Shambavi Kamath

Others

4  

Shambavi Kamath

Others

ಹೀಗೊಂದು ಅರಿವು

ಹೀಗೊಂದು ಅರಿವು

4 mins
377



ಮನುಷ್ಯ ಈ ಪ್ರಪಂಚದಲ್ಲಿ ಹುಟ್ಟುವಾಗ ಅಳುತ್ತಾ ಬಂದವನು, ಮುಂದೆ ಮಾತು ಕಲಿತು ಜೀವನ ನಡೆಸುತ್ತಾ ಬೆಳೆಯುತ್ತಾನೆ. ಪುಟ್ಟ ಕಂದನ ತೊದಲು ನುಡಿ ಚೆಂದ. ಮಕ್ಕಳ ಪರಿಶುದ್ಧವಾದ ಮನಸ್ಸಿನಿಂದ ಹೊರಡುವ ಪ್ರತಿಯೊಂದು ಮುಗ್ಧತೆಯ ಸಿಹಿ ಮಾತುಗಳು ಅಂದ. ಕೆಲವು ಮಾತುಗಳು ಸತ್ಯ ವಾಗಿದ್ದರೂ ನೇರವಾಗಿ ನುಡಿದರೆ ಕಹಿ ಅನಿಸಬಹುದು. ಆದರೆ ಹಿತವಾದ ಮಾತುಗಳು ನೊಂದ ಮನಸ್ಸಿಗೆ ಸಾಂತ್ವನವನ್ನು ನೀಡಿ ಜೀವನದ ಹಾದಿಯನ್ನೇ ಬದಲಿಸಲೂಬಹುದು. ಅದು ಮಾತಿಗಿರುವ ಅದ್ಭುತ ಶಕ್ತಿ.


ಚಿಕ್ಕಂದಿನಲ್ಲಿ ನಡೆದ ಒಂದು ಘಟನೆ ನೆನಪಾಗುತ್ತದೆ. ನಾನು ಐದನೇ ತರಗತಿಯಲ್ಲಿ ಕಲಿಯುತ್ತಿದ್ದ ಸಮಯವದು. ಬ್ಯಾಂಕ್ ಉದ್ಯೋಗದಲ್ಲಿದ್ದ ನನ್ನ ದೊಡ್ಡಪ್ಪನವರಿಗೆ ದೆಹಲಿಯಿಂದ ಬೆಂಗಳೂರಿಗೆ ವರ್ಗಾವಣೆಯಾಗಿ ಕೆಲವು ತಿಂಗಳಷ್ಟೇ ಕಳೆದಿತ್ತು. ಕೆಲಸಕ್ಕೆ ಹೋಗುವಾಗ ಎಲ್ಲಿಯೋ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡು ವೈದ್ಯರ ಸಲಹೆಯಂತೆ ದೊಡ್ಡಪ್ಪ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಈ ವಿಷಯ ಅಜ್ಜಿಗೆ (ಅವರ ತಾಯಿ) ಹೇಳಬಾರದು ಎಂದು ದೊಡ್ಡಪ್ಪನವರ ಆಜ್ಞೆಯಿತ್ತು.


ನಮ್ಮದು ಕೂಡು ಕುಟುಂಬವಾದ್ದರಿಂದ ಅಜ್ಜಿಗೆ ಈ ಸಂಗತಿ ಗೊತ್ತಾಗಲು ಜಾಸ್ತಿ ಸಮಯ ಬೇಕಾಗಲಿಲ್ಲ. ಕೇಶವನನ್ನು ನಾನು ಈಗಲೇ ನೋಡಬೇಕು ಎಂದು ಪಟ್ಟು ಹಿಡಿದು ಕುಳಿತಾಗ ಅಪ್ಪನಿಗಾಗಲಿ ಚಿಕ್ಕಪ್ಪನವರಿಗಾಗಲಿ ಅಜ್ಜಿಯನ್ನು ಸಮಾಧಾನ ಪಡಿಸಲು ಸಾಧ್ಯವಾಗದೆ ಕೊನೆಗೆ ಅಜ್ಜಿಯ ಹಟಕ್ಕೆ ಮಣಿದು ಬೆಂಗಳೂರಿಗೆ ಪ್ರಯಾಣ ಬೆಳೆಸಲು ಏರ್ಪಾಡು ಮಾಡಿದರು.

