Shambavi Kamath

Others

4.5  

Shambavi Kamath

Others

ಲಾಕ್ ಡೌನ್ ಪ್ರಪಂಚ

ಲಾಕ್ ಡೌನ್ ಪ್ರಪಂಚ

6 mins
98ವೇಗದ ಬದುಕು ಬಿಡುವುದಿಲ್ಲದ ದುಡಿಮೆಯಿಂದ ಬೇಸತ್ತಿದ್ದ ಜನರಿಗೆ ಫ್ಯಾಮಿಲಿ ಜೊತೆಯಲ್ಲಿ ಸಮಯ ಕಳೆಯುವ ಅವಕಾಶವನ್ನು ದಯಪಾಲಿಸಿದ ಕೊರೋನಾವೈರಸ್ ಒಂದು ವರವಾಗಿ ತೋರಿತು.

ಆದರೆ ನನ್ನ ಅಡುಗೆ ಮನೆಗೆ ಮಾತ್ರ ಯಾವ ಬಂದ್.. ಇರಲಿಲ್ಲ ರಿಲ್ಯಾಕ್ಸ್.... ಅಂತು ಇಲ್ಲವೇ.... ಇಲ್ಲ.

ನಾಳೆ ಯಾವ ತಿಂಡಿ ಮಾಡ್ಲಿ..? ಊಟಕ್ಕೆ ಏನು ಮಾಡಬೇಕು ..? ಇದೇ ಯೋಚನೆ .

ಅಜ್ಜಿ ಮಾಡುತಿದ್ದ ಬಗೆಬಗೆಯ ತಿಂಡಿ ತಿನಿಸುಗಳನ್ನು ಒಂದೊಂದಾಗಿ ನೆನಪು ಮಾಡಿಕೊಂಡು ಉತ್ಸಾಹದಿಂದ ಹೋಮ್ ಮೇಡ್ ಅಡುಗೆಯ ರುಚಿಯನ್ನು ಸವಿಯಲು ನಡೆಸಿದ ಪ್ರಯತ್ನಕ್ಕೆ ನಮ್ಮವರಿಂದ ಶಬ್ಬಾಶ್ ಗಿರಿ ಸಿಕ್ಕಿತು. .


ಅಮ್ಮಾ... ನೀನು ಇವತ್ತು ಮಾಡಿದಿಯಲ್ಲಾ ಅದು ಸೂಪರ್ ಆಗಿದೆ... ...ಮಗನಿಂದ " ಮಾಸ್ಟರ್ ಛೆಫ್ " ಬಿರುದು ಸಹ ಸಿಕ್ಕಾಯ್ತು. 

ಹೀಗೆ ಪುಸಲಾಯಿಸಿ ಅವರವರ ಇಷ್ಟದ ಸವಿರುಚಿಯ ಒಂದು ದೊಡ್ಡ ಪಟ್ಟಿಯೇ.. ನನ್ನ ಕೈಗೆ ಬಂತು. ಆಗಲ್ಲಾ ಎಂದು ಹೇಳುವಹಾಗಿಲ್ಲಾ..........ಪಟ್ಟಿ ನೋಡಿ ಶರುಮಾಡಿಕೊಂಡೆ . ಅಡುಗೆ ಮನೆ ಬಿಟ್ಟು ಹೊರ ಬರೋದಿಕ್ಕೆ ಪುರುಸೊತ್ತಿಲ್ಲದಂತಾಯಿತು ನನ್ನ ಕಥೆ. ಅಡುಗೆ ಕೆಲಸ ಒಂದು ಕಡೆ ಆದರೆ ಅಡುಗೆ ಮಾಡಿ ನಂತರ ನೊಡನೋಡುತ್ತಿದ್ದಂತೆ ಸಿಂಕಿನಲ್ಲಿ ಶೇಕರಣೆಯಾಗಿ ಶಿಖರದಂತೆ ತೋರುವ ರಾಶಿ ರಾಶಿ ಪಾತ್ರೆಗಳು...... ಅಯ್ಯೋ ಯಾವಾಗಪ್ಪ ಈ ಲಾಕ್ ಡೌನ್ ಮುಗಿಯೋದು ಅನಿಸಿ ಬಿಟ್ಟಿತು. ಕೆಲಸದ ಕಮಲ ಕೂಡ ಇಲ್ಲ. ಈಗ ನಾನೇ ಕಮಲ ......ಮನಸ್ಸಲ್ಲೇ ಅಂದು ಕೊಂಡೆ.


ಯಾವ ಮನೋರಂಜನೆನೂ ಇಲ್ಲ.... ಟಿವಿ ಮುಂದೆ ಕುಳಿತರೆ ಆ ಕರೋನಾದೇ.. ಕಥೆ ... ಕೇಳ್ತಾ... ..ಕೇಳ್ತಾ... ನಮ್ಮ ಮಹಡಿ ಮನೆ ಮಹೇಶನ ಎರಡು ವರ್ಷದ ಅನು ಕೂಡಾ ಕರೋನಾ ವರದಿ ಕೊಡೋಕೆ ಶುರು ಮಾಡಿತು.


