ನಾಟಕ
ನಾಟಕ
*ಬತ್ತದತೊರೆ ಬಳಗದ ಸ್ಪರ್ಧೆಗಾಗಿ*
*ಮಕ್ಕಳ ನಾಟಕ*
*ಸ್ವಚ್ಚ ಭಾರತ ಅಭಿಯಾನ*
ಪಾತ್ರಗಳು
ಸೀತಾ-೩೫ರ ಮಹಿಳೆ
ಗಂಗಾ- ವಿದ್ಯಾರ್ಥಿನಿ,ಸೀತಾಳ ಮಗಳು
ಅನ್ನಪೂರ್ಣ-ಶಿಕ್ಷಕಿ
ರಾಮಯ್ಯ-ಸೀತಾಳ ಗಂಡ,ಗಂಗೆಯ ಅಪ್ಪ
ರಾಜೀವಯ್ಯ-ಚೇರಮನ್
ಡಂಗೂರ ಸಾರುವವ ಮತ್ತು ವೈದ್ಯ
ದೃಶ್ಯ ೧ *ರಸ್ತಾಸೀನು*
(ಶಿಕ್ಷಕಿ ಅನ್ನಪೂರ್ಣ ವರ್ಗಾವಣೆಗೊಂಡು ಹಳ್ಳಿಗೆ ಬರುತ್ತಾರೆ)
*ಅನ್ನಪೂರ್ಣ-* ಆಹಾ ಎಂತ ಚೆಂದ,ಹಸಿರು ವಾತವರಣದ ಹಳ್ಳಿ ಇದು,ಆದರೆ ಸ್ವಚ್ಚತೆ ಬಗಗೆ ಅರಿವಿಲ್ಲ ಈ ಹಳ್ಳಿಗರಿಗೆ.ಊರ ಮುಂದೆ ತಿಪ್ಪೆ ಹಾಕಿದಾರೆ,ಕೆರೆ ನೀರಲ್ಲೆ ಬಟ್ಟೆ ಒಗೆಯೋದು,ದನಕರು ತೊಳೆಯೋದು,ಬಯಲ ಶೌಚ ಅಸಯ್ಯ ಅನಸ್ತಿದೆ,ಅದೆ ನೀರನ್ನು ಮನೆಗೆ ಒಯ್ತಿದಾರೆ..ಛೇ..ಛೇ..
*ಗಂಗಾ-* (ಬಂಟೆ ಗಂಟೆ ಹಿಡಿದು) ಯಾರ್ರಿ ನೀವು? ಊರಿಗೆ ಹೊಸಬರಂಗ ಕಾಣ್ತಿರಿ.
*ಅನ್ನಪೂರ್ಣ-* ನಾನು ಈ ಊರಿಗೆ ಹೊಸದಾಗಿ ಬಂದ ಶಿಕ್ಷಕಿ,ನೀನ್ಯಾರು ಶಾಲೆಗೆ ಹೋಗಲ್ವಾ?
*ಗಂಗಾ-* ನಾನು ಗಂಗಾ ಅಂತ,ಶಾಲೆಗೆ ಹೋಗೋ ಆಶೆ ಇದೆ,ಆದರೆ ನಮ್ಮನೇಲಿ ಕಳಿಸಲ್ಲ ಬಿಡಿ ಟೀಚರ್
*ಅನ್ನಪೂರ್ಣ*-ಯಾಕೆ ಕಳಿಸಲ್ಲ.ನಿಂದಿನ್ನು ಓದೋ ವಯಸ್ಸು,ನಿಮ್ಮನೆಲಿ ನಾ ಹೇಳ್ತಿನಿ ಬಾ ಶಾಲೆಗೆ.
*ಗಂಗಾ-* (ನಗುಮೊಗದಿಂದ) ಸರಿ ಟೀಚರ್ ಬರ್ತಿನಿ.
*ರಾಮಯ್ಯ-* ಯಾಕಬೇ ಹ್ವಾರೆ ಮುಗದಿಲ್ಲೆನ ಇನ್ನೂ. ನಡಿ ಹೊಲಕ್ಕ ಹೋಗುಣ ತಡಾ ಆಯ್ತು.