ಹಾಗೆನೇ ಅವರೊಂದಿಗೆ ಜೊತೆಯಾಗಿ ನಾನು ಹೋಗಬೇಕೆಂದು ಅಪ್ಪನವರ ನಿರ್ಧಾರವಾಗಿತ್ತು. ನನಗೊ ಎಲ್ಲಿಲ್ಲದ ಖುಷಿ. ಜಟ್ ಪಟ್ ಎರಡು ಜೊತೆ ಬಟ್ಟೆ ಚೀಲದಲ್ಲಿ ತುರುಕಿಸಿ ಅಜ್ಜಿಗಿಂತಲೂ ಮೊದಲು ನಾನು ಸಿದ್ಧಳಾಗಿ ನಿಂತೆ. ಅದು ಬೆಂಗಳೂರಿಗೆ ನನ್ನ ಮೊದಲ ಪಯಣವಾಗಿತ್ತು.


ಬೆಂಗಳೂರಿನ ಗತ ವೈಭವ, ನಾಡಪ್ರಭು ಕೆಂಪೇಗೌಡರ ಇತಿಹಾಸ ಮತ್ತು ಅವರ ಸಾಧನೆಗಳನ್ನು ಪಠ್ಯ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೆ. ಈಗ ಅದನ್ನು ನೊಡುವ ಸುಯೋಗ....ನೆನೆದರೆ ಎನೋ ಪುಳಕ.

ಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ಆಗಮಿಸಿದ ನಮಗೆ ಎಲ್ಲವೂ ಹೊಸದು. ಬೃಹತ್ ಕಟ್ಟಡಗಳು, ಒಂದೇ ರೀತಿ ಕಾಣುವ ಅಡ್ಡ ಮುಖ್ಯ ರಸ್ತೆಗಳು, ಮಾರ್ಗದ ಇಕ್ಕೆಲಗಳಲ್ಲಿ ಸೊಂಪಾಗಿ ಬೆಳೆದು ನಿಂತ ದೊಡ್ಡ ದೊಡ್ಡ ಮರಗಳು. ಸುಂದರ ನಗರವದು ನಮ್ಮ ರಾಜಧಾನಿ.


ಅದು ಅಂದಿನ ಬೆಂಗಳೂರು. ಮೊಬೈಲ್ ಫೋನ್ ಇಂಟರ್ನೆಟ್ ಸಾಮಾಜಿಕ ಜಾಲತಾಣ ಇದ್ಯಾವುದೂ ಇಲ್ಲದ ಕಾಲವದು. ಐಟಿ ಕಂಪನಿಗಳು ಇನ್ನೂ ನಗರಕ್ಕೆ ಲಗ್ಗೆ ಇಟ್ಟಿರಲಿಲ್ಲ. ಎತ್ತ ನೋಡಿದರೂ ಹಸಿರು ಉದ್ಯಾನಗಳು ಆಹ್ಲಾದಕರ ಹವಾಗುಣ ಎಂಥವರನ್ನೂ ತನ್ನತ್ತ ಸೆಳೆಯದೆ ಇರಲಾರದು.


ಮಮತೆಯೊತ್ತ ಮಾತೆಯ ಆಗಮನ ಆಕೆಯ ಅಮೃತಭರಿತ ಮನೆಮದ್ದಿನ ಲೇಪನದಿಂದ ದೊಡ್ಡಪ್ಪನವರ ಕಾಲಿನ ಗಾಯವು ಬಹುತೇಕ ವಾಸಿಯಾಗಿತ್ತು.


ಗಣರಾಜ್ಯೋತ್ಸವದ ಸಮಯವದು. ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ನಡಿತಿತ್ತು.