ದಿನಗಳು ಕಳೆದವು. ವಾರಗಳು ಉರುಳಿದವು ಆದ್ರೆ ಲಾಕ್ ಡೌನ್ ತೆರೆಯಲಿಲ್ಲಾ ಅಡುಗೆ ಮನೆ ಮಾತ್ರ ನಿಯತ್ತಾಗಿ ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು.


ಸದಾ ಪುರುಸೋತ್ತಿಲ್ಲದ ವಾಹನ ಸಂಚಾರ ಜನರ ಓಡಾಟದಿಂದ ಗಿಜಿಗಿಜಿ ಇರುತ್ತಿದ್ದ ಬೀದಿ ನಮ್ಮದು. ಆದರೆ ಅಂದು ಇದ್ದಕ್ಕಿದ್ದಂತೆ ವಾತಾವರಣ ಪ್ರಶಾಂತವಾಗಿತ್ತು .ಕುತೂಹಲದಿಂದ ಬಾಗಿಲಲ್ಲೇ ನಿಂತು ನೋಡಿದೆ. ನಿಶ್ಯಬ್ದವಾಗಿದ್ದ ಆ ರಸ್ತೆಯಲ್ಲಿ ಪೊಲೀಸ್ ವಾಹನವೊಂದು ನಿಧಾನವಾಗಿ ಚಲಿಸುತ್ತಿರುವು ಕಂಡಾಗ ಯಾರನ್ನೋ....ಹುಡುಕುತ್ತಾ ..ಇರುವಂತೆ ತೋರಿತು.

ಅದರ ಹಿಂದೆ ಒಂದು ಆಂಬ್ಯುಲೆನ್ಸ್ ಕೂಡ ಇತ್ತು

"ಏನ್ರೀ.. ಬನ್ನಿ ಬೇಗ.... " ನಮ್ಮವರನ್ನು ಕೂಗಿದೆ."ಏನಾಯ್ತು...." ಅಲ್ಲಿಂದಲೇ ಉತ್ತರ ಬಂತು . "ಒಂದ್ಸಲ ಇಲ್ಲಿ ಬಂದು ನೋಡ್ಬಾರ್ದಾ......" ಆತಂಕದಿಂದ ನಮ್ಮವರನ್ನ ಕರೆದೆ..

ಪೇಪರ್ ಓದುತ್ತಿದ್ದ ವರಿಗೆ ಡಿಸ್ಟರ್ಬ್ ಆಯ್ತೋ ಏನೊ..

ಗೊಣಗುತ್ತಾ ಬಂದ್ರು.

ಅವರು ಬರುವಷ್ಟರಲ್ಲಿ ಎರಡೂ ವಾಹನಗಳು ನಿರ್ಗಮಿಸಿ ರಸ್ತೆ ಶಾಂತವಾಗಿತ್ತು.

"ಎಲ್ಲಿ .....?." ನಮ್ಮವರ ಧ್ವನಿಯಲ್ಲಿ ಸ್ವಲ್ಪ ಮುನಿಸು ಪ್ರತಿ ಧ್ವನಿಸಿದ ಹಾಗೆ ಅನಿಸಿತು. "ಆಂಬ್ಯುಲೆನ್ಸ್.. ...ಪೊಲೀಸ್ ವಾಹನ ನಮ್ಮ ಬೀದಿಯಲ್ಲಿ ಹೋಯ್ತು ರೀ...."

" ಅಯ್ಯೋ..ಅದನ್ನ ನೋಡೊಕ್ಕೆ ಕರೆದೆಯಾ...? " ಕೈಯಲ್ಲಿ ಪೇಪರ್ ತಿರುವುತ್ತಾ ಕೇಳಿದರು.

" ಯಾರನ್ನೋ ...ಹುಡುಕಿಕೊಂಡು ಹೋದ ಹಾಗೆ ಕಂಡಿತು ರೀ..." ಅಂದೆ.

" ಹ್ಹಾ...ಅವನ್ಯಾರೋ...ವಿದೇಶದಿಂದ ಬಂದವನು ಕರೋನಾ ಪಾಸಿಟಿವ್ ಅಂತ ಗೊತ್ತಾಗ್ತಿದ್ದಂತೆ...ಆಸ್ಪತ್ರೆಯಿಂದ ಓಡೋಗಿದಾನಂತೆ..ಅವನಿಗಾಗಿ ಹುಡುಕಾಟ ನಡೆಸ್ತಿದ್ದಾರೆ ಅನಿಸುತ್ತೆ" ಅಂದ್ರು

"ಅಯ್ಯೇ ದೇವರೇ ಅವನ್ಯಾಕೆ ನಮ್ ಬೀದಿಗೆ ಬಂದ " ಕೇಳಿದೆ


"ಕಾಫಿ ಕೊಡ್ತಿಯೋ ಅಥವಾ ಸಿಬಿಐ ತರಹ ಪ್ರಶ್ನೆ ಕೇಳ್ತಿಯೋ...? ಕೊಂಚ ಮಟ್ಟಿಗೆ ರೇಗಿದ ಸ್ವರದಲ್ಲಿ ಕೇಳಿದಾಗ , ಎನೂ ಹೇಳದೆ ಅಡುಗೆ ಮನೆ ಕಡೆ ಮುಖ ಮಾಡಿದೆ.