*ಗಂಗಾ-* ಅಪ್ಪಾ ಇವ್ರೂ ನಮ್ಮ ಹೊಸ ಟೀಚರ್,ನಾನು ಶಾಲೆಗೆ ಹೋಗ್ತಿನಿ
*ರಾಮಯ್ಯ-* ಶಾಲಿ ಎನ ಹೊಟ್ಟಿಗೆ ಹಾಕುತ್ತ ಎನ,ನಡಿ ನಡಿ ಹೊಲಕ್ಕ.
*ಅನ್ನಪೂರ್ಣ*-ಹಾಗನ್ಬೇಡಿ ರಾಮಯ್ಯನವ್ರೆ ಇವಳದಿನ್ನು ಓದೋ ವಯಸ್ಸು,ಓದಲಿ ಓದು ತಡೆಯೋದು ಮಹಾ ಅಪರಾಧ.
*ರಾಮಯ್ಯ-* ಅಕ್ಕೋರ ಮದ್ವಿ ಮಾಡಿ ಕಳಸಾಕಿಗೆ ಯಾಕ್ರಿ ಶಾಲಿ.ದುಡದ್ರ ನಾಲ್ಕ ದುಡ್ಡು ಅಕಿ ಮದ್ವಿಗೆ ಆಗುತ್ತ.
*ಅನ್ನಪೂರ್ಣ*-ಇನ್ನೂ ಸಮಯವಿದೆ ಮದ್ವೆಗೆ ಇಗ ಶಾಲೆಗೆ ಕಳಿಸಿ.ಅವಳ ಬದುಕು ಉಜ್ವಲವಾಗಲಿ.
*ರಾಮಯ್ಯ-* ನೀವು ಇಷ್ಟ ತಿಳಿಸಿ ಹಳ್ತಿರಂದ ಮ್ಯಾಲ,ಆಯ್ತ ರೀ ಅಕ್ಕೊರ ಬರ್ತಾಳ ತಗೋರಿ. ಕಳಸ್ತೆನಿ.ಗಂಗಾ ನಡಿಬೇ ಮನಿಗೆ ಶಾಲಿಗೆ ಹೋಗಾಕ ತಡಾ ಆಗುತ್ತ.
(ಗಂಗಾ ನಗುಮೊಗದೊಂದಿಗೆ ಅಪ್ಪನ ಕೈ ಹಿಡಿದು ಮನೆಗೆ ತೆರಳುವಳು)
______________________________________________________________
ದೃಶ್ಯ-೨ *ಪಂಚಾಯ್ತಿ ಕಟ್ಟೆ*
*ಡಂಗೂರ ಸಾರುವವ- '* ಹೇಳಿಲ್ಲಂದ್ರಿ ಕೇಳಿಲ್ಲಂದ್ರಿ ಊರಾಗ ಕಾಲರ ಹಬ್ಬೆದ,ದನಕರಕ ಕಾಲಬ್ಯಾನಿ ಬಾಯಿಬ್ಯಾನಿ ಬಂದದ ಅದಕ ಇಚಾರ ಮಾಡಾಕ ಎಲ್ಲಾರೂ ಪಂಚಾಯ್ತಿ ಕೂಡಬೇಕಂತಪೋ..!
(ಪಂಚಾಯತಿ ಸೇರುವುದು)
ರಾಜೀವಯ್ಯ ಚೇರಮನ್,ಅನ್ನಪೂರ್ಣ,ವೈದ್ಯಮತ್ತು ಊರಿನವರೆಲ್ಲ ಸೇರಿದ್ದಾರೆ.