ನಮ್ಮನ್ನು ಫಲಪುಷ್ಪ ಪ್ರದರ್ಶನಕ್ಕೆ ಕರೆದುಕೊಂಡು ಹೋಗಿ ತೋರಿಸಬೇಕೆಂಬಾಸೆ ದೊಡ್ಡಪ್ಪನವರದು. ಆದರೆ ಕೊಂಚ ಕಾಲು ನೋವು ಇದ್ದುದರಿಂದ ಅವರ ಮಕ್ಕಳಿಬ್ಬರಿಗೆ ಆ ಜವಾಬ್ದಾರಿ ವಹಿಸಿದ್ದರು.


ಬೆಂಗಳೂರಿಗೆ ' ಉದ್ಯಾನ ನಗರಿ ' ಎಂದು ಪ್ರಖ್ಯಾತಿ ತಂದು ಕೊಡಲು ಕಾರಣವಾದ ಲಾಲ್ ಬಾಗ್ ತಾಣಕ್ಕೆ ಶಶಿಯಣ್ಣ ಮತ್ತು ರಾಘಣ್ಣನ ಜೊತೆಯಲ್ಲಿ ನಾವು ಹೊರಟೆವು. ಪಶ್ಚಿಮದ ದ್ವಾರದಿಂದ ಪ್ರವೇಶಿಸಿ ಒಳಗೆ ನಡೆದು ಹೋಗುತ್ತಾ ಉದ್ಯಾನದ ಸೌಂದರ್ಯವನ್ನು ಆಸ್ವಾದಿಸುತ್ತಾ ,ತಂಪಿನ ವಾತಾವರಣ, ಹಿತವಾದ ಗಾಳಿ, ಹದವಾದ ಚಳಿಯಲ್ಲಿ ಸಂಭ್ರಮಿಸಿದೆವು.


ವಿಶಾಲವಾದ ಮಾರ್ಗದಲ್ಲಿ ನಡೆದು ಗಾಜಿನ ಮನೆಯತ್ತ ಸಾಗಿದೆವು .ಒಳಗೆ ಪ್ರವೇಶಿಸುತ್ತಿದ್ದಂತೆ ವಿವಿಧ ರೀತಿಯ ಘಮಘಮಿಸುವ ಹೂಗಳು. ಅವುಗಳ ಚೆಲುವು ಮನಸ್ಸಿಗೆ ಮುದನೀಡುತ್ತಿತ್ತು. ನಾವೆಂದೂ ನೋಡಿರದ ಹೂಗಳು ಅಲ್ಲಿದ್ದವು. ಆ ಹೂಗಳ ಅಂದಚಂದವನ್ನು ಕಣ್ತುಂಬಿ ಕೊಂಡೆವು. ನೋಡುವುದು ಬಹಳಷ್ಟು ಇತ್ತು. ಖುಷಿ ಖುಷಿಯಾಗಿ ಲವಲವಿಕೆಯಿಂದ ಅಜ್ಜಿ ಮುಂದೆ ಸಾಗುತ್ತಲೇ ಇದ್ದರು. ಅವರ ಚಿಮ್ಮುವ ಉತ್ಸಾಹ ಎಂಥವರಿಗೂ ಪ್ರೇರಣೆ ನೀಡುವಂತಿತ್ತು.


ಆದರೆ, ಫಲಪುಷ್ಪ ಪ್ರದರ್ಶನವನ್ನು ಅದಾಗಲೇ ಒಂದು ಬಾರಿ ನೋಡಿದ ಹುಡುಗರಿಗೆ (ಶಶಿ ಮತ್ತು ರಘು )ಮತ್ತೊಮ್ಮೆ ನೋಡುವ ಆಸಕ್ತಿ ಇರಲಿಲ್ಲವೆನೊ...!!

ಸರ್ವಾಧಿಕಾರಿ ದೊಡ್ಡಪ್ಪನಿಗೆ ನೇರವಾಗಿ ಹೇಳಲಾಗದೆಯೋ ಅಥವಾ ಪ್ರೀತಿಯ ಅಜ್ಜಿ ಮುದ್ದಿನ ತಂಗಿ ಎಲ್ಲಿ ಬೇಸರ ಮಾಡಿಕೊಳ್ಳುವರೆಂದೊ..? ಗೊತ್ತಿಲ್ಲ. ಆದರೂ ನಮ್ಮೊಂದಿಗೆ ಬಂದಿದ್ದರು.


