ಅನಿತಾ ಸಾಹಿತಿ

Others

1  

ಅನಿತಾ ಸಾಹಿತಿ

Others

ನನ್ನವನ ಪ್ರೀತಿ

ನನ್ನವನ ಪ್ರೀತಿ

4 mins
192



ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರೋ... ಹಾಡನು ಗುನುಗುತಾ ನನ್ನ ಮೊಬೈಲ್ ಕೈಗೆ ಎತ್ತಿಕೊಂಡೆ.


"ರೀ ನನಗೇಕೋ ಹುಡುಗ ಇಷ್ಟ ಆಗ್ಲಿಲ್ಲ, ನಿಮಗೆ"

"ಹುಡುಗ ನೋಡೋಕೆ ಅಷ್ಟೇನು ಚೆನ್ನಾಗಿಲ್ಲ, ಬೇರೆ ಎಲ್ಲಾದ್ರೂ ನೋಡೋಣ ಬಿಡು,ಅವಳಿಗೇನು ಮಹಾ ವಯಸ್ಸಾಗಿರೋದು "ನನ್ನ ಕಿವಿ ಚುರಕಾಯಿತು

"ಒಳ್ಳೆ ಕೆಲಸ, ಒಳ್ಳೆ ಸಂಬಳ ಎಲ್ಲಾ ಇದೆ ಆದರೆ ನೋಡೋಕೆ ಸ್ವಲ್ಪನಾದರೂ ತನುಗೆ ಮ್ಯಾಚ್ ಆಗಿದ್ರೆ ಮದುವೆ ಮಾಡಿಕೊಡ್ಬಹುದಿತ್ತು"


"ತನು ಏ ತನು" ಅಮ್ಮ ಕರೆದೊಡನೆ ಹೋದೆ,ಯಾಕೆ ಹೇಳಿ ಮದುವೆ ವಿಚಾರ ಅಲ್ವಾ ಅದ್ಕೆ.


"ಹೇಳಮ್ಮ"


"ಅಮ್ಮ ಅಪ್ಪ ನಿನ್ಹತ್ರ ಕೇಳಿಲ್ಲ ಅನ್ಕೋಬೇಡ, ನಿನಗೆ ಇಷ್ಟ ಅದ್ನ "


"ಹ್ಮ್ಮ್ ಹೂ, ಇಲ್ಲ " ಎಂದೇ ಆದರೆ ಎಲ್ಲೋ ಒಂದು ಕಡೆ ಯಾವಾಗಲೂ ಅಂದ ಚಂದ ನೋಡ್ಬೇಡ ಅನ್ನೋರು ಅವನಿಗೆ ಏನಾಗಿದೆ ಸ್ವಲ್ಪ ದಪ್ಪ, ಒಪ್ಕೋ ಒಳ್ಳೆ ಹುಡುಗ ಅನ್ನಬಾರದೇ ಅನಿಸಿತು ಯಾಕೆಂದು ತಿಳಿಯಲಿಲ್ಲ.


ಅಷ್ಟೇ ಹೇಳಿ ನನ್ನ ರೂಮಿಗೆ ಬಂದೆ. ಯಾಕೋ ತಲೆ ತುಂಬಾ ಅವನೇ ಮಧ್ಯಾಹ್ನ ನೋಡೋಕೆ ಬಂದ ಹುಡುಗ. ಫೋಟೋದಲ್ಲೇ ಇಷ್ಟವಾಗಿಲ್ಲ ಆದರೂ ಒಳ್ಳೆ ಕೆಲಸ,ಸೆಟ್ಲ್ ಆಗಿರೋ ಹುಡುಗ ಎಂದಾಗ ಅಪ್ಪ ಅಮ್ಮನ ಇಷ್ಟ, ಒಳ್ಳೆ ಸಂಬಂಧ ಬಂದ್ರೆ ಏಕೆ ಬೇಡ ಅನ್ಬೇಕು ಅಂತ ಸುಮ್ಮನಾದೆ.