ಆಗಷ್ಟೆ ನಿದ್ದೆಯಿಂದ ಎದ್ದು ಬಂದ ನನ್ನ ಸುಪುತ್ರ ನೇರವಾಗಿ ನನ್ನ ಬಳಿ ಬಂದು ನನಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿ ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಿದ.

" ಬೆಳ್ಳಂಬೆಳಗ್ಗೆ ಏನಿದು ವಾದ ವಿವಾದ...?" ಸುಪುತ್ರ ನ ಪ್ರಶ್ನೆಗೆ ನಮ್ಮವರು "ಅದು... ವಾದ ಅಲ್ಲಪ್ಪ. ಅದು ನಮ್ಮಿಬ್ಬರ ಪ್ರೇಮ ಸಂಭಾಷಣೆ ಕಣೊ ..." ನಗುತ್ತ ನನಗೆ ಕೇಳಿಸುವಂತೆ ಗಟ್ಟಿಯಾಗಿ ಹೇಳಿದರು. ಕಿವುಡಿಯಂತೆ ವರ್ತಿಸಿ ನನ್ನ ಕೆಲಸದಲ್ಲಿ ಗಮನ ಕೊಟ್ಟವಳಂತೆ ನಾಟಕ ಮಾಡಿದೆ.

"ಅಪ್ಪಾ....ಇವತ್ತು ಯಾವ ದಿನ ಹೇಳು.....?" ಮಗನು ಕೇಳಿದ ಪ್ರಶ್ನೆಗೆ ಪಟ್ಟನೆ " ಶುಕ್ರವಾರ " ನಮ್ಮವರಿಂದ ಉತ್ತರ ಬಂತು. ಅಪ್ಪ ಮರೆತಿದ್ದಾರೆ ಎಂದು ಗೊತ್ತಾದಾಗ...

"ಆಮೇಲೆ ....." ಎಂದು ಕೆದಕಿದ. ಎನೂ ಪ್ರಯೋಜನ ಆಗ್ಲಿಲ್ಲ. ಎಂದಿನಂತೆ ಮರೆತಿದ್ರು ನಮ್ಮವರು . "ಇವತ್ತು ಅಮ್ಮನ ಜನುಮ ದಿನ .ವಿಶ್ ಮಾಡಿದಿಯಾ..?." ಕೇಳಿದ.

"ಮೆತ್ತಗೆ ಮಾತಾಡೋ....ಮಾರಾಯ ."

"ಒಹೋ...ಅದಕ್ಕೆ ...ಇವತ್ತು ಬೆಳಿಗ್ಗೆನೇ ಅಮ್ಮನವರ ತಾಪಮಾನ ಸ್ವಲ್ಪ ಜಾಸ್ತಿ......"

ಅವರ ಸಂಭಾಷಣೆಯನ್ನು ನಾನು ಕುತೂಹಲದಿಂದ ಕಿವಿಗೊಟ್ಟು ಕೇಳಿದೆ.


ಅದಾದ ನಂತರ ಎನೋ ಅಪ್ಪ ಮಗನ ...ಗುಸುಗುಸು ನಡಿತು . ಕಾಫಿ ತಂದಿಟ್ಟೆ. ಎನೂ ಗೊತ್ತಿಲ್ಲದವಳಂತೆ ಸಟಿಸಿದೆ. ನಾನು ಮಾತಾಡಲಿಲ್ಲ. ನನ್ನಷ್ಟಕ್ಕೆ ದೇವರ ಪೂಜೆಗೆ ತಯಾರಿ ಶುರು ಮಾಡಿದೆ. ಮತ್ತೆ ಗುಸುಗುಸು ಶುರು ...ಇವರ ಹೈ ಲೆವೆಲ್ ಗುಸುಗುಸು ಮೀಟಿಂಗ್ ಗೆ ಆದಿತ್ಯ ಎಂಟ್ರಿ ಕೊಟ್ಟ. ಆದಿತ್ಯ ನನ್ನ ನಾದಿನಿ ಮಗ. ಬಾಲ್ಯದ ಗೆಳೆಯನ ಮದುವೆಗೆಂದು ಜೈಪುರದಿಂದ ಬಂದಿದ್ದ. ಲಾಕ್ ಡೌನ್ ಕಾರಣದಿಂದ ನಮ್ಮೊಡನೆ ಇದ್ದ. ಆದಿತ್ಯ ಹೊಟೇಲ್ ಮ್ಯಾನೇಜ್ಮೆಂಟ್ ಕಲಿತು ಸ್ಟಾರ್ ಹೋಟೆಲ್ ಒಂದರಲ್ಲಿ ಇನ್ ಟರ್ನ್ ಶಿಪ್ ಮಾಡುತ್ತಿದ್ದ.