ಅವರು ಅವರದೇ ಲೋಕದಲ್ಲಿ ವಿಹರಿಸುತ್ತಿದ್ದರು.

ಅಜ್ಜಿಗೆ ಎಲ್ಲವನ್ನೂ ನೋಡಿ ಮುಗಿಸಲು ಇನ್ನೂ ಒಂದು ಗಂಟೆ ಬೇಕಾಗಬಹುದು. ಅಷ್ಟರಲ್ಲಿ ನಾವು ಎನಾದರು ಒಂದಿಷ್ಟು ತಂಪು ಪಾನೀಯ ಸೇವಿಸುವ ಎಂದು ಅವರೊಳಗೇ ನಿರ್ಧರಿಸಿ, ನಮಗೆ ಒಂದು ಮಾತೂ ತಿಳಿಸದೆ ಅಲ್ಲಿಂದ ಕಾಲ್ಕಿತ್ತು ಹೊರಟಾಗ , ದಾರಿಯಲ್ಲಿ ಸಿಕ್ಕ ಗೆಳೆಯರೊಂದಿಗೆ ಹರಟುತ್ತಾ, ತಿಂಡಿ ತಿನಿಸುಗಳನ್ನು ಸವಿಯುತ್ತಾ ನಮ್ಮನ್ನು ಹಾಗೇನೇ ಮರೆತಾಗ ಅವರನ್ನು ಎಚ್ಚರಿಸಿದ್ದು ಅದೊಂದು ಪ್ರಕಟಣೆ.


" ಶಶಿ ಮತ್ತು ರಘು ಹೆಸರಿನ ಪುಟ್ಟ ಮಕ್ಕಳಿಬ್ಬರು ಕಾಣೆಯಾಗಿದ್ದಾರೆ. ಇವರು ಎಲ್ಲಿದ್ದರೂ ರೇಡಿಯೋ ರೂಮಿನ ಬಳಿ ಬರತಕ್ಕದ್ದು. ಯಾರಾದರೂ ಇವರನ್ನು ಕಂಡಲ್ಲಿ ದಯವಿಟ್ಟು ನಮಗೆ ಮಾಹಿತಿಯನ್ನು ನೀಡಿ ಸಹಕರಿಸಿ. ಅವರಿಗಾಗಿ ಅವರ ಅಜ್ಜಿ ಮತ್ತು ಸಹೋದರಿ ರೇಡಿಯೋ ರೂಮಿನ ಬಳಿ ಕಾಯುತ್ತಿದ್ದಾರೆ."


ಈ ಸಂದೇಶ ಕಿವಿಗೆ ಬಿದ್ದಾಗಲೆ ನೋಡಿ ಅವರಿಬ್ಬರಿಗೆ ಎಚ್ಚರವಾದದ್ದು. ತಮ್ಮ ತಪ್ಪುನ ಅರಿವಾದದ್ದು. ಅಜ್ಜಿ ಮತ್ತು ತಂಗಿ ಎರಡು ಗಂಟೆ ನಮ್ಮನ್ನು ಎಷ್ಟು ಹುಡುಕಾಡಿರಬಹುದು...? ಎಂದು ಯೋಚಿಸಿ ಮನಸ್ಸಿಗೆ ದುಖಃವೂ ಆಗಿತ್ತು . ಆದರೆ ಮನಸ್ಸಿನ ಮೂಲೆಯಲ್ಲಿ ಭಯವು ಕಾಡುತ್ತಿತ್ತು. ಎಲ್ಲರೂ ನಮ್ಮನ್ನು ಕಂಡು ಏನೆಂದು ಕೊಳ್ಳುವರೋ ಎಂಬ ನಾಚಿಕೆ. ಹೀಗೆ ಯೋಚುವಾಗ ಮತ್ತೊಮ್ಮೆ ಅನೌಂಸ್ಮೆಂಟ್ ಆಯಿತು.


