Shambavi Kamath

Others

2  

Shambavi Kamath

Others

ನೆನಪಿನ ಬಣ್ಣ

ನೆನಪಿನ ಬಣ್ಣ

4 mins
130


ಬಣ್ಣ.... ಆ ಪದದಲ್ಲೇ ಅದೆನೋ ಆನಂದ. ಮನಸ್ಸಿಗೆ ಮುದ ನೀಡುವಂತದ್ದು. ಕರಾವಳಿಯಲ್ಲಿ ಹುಟ್ಟಿ ಬೆಳೆದ ನನಗೆ ಅಜ್ಜನ ಕೈಹಿಡಿದು ಕಡಲ ತೀರದಲ್ಲಿ ವಾಯುವಿಹಾರಕ್ಕೆಂದು ಹೋದಾಗ, ಭೋರ್ಗರೆಯುವ ಕಡಲು ಎತ್ತೆತ್ತರಕ್ಕೆ ಎದ್ದು ದಡಕ್ಕೆ ಮುತ್ತಿಡುವ ಅಲೆಗಳು. ಕಣ್ಣಾಯಿಸಿದಷ್ಟೂ ಉದ್ದಗಲಕ್ಕೂ ತೋರುವ ನೀಲಿ ಕಡಲು. ದೂರದಲ್ಲಿ ಗಗನ ಚುಂಬಿಸುತ್ತಾ ನೀಲಿ ಭಾನು -ಕಡಲು ಸೇರಿದಂತೆ ಕಾಣುವ ಸುಮನೋಹರ ದೃಶ್ಯಗಳನ್ನು ಸವಿದ ಸವಿಸವಿನೆನಪುಗಳು ಇಂದಿಗೂ ಹಚ್ಚ ಹಸಿರಾಗಿವೆ. ಬಣ್ಣ ಹೊತ್ತ ಪ್ರಕೃತಿ, ಹೊಂಬಿಸಿಲ ಹಸಿರ ಸಂಜೆ...ಆಹಾ...ಇದೇ ಕಾರಣವೆನೋ ನನಗೆ ಬಾಲ್ಯದಿಂದಲೂ ಬಣ್ಣವೆಂದರೆ ಬಲು ಇಷ್ಟ.


ನಮ್ಮೂರಲ್ಲಿ ದಸರಾ ಹಬ್ಬದ ಉತ್ಸವದ ಆಚರಣೆಗಳು ವರ್ಣವೈಭವಗಳಿಂದ ಕೂಡಿದ್ದು , ಸಡಗರಕ್ಕೆ ಅದ್ದೂರಿತನದ ಕಳೆಯೂ ಇದೆ.

ವಿಶೇಷವಾಗಿ ಬಣ್ಣ ಬಣ್ಣದ ವೇಷ ಧರಿಸಿ ಮನೆ ಬಾಗಿಲಿಗೆ ತೆರಳಿ ಜನರನ್ನು ರಂಜಿಸುವುದು. ಅದರಲ್ಲೂ ಹುಲಿ ವೇಷ ನೃತ್ಯಕ್ಕೆ ಪ್ರಾಚೀನ ಇತಿಹಾಸವಿದೆ . ಹುಲಿ ವೇಷ ಧರಿಸಿ ಮೈಗೆ ಬಣ್ಣ ಹಚ್ಚಿ ತಮ್ಮ ಹರಕೆ ತೀರಿಸುವ ಪದ್ಧತಿ ಇದೆ. 'ಪಿಲಿ ನಲಿಕೆ 'ತುಳುನಾಡಿನ ಜಾನಪದ ನೃತ್ಯದ ಒಂದು ವಿಶಿಷ್ಟ ರೂಪವಾಗಿದೆ . ಅದನ್ನು ಕಂಡು ನನಗೂ ಬಣ್ಣ ಹಚ್ಚಿಕೊಳ್ಳವ ಆಸೆಯಾಗಿತ್ತು.