ಈಗ ಯಾಕೋ ಎನೋ ಕಸಿವಿಸಿ, ನೋಡಲು ಅಷ್ಟೇನು ಚೆನ್ನಾಗಿಲ್ಲ ಅಂತ ನಂಗು ಗೊತ್ತು ಆದರೂ ಹೇಳತೀರದ ಭಾವನೆ, ಹೆಣ್ಣು ನೋಡುವ ಶಾಸ್ತ್ರ ಇದ್ದಾಗಲೆಲ್ಲ ಹೀಗೆ ಆಗುತ್ತಿದ್ದದ್ದು ನನಗೆ ಸಹಜವೆಂದು ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗಿಕೊಂಡೆ.


* * *


ಮುಂಜಾನೆ ಎದ್ದೊಡನೆ ನೋಡಲು ಬಂದ ಹುಡುಗ ಫೋನ್ ಮಾಡ್ಲಿಲ್ವಾ ಎಂದು ನೆನಸಿಕೊಂಡೆ, ಒಂದೆರಡು ದಿನ ಆದ್ಮೇಲೆ ಫೋನ್ ಮಾಡಬಹುದೆನಿಸಿ ಸಮಾಧಾನ ತಂದುಕೊಂಡೆ. ಇದೆಲ್ಲ ಅಮ್ಮನ ಹತ್ರ ಕೇಳೋಕೆ ಆಗುತ್ತಾ ಹೇಳಿ, ನನ್ನ ಕೂಗು ದೇವರಿಗೆ ಕೇಳಿಸಿತೋ ಏನೋ..


"ಅಮ್ಮ ಆ ಹುಡುಗನ ಕಡೆಯವರು ಫೋನ್ ಮಾಡಿದ್ರ" ಅಂತ ನನ್ನ ವಿಜಿ ಅಣ್ಣ ಅಮ್ಮನನ್ನು ಕೇಳಿದ.


"ಇಲ್ಲ ಕಣೋ, ಒಪ್ಪಿಗೆ ಕೊಟ್ರು ಕೂಡ ತನುನ ಕೊಡಲ್ಲ, ಹುಡುಗ ಅಷ್ಟೇನು ಚೆನ್ನಾಗಿಲ್ಲ, ಸ್ವಲ್ಪಾನು ಮ್ಯಾಚ್ ಆಗಲ್ಲ"


"ಹೌದಮ್ಮ ದಪ್ಪಗೆ ಕಪ್ಪುಗೆ ಇದ್ದಾರೆ, ಆದ್ರೆ ಚೆನ್ನಾಗಿ ಓದಿದ್ದಾರೆ"


"ಹೌದು ವಿಜಿ,ಒಳ್ಳೆ ಹುಡುಗ ಆದ್ರೆ ಗಂಡ ಹೆಂಡ್ತಿ ಅಕ್ಕ ಪಕ್ಕ ನಿಂತ್ಕೊಂಡ್ರೆ ಚೆನ್ನಾಗಿ ಕಾಣೋದು ಬೇಡ್ವಾ"


ಹೌದು ಅವ್ರೇನು ಚೆನ್ನಾಗಿಲ್ಲ ಆದ್ರೆ ಒಳ ಮನಸು ನನಗೆ ಗೊತ್ತಿಲ್ಲದೇ ಅವನಿಗಾಗಿ ಹಂಬಲಿಸುತ್ತಿತ್ತು. ಎಷ್ಟೋ ಹುಡುಗರ ಲವ್ ಪ್ರಪೋಸಲ್ ರಿಜೆಕ್ಟ್ ಮಾಡಿದ ನಾನು ಇವನಿಗಾಗಿ ಆಸೆ ಪಡ್ತಿರೋದು ಸ್ವತಃ ನನಗೆ ಆಶ್ಚರ್ಯ.


