Shambavi Kamath

Others

3  

Shambavi Kamath

Others

ವಂದನೆ

ವಂದನೆ

3 mins
194ವಿಶ್ವದ ವಿವಿಧ ಧರ್ಮ ಪರಂಪರೆಗಳಲ್ಲಿ ಗುರುವಿಗೆ ಅಗ್ರಸ್ಥಾನವಿರುವುದನ್ನು ಕಾಣಬಹುದಾಗಿದೆ. ' ಗುರು ' ಎಂಬ ಎರಡಕ್ಷರದಲ್ಲಿ ಅದ್ಭುತ ಶಕ್ತಿ ಅಡಗಿದೆ. ಅಂಧಕಾರವನ್ನು ಓಡಿಸಿ ಜ್ಞಾನಜ್ಯೋತಿಯ ಬೆಳಗಿಸಿ ನಿಸ್ವಾರ್ಥಭಾವದಿಂದ ತನ್ನ ಜೀವನದ ಸರ್ವಸ್ವವನ್ನು ತನ್ನ ಶಿಷ್ಯರ ಒಳಿತಿಗೆ ಹಾರೈಸುವ ಗುರುಗಳನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಲಾಗುತ್ತದೆ. ಗುರು ಶಿಷ್ಯ ಪರಂಪರೆ ಇತಿಹಾಸ ಪ್ರಸಿದ್ಧವಾದುದು. ಕೃಷ್ಣ-ಅರ್ಜುನ , ಚಂದ್ರಗುಪ್ತ - ಚಾಣಕ್ಯರ ಉಲ್ಲೇಖ ಗ್ರಂಥಗಳಲ್ಲಿ ನಾವು ಕಾಣುತ್ತೇವೆ. ಹರ ಮುನಿದರೆ ಗುರು ಕಾಯುವನಯ್ಯ " ಎಂಬ ಶರಣರ ಮಾತಿನಲ್ಲಿ ಗುರುವಿನ ಮಹತ್ವ ಸೊಗಸಾಗಿ ವ್ಯಕ್ತವಾಗುತ್ತದೆ. 'ಗುರು' ಎನ್ನುವ ಪದಕ್ಕೆ "ಶಿಕ್ಷಕ" ಎನ್ನುವ ಅರ್ಥವೂ ಇದೆ. ಸಕಲ ವಿದ್ಯೆಗೂ ಗುರುವಿನ ಮಾರ್ಗದರ್ಶನ ಅತಿ ಮುಖ್ಯವಾದುದು. ದೈವತ್ವದ ಸಾಕಾರ ಮೂರ್ತಿಯಾಗಿರುವ ಗುರುವನ್ನು ಎಷ್ಟು ಕೊಂಡಾಡಿದರೂ ಸಾಲದು .


ಜೀವನದಲ್ಲಿ ಎಲ್ಲಾ ಮಕ್ಕಳಿಗೂ ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ಆದರೆ ನನ್ನ ಜೀವನದಲ್ಲಿ ಜನುಮ ನೀಡಿದ ಜನನಿಯೊಂದಿಗೆ ಜೀವನ ರೂಪಿಸಿದ ಚಿಕ್ಕಮ್ಮ ಇಬ್ಬರೂ ಪರಮಪೂಜ್ಯರು. ನನಗೆ ನೆನಪಿರುವಂತೆ ನಮ್ಮದು ಕೂಡು ಕುಟುಂಬವಾಗಿದ್ದರಿಂದ ಅಮ್ಮನಿಗೆ ಅಡುಗೆ ಮನೆ ಬಿಟ್ಟು ಹೊರ ಜಗತ್ತು ನೋಡಲು ಪುರುಸೊತ್ತಿರುತ್ತಿರಲಿಲ್ಲ ಆದರೆ ಅದರ ಬಗ್ಗೆ ಒಂದೇ ಒಂದು ದೂರಿಲ್ಲದೆ ಜೀವನ ಕಂಡ ಅಮ್ಮನ ತಾಳ್ಮೆ ಮರೆಯಲಾಗದು.