*ರಾಜ
ೀವಯ್ಯ-* ನೋಡ್ರಪಾ ಇಲ್ಲಿ ಎಲ್ಲಾರೂ ಎದಕ್ಕ ಸೇರಿದ್ದು ಎಲ್ಲಾರ್ಗೂ ಗೊತ್ತಿರ್ಬೆಕ,ಊರಾಗ ರೋಗ ಹಬ್ಬೆದ ಅದನ್ನ ಹ್ಯಾಂಗರಾ ಮಾಡಿ ತಡಿಬೇಕು.ಅದಕ ವೈದ್ಯರು ಬಂದಾರ ಅವ್ರೇನ ಹೇಳತಾರ ಕೇಳಿ ತಿರ್ಮಾನ ತಗೋಳೊಣ, ಏನಂತೀರಿ ಎಲ್ಲಾ
*ಎಲ್ಲರೂ* - ಆಯ್ತರಿ
*ವೈದ್ಯ-* ಎಲ್ರರಿಗೂ ನಮಸ್ಕಾರ,ನೋಡಿ ಇದು ಕಾಲರಾ ಅಶುಚಿತ್ವದಿಂದ ಹರಡುತ್ತ,ಸ್ವಚ್ಚವಾದ ಕುದಿಸಿ ಆರಿಸಿದ ನೀರು ಕುಡಿರಿ,ಮತ್ತ ನಿಮ್ಮನಿ ಮುಂದ ಸ್ವಚ್ಚಾಗಿಡಿ,ಒಳ್ಳೆ ನೀರು ಬಳಸ್ರಿ ಯಾರಿಗೆಲ್ಲ ಹುಶಾರಿಲ್ಲ ಅವರು ತೋರಸ್ಕೊಳ್ರಿ..ಇಷ್ಟ ಹೇಳಿ ೨ ಮಾತ ಮುಗಸ್ತೆನಿ ಅನ್ನಪೂರ್ಣ ಟೀಚರ್ ೨ ಮಾತ ಮಾತಾಡತಾರ.
*ಅನ್ನಪೂರ್ಣ-* ಎಲ್ಲರಿಗೂ ನಮಸ್ತೆ. ನಾನು ಊರಿಗೆ ಬಂದಾಗಲೆ ವಾತವರಣ ಗಮನಿಸಿದಿನಿ.ಕೆರೆ ನೀರಿನ ಕಲುಷಿತವೇ ಇದಕ್ಕ ಮುಖ್ಯ ಕಾರಣ.ಕೆರೆ ನೀರಲ್ಲಿ ಬಟ್ಟೆ ಒಗೆಯೋದು,ದನಕರು ಮೈತೋಳಿಯೋದು,ಬಯಲು ಶೌಚ ಮಾಡ್ತಿರಿ, ಮತ್ತದೆ ನೀರು ಕುಡಿಲಿಕ್ಕೆ ಬಳಸ್ತಿರಿ,ರೋಗ ಬರದೆ ಇರುತ್ತಾ? ಎಲ್ಲರೂ ಕೆರೆ ನೀರನ್ನು ಸ್ವಚ್ಚವಾಗಿಡಿ ಕುಡಿಯೋ ನೀರು ಮತ್ತೆ ನಮ್ಮ ಪರಿಸರ ಸ್ವಚ್ಚವಾಗಿದ್ರೆ ನಾವೂ ಆರೋಗ್ಯವಾಗಿ ಇರ್ಲಿಕ್ಕೆ ಸಾಧ್ಯ. ಇ ಬಗ್ಗೆ ಚರ್ಚಿಸಿ ತಿರ್ಮಾನ ತಗೊಳ್ರಿ.
*ಸೀತಾ-* ಅಕ್ಕೊರ ಅಲ್ರಿ ಒಗ್ಯಾಣ ಒಗಿಬಾರದು, ದನಕರ ತೊಳಿಬಾರ್ದು ಅಂದ್ರ ಹ್ಯಾಂಗ ನೀರು ಬೇಕಲ್ರಿ ಮತ್ತ ಅದಕ್ಕೂ..
*ಅನ್ನಪೂರ್ಣ-* ಹಾಂ ನೀರು ಹೊರಗಡೆ ತಂದು ಬಳಸ್ಕೊಳ್ಳಿ.
ಎಲ್ಲರೂ- ಬರೊಬ್ಬರಿ ಹಂಗೆ ಮಾಡೋಣ.