ಇದನ್ನು ಕೇಳಿದ್ದೇ ತಡ , ದಡಬಡಿಸಿ ಎರಡೇ ನಿಮಿಷದಲ್ಲಿ ಅಜ್ಜಿಯ ಎದುರು ಹಾಜರಾಗಿ ಪುಟ್ಟ ಮಕ್ಕಳಂತೆ ತಲೆ ತಗ್ಗಿಸಿ ನಿಂತಿದ್ರು ಅವರಿಬ್ಬರು. " ಅಜ್ಜಿ ನಮ್ಮಿಂದ ದೊಡ್ಡ ತಪ್ಪಾಯ್ತು ದಯವಿಟ್ಟು ನಮ್ಮನ್ನು ಕ್ಷಮಿಸಿ " ಎಂದು ವಿನಮ್ರವಾಗಿ ಬೇಡಿ ಕೊಂಡಾಗ ಮಾತೃಹೃದಯೀ ಕರಗದೇ ಇರಲು ಸಾಧ್ಯವೇ..?


ಅತ್ತ ಮೈಕಿನಲ್ಲಿ ಪದೇ ಪದೇ ಅನೌಂಸ್ಮೆಂಟ್ ಮುಂದುವರಿಯುತ್ತಲೇ ಇತ್ತು.

" ಸ್ವಾಮಿ ಸಾಕು ನಿಲ್ಲಿಸಿ.....ಮಕ್ಕಳು ಬಂದಾಯ್ತು " ಎಂದು ಹೇಳಿದರು ಅಜ್ಜಿ.

"ಹೌದಾ..!!ಎಲ್ಲಿ.? " ಕೇಳಿದ ರೇಡಿಯೋ ರೂಮಿನಲ್ಲಿದ್ದ ಮೊತ್ತೊಬ್ಬ ವ್ಯಕ್ತಿ.


ತನ್ನ ಎದುರಲ್ಲಿ ನಿಂತಿದ್ದ ಹುಡುಗರತ್ತ ಕೈಸನ್ನೆಯಿಂದ ಬೆರಳು ತೊರಿಸಿದರು ಅಜ್ಜಿ. ಹದಿನಾರು ಹದಿನೆಂಟರ ಯುವಕರಿಬ್ಬರನ್ನು ನೊಡಿದ ಆ ವ್ಯಕ್ತಿಗೆ ದೇಹದಲ್ಲಿ ತಕ್ಕ ಮಟ್ಟಿಗೆ ಕರೆಂಟ್ ಶಾಕ್ ತಗುಲಿದಂತಾಗಿರಬೇಕು. ಒಂದು ಕ್ಷಣ ಅಲುಗಾಡದೆನೆ ತಟಸ್ಥನಾಗಿ ಅವರನ್ನೇ ದುರುಗುಟ್ಟಿ ನೋಡುತ್ತಾ ನಿಂತ.


ಮರುಕ್ಷಣವೇ " ಇವರಾ...?? " ಎಂದು ಅಚ್ಚರಿಯಿಂದ ಕೇಳಿದ.

" ನೀವು ಪುಟ್ಟ ಮೊಮ್ಮಕ್ಕಳು ಅಂದಿದ್ರೀ..." ಗೊಂದಲಗೊಂಡು ಕೇಳಿದ.

" ಮತ್ತಿನ್ನೇನು...ಇವರು ನನಗೆ ಪುಟ್ಟ ಮಕ್ಕಳಲ್ಲವೇ.? " ನಸುನಗುತ್ತಾ ಪ್ರೀತಿಯಿಂದ ನುಡಿದರು ಅಜ್ಜಿ.


ಅದಕ್ಕೆ ಆತ " ಏನ್ರಯ್ಯಾ ಇಷ್ಟು ವಯಸ್ಸಾಗಿದೆ ನಿಮಗೆ ದಾರಿ ತಿಳಿಯಲ್ವೆನು..?? " ಶಶಿ ಮತ್ತು ರಘುವನ್ನುದ್ದೇಶಿಸಿ ಪ್ರಶ್ನಿಸಿದ.