ಸ್ವಲ್ಪ ಧೈರ್ಯ ಮಾಡಿದ ಆದಿತ್ಯ " ಅತ್ತೆ ನೀವು ಒಪ್ಪಿದರೆ ಇವತ್ತು ನನ್ನ ಕೈ ಅಡುಗೆ ರುಚಿ ನೋಡುವಿರಂತೆ " ಎಂದು ಹೇಳಿದೆ. ಅವನಿಗೆ ಅಸಿಸ್ಟೆಂಟ್ ಆಗಿ ನನ್ನ ಮಗ ತಯಾರಾದ. ರುಚಿ ನೋಡುವ ಮುನ್ನವೇ ನಮ್ಮವರಿಂದ ಪ್ರಶಂಸೆಯ ಸುರಿಮಳೆ ಹರಿಯಿತು. ನನಗೂ ಸ್ವಲ್ಪ ವಿರಾಮ ಬೇಕಿತ್ತು. ದೇವರು ಕೊಟ್ಟ ವರ ಎಂದು ಭಾವಿಸಿ ಓಕೆ ಕಣೊ ಎಂದು ಹೇಳಿ ನನ್ನ ಹೂದೋಟದತ್ತ ಹೆಜ್ಜೆ ಹಾಕಿದೆ.


ಅರಳಿನಿಂತಿರುವ ಗುಲಾಬಿ ಕನಕಾಂಬರ ಹೂಗಳು ಕಂಪು ಚೆಲ್ಲಿ ತನ್ನತ್ತ ಕರೆಯುತ್ತಿತ್ತು. ಹೂಗಳನ್ನು ವೀಕ್ಷಿಸುತ್ತಾ ಪೂಜೆಗೆ ಬೇಕಾದ ಹೂವು ಪತ್ರೆಗಳನ್ನು ಹರಿವಾಣದಲ್ಲಿ ಜೋಡಿಸಿದೆ.

ಕಾಂಪೌಂಡ್ ಪಕ್ಕದಲ್ಲಿ ಕಳೆದ ವರ್ಷ ಮಡಿಕೇರಿಗೆ ಹೋದಾಗ ಚಿಕ್ಕ ನಾದಿನಿ ಕೊಟ್ಟ ನಾಲ್ಕು ವಿವಿಧ ದಾಸವಾಳದ ಗಿಡಗಳಲ್ಲಿ ಅರಳಿ ನಿಂತ ಬಣ್ಣ ಬಣ್ಣದ ಹೂಗಳು.... ಮುಂಜಾವಿನ ಬೀಸುವ ತಂಗಾಳಿಗೆ ಅತ್ತ ಇತ್ತ ತೂರಾಡುತ ನಲಿಯುತ್ತಿತ್ತು. ಗೇಟಿನ ಎರಡೂ ಬದಿಯಲ್ಲಿ ಸಾಲಾಗಿ ಅರಳಿನಿಂತ ನನ್ನ ಇಷ್ಟದ ಮಲ್ಲೆ ಹೂ.....ಮನಸ್ಸಿಗೆ ಮುದ ನೀಡುತ ಸ್ವಾಗತ ಕೋರುತ್ತಿತ್ತು. ಆ ಸೌಂದರ್ಯ ಸಿರಿಯನ್ನು ಆಸ್ವಾದಿಸುತ್ತಾ ಅಲ್ಲಿಯೇ ನಿಂತು ಬಿಟ್ಟೆ.


ಅಷ್ಟರಲ್ಲಿ ನಮ್ಮ ಮನೆಯ ಹಿಂದಗಡೆ ಇರುವ ಕೇಶವರಾಯರ ತೋಟದಿಂದ ನವಿಲೊಂದು ಆಕಸ್ಮಿಕವಾಗಿ ನಾನು ನಿಂತಲ್ಲಿಗೆ ಹಾರಿ ಬಂತು. ಏನು ವಿಸ್ಮಯ...!..ಯಾರ ಭಯವೂ ಇಲ್ಲದೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನನ್ನ ಹೂದೋಟದಲ್ಲಿ ಸಂತೋಷ ದಿಂದ ನಲಿಯತೊಡಗಿತು .ಎಂಥಹ ಸುಮನೋಹರ ದೃಶ್ಯ...! ಸುಂದರ ಗರಿಗೆದರಿ ನರ್ತಿಸುವಾಗ ನಾಟ್ಯದಲ್ಲಿ ತನಗೆ ಯಾರೂ ಸಾಟಿಯಿಲ್ಲ ಎಂದು ಬೀಗುತಿತ್ತು.

ನನಗೆ ಎಲ್ಲಿಲ್ಲದ ಸಂತೋಷ.. ಮೆಲ್ಲನೆ ಅದರ ಸಮೀಪ ಹೋದೆ. ಯಾವುದರ ಗೊಡವೆಯೇ ಇಲ್ಲದೆ ಅದು ಮೈಮರೆತು ಇನ್ನೂ ನರ್ತಿಸುತ್ತಲೇ ಇತ್ತು.


ಸುಮಧುರ ಕ್ಷಣಗಳನ್ನು ಸೆರೆ ಹಿಡಿಯಲು ಬಯಸಿ ಮನೆಯೊಳಗೆ ಓಡಿ ಹೋಗಿ ನನ್ನ ಮೊಬೈಲ್ ಫೋನ್ ಹುಡುಕಿದೆ.