ಕೈಹಿಡಿದು ನಡೆಸಿ, ತೊದಲು ನುಡಿವ ಕಂದನ ಬಾಯಿಂದ ಬಾಲಗೀತೆಯ ಹಾಡಿಸಿ ನಿತ್ಯ, ನಿರಂತರ, ಪ್ರೀತಿ-ವಾತ್ಸಲ್ಯದಿಂದ ಸಲಹಿ ಪೊಷಿಸಿ ಶಾಲೆಗೆ ಸೇರಿಸಿ, ಹೆಜ್ಜೆ ಹೆಜ್ಜೆಗೂ ಜೊತೆಗಿದ್ದು, ಕಲಿಕೆಯಲ್ಲಿ ಆಸಕ್ತಿ ಮೂಡಿಸಿದ ಕೀರ್ತಿ ಸಲ್ಲುವುದು ನನ್ನ ಅಚ್ಚುಮೆಚ್ಚಿನ ಚಿಕ್ಕಮ್ಮನಿಗೆ . ಅವರಿಗೆ ನನ್ನ ಭಾವಪೂರ್ಣ ನಮನ.


ಶಾಲೆಯ ಪಯಣದ ಆರಂಭದ ಮೊತ್ತ ಮೊದಲ ಟೀಚರ್ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತಾರೆ. ಹಾಗೆ ನನ್ನ ಬದುಕಿನಲ್ಲಿ ಮೊದಲ ಸ್ಲೇಟು , ಕೈಯಲ್ಲಿ ಬಳಪ ಹಿಡಿಯಲು ಕಲಿಸಿ ನನ್ನ ಪುಟ್ಟ ಕೈ ಹಡಿದು ಅಕ್ಷರ ಬರೆಯಿಸಿ, ಮೃದುವಾದ ಬೆರಳುಗಳಿಗೆ ನೋವಾದಾಗ ಆತ್ಮೀಯವಾಗಿ ಆಲಿಂಗಿಸಿ, ನಸುನಗೆಬೀರಿ ಪುಟ್ಟ ಬೆರಳಿಗೆ ಮುತ್ತನ್ನಿತ್ತು ನೋವು ಮರೆಸಿದ ನಲ್ಮೆಯ ನಳಿನಿ ಟೀಚರ್ ಅವರಿಗೆ ನನ್ನ ವಂದನೆಗಳು


ಪ್ರಥಮಿಕ ಶಾಲೆಯಲ್ಲಿ ಆಟಪಾಠದ ಜೊತೆಗೆ ಮಾನಸಿಕ ಬೆಳವಣಿಗೆಗೆ ಹವ್ಯಾಸವೂ ಅತ್ಯವಶ್ಯಕ ಎಂದು ಒಂದಿಷ್ಟು ಸಂಗೀತ, ಹಾಡು, ನೃತ್ಯ ಕಲೆಗಳತ್ತ ಸೆಳೆದು ಆಸಕ್ತಿ ಮೂಡಿಸಿದ್ದು ನನ್ನ ಪ್ರೀತಿಯ 'ಶಕು ಟೀಚರ್' (ಶಕುಂತಲಾ ಟೀಚರ್). ತರಗತಿಯಲ್ಲಿ ಅವರ ಬರುವಿಕೆಗಾಗಿ ಕಾದು ಕುಳಿತಿರುತ್ತಿದ್ದ ನಮಗೆ ಅವರ ಹೆಜ್ಜೆ ಸಪ್ಪಳ ಕೇಳಿ ಬಂದರೆ ಸಾಕು ಆಯಾಸ ಕ್ಷಣಾರ್ಧದಲ್ಲಿ ಓಡಿ ಹೋಗುತ್ತಿತ್ತು. ಸೊಮಾರಿತನ ನಮ್ಮ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಎಲ್ಲಾ ಮಕ್ಕಳಿಗೂ ಅವರು ತುಂಬಾ ಅಚ್ಚುಮೆಚ್ಚು. ಕಲೆಯನ್ನು ಪೂಜಿಸುವ ಅವರು ನನ್ನಲ್ಲಿಯ ನೃತ್ಯ ಪ್ರತಿಭೆಯನ್ನು ಗುರುತಿಸಿ ,ಶಾಲೆಯ ವಾರ್ಷಿಕೋತ್ಸವಕ್ಕೆ ನೃತ್ಯ ರೂಪಕದಲ್ಲಿ ಬಾಲಕೃಷ್ಣನ ಪಾತ್ರ ನೀಡಿ ನೃತ್ಯದಲ್ಲಿ ಆಸಕ್ತಿ ಹುಟ್ಟಿಸಿ, ಹವ್ಯಾಸವಾಗಿ ಬೆಳೆಸಿಕೊಳ್ಳಲು ತೋರಿಸಿ ಕೊಟ್ಟವರು .ಅವರಿಗೆ ನನ್ನ ನಮನ.