" ಅವರಿಗೆ ದಾರಿ ಗೊತ್ತುಂಟು ಮಾರಾಯ್ರೆ. ಆದರೆ ನನಗೆ ಗೊತ್ತಿಲ್ಲವಲ್ಲಾ...." ಹುಡುಗರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು ಅಜ್ಜಿ.


ಆತನಿಗೆ ಇನ್ನೂ ಗೊಂದಲವಾಗಿ.

" ಹಾಗಾದರೆ ಕಳೆದು ಹೋದವರ್ಯಾರು? " ಎಂದು ಮರುಪ್ರಶ್ನಿಸಿದ.


" ಅಯ್ಯೋ ಅಷ್ಟೂ ಗೊತ್ತಿಲ್ಲವಾ. ....

ಕಳೆದು ಹೋದದ್ದು ನಾವಿಬ್ಬರು..." ಎಂದು ಪ್ರೀತಿಯಿಂದೊಮ್ಮೆ ನನ್ನತ್ತ ನೊಡ್ತಾ ಹೇಳಿದರು ಅಜ್ಜಿ.

ಅದಾಗಲೇ ವಾದ ಪ್ರತಿವಾದ ಆಲಿಸಲು ಸುತ್ತ ಮುತ್ತ ಇದ್ದ ಜನರು ಸೇರಿದ್ದರು. ಎಲ್ಲರೂ ಕುತೂಹಲದಿಂದ ನೋಡುತ್ತಾ ನಿಂತಿದ್ರು.


ಇದನ್ನು ಗಮನಿಸಿದ ಶಶಿ " ಸರ್, ದಯವಿಟ್ಟು ನಮ್ಮನ್ನು ಕ್ಷಮಿಸಿ. ಕಾಣೆಯಾದವರು ಅಜ್ಜಿ ಮತ್ತು ನನ್ನ ತಂಗಿ. ನಾವು ಬಂದು ದೂರು ನೀಡಬೇಕಿತ್ತು. ಆದರೆ....‌" ಎಂದಾಗ ಎಲ್ಲರಿಗೂ ವಿಷಯ ತಿಳಿದು ಅಜ್ಜಿಯ ಸಮಯ ಪ್ರಜ್ಞೆ ಮತ್ತು ಹಾಸ್ಯ ಬರಿತ ಮಾತು ಕೇಳಿ ನಕ್ಕರು.


ಅಷ್ಟರಲ್ಲಿ ಮೈಕ್ ಹಿಡಿದು ಅನೌಂಸ್ಮೆಂಟ್ಮ್ ಮಾಡುತ್ತಿದ್ದ ಸುಂದರ ಯುವಕ ಅಲ್ಲಿಗೆ ಬಂದ.

" ನೀವು ನನಗೆ ನೇರವಾಗಿ ಹೇಳಬೇಕಿತ್ತು ಅಜ್ಜಿ. ನಿಮ್ಮಿಂದ ನಮ್ಮ ಸಮಯ ವ್ಯರ್ಥವಾಯಿತು" ಎಂದು ಕೊಂಚ ಕಟುವಾಗಿಯೇ ಮಾತನಾಡಿದ. ನಗುನಗುತ್ತಾ ಗಲಗಲ ಎನ್ನತ್ತಿದ್ದ ವಾತಾವರಣ ಒಮ್ಮೆಲೇ ಮೌನವಾಯಿತು.


ಆದರೆ ಅಜ್ಜಿ ಸಮಾಧಾನದಿಂದ " ನಾನು ನೇರವಾಗಿಯೇ ಹೇಳಿದ್ದು. ಮಗು... ಆದರೆ ನಾನು ಹೇಳುವಾಗ .. ಅಗೋ... ಅಲ್ಲಿ ನಿಂತಿದ್ದಾಳಲ್ಲ .ಆ... ನೀಲಿ ಬಣ್ಣದ ಸೀರೆ ಉಟ್ಟ ಮೂಗುತಿ ಸುಂದರಿಯನ್ನು ಕಣ್ಣಲ್ಲೇ ನೀನು ಮಾತನಾಡಿಸುತ್ತಾ ಇದ್ದಿ . ಈ ಮುದುಕಿಯ ಮಾತು ನಿನಗೆಲ್ಲಿ ಕೇಳಿಸೀತು.? " ಎಂದರು.