ಮೂರು ದಿನಗಳ ನಂತರ ನೋಡಲು ಬಂದ ಹುಡುಗ ಸ್ವತಃ ಅವನೇ ಅಮ್ಮನಿಗೆ ಫೋನ್ ಮಾಡಿ ಹುಡುಗಿ ಇಷ್ಟವಾಗಿದ್ದಾಳೆ ಎಂದಾಗ ಅಮ್ಮ ಏನು ಹೇಳುವುದೆಂದು ಒಂದು ಕ್ಷಣ ತಬ್ಬಿಬ್ಬಾದರು, ಜಾತಕ ಕೂಡಿ ಬಂದಿಲ್ಲ ಎಂದು ಹೇಳಿದರು,ಅಲ್ಲಿಗೆ ಅಂದಿನ ಸಂಭಾಷಣೆ ಮುಗಿದಿತ್ತು. ಇಷ್ಟೇ ಮುಗಿತ್ತು ಋಣ ಎನಿಸಿತು, ಈ ಮಾತು ಮನಸ್ಸಿನಲ್ಲಿ ಏಕೆ ಬಂತೋ ಗೊತ್ತಿಲ್ಲ. ಮದುವೆಗೆ ಅವಸರ ಅದಕ್ಕಾಗಿ ಹೇಗೆಲ್ಲ ನನ್ನ ಮನಸ್ಸು ಕಾಡುತ್ತಿದೆ ಎಂದು ಅಂದುಕೊಂಡೆ,ಎಷ್ಟು ಅವಸರ ಇತ್ತೀಚಿಗೆ ಪೋಲಿ ಆಗಿದೀನಿ ಎಂದು ನನಷ್ಟಕ್ಕೆ ನಾನೆ ನಕ್ಕೆ.


ಮತ್ತೆರಡು ದಿನ ಕಳೆಯಿತು ಆ ಹುಡುಗ ಮತ್ತೆ ಫೋನ್ಹಾಯಿಸಿದ. ಆಂಟಿ ನನಗೆ ನಮ್ಮ ಮನೆಯವರಿಗೆ ಹುಡುಗಿ ಇಷ್ಟವಾಗಿದಾಳೆ ಇನ್ನೊಮ್ಮೆ ಯೋಚನೆ ಮಾಡಿ, ತುಂಬಾ ಚೆನ್ನಾಗಿ ನೋಡಿಕೊಳ್ತೀನಿ ಅಂದ. ಹೀಗೆ ಸ್ವಲ್ಪ ನಿಮಿಷ ಮಾತನಾಡಿದ ನಂತರ ಅವನ ತಂದೆ ತಾಯಿ ಮಾತಾಡಿದರು ಅಮ್ಮ ನಗು ನಗುತ ಮಾತನಾಡಿಸಿ ಜಾತಕ ಕೂಡಿ ಬಂದಿಲ್ಲ ಅಂತ ಸಬೂಬು ಹೇಳಿದರು. ಬೇರೆ ಬೇರೆ ರೀತಿಯಿಂದ ಒಪ್ಪಿಸಲು ಪ್ರಯತ್ನಪಟ್ಟರು ಅಮ್ಮ ಸಮಯ ಬೇಕೆಂದು ಹೇಳಿ ಮಾತು ಕೊನೆಗೊಳಿಸಿದರು. ನಾನು ಒಪ್ಪಿದ್ರೆ ಮದುವೆ ಆದಂತೆ.ಆದರೆ ಈ ಭಾವನೆ ತಾತ್ಕಾಲಿಕವೆಂದು ಭಾವಿಸಿ ಅಪ್ಪ ಅಮ್ಮನ ಹತ್ತಿರ ಏನೂ ಹೇಳಲಿಕ್ಕೆ ಹೋಗಲಿಲ್ಲ.


ಒಂದು ಎರಡು ತಿಂಗಳು ಕಳೆದಿರಬಹುದು ಇನ್ನೊಂದು ಮದುವೆ ಪ್ರಪೋಸಲ್ ಬಂತು ಫೋಟೋ ನೋಡಿ ಒಪ್ಪಿಗೆ ಕೊಟ್ಟೆ ಆ ಕಡೆಯಿಂದನು ನೋಡಲು ಬರುವುದಾಗಿ ಹೇಳಿದರು. ಅಂದು ಗುರುವಾರ ನೋಡಲು ಹುಡುಗ ಲಕ್ಷಣವಾಗಿ ಬಹಳ ಅಂದವಾಗಿದ್ದ.ಗವರ್ನಮೆಂಟ್ ಕೆಲಸ. ಹೆಣ್ಣು ನೋಡೋ ಶಾಸ್ತ್ರ ಅಂದು ಮುಗಿಯಿತು.ಮಾರನೇ ದಿನ ಸಂಜೆ ಹುಡುಗನ ಮನೆವರು ಹುಡುಗಿ ಒಪ್ಪಿಗೆ ಎಂದು ತಿಳಿಸಿದರು,ನಮ್ಮ ಮನೆಯಲ್ಲೂ ಬೇಡವೆಂದು ಹೇಳುವುದಕ್ಕೆ ಕಾರಣಗಳು ಇರಲಿಲ್ಲ.