*ರಾಜೀವಯ್ಯ-* ಆಯ್ತರಪಾ ಇನ್ಮಾಲ ಯಾರೂ ಕೆರೆ ನೀರು ಗಲೀಜ ಮಾಡಬಾರದು ಮಾಡಿದವ್ರಿಗೆ ದಂಡ ಹಾಕ್ತಿವಿ. ಜೀವಜಲದ ರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರ ಶುಚ್ಚಿತ್ವ ನಮ್ಮದೆ ಕಾಯಕ ನೆನಪಿರಲಿ.
*ಎಲ್ಲರೂ-* ಹೌದೌದು.
________________________________________________________________---
ದೃಶ್ಯ-೩ *ಶಾಲಾ ಆವರಣ*
(ಅಗಷ್ಟ ೧೫ ರ ಸಡಗರದಲ್ಲಿ ರಾಜೀವಯ್ಯ,ಅನ್ನಪೂರ್ಣ, ಗಂಗಾ,ರಾಮಯ್ಯ ಶಾಲಾ ಮಕ್ಕಳು ಎಲ್ಲರೂ ಇದ್ದಾರೆ)
*ಅನ್ನಪೂರ್ಣ* - ಇಂದು ನಮ್ಮೆಲ್ಲರಿಗೂ ಎರಡೆರಡು ಸಂತೋಷ ತುಂಬಿದ ದಿನ. ಒಂದು ನಮ್ಮ ರಾಷ್ಟ್ರೀಯ ಹಬ್ಬ ಇನ್ನೊಂದು ನಮ್ಮ ಹಳ್ಳಿ ಸ್ವಚ್ಚಗ್ರಾಮ ಅಂತ ಪ್ರಶಸ್ತಿ ಪಡೆದದ್ದು ಕುಶಿ ಪಡೆದ ವಿಚಾರ. ಊರಿನ ಎಲ್ಲಾ ಗಣ್ಯರಿಗೆ ಅಭಿನಂದನೆಗಳು.
*ರಾಜೀವಯ್ಯ-* ಹೌದು ಸ್ವಚ್ಚಗ್ರಾಮವಾಗಿ ನಮ್ಮೂರು ಆಯ್ಕೆ ಆಗಿದೆ.ನಮ್ಮೂರಿನ ಹೆಮ್ಮೆಯ ಮಗಳು ಗಂಗಾ ನಮ್ಮೂರಿನ ಸ್ವಚ್ಚತೆಯ ಬಗ್ಗೆ ಸಿ.ಎಂರವರಿಗೆ ಪತ್ರ ಬರೆದಿದ್ದಳು,ಈಗ ಖುದ್ದು ಜಿಲ್ಲಾಧಿಕಾರಿಗಳೆ ಪತ್ರ ಕಳುಹಿಸಿದ್ದಾರೆ.ಇನ್ಮುಂದನೂ ಹಿಂಗ ನಮ್ಮ ಹಳ್ಳಿ ಬಂಗಾರದಂಗ ಹೊಳಿಯುತಿರಲಿ.ಇದಕ್ಕ ಸಹಕಾರ ನೀಡಿದಂತ ಅನ್ನಪೂರ್ಣ ಅಕ್ಕೋರಿಗೆ.ವೈದ್ಯರಿಗೆ ಮತ್ತ ನಿಮಗೆ ಎಲ್ಲರಿಗೂ ವಂದನೆಗಳು
(ಕುಶಿಯಿಂದ ಎಲ್ಲರೂ ಕುಣಿದಾಡುವರು,ಹಿನ್ನೆಲೆಯಲ್ಲಿ ಗೀತೆ ಕೇಳಿ ಬರುವುದು)
ಸ್ವಚ್ಚತೆಯೆಡೆಗೆ ಹಜ್ಜೆಯನ್ನಿಟ್ಟು
ಕುಣಿಯುವಾ ನಾವು ನಲಿಯುವಾ
ಮಾತೃ ಭೂಮಿಯ ಬೆಳಗುವಾ..
ಮಾತೃ ಭೂಮಿಯ ಬೆಳಗುವಾ..