ಅದನ್ನು ಪೂರೈಸಿದ್ದು,ಮಕ್ಕಳದಿನಾಚರಣೆಯ ಪ್ರಯುಕ್ತ ಶಾಲೆಯಲ್ಲಿ ಆಯೋಜಿಸಿದ ಛದ್ಮವೇಷ ಸ್ಪರ್ಧೆ. ನನ್ನಿಷ್ಟದ ನಮ್ಮ ರಾಷ್ಟ್ರ ಪ್ರಾಣಿಯೂ ಆಗಿರುವ ' ಹುಲಿ ' ವೇಷ ಧರಿಸಿ. ಮೈಗೆ ಹಳದಿ ಬಣ್ಣ ಬಳಿದು ಕಪ್ಪು ಬಣ್ಣದ ಪಟ್ಟೆ ಪಟ್ಟೆ ಗೆರೆಯನ್ನು ಅಲ್ಲಲ್ಲಿ ಎಳೆದು, ಥೇಟ್ ಹುಲಿ ರೂಪ ಕೊಟ್ಟವಳು ನನ್ನ ಅಕ್ಕ. ತುಸು ತುರಿಕೆ ಆದರೂ.. ಸಹಿಸಿಕೊಂಡು ಮುಖಕ್ಕೆ ಚಂದದ ಹುಲಿ ಮುಖವಾಡ ಹಾಕಿ ಚಿಕ್ಕಪ್ಪ ಹೇಳಿಕೊಟ್ಟಂತೆಯೇ ಎದೆ ಉಬ್ಬಿಸಿ ಒಂದು ಕಾಲನ್ನು ಮೇಲೆತ್ತಿ ಎರಡೂ ಕೈಗಳನ್ನು ಅಗಲಿಸಿ ಅತ್ತಿತ್ತ ನೋಡುತ್ತಾ ತಲೆಯನ್ನು ಆಡಿಸುತ್ತಾ , ಮೇಲಿಂದ ಮೇಲೆ ಗಿರಿಕಿ ಹೊಡೆಯುತ್ತಾ, ಹುಲಿಯಂತೆ ನಟಿಸಿ ಕೆಲವರ ಮೇಲೇರಿ ಬಂದತೆ ಅಂಜಿಸುತ್ತ ಮತ್ತೊಮ್ಮೆ ಜಿಗಿದು ಕೈ ಬಳಸಿ ಎರಡು ಮೂರು ಬಾರಿ ಲಾಗ ಹಾಕುತ್ತಾ ಹೇಳಿಕೊಟ್ಟ ಸ್ಟೆಪ್ಸನ್ನು ಚಾಚೂ ತಪ್ಪದೆ ಹಾಕುತ್ತಿದ್ದಾಗ ಮಧ್ಯದಲ್ಲಿ ಬೆನ್ನು ತುರಿಕೆ ಜಾಸ್ತಿಯಾಗಿ ಹಾಗೆನೇ ಲಾಗ ಹಾಕಿ ಅಲ್ಲೇ ಇದ್ದ ಗೊಡೆಗೊಮ್ಮೆ ಒರಗಿ ಗರಗರನೆ ಬೆನ್ನು ಉಜ್ಜಿದಾಗ ಉರಿ ಗುಳ್ಳೆ ಬಂದು ಎರಡು ಮೂರು ದಿನ ಅಂಗಿ ಹಾಕಲೂ ಸಾಧ್ಯವಾಗದೆ ರಾತ್ರಿ ಬಾಳೆ ಎಲೆ ಮೇಲೆ ಮಲಗಿದ್ದು, ಅವಸ್ಥೆ ಕಂಡು ಇನ್ನು ಜನ್ಮದಲ್ಲಿ ಬಣ್ಣದ ತಂಟೆಗೆ ಹೋಗಲ್ಲ ಅಂದುಕೊಂಡವನು ಪ್ರಥಮ ಬಹುಮಾನ ದೊರೆತ ಸಂತಸದಲ್ಲಿ ಎಲ್ಲವನ್ನೂ ಮರೆತೇ ಬಿಟ್ಟೆ.


