Raghunandan S

Others

3.8  

Raghunandan S

Others

ಕುಬೇರ ಲೋಕ

ಕುಬೇರ ಲೋಕ

3 mins
599


ಅದೇ ದಿನ ನಿತ್ಯದ ಯಾಂತ್ರಿಕ ಬದುಕು, ಸ್ವಾರಸ್ಯ ಕಳೆದುಕೊಂಡ ಜೀವನ ಶೈಲಿ….. ಹೀಗೆ ಗೊಣಗಿಕೊಳ್ಳುತ್ತಲೆ ಅರವಿಂದ ಅಂದಿನ ರಾತ್ರಿ ಪಾಳಿ ಕೆಲಸಕ್ಕೆ ಹೋಗಲು ಸಿದ್ದನಾದ. ಈ ರಾತ್ರಿ ಪಾಳಿ ಕೆಲಸ ಅನ್ನೋದು ಇವತ್ತು ಈ ಮಾಹಿತಿ ತಂತ್ರಜ್ಞಾನ ಆದಾರಿತ ಸೇವಾ ಉದ್ಯಮದ ಲಕ್ಷಣವೇ ಆಗಿಬಿಟ್ಟಿದೆ. ಬೇರೇ ಉದ್ಯೋಗವೂ ಸಿಗುತ್ತಿಲ್ಲ, ಇದನ್ನು ಬಿಟ್ಟರೆ ಬೇರೇ ಹಣಕಾಸು ಮೂಲವು ಇಲ್ಲ ಅಂದು ಕೊಳ್ಳುತ್ತಲೇ ಎಂದಿನಂತೆ ಮನೆಯಿಂದ ಹೊರಟ.


ಅಂದು ಕೆಲಸವಂತು ಬಹಳವೇ ಹೆಚ್ಚಿತ್ತು, ಕಷ್ಟಪಟ್ಟು ನಿದ್ದೆ ತಡೆದು ಮುಗಿಸಿ ಮನೆಗೆ ಹೊರಟಾಗ, ಸಾಕಪ್ಪಾ ಎನಿಸೊ ಹಾಗಗಿತ್