ಅಮ್ಮ ಅಪ್ಪ ಒಮ್ಮೆ ನನ್ನನ್ನು ಕೇಳಿದರು ನನ್ನಲ್ಲೂ ಯಾವ ಕಾರಣಗಳು ಇರಲಿಲ್ಲ ಹ್ಮ್ ಎಂದೇ. ಎಲ್ಲವೂ ಸರಿಯಿದೆ ಆದ್ರೆ ಏನೋ ಕಳೆದುಕೊಂಡಂತ ಭಾವ. ಆ ದಪ್ಪ ಹುಡುಗ ಮನಸ್ಸಿನಿಂದ ಮರೆಯಲಾಗಲಿಲ್ಲ.ದಿನ ಸಾಗಿತು ನಿಶ್ಚಿತಾರ್ಥಕೆ ಒಂದು ತಿಂಗಳು ಬಾಕಿ ಇರಲು ಏನೋ ಕೊರೆತೆ ನನ್ನನ್ನು ಕಾಡಲು ಶುರುವಾಯಿತು. ಏನೆಂದು ನನ್ನಲ್ಲಿ ನನಗೆ ಪತ್ತೆ ಹಚ್ಚುವುದಕ್ಕೆ ಆಗಲಿಲ್ಲ, ಎಲ್ಲಾ ಸಮಯವು ನನ್ನ ಮದುವೆ ಆಗುವ ಹುಡುಗನ ಜೊತೆ ಫೋನಿನಲ್ಲಿ ಕಳೆಯುತ್ತಿದ್ದೆ. ದಿನಗಳು ಕಳೆದಂತೆ ಮನಸ್ಸು ಒಮ್ಮೆಯಾದರು ಹಳೆ ಹುಡುಗನನ್ನು ನೆನಪಿಸುತ್ತಿತ್ತು.


* * *


ತನು ತನು ಬಸ್ ಬಂತು ಹತ್ತು,ರಾಜೇಶ್ ಬಸ್ ಬಂತು ಅಂದಾಗಲೆ ವಾಸ್ತವಕ್ಕೆ ಬಂದೆ,ನನ್ನ ಮುದ್ದು ಕೀರ್ತಿಯನ್ನು ಎತ್ತಿಕೊಂಡು,ನನ್ನ ಗಂಡ ಮತ್ತು ನಾನು ಬಸ್ ಹತ್ತಿದೆವು. ಅಮ್ಮನ ಮನೆಯಲ್ಲಿ ಅಣ್ಣನ್ನ ನಿಶ್ಚಿತಾರ್ಥ ಸಲುವಾಗಿ ನಾನು ಕುಟುಂಬ ಸಮೇತ ಬಂದಿಳಿದೆ.ಅಳಿಯನನ್ನು ನೋಡಿ ಕುಶಲೋಪರಿ ವಿಚಾರಿಸಿದರು. ಅಲ್ಲಿ ನೆರೆದಿದ್ದ ನನ್ನ ಸಂಬಂಧಿಕರು ನನ್ನ ಗಂಡನ ದಿಟ್ಟಿಸಿ ನೋಡಿದರು.ಮಗು ಹಸಿವಿನಿಂದ ಅಳುತ್ತಿತ್ತು ಹಾಲು ತರಲೆಂದು ಅಡುಗೆ ಮನೆ ಹತ್ರ ಹೋದಾಗ...