ಬಣ್ಣಕ್ಕೆ ಅದೆಂಥ ಅದ್ಭುತ ಶಕ್ತಿ ಇದೆಯೋ? ಅಬ್ಬಬ್ಬಾ...! ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದ ಸಮಯವದು. ನಮ್ಮೂರಲ್ಲಿ ರಂಗು ರಂಗೇರಿಸಿದ್ದು ಆ ಒಂದು ಸಿನೇಮಾ ಹಾಡು.ಅದು ಅಂಥಿಂಥ ಹಾಡಲ್ಲ. ಎಲ್ಲಾ ವಯಸ್ಸಿನವರನ್ನೂ ಬಣ್ಣದಿಂದಲೇ ಮೋಡಿಮಾಡಿತ್ತು .ಹೌದು, ಅದುವೇ ' ಬಣ್ಣಾ ನನ್ನ ಒಲವಿನ ಬಣ್ಣ ...ನನ್ನ ಬದುಕಿನ ಬಣ್ಣ ..' ಹಾಡು.

ಸಾಹಸಸಿಂಹ ವಿಷ್ಣುವರ್ಧನ್ ರವರು ಸುಹಾಸಿನಿಯವರ ಮೈಮೇಲೆ ಬಿಂದಿಗೆಯಿಂದ ಎರಚಿದ ಓಕುಳಿ ಬಣ್ಣ ಎಷ್ಟರಮಟ್ಟಿಗೆ ಛಾಪು ಮೂಡಿಸಿತೆಂದರೆ, ಅದೊಂದು ಭಾನುವಾರ ಗೆಳೆಯರೆಲ್ಲ ಸೇರಿ ಸೀನಪ್ಪನ ಗೂಡಂಗಡಿ ಬಳಿ ಆಟದ ಮೈದಾನದಲ್ಲಿ ಗಾಜಿನ ಬಾಟಲಿಯಲ್ಲಿ ಬಣ್ಣದ ನೀರು ತುಂಬಿ ಆಡುತ್ತಿದ್ದೆವು.

ವಿಷ್ಣುವರ್ಧನ್ ಸ್ಟೈಲ್ ನಲ್ಲೇ.. ಸ್ಲೋ... ಮೋಷನ್ ನಲ್ಲಿ ಒಂದು ಬಾರಿ ತಿರುಗಿ ನೀರು ಎರಚಲು ಹೋದಾಗ ಕಲ್ಲೊಂದು ಕಾಲಿಗೆ ತಾಗಿ ಬಾಟಲಿಯ ನೀರು ಪಕ್ಕದಲ್ಲಿ ತಲೆ ಮೇಲೆ ಕಟ್ಟಿಗೆ ಹೊತ್ತುಕೊಂಡು ಹೋಗುತ್ತಿದ್ದ ನಮ್ಮ ಮನೆಗೆಲಸದಾಕೆ 'ಹೊನ್ನು ' ಮೇಲೆ ಕೈತಪ್ಪಿ ಚಿಲ್ಲಿ ಒಂದುಕ್ಷಣ ಗಾಬರಿಯಿಂದ ನಾವೆಲ್ಲ ತಟಸ್ಥ ನಿಂತೆವು. ಆದರೆ ಆಕೆ ನನಗೆನೂ ಬಯ್ಯದೆ ಮುಗುಳ್ನಕ್ಕು ' ಹೋ...ಗಿ ಚಿಕ್ಕಧನಿಗಳೇ...' ಎಂದು ನಾಚಿಕೆಯಿಂದ ನುಡಿದಾಗ ಇನ್ನೂ ಗಾಬರಿ.. ಹೆದರಿಕೆ.. ಎಲ್ಲಾ ಒಟ್ಟೊಟ್ಟಿಗೆ ಆಗಿ ನಾಲಗೆ ಪಸೆ ಒಣಗಿ ಮಾತು ಬಾರದಂತಾಯಿತು. .ಇನ್ನು ಗೆಳೆಯರಿಗೆ ಹೇಳಬೇಕೇ..? ಕಾಲೆಳೆಯಲು ಒಳ್ಳೆಯ ವಿಷಯವೇ ಸಿಕ್ಕಿತು.


