಬೇಕು ಅಲ್ಲದೆ ನಮ್ಮಿಂದಾಗದು ನೋಡಿ".ಅಷ್ಟು ಹೇಳುವಷ್ಟರಲ್ಲಿ ಶಂಕರಣ್ಣನ ಕಣ್ಣಲ್ಲಿ ನೀರು ತುಂಬಿತ್ತು. "ಅದೆಲ್ಲ ಸರಿ ಆಗಬಹುದು ಶಂಕರಣ್ಣ ನಾವೂ ಕೂಡ ಸ್ವಲ್ಪ ಜಾಗ್ರತೆ ವಹಿಸಬೇಕು. ಈಗಿನ ಮಕ್ಕಳಿಗಂತೂ ಹೇಳಿದರೆ ಅರ್ಥ ಆಗುವುದಿಲ್ಲ. ಸುಮ್ಮನೆ ಪೇಟೆ ತಿರುಗುತ್ತಾರೆ. ಮಾಸ್ಕ್ ಕೂಡ ಸರಿಯಾದ ರೀತಿಯಲ್ಲಿ ಧರಿಸುವುದಿಲ್ಲ.ಇನ್ಯಾವಾಗ ಅವರಿಗೆ ಬುದ್ಧಿ ಬರುತ್ತದೋ ದೇವನೇ ಬಲ್ಲ. ಸರಿ ಶಂಕರಣ್ಣ ನಾನಿನ್ನು ಬರುತ್ತೇನೆ ತುಂಬಾ ಹೊತ್ತಾಯ್ತು ಬಂದು"ಎಂದು ರಾಮಣ್ಣ ತನ್ನ ಮನೆಗೆ ಹೊರಡಿದರು.