"ಇವನು ನೋಡೋಕೆ ಹೀಗಿದಾನೆ, ಸ್ವಲ್ಪನಾದ್ರು ನೋಡೋಕೆ ಅಂದ ಬೇಡ್ವಾ"


" ಬೇಡ ಅಂದ್ರು ಮದುವೆ ಅದಳಂತೆ"

ಅಪ್ಪ ಅಮ್ಮ ಇಷ್ಟವಿಲ್ಲದಿದ್ದಾಗ ಸಂಬಂಧಿಕರ ಹತ್ರ ಹೇಳಿದರಿಂದ ಹೆಚ್ಚು ಕಮ್ಮಿ ಒಬ್ಬರಿಂದ ಒಬ್ಬರಿಗೆ ಗೊತ್ತಾಗಿತ್ತು.


ಹೀಗೆ ಏನೇನೋ ನನ್ನ ಗಂಡನ ಕುರಿತು ಹಿಟ್ಟು ಕಲಿಸುತಿದ್ದ ನನ್ನ ದೂರದ ಸಂಬಂಧಿಕರಿಬ್ಬರು ಮಾತನಾಡಿಕೊಳ್ಳುತ್ತಿದ್ದದ್ದು ನನ್ನ ಕಿವಿಗೆ ಬಿದ್ದರು ಸುಮ್ಮನೆ ಅಡುಗೆ ಮನೆಗೆ ಹೋಗಿ ಕಾಯಿಸಿದ ಹಾಲು ತಂದೆ. ಜನರ ಬಾಯಿ ಮುಚ್ಚಿಸೋಕಾಗುತ್ತ ಹೇಳಿ.

ಅವರು ನನ್ನವನಲ್ಲಿ ಹುಡುಕಿದ್ದು ಅಂದ ಚಂದ, ನಾನು ಹುಡುಕಿದ್ದು ಪ್ರೀತಿ ಇಷ್ಟೇ ವ್ಯತ್ಯಾಸ.


ಅಂದಂಗೆ ನಮ್ಮಿಬ್ಬರ ಮದುವೆ ಹೇಗಾಯಿತು ಅಂತ ಹೇಳಿಲ್ವಲ್ಲ ನಿಮಗೆ, ಹೇಳ್ತೀನಿ ಕೇಳಿ..

ನಿಶ್ಚಿತಾರ್ಥ ಹತ್ರ ಇರುವಾಗ ತಿಳಿಯದೆ ನಮ್ಮೋರು ನಮ್ಮ ಮನೆಗೆ ಇನ್ನೊಮ್ಮೆ ಹೆಣ್ಣು ಕೇಳೋಕೆ ಬಂದಾಗ ಬಾಗಿಲು ತೆಗೆದಿದ್ದು ನಾನೆ ಆ ಕ್ಷಣ ಇಬ್ಬರ ಕಣ್ಣುಗಳು ಬೇರೆತವು ಅವರ ಕಣ್ಣಲಿ ನನ್ನ ಮುಂದಿನ ಭವಿಷ್ಯ ಕಂಡೆ ಅಂದೇ ನಿರ್ಧರಿಸಿದೆ ಅವರೆ ನನ್ನ ಗಂಡ ಅಂತ.


ಅಮ್ಮ ಬಂದು ರೂಮಿಗೆ ಹೋಗು ಎಂದರು,ಆಮೇಲೆ ಅವರಿಗೆ ನನ್ನ ನಿಶ್ಚಯವಾಗಿದ್ದ ಮದುವೆ ಬಗ್ಗೆ ಹೇಳಿ ಕಳಿಸಿದ್ರು,ಅವರು ಹೋದ ಮೇಲೆ ನಾನು ಧೈರ್ಯ ತಂದುಕೊಂಡು ಅವರು ಅಷ್ಟೊಂದು ಇಷ್ಟಪಡುವಾಗ ನಿರಾಕರಿಸೋದು ಬೇಡ ಎಂದು ನಿಧಾನ ಬಾಯಿ ತೆರೆದೆ.


"ಈಗೇನು ಅವನ್ನ ಮದುವೆ ಆಗ್ತೀಯಾ" ಅಮ್ಮ ಮಾತಿಗೆ ಕೇಳಿದರು


"ಹ್ಮ್" ಎಂದೇ ಅಮ್ಮ ಊಹಿಸಿರಲಿಲ್ಲ.