ಅದು ಹೂದೋಟದಲ್ಲಿ ಅರಳಿನಿಂತ ಹೂಗಳ ಸೌಂದರ್ಯವನ್ನು ಸವಿಯುತ್ತಾ ಅಲ್ಲಲ್ಲಿ ನಿಂತು ನಲಿಯುತ್ತಾ....ಮತ್ತೊಮ್ಮೆ ನನ್ನತ್ತ ನೋಡುತ್ತಾ .....ನನ್ನ ಕಾಲ್ಗೆಜ್ಜೆ ನಾದಕ್ಕೆ .....ಹೆಜ್ಜೆ ಹಾಕಿ ನರ್ತಿಸುತ್ತಾ......ಜಗವನ್ನೇ ಮರೆಸುತ ......ನನ್ನ ಜನುಮದಿನದಂದು ರಂಜಿಸಿ ಸಂತೋಷ ಸಾಗರದಲ್ಲಿ ತೇಲಿಸಿತು. ನಾನು ಕ್ಯಾಮೆರಾ ದಲ್ಲಿ ಸೆಲೆಹಿಡಿಯಲೆಂದೇ ನಲಿಯುತ್ತಿದೆ ....ಅನಿಸಿತು. ಮುಂಜಾವಿನ ತಂಗಾಳಿಯಲಿ ದೇವಲೋಕದ ಅಪ್ಸ್ ರೆಯರೂ ನಾಚುವಂತಹ ನಾಟ್ಯವದು. ಎಂದೂ ಕಾಣದ ಈ ಕಣ್ಣಿಗೆ ರಸದೌತಣ ನೀಡಿತು. ನಮ್ಮ ರಾಷ್ಟ್ರ ಪಕ್ಷಿ ಇಂಥ ಸಂದರ್ಭದಲ್ಲಿ ನೀಡಿದ ಘಳಿಗೆ ಮರೆಯಲಾಗದು. ಮನಸ್ಸಿಗೆ ಎನೋ ಉಲ್ಲಾಸ.... ಹೇಳಿಕೊಳ್ಳಲಾರದಷ್ಟು ಸಂತೋಷ......ಕಾಣುವ ಭಾಗ್ಯ ಕರುಣಿಸಿದ ದೇವರಿಗೂ, ಆ ನವಿಲಿಗೂ ಧನ್ಯವಾದ ತಿಳಿಸಿ , ಪ್ರಕೃತಿಯ ಸೊಬಗನ್ನು ಆನಂದಿಸಿ ಮೈಮರೆತಾಗ ಹೊತ್ತು ಕಳೆದದ್ದು ಗೊತ್ತಾಗಲಿಲ್ಲ.

ಈ ದೃಶ್ಯವನ್ನು ಇಪ್ಪತ್ತೈದು ವರ್ಷಗಳಲ್ಲಿ ಎಂದೂ ಕಂಡಿಲ್ಲ...

ಎಲ್ಲಿಂದ ಬಂತು..? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ..... ಬಹುಷಃ ನಗರೀಕರಣ ಇರಬಹುದು . ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಬಂದ್ ಆದ ಹಿನ್ನೆಲೆಯಲ್ಲಿ ನಗರದ ವಾಹನಗಳ. ಸಂಚಾರ ವಿರಳವಾಗಿ ಜನರ ಓಡಾಟ ಕಡಿಮೆಯಾಗಿ....ತಗ್ಗಿದ ವಾಯುಮಾಲಿನ್ಯದಿಂದ ಗಾಳಿಯ ಗುಣಮಟ್ಟ ತಕ್ಕ ಮಟ್ಟಿಗೆ ಉತ್ತಮವಾಗಲು ಸಹಾಯ ಮಾಡಿರಬಹುದು ಎಂದು ಅನಿಸಿತು.


ಹೀಗಿರುವಾಗ ಯಾವುದೋ ಅಳುವ ಧ್ವನಿಯೊಂದು ಕಿವಿಗೆ ಅಪ್ಪಳಿಸಿತು. ಗೇಟಿನ ಬಳಿ ಬಂದು ನೋಡಿದೆ. ಗೇಟಿನ ಬಲಭಾಗದಲ್ಲಿ ಲೈಟ್ ಕಂಭದ ಬಳಿಯಿರುವ ಕಲ್ಲಿನ ಮೇಲೆ ಕುಳಿತು ಪಕ್ಕದ ಮನೆಯ ರವಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ.

"ಏನಾಯ್ತು ರವಿ...? ಯಾಕೆ ಅಳ್ತಿದ್ದೀಯ...? ವಿಚಾರಿಸಿದೆ.

ಯೋವುದೋ ಕೆಲಸದ ಮೇಲೆ ಮುಂಬೈಗೆ ಹೋಗಿದ್ದ ಅವನ ತಂದೆ ಲಾಕ್ ಡೌನ್ ನಿಮಿತ್ತ ಮುಂಬೈನಲ್ಲಿಯೇ ಉಳಿದಕೊಳ್ಳಬೇಕಾದ ಅನಿವಾರ್ಯತೆ ಬಂದಿತ್ತು. ತದನಂತರ ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾದ ಸುದ್ದಿ ತಿಳಿದು ರವಿ ನಲುಗಿ ಹೋಗಿದ್ದ.