ಅಜ್ಜಿಯ ನೇರನುಡಿ ಮನಸ್ಸಿಗೆ ನಾಟಿತು. ತನ್ನ ಮಾನ ಮೂರು ಕಾಸಿಗೆ ಹರಾಜು ಆದೀತೆಂದು ಸುಮ್ಮನಾದ.


" ಅಜ್ಜಿ ನಾವಿನ್ನು ಹೊರಡೋಣ ಬನ್ನಿ" ಎಂದು ರಘು ಅಜ್ಜಿಯ ಕೈಹಿಡಿದು ಅಲ್ಲಿಂದ ನಾವೆಲ್ಲರೂ ಹೊರಡಲು ಹೆಜ್ಜೆ ಹಾಕಿದಾಗ... ದಿಢೀರನೆ ಅವನ ಕೈ ಬಿಡಿಸಿಕೊಂಡು ನೇರವಾಗಿ ಆ ಯುವಕನ ಬಳಿಗೆ ಸರಸರನೆ ಹೋದರು ಅಜ್ಜಿ. ಒಂದು ಕ್ಷಣ ಆ ಯುವಕ ತಬ್ಬಿಬ್ಬಾದ . ನಮಗೂ ಏನೆಂದು ತಿಳಿಯಲಿಲ್ಲ.


" ಮಗು..ಆ ಹುಡುಗಿ ಚೆನ್ನಾಗಿದ್ದಾಳೆ..!. ದೇವರ ದಯೆಯಿಂದ ಸುಖ ಶಾಂತಿ ನೆಮ್ಮದಿಯು ತುಂಬಿದ ಜೀವನ ನಿಮ್ಮದಾಗಲಿ "ಎಂದು ಯುವಕನನ್ನು ಆಶೀರ್ವಾದಿಸಿ,

" ಈ ರೀತಿಯ ದಿನಗಳು ಮತ್ತೆ ಬಂದಿತೋ ಗೊತ್ತಿಲ್ಲ. ಆದರೆ ನೆನಪಿನಲ್ಲಿ ಸದಾ ಹಸಿರಾಗಿರುತ್ತದೆ." ಎಂದಾಗ.....

ಆತ ಭಾವುಕನಾದ.


ಗುರುತು ಪರಿಚಯವಿಲ್ಲ , ಸ್ನೇಹ ಸಂಬಂಧಿಯೂ ಅಲ್ಲ. ಅಜ್ಜಿಯ ಮುಗ್ದ ಮನಸ್ಸು ಆತ್ಮೀಯತೆಯ ಮಾತುಗಳು ಆ ಯುವಕನ ಹೃದಯಕ್ಕೆ ನಾಟಿತ್ತು ತಾನಾಡಿದ ಮಾತುಗಳು ತಪ್ಪು ಎಂದು ಅರಿವಿಗೆ ಬಂದಂತೆ ತೋರಿದವು .


ಮಧುರವಾದ ಮೆಲು ದನಿಯಲ್ಲಿ ಮಾತೊಂದು ಕೇಳಿ ಬಂತು.

"ತಪ್ಪಾಯ್ತು.. ನನ್ನನ್ನು ಕ್ಷಮಿಸಿ ಬಿಡಿ...ಅಜ್ಜಿ.!!! ಎಂದು


ದೇವವಾಕ್ಯದಂತೆ ಸತ್ವ ತತ್ವ ಗಳಿಂದ ಕೂಡಿದ ಮಾನವನ ಮಾತುಗಳು ಪವಾಡಗಳನ್ನು ಮಾಡಬಹುದು. ಮಾತು ಒಂದು ಬಲಶಾಲಿ ಸಾಧನ.


Rate this content
Log in