ಕತೆ- ಆಶಾವಾದ
ಕತೆ- ಆಶಾವಾದ
ಮಕ್ಕಳು ಚಿರಾಡುತ್ತಿರುವುದ ಕಂಡು ಅಧ್ಯಾಪಕ ಅರವಿಂದ ಅತ್ತ ಧಾವಿಸಿದರು..ಅವರ ಆಗಮನ ಮಕ್ಕಳ ನಿಶಬ್ದತೆಗೆ ಕಾರಣವಾಯಿತು. ಸರ್ ಕತೆ ಹೇಳಿ ರಫಿಕ್ ಮೆಲ್ಲನೆ ನುಡಿದ..ಎಲ್ಲರೂ ಹುಂ ಗುಟ್ಟಿದರು..ಆಯ್ತು ಎಂದೊಪ್ಪಿದ ಅಧ್ಯಾಪಕ ಅರವಿಂದ ಕತೆ ಹೇಳಲು ಶುರುವಿಟ್ಟರು..
ಮಾಧವನೂರು ಎಂಬಲ್ಲಿ ಹಿಂದೆ ರಾಜರ ಆಳ್ವಿಕೆ ಇತ್ತು..ರಾಜ ರವಿವರ್ಮ ಪ್ರಜೆಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದ. ಒಂದು ವರ್ಷ ಮಳೆಯಾಗದೆ ಆ ಊರಿಗೆ ಬರಗಾಲ ಬಿದ್ದಿತು. ಎಲ್ಲ ರೈತರೂ ರಾಜನಲ್ಲಿಗೆ ಬಂದು ತಮ್ಮ ಅಳಲು ತೋಡಿಕೊಂಡರು.
ರಾಜ ರವಿವರ್ಮ ರಾಜ್ಯದ ಎಲ್ಲ ಪ್ರಜೆಗಳಿಗೆ ಅಗತ್ಯ ಧವಸಧಾನ್ಯಗಳ ನೀಡಿ, ಚಿಂತಿಸದಿರಿ ನಿಮ್ಮ ಕೃಷಿ ಕೆಲಸ ನೀವು ಮುನ್ನೆಡೆಸಿ. ದೈವದ ಮೇಲೆ ನಂಬಿಕೆ ಇಡಿ, ಎಂದು ಆಶಾದಾಯಕ ಮಾತುಗಳನ್ನಾಡಿ ದೈರ್ಯ ತುಂಬಿ ಕಳುಹಿಸಿದ.
ಅಂತೆಯೇ ರೈತ ಪ್ರಜೆಗಳು ಕೃಷಿ ಕೆಲಸ ಆರಂಭಿಸಿದರು, ಆದರೆ ವರುಣನ ಸುಳಿವೇ ಇಲ್ಲ.. ಇದ್ದ ಕೆರೆ ಕಟ್ಟೆಗಳು ಬಿಸಿಲ ತಾಪಕ್ಕೆ ಬತ್ತತೊಡಗಿದವು. ಜಾನುವಾರುಗಳು ಬಡವಾದವು. ಮತ್ತೆ ರಾಜನಲ್ಲಿಗೆ ಬಂದ ಪ್ರ
ಜೆಗಳಿಗೆ ರಾಜ ಮತ್ತದೆ ಮಾತು ಹೇಳಿ ಕಳಿಸಿದ್ದು ಆಯ್ತು. ದೈವದ ಇಚ್ಚೆ ಇದ್ದಂಗಾಗಲಿ ಎಂದು ರೈತರು ಕೃಷಿ ಕೆಲಸ ಮುಂದುವರೆಸಿದರು. ಇತ್ತ ದೇವಲೋಕದಲ್ಲಿ,ವರುಣ ಮೋಡಗಳ ಸಭೆ ಕರೆದಿದ್ದ ಅದರಲ್ಲಿ ಒಂದು ಕಿವುಡು ಮೋಡವು ಇತ್ತು. ಎಲ್ಲ ಮೋಡಗಳಿಗೆ ಮಳೆ ಸುರಿಸದಂತೆ ತಾಕೀತು ಮಾಡುತ್ತಿದ್ದ. ಆದರೆ ಕಿವುಡು ಮೋಡಕ್ಕೆ ಮಾತ್ರ ಕೇಳಿಸಿದ್ದು ಬೇರೆಯೆ.!
'ರಾಜ್ಯದ ರೈತರು ಬಿತ್ತಲು ಶುರುವಿಟ್ಟಿದ್ದಾರೆ ಮರೆಯದೆ ಮಳೆ ಸುರಿಸಿ' ಯಾಕೆ ಸುಮ್ಮ ನಿದ್ದಿರಿ ಎಂದು ವರುಣ ಸಿಟ್ಟಾಗಿಹನೆಂದು ಕಿವುಡು ಮೋಡ ತನ್ನೆಲ್ಲ ಅಧೀನ ಮೊಡಗಳಿಗೆ ಮಳೆ ಸುರಿಸಲು ಆಜ್ಞಾಪಿಸಿತು. ಅಂದು ಸಂಜೆ ರವಿ ಅಸ್ತವಾಗುತ್ತಲೆ ಕಾರ್ಮೋಡ ಮುತ್ತಿ ಮಾಧವನೂರಿಗೆ ಭರ್ಜರಿ ಮಳೆ ಸುರಿಯಿತು. ರೈತರ ಮುಖದಲ್ಲಿ ನಗೆ ಮೂಡಿತು. ಜಾನುವಾರುಗಳು ಮೈದುಂಬಿ ನಕ್ಕವು, ಹಸಿರ ಸಿರಿ ಮತ್ತೆ ನಳನಳಿಸಿತು.
ರಾಜ ರವಿವರ್ಮ ಹೇಳಿದ ನಂಬಿಕೆಯ ಮಾತು ನಿಜವಾಗಿತ್ತು.
ಹೇಗಿತ್ತು ಮಕ್ಕಳೆ ಕತೆ ಎಂದು ಅರವಿಂದ ಕೇಳಿದಾಗ..ಎಲ್ಲ ಮಕ್ಕಳು ಒಕ್ಕೊರಲಿನಿಂದ ತುಂಬಾ ಸೊಗಸಾಗಿದೆ ಸರ್ ಎಂದರು.
ನೀತಿ: ನಂಬಿಕೆಯೇ ದೇವರು.