ಅವನ ಪರಿಸ್ಥಿತಿ ಕಂಡು ನನಗೂ ತುಂಬಾ ದುಖಃವಾಯಿತು.

ಅವನಿಗೆ ಸಮಾಧಾನ ಹೇಳುತ್ತಿರುವಾಗ ನನ್ನ ಸುಪುತ್ರ ಸಾಸಿವೆ ಡಬ್ಬ ಹುಡುಕಿ ಸಿಗದೇ ನನ್ನ ಬಳಿ ಬಂದ. ರವಿಯ ವಿಷಯ ತಿಳಿದು ಅವನು ಹಾಗೆ ಎದುರು ಮನೆ ಆಭಿ, ಮಹಡಿ ಮನೆ ಸಂಜಯ , ಪಕ್ಕದ ಮನೆಯ ಶಶಿ ಎಲ್ಲರೂ ಸೇರಿದರು .ಇನ್ನು ಕೆಲವೇ ದಿನಗಳಲ್ಲಿ ರವಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಬೇಕು. ಎಲ್ಲರೂ ಅವನನ್ನು ಸಮಾಧಾನ ಪಡಿಸುತ್ತ ಅವನಲ್ಲಿ ಧೈರ್ಯ ತುಂಬಿ ಹುರಿದುಂಬಿಸಿದರು.


ಇತ್ತ ಆದಿತ್ಯ ತಯಾರಿಸಿದ ಸ್ವಾದಿಷ್ಟವಾದ ತಿಂಡಿ ಮತ್ತು ಊಟ ನಿಜಕ್ಕೂ ಅದ್ಬುತವಾಗಿತ್ತು. ಅವನಿಂದ ರಾಜಸ್ಥಾನ ಶೈಲಿಯ ವಿಶೇಷ ಅಡುಗೆ ಯನ್ನು ಸ್ವಲ್ಪ ಕಲಿತು ಕೊಂಡೆ.


ಮುಂದಿನ ದಿನಗಳಲ್ಲಿ ರವಿಗೆ ನನ್ನ ಮಗ ಗಣಿತದ ಮೇಷ್ಟ್ರಾದರೆ, ಪಕ್ಕದ ಮನೆಯ ಶಶಿ ವಿಜ್ಞಾನದ ಮೇಷ್ಟ್ರು. ಹೀಗೆ ಒಬ್ಬೊಬ್ಬರು ಒಂದೊಂದು ವಿಷಯ ಆಯ್ದುಕೊಂಡರು. ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಗವಸು ಧರಿಸಿ ಅಂಗಳದಲ್ಲಿ ಕುರ್ಚಿಯಲ್ಲಿ ಕುಳಿತು ರವಿಗೆ ಪ್ರತಿ ದಿನ ಇವರದು ಒಂದು ಗಂಟೆ ಪಾಠ. ಕೆಲವೇ ದಿನಗಳಲ್ಲಿ ರವಿ ತಂದೆ ಆಸ್ಪತ್ರೆಗೆ ಯಿಂದ ಡಿಸ್ಚಾರ್ಜ್ ಆಗಿರುವ ಸಿಹಿ ಸುದ್ದಿ ಕೇಳಿ ಎಲ್ಲರೂ ಸಂಭ್ರಮಸಿದರು

ದಿನಗಳು ಸರಿದವು . ಆಸಕ್ತಿದಾಯಕ ಘಟನೆಯೊಂದು ನಡೆಯಿತು. ನಮ್ಮ ವಲಯದಲ್ಲಿ ಕೆಲಸ ಕಳೆದುಕೊಂಡ ಏಳೆಂಟು ವಲಸೆಕಾರ್ಮಿಕರು ತೀರಾ ಕಷ್ಟ ಅನುಭವಿಸುತ್ತಿರುವ ಸಮಾಚಾರ ತಿಳಿದು ಅವರಿಗೆ ಆಹಾರ ಪದಾರ್ಥಗಳನ್ನು ನೀಡಲು ಹೋಗಿದ್ದ ನನ್ನ ಸುಪುತ್ರ ಎಷ್ಟೊತ್ತಾದರೂ ಮನೆಗೆ ಬಾರದೇ ಇದ್ದಾಗ ಗಾಬರಿಯಾಗಿ ಫೋನ್ ಮಾಡಿದೆ . ಆದ್ರೆ ರಿಸೀವ್ ಮಾಡದಿದ್ದಾಗ ನಮ್ಮವರಿಗೆ ವಿಷಯ ತಿಳಿಸಿದೆ..."ರೀ ಒಮ್ಮೆ ನೋಡಿ ಬನ್ನಿ" ಎಂದಾಗ