"ತಲೆಗಿಲೆ ಕೆಟ್ಟಿದೀಯಾ ನಿಂಗೆ"


"ನಾವು ಇಷ್ಟ ಪಡೋರಿಗಿಂತ ನಮ್ಮನ್ನ ಇಷ್ಟ ಪಡೋರನ್ನ ಮದುವೆ ಆಗೋದು ಸರಿ ಅನ್ಸುತ್ತೆ " ಅಮ್ಮ ರೂಮಿನಲ್ಲಿದ್ದ ಅಣ್ಣ, ಅಪ್ಪನನ್ನು ಕರೆದರೂ.


"ಇವತ್ತೊ ನಾಳೆನೋ ಮದುವೆ ಇಟ್ಟ್ಕೊಂಡು ಆಡೋ ಮಾತ ಇದು, ಆ ಹುಡುಗ ಸರಿಯಾಗಿ ತಲೆ ಕೆಡಿಸಿದಾನೆ, ನಿಜ ಹೇಳೇ ನಿಂಗು ಅವನಿಗೂ ಏನಾದ್ರು ಕಾಂಟಾಕ್ಟ್ ಇದ್ದೀಯಾ "?


ನನಗೆ ಸಿಟ್ಟು ನೆತ್ತಿಗೇರಿತ್ತು "ಏನೇನೋ ಮಾತಾಡ್ಬೇಡ ಮಾ, ನೋಡೋಕೆ ಚೆನ್ನಾಗಿದ್ದಾರೆ ಅಂತ ಯಾರ್ಯಾರನೋ ಮದುವೆಯಾಗಿ ಅವರ ಅಂದ ಚಂದನ ಉಪ್ಪಿನಕಾಯಿ ಮಾಡ್ಕೊಂಡು ತಿನ್ನೋಕೆ ಆಗುತ್ತಾ,ಒಳ್ಳೆ ಮನಸ್ಸು ಮುಖ್ಯ ಆಗುತ್ತೆ"


"ಇಷ್ಟ ಅಂದ್ರೆ ಮುಂಚೆ ಹೇಳೋಕೆ ಏನಾಗಿತ್ತು? " ಅಪ್ಪ ಕೋಪದಿಂದ ಕೇಳಿದರು


"ಹಾಗಲ್ಲ ನಿಮ್ಮ ಇಷ್ಟಕೆ ವಿರುದ್ಧ ಹೋಗ್ಬಾರ್ದು ಅಂತ"

"ಇವಾಗೇನು ಒಳ್ಳೆ ಮರ್ಯಾದೆ ಕೊಡ್ತಿದ್ದಿಯ ಅಲ್ವಾ" ವಿಜಿ ಅಣ್ಣ ಬೈದ


"ನೋಡು ತನು, ಪದೇ ಪದೇ ಆ ಹುಡುಗ ಕೇಳಿರೋದಾಕೆ ಪಾಪ ಅನಿಸಿರಬಹುದು. ತಲೆ ಕೆಡಿಸಿಕೊಳ್ಳದೆ ಎಂಗೇಜ್ಮೆಂಟ್ಗೆ ರೆಡಿಯಾಗು, ಈ ಹುಡುಗ ನಿನಗೆ ಒಳ್ಳೆ ಜೋಡಿ, ಪರ್ಮನೆಂಟ್ ಜಾಬ್ ಕಣೆ ಒಪ್ಪ್ಕೋ." ಹೇಗೆ ಮನಸ್ಸಿನ ಭಾವನೆ ಹೇಳೋದು ಅಂತ ಗೊತ್ತಾಗದೆ ಸುಮ್ಮನಾದೆ ಅಂದು ಒಂದು ತಾಸು ಅಪ್ಪ, ಅಣ್ಣ,ಅಮ್ಮ ಎಲ್ಲಾ ಸೇರಿ ಪ್ರವಚನ ಮಾಡಿದರು, ನಾನು ಮೌನ ಗೌರಿ ತರ ಸುಮ್ಮನೆ ಕೂತಿದ್ದೆ.