ನನ್ನ ಪ್ರೌಢಶಾಲೆಯ ಸಮಯದಲ್ಲಿ ನನಗೆ ಅತ್ಯಂತ ಪ್ರಿಯವಾದವರು ನಮ್ಮ ಪಕ್ಕದ ಮನೆಯ ಶಾರದಾ ಟೀಚರ್. ಅವರ ಹೂದೋಟದಲ್ಲಿ ಘಮಘಮಿಸುವ ಸುಮದೊಂದಿಗೆ ಅನೇಕ ಔಷಧ ಗಿಡಗಳಾದ ಸರ್ಪಗಂಧ, ಮದರಂಗಿ, ಅಶ್ವಗಂಧ, ದಾಸವಾಳ, ಮಾಡಂದಿ ಬೇರು, ಕಾಮಕಸ್ತೂರಿ, ಒಂದೇಲಗ, ಬ್ರಾಹ್ಮಿ ಸೇರಿದಂತೆ ವಿವಿಧ ಗಿಡಮೂಲಿಕೆಗಳನ್ನು ಬೆಳೆಸುತ್ತಿದ್ದರು.

ಗಿಡಮೂಲಿಕೆಗಳನ್ನು ಬೆಳೆಸಿ ಅವುಗಳನ್ನು ಮನೆಯಲ್ಲಿ ಅವರ ತಂದೆ ಆಯುರ್ವೇದ ವೈದ್ಯಕೀಯ ಔಷಧಿ ತಯಾರಿಸುತ್ತಿದ್ದರು. ಬಿಡುವಿದ್ದಾಗ ಅವರಿಗೊಂದಿಷ್ಟು ಸಹಾಯ ಹಸ್ತ ನೀಡುತ್ತಾ ಅವರಿಂದ ನಿಸರ್ಗದ ರಹಸ್ಯ ಬಗ್ಗೆ ಅನೇಕ ವಿಷಯಗಳನ್ನು ಅರಿತು ಕೊಂಡೆ.

ಅವರ ತೋಟ ಒಂದು ವಿಜ್ಞಾನದ ಪ್ರಯೋಗಾಲವಿದ್ದಂತಿತ್ತು. ಅದೊಂದು ದಿನ ಅವರೊಂದಿಗೆ ತೋಟದಲ್ಲಿ ಸುತ್ತಾಡಿ ಮನೆಕಡೆ ನಡೆದು ಬರುವಾಗ ಮರವೊಂದರಲ್ಲಿ ಜೇನುಳುಗಳನ್ನು ಗಮನಿಸಿ, ಭಯಭೀತಳಾದೆ . ಆಗ ಅವರು ನನ್ನಲ್ಲಿ ಧೈರ್ಯತುಂಬಿ ಆ ಜೀವಿಗಳು ಉತ್ಪಾದಿಸುವ ಜೇನುತುಪ್ಪ , ಅದರ ಗುಣಮಟ್ಟ, ಪರಿಶುದ್ಧತೆಯ ರಹಸ್ಯ, ಅವುಗಳಲ್ಲಿರುವ ಐಕ್ಯತೆ, ಪರಸ್ಪರ ಸಹಕಾರ ಎಲ್ಲಕ್ಕಿಂತ ಮುಖ್ಯವಾಗಿ ಆ ಪುಟ್ಟ ಜೀವಿಗಳ ಶ್ರದ್ಧೆ ಮತ್ತು ಸ್ವಂತ ಶ್ರಮದ ಬಗ್ಗೆ ಸುಂದರವಾಗಿ ತಿಳಿಸಿದ ರೀತಿ ಇಂದಿಗೂ ನನಗೆ ಪ್ರೇರಣೆಯಾಗಿದೆ. ಪರಿಸರದಲ್ಲಿ ನಡೆಯುವ ಕೌತುಕ ಬಗ್ಗೆ ಮನಸಿಗೆ ನಾಟುವಂತೆ ಸೊಗಸಾಗಿ ವರ್ಣಿಸುತ್ತಿದ್ದ ಆ ನೆನಪುಗಳು ನನ್ನ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದೆ.