"ಅವನು ... ಪರಿಸರ ಪ್ರೇಮಿ ....ಯಾವ ಮರಗಿಡಗಳ ಫೊಟೋ ತೆಗೆಯುತ್ತಾ ನಿಂತಿದ್ದಾನೋ......? ಬರ್ತಾನೆ ಕಣೆ..ನೀನೇನು ಗಾಬರಿ ಆಗಬೇಡ ". ಎಂದು ಹೇಳಿದರು. ಒಂದ್ಸಲ ಹೋಗಿ ನೋಡ್ಬಾರ್ದಾ...ಮನಸ್ಸಿನಲ್ಲೇ ಅಂದು ಕೊಂಡು ಬೇರೆ ದಾರಿ ಕಾಣದೆ ದೇವರ ಮೊರೆ ಹೋದೆ. ಪರಮಾತ್ಮನಿಗೆ ನನ್ನ ಪ್ರಾರ್ಥನೆ ಬೇಗ ತಲುಪಿತೆನೊ


ಬಾಗಿಲು ಬಡಿದ ಸದ್ದು ಕೇಳಿಸಿತು. "ಬಂದ ನೋಡು ನಿನ್ನ ಯುವರಾಜ.... " ನಮ್ಮವರು ಹೇಳಿದಾಗ ನಿಟ್ಟುಸಿರು ಬಿಟ್ಟೆ. ಧಣಿದು ಬಂದವನು ನೇರವಾಗಿ ಸ್ನಾನದ ಮನೆಗೆ ತೆರಳಿದ. ಫ್ರೆಶ್ ಆಗಿ ಬಂದು ತಿಂಡಿ ತಿಂದು ಸುಮ್ಮನೆ ಸೋಫಾ ಮೇಲೆ ಮಲಗಿದವನನ್ನು ಕಂಡಾಗ ಕೊಂಚ ಮಟ್ಟಿಗೆ ಭಯ ಆವರಿಸಿತು.

"ಯಾಕೆ..? ಸುಮ್ಮನಿದ್ದಿಯಾ... ಏನಾಯ್ತು.....? ಗಾಬರಿಯಿಂದ ಕೆಳಿದೆ.

ಅಮ್ಮ ನಿನಗೊಂದು ವಿಷಯ ಹೇಳ್ಬೇಕು. ಬಾ..ಎಂದು ನನ್ನ ಕೈಹಿಡಿದು ಸೋಫಾ ಮೇಲೆ ಕುಳ್ಳಿರಿಸಿ, ನಡೆದ ಘಟನೆ ಬಗ್ಗೆ ತಿಳಿಸಿದ.

ವಲಸೇ ಕಾರ್ಮಿಕರಿಗೆ ಆಹಾರ ಪದಾರ್ಥಗಳನ್ನು ಕೊಟ್ಟು ಬರುವಾಗ ದಾರಿಯಲ್ಲಿ ಶೆಟ್ರ ಅಂಗಡಿ ಎದುರು ಪಾರ್ಕಿನ ಸಮೀಪದ ಮಳೆ ನೀರು ಹರಿದು ಹೋಗುವ ತೋಡಿನಲ್ಲಿ ಎರಡು ನಾಯಿಮರಿ ಅಳ್ತಾ ಇತ್ತು. ಅದರ ತಾಯಿ ಅಲ್ಲೆ ಪರದಾಡುತ್ತಿತ್ತು. ನಿಲ್ಲಲು ನಿಶ್ಶಕ್ತಿ. ಹೊಟ್ಟೆ ಹಸಿದಂತೆ ತೋರಿತು. ಯಾರೊಬ್ಬರೂ ಸಹಾಯಕ್ಕೆ ಮುಂದಾಗಲಿಲ್ಲ. ಕೊರೋನಾವೈರಸ್.... ಪ್ರಾಣಿಯಿಂದ ತಗಲಬಹುದೆಂಬ ಕಲ್ಪನೆಯಿಂದ ಯಾರೋ ತಮ್ಮ ಸಾಕು ನಾಯಿಯನ್ನು ತ್ಯಜಿಸಿದ್ದರು. ಆ ನಾಯಿಮರಿಗಳನ್ನು ಮುಟ್ಟಲು ಜನರು ಹಿಂಜರಿದರು. ಶ್ವಾನ ಪ್ರಿಯನಾದ ನನ್ನ ಸುಪುತ್ರ ಆ ಮೂಕ ಪ್ರಾಣಿಯ ವೇದನೆಯನ್ನು ಸಹಿಸಲಾಗದೆ ಆ ತೋಡಿನಲ್ಲಿ. ಇಳಿಯಲು ಯತ್ನಿಸಿದ. ಕೆಸರು ತುಂಬಿ ಹೋಗಿ, ಹುಲ್ಲು ಬೆಳೆದು ನಾಯಿ ಮರಿಗಳನ್ನು ತಲುಪಲು ಪರದಾಡುತಿದ್ದ. ಲಾಕ್ ಡೌನ್ ಉಲ್ಲಂಘಿಸಿದವರನ್ನು ಬಂಧಿಸಿ ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಪೊಲೀಸರ ದೃಷ್ಟಿ ಇವನತ್ತ ಹರಿಯಿತು. ಅವರು ಸಹಾಯ ಹಸ್ತ ಚಾಚಿದರು. .ಮರಿಗಳನ್ನು ಮೇಲೆತ್ತಿ ಅಂಗಡಿಯಿಂದ ಬಿಸ್ಕೆಟ್ ,ಸ್ವಲ್ಪ ಹಾಲು ತಗೊಂಡು ಅದಕ್ಕೆ ತಿನ್ನಿಸುವಾಗ ದಾರಿಯಲ್ಲಿ ಹೋಗುತ್ತಿರುವ ಯಾರೋ ಪುಣ್ಯತ್ಮ. ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಾಗ ವ್ಯಾಪಕ ಪ್ರಚಾರ ಗಳಿಸಿ ಪ್ರಶಂಸೆಯ ಮಹಾಪೂರವೇ ಹರಿಯಿತು.

ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆ ಆಹಾರ ಸಿಗದೆ ಹಸಿವಿನಿಂದ ಬಳಲುತ್ತಿರುವ ಪ್ರಾಣಿ ಪಕ್ಷಿಗಳಿಗೆ ಆಹಾರ ನೀರು ನೀಡುತ್ತಾ ಬಂದಾಗ ಪೊಲೀಸರ ಬೆಂಬಲವೂ ದೊರೆಯಿತು.

ಈ ವಿಷಯ ಅವನ ಕಾಲೇಜಿನ ಪ್ರಾಂಶುಪಾಲರ ಗಮನ ಸೆಳೆಯಿತು.

ಅವನದೇ ಒಂದು ಅಭಿಮಾನಿ ಬಳಗ ಹುಟ್ಟಿ ಕೊಂಡಿತು.

ಅವನ ಗೆಳೆಯರೂ ಈ ಕೆಲಸದಲ್ಲಿ ಭಾಗಿಯಾದರು.

ಜೂನ್ ತಿಂಗಳಿನಲ್ಲಿ ಬರುವ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ "ಪ್ರಾಣಿ ಸಂರಕ್ಷಣೆ" ಕಿರು ಚಿತ್ರ ಡಾಕ್ಯುಮೆಂಟರಿ ಸ್ಪರ್ಧ ಗೆ ನನ್ನ ಸುಪುತ್ರನ ಪ್ರಾಣಿ ಪ್ರೀತಿ ಸೇವೆ ಮಾಡುತ್ತಿದ್ದ ವೀಡಿಯೋವನ್ನು ಅವನಿಗೆ ಗೊತ್ತಾಗದೆ ಅಧ್ಯಾಪಕರೊಬ್ಬರು ತಂತ್ರಜ್ಞಾನ ಬಳಸಿ ಕಳುಹಿಸಿಕೊಟ್ಟು ಪ್ರಥಮ ಬಹುಮಾನವನ್ನು ಗಿಟ್ಟಿಸಿಕೊಂಡಾಗ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದಂತಾಯಿತು.


ಕೊರೋನಾವೈರಸ್ ನಿಂದ ಲಾಕ್ ಡೌನ್ ಸಮಯದಲ್ಲಿ ಮೂಕ ಪ್ರಾಣಿಗಳ ವೇದನೆಗೆ ಸ್ಪಂದಿಸುವ ಮನೋಭಾವದೊಂದಿಗೆ ಪರಿಸರ ಸಂರಕ್ಷಣೆ ಕಡೆಗೆ ಒಂದು ಪುಟ್ಟ ಹೆಜ್ಜೆ.


ಜಾಗತಿಕರಣದ ಭರಾಟೆಯಲ್ಲಿ ಅಭಿವೃದ್ಧಿಯ ನೆಪಮಾಡಿಕೊಂಡು ಪರಿಸರವನ್ನು ನಾಶ ಮಾಡಲಾಗುತ್ತಿದೆ. ಗಣಿಗಾರಿಕೆ, ಅರಣ್ಯ ನಾಶ, ಪ್ರಾಣಿ ಸಂಕುಲಗಳ ಬೇಟೆ, ಹೀಗೆ ಎಲ್ಲವೂ ಪ್ರಕೃತಿ ಮತ್ತು ಜೀವ ರಾಶಿಗೆ ಮಾರಕವಾಗಿ ರೋಗ ರುಜಿನಗಳು ಹೆಚ್ಚಾಗುವಂತೆ ಮಾಡಿದೆ.

‌ ‘ಮುಂದಾಗಬಹುದಾದ ದುರಂತದ ಎಚ್ಚರವನ್ನು ನಾವುಗಳು ಅರಿತು ಅಭಿವೃದ್ಧಿ ಕಾರ್ಯಗಳನ್ನು ಪರಿಸರ ಸ್ನೇಹಿಯಾಗಿ ಮಾರ್ಪಾಡು ಮಾಡುವಲ್ಲಿ ಗಮನ ಹರಿಸಬೇಕಿದೆ. ಮುಂದಿನ ಪೀಳಿಗೆಗೆ ಶುದ್ಧ ಜಲ, ಸ್ವಚ್ಛ ಗಾಳಿ, ಕಸ ಮುಕ್ತ ಧರೆ ಹಚ್ಚಹಸುರಿನ ವನ ಹಾಗೂ ನೀಲಿ ಕಡಲನ್ನು ಬಿಟ್ಟು ಹೋಗಬೇಕಿದೆ

Rate this content
Log in