ಇದಾದ ಸರಿಯಾಗಿ ನಾಲ್ಕು ದಿನಕೆ ನನ್ನಗೆ ನಿಶ್ಚಯವಾಗಿದ್ದ ಹುಡುಗನ ಕಡೆಯವರು ನಮ್ಮಅಜ್ಜಿ ತೀರಿಕೊಂಡಿದ್ದಾರೆ ಮದುವೆ ಎಂಗೇಜ್ಮೆಂಟ್ ಎಲ್ಲಾ ಸಧ್ಯಕೆ ಬೇಡ ಎಂದು ಹೇಳಿದರು. ನಮ್ಮದು ತಡವಾಗುತ್ತೆ ಬೇರೆ ಕಡೆ ಗಂಡು ನೋಡೋ ಹಾಗಿದ್ರೆ ಬೇಸರವಿಲ್ಲವೆಂದರು.ಆದರೆ ನಮ್ಮದು ಎಲ್ಲಾ ತಯಾರಿಯಾಗಿದೆ ಮುಂದೆ ಹಾಕೋದು ಬೇಡ ಅಂದ್ರು ಕೇಳಲಿಲ್ಲ. ಎಂಗೇಜ್ಮೆಂಟ್ಗೆ ಒಂದೇ ವಾರ ಬಾಕಿ ಎಲ್ಲರಿಗು ವಿಷಯ ಮುಟ್ಟಿದೆ, ಎಲ್ಲಾ ಸಿದ್ಧತೆ ನಡೆದಿದೆ ಅಂದ್ರು ಅವರು ಇನ್ನೂ ಒಂದೆರಡು ವರ್ಷ ಬೇಡ ಅಂದ್ರು, ಅಷ್ಟು ಅಂದಾಗ್ಲೇ ಅಮ್ಮನಿಗೆ ಅವರಿಗೆ ಮದುವೆ ಇಷ್ಟವಿಲ್ಲಾ ಎಂದು ಸಂಶಯ ಬಂತು, ನನಗೆ ಬೇಸರಕ್ಕಿಂತ ಸಂತೋಷವಾಯಿತು.ಫಿಕ್ಸ್ ಆಗಿರೋ ಮದುವೆ ನಿಂತು ಹೋಯಿತಲ್ಲೇ ದರಿದ್ರ,ನೀನು ಮೊದಲೇ ಅಪಶಕುನ ಮಾತನಾಡಿದ ಪರಿಣಾಮ ಎಂದು ತಲೆಗೆ ಒಬ್ಬೊಬ್ಬರು ಬಾಯಿಗೆ ಬಂದ ಹಾಗೆ ಬೈದರು.


ಮುಂದೆ ಅವನನ್ನೇ ಮದುವೆ ಆಗ್ತೀನಿ ಅಂದೇ ಇನ್ನೇನು ಮಾಡ್ತಾರೆ ಒಲ್ಲದ ಮನಸ್ಸಿನಿಂದ ಮದುವೆ ಮಾಡಿಕೊಟ್ರು ಆದರೆ ಈಗ ನನ್ನ ಸಂಸಾರ ನೋಡಿ ಖುಷಿಯಾಗಿದ್ದಾರೆ. ನಮ್ಮೋರು ಕಪ್ಪು ಆದರೂ ಲಕ್ಷಣವಾಗಿದಾರೆ, ಕೊಂಚ ಉದ್ದ ಕಮ್ಮಿ, ನಾನೆ ಉದ್ದ ಇದ್ದೀನಿ ಆದ್ರೂ ನಮ್ಮೋರು ನಂಗಿಷ್ಟ.


ಪ್ರೀತಿ ಎಲ್ಲವನ್ನು ಮೀರಿದ್ದು ಎಂದು ನನಗೆ ನನ್ನವರು ಸಿಕ್ಕಿದ ದಿನವೇ ಅರ್ಥವಾಗಿದ್ದು.ಯಾರ ಕಣ್ಣು ಬೀಳದ ಹಾಗೆ ಸಂಸಾರ ನವರಸದಿಂದ ಕೂಡಿದೆ.




Rate this content
Log in