ನನ್ನ ಬದುಕನ್ನು ಪ್ರಭಾವಿಸಿದ ಮತ್ತೊಬ್ಬ ಟೀಚರ್ ಅಂದರೆ ಅದು ನಮ್ಮ 'ಚಲಿಸುವ ಗ್ರಂಥಾಲಯ' ಎಂದೇ ಕರೆಯಲ್ಪಟ್ಟ ನಮ್ಮ ಸುರೇಶ್ ಮೇಷ್ಟ್ರು. ಭೌತ ಶಾಸ್ತ್ರ ವಿಷಯದ ಅನ್ವೇಷಣೆಯಲ್ಲಿ ತೊಡಗಿಕೊಂಡಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದ ಅನ್ವೇಷಣೆ ಆವಿಷ್ಕಾರಗಳು, ಅವು ದೇಶದ ಅಭಿವೃದ್ಧಿಗೆ ಯಾವ ರೀತಿ ಕೆಲಸ ಮಾಡಿದೆ, ಅವುಗಳನ್ನು ಬಳಸಿಕೊಳ್ಳುವ ಬಗೆಯನ್ನು ತಿಳಿಸಿದ ರೀತಿ ನನ್ನಲ್ಲಿ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸಿತು. ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಚಿಂತನ-ಮಂಥನ ನಡೆಸುತ್ತಾ ನಮಗೆ ನೀಡಿದ ಮಾರ್ಗದರ್ಶನ ಸ್ವಾತಂತ್ರ್ಯವಾಗಿ ಯೋಚಿಸುವ ಶಕ್ತಿಯನ್ನು ಹೆಚ್ಚಿಸಿತು. ಸ್ವಾವಲಂಬಿಯಾಗಿ ಬದುಕುವ ಕಲೆಯನ್ನು ಕಲಿಸಿದ ಸುರೇಶ ಮೇಸ್ಟ್ರು ಪೂಜನೀಯರು.


ಯಾವ ಪರಿಸ್ಥಿತಿಯಲ್ಲೂ ಸಹನೆ ಕಳೆದು ಕೊಳ್ಳದೆ

ಜೀವನ ಸುಂದರವಾಗಿ ನಿಭಾಯಿಸುವ ಕಲೆಯನ್ನು ಕಲಿಸಿದವರು ನಮ್ಮಜ್ಜಿ .

ಶಾಲೆಯ ಶಿಕ್ಷಣವಿಲ್ಲದಿದ್ದರೂ ತಮ್ಮ ನಡವಳಿಕೆ, ಸಂಸ್ಕಾರ, ಆಚಾರ, ವಿಚಾರಗಳಿಂದ ನಮಗೆ

ಮಾರ್ಗದರ್ಶಕರಾಗಿ ಬದುಕಿದವರು.


ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮ ಜೊತೆಗಿದ್ದು, ಗುರುವಾಗಿ ಗುರಿ ತೋರಿಸಿದ ಎಲ್ಲಾ ಗುರುಗಳಿಗೆ ವಂದಿಸುತ್ತಾ ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ಧನ್ಯವಾದಗಳು

ವಂದನೆಗಳು.
Rate this content
Log in