ಓಡಿ ಹೋಗಿ ಮನೆಸೇರುವಷ್ಟರಲ್ಲಿ ಸ್ವಲ್ಪ ಜ್ವರವೂ ಕಾಣೆಸಿಕೊಂಡಿತು. ಮಧ್ಯಾಹ್ನ ಊಟಕ್ಕೆಂದು ಬಂದ ಅಪ್ಪ ನೇರವಾಗಿ ನನ್ನ ಬಳಿ ಬಂದು ಜೋರಾಗಿ ' ಎನೋ ರಮೇಶಾ ? ‌ನಿನಗೆ ಬಣ್ಣ ಬಳಿಯೋದಕ್ಕೆ ಬೇರೆ ಯಾರೂ ಸಿಗಲಿಲ್ವೆನೋ ? ಎಂದು ಗದರಿಸಿದಾಗ ವಿಷಯ ಪೇಟೆಯವರೆಗೂ ತಲುಪಿದೆ ಅಂತ ಗೊತ್ತಾಗಿ ಎದೆಬಡಿತವೂ ಜಾಸ್ತಿ ಆದಾಗ ನೆರವಿಗೆ ಬಂದದ್ದು ನನ್ನ ಅಕ್ಕ .ನನ್ನ ಪರವಾಗಿ ವಾದಮಾಡಿ ಕೈತಪ್ಪಿ ಆಯಿತೆಂದು ಹೇಳಿ ಅಪ್ಪನನ್ನು ಹೆಗೋ ಒಪ್ಪಿಸಿದಳು. ಅದು ಎಂಬತ್ತರ ದಶಕದ ಮಾತು. ಮೊಬೈಲ್ ಫೋನ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳಿಲ್ಲದ ಕಾಲವದು. ಆದರೂ ಬಿರುಗಾಳಿಯಂತೆ ಪೇಟೆಯವರೆಗೂ ಸುದ್ದಿ ಮುಟ್ಟಿದ್ದು ದೊಡ್ಡ ವಿಷಯವೇ ಬಿಡಿ. ಸ್ವಲ್ಪ ದಿನ ನನಗೂ ಹೊರ ಹೋಗಲೂ ಮುಜುಗರವಿತ್ತು. 'ಬಣ್ಣ.. ' ಅಂದರೆ ಸಾಕು. ತೆನಾಲಿ ರಾಮನ ಬೆಕ್ಕಿನಂತಾಗಿತ್ತು ನನ್ನ ಪರಿಸ್ಥಿತಿ. ಇದೇ ಘಟನೆ ಇಂದು ನಡೆದಿದ್ದರೆ, ಬಹುಶಃ ಅದಕ್ಕೊಂದಿಷ್ಟು ಬಣ್ಣ ಬಳಿದು ಕಿರುಚಿತ್ರ ಬಿಡುಗಡೆ ಗೊಳಿಸಿ ಮಾಧ್ಯಮಗಳಲ್ಲಿ ಹರಿ ಬಿಟ್ಟು ಚರ್ಚೆಯನ್ನೂ ನಡುಸುತ್ತಿದ್ದರೆನೋ ?


ಮುಂದೆ ಓದು ಉದ್ಯೋಗದಲ್ಲಿ ನಿರತನಾಗಿ ಬಣ್ಣದಿಂದ ತುಸು ದೂರವೇ ಉಳಿದುಕೊಂಡೆ. ಆನಂತರ ಮನೆಯವರ ಇಚ್ಛೆಯಂತೆ ನನ್ನ ಒಪ್ಪಿಗೆಯೂ ಇದ್ದು ನಮ್ಮೂರಿನ ರಮ್ಯಾ ನನ್ನ ಬದುಕಿಗೆ ಒಲವಿನ ಬಣ್ಣವಾದಳು. ಅವಳ ತಂದೆ

ಬ್ಯಾಂಕ್ ಉದ್ಯೋಗಿ, ಅಂದು ಬಾಂಬೆಯಲ್ಲಿದ್ದ ಕಾರಣ ನಮ್ಮ ಮೊದಲ ವರ್ಷದ ಎಲ್ಲಾ ಹಬ್ಬವನ್ನು ಅಲ್ಲೇ ಆಚರಿಸಿದೆವು. ಮೊದಲ ಹಬ್ಬವೇ ರಂಗುರಂಗಿನ ಹೋಳಿ ಹಬ್ಬ. ಉತ್ತರ ಭಾರತದಲ್ಲಿ ತುಂಬಾ ಅದ್ದೂರಿಯಾಗಿದೆ ಇದರ ಆಚರಣೆ .

ಶುಭ್ರ ಶ್ವೇತ ವರ್ಣದ ಜುಬ್ಬ ಪೈಜಾಮ ತೊಟ್ಟ ಮಾವನವರು ನನಗೂ ಅಂತದ್ದೇ ಒಂದು

ಜುಬ್ಬಾ ಧರಿಸಲು ನೀಡಿ ಅದನ್ನು ತೊಟ್ಟು ಅಪಾರ್ಟ್ಮೆಂಟ್ ನ ಕೆಳಭಾಗದಲ್ಲಿ ಹಾಕಲಾದ ಪೆಂಡಾಲ ಬಳಿ ಕುಟುಂಬದವರು ಸ್ನೇಹಿತರೆಲ್ಲ ಸೇರಿದೆವು . ಒಂದು ಬದಿಯಲ್ಲಿ ಗಂಡಸರೆಲ್ಲಾ ಸೇರಿ ಪಾನೀಯ ಸೇವಿಸಿ ಆನಂದಿಸುತ್ತಿದ್ದರು. ಬೆಪ್ಪನಂತೆ ನೋಡುತ್ತಾ ನಿಂತ ನನಗೂ ಯಾರೋ ಒಂದು ಲೋಟ ಪಾನೀಯ ನೀಡಿದರು. ಬಿಸಿಲ ಬೇಗೆಗೆ ದಾಹವೂ ಆಗಿ ಕೈಗೆ ಕೊಟ್ಟದ್ದನ್ನು ಒಂದೇ ಸಮ ಗಟಗಟನೆ ಗಂಟಲಲ್ಲಿ ಇಳಿಸಿದೆ.


'ರಂಗ.. ಬರಸೇ......' ಎಂದು ಹಾಡುತ್ತಾ ಹೆಜ್ಜೆ ಹಾಕಿ ಬಣ್ಣ ಬಳಿದು ನೃತ್ಯ ಮಾಡುತ್ತಾ ಪಿಚಕಾರಿಯಿಂದ ಪರಸ್ಪರ ಒಬ್ಬರಿಗೊಬ್ಬರು ಬಣ್ಣದ ನೀರನ್ನು ಎರಚಿಕೊಳ್ಳುತಿದ್ದರು. ನಾನೂ ಮಾವ ಕೊಟ್ಟ ಪಿಚಕಾರಿಯಿಂದ ನನ್ನ ಮನದರಸಿಗೆ ಬಣ್ಣ ಎರಚಿದೆ .

ಅಚ್ಚರಿಯ ಸಂಗತಿ ಅಂದರೆ ನೋಡನೋಡುತ್ತಾ ಕಣ್ಣಿಗೆ ಮಂಪರು ಕವಿದು 'ರಮ್ಯಾ' ಬದಲು ನಮ್ಮ ಮನೆಯ 'ಹೊನ್ನು' ಕಣ್ಣಿಗೆ ಕಂಡಳು.

ಏನಿದು.. ? ..ಛೇ...ಛೇ...ಮತ್ತೊಮ್ಮೆ ಎರಡೂ ಕಣ್ಣನ್ನು ಕೈಯಿಂದ ಉಜ್ಜಿದೆ. ಕನಸಾ..? ಕಣ್ಣಗಲಿಸಿ ಮತ್ತೊಮ್ಮೆ ನೋಡಿದೆ. ಈಗ ಒಬ್ಬಳ ಜಾಗದಲ್ಲಿ ಮೂರು ಮೂರು 'ಹೊನ್ನು' ಕಾಣಲು ಶುರುವಾಯಿತು. ಬಲಗೈ ಚಿವುಟಿದೆ. ಅತ್ತಿತ್ತ ನೋಡಿದೆ. ಎಲ್ಲಿ ನೋಡಿದರಲ್ಲಿ ಅವಳೇ ಕಣ್ಣಿಗೆ ಕಂಡಳು. ಕಣ್ಣು ಕತ್ತಲೆ ಬಂದಂತಾಗಿ ಬದಿಯಲ್ಲಿ ಕುಳಿತದ್ದು ನೆನಪು.ಆಮೇಲೆ ತಿಳಿಯಿತು ಕುಡಿದದ್ದು ಅಲ್ಲಿನ ಸಂಪ್ರದಾಯದ ಭಾಂಗ್ ಪಾನೀಯವೆಂದು. ಅದೇ ಗುಂಗಿನಲ್ಲಿ , ' ಹೊ....ನ್ನೂ...ಹೊ.....ನ್ನೂ ...' ಎಂದು ಕನವರಿಸಿದೆನಂತೆ, ಮಾವನವರು ಅದನ್ನು ಆಂಗ್ಲ ಭಾಷೆಯ (oh....No ..oh..No.) ಎಂದು ತಿಳಿದು ಸುಸ್ತಾಗಿದ್ದೆನೆಂದು ಭಾವಿಸಿ ನನ್ನನ್ನು ಒಂದು ಕಡೆ ಕೂರಿಸಿ ಉಪಚರಿಸಿದರು. ಅಬ್ಬಾ... ಬದುಕಿದೆ ಬಡಪಾಯಿ. ಸಧ್ಯ..! ಹೊನ್ನು ಕಥೆ ಇವರಿಗೆ ಗೊತ್ತಾಗಲಿಲ್ಲವಲ್ಲಾ .. ಎಂದು ಖುಷಿ ಪಟ್ಟೆ.


ಮೊನ್ನೆ ನನ್ನ ಮಗನ ಬಲಭುಜದ ಮೇಲೆ ದೊಡ್ಡ ದೊಡ್ಡ ರೆಕ್ಕೆ ಬಿಚ್ಚಿದ ಗರುಡ ಪಕ್ಷಿಯ ಚಿತ್ರ ಕಂಡು ಗಲಿಬಿಲಿಗೊಂಡೆ. 'ರಮೀತ್ ಎನೋ ಇದು? ' ಎಂದು ಕೇಳಿದಾಗ‌ ' ಅಪ್ಪ ಅದು ಟ್ಯಾಟೂ...' ಅಂದ ಅಂದರೆ ಹಚ್ಚೆ.... ಒಮ್ಮೆಲೇ ಕಣ್ಣೆದುರು ಬಂದದ್ದು ಫ್ಲಾಶ್ ಬ್ಯಾಕ್ . ಹೌದು..! ಅವಳ ಕೈಯಲ್ಲಿದ್ದ ' ಶಿವು ' ಹೆಸರ ಹಚ್ಚೆ ನೆನಪಾಯ್ತು ..ಅಯ್ಯೋ..! ನಲವತ್ತು ವರ್ಷಗಳ ಹಿಂದನ ' ಹೊನ್ನು' ನನ್ನ ಬಾಲ್ಯವನ್ನು ಮತ್ತೊಮ್ಮೆ ನೆನಪಿಸಿದಳಲ್ಲಾ ಎಂದು ಮನಸಲ್ಲೇ ನಕ್ಕು ಬರೆದ ಈ ಬರಹಕ್ಕೆ ಪ್ರೇರಣೆಯಾದಳು.


Rate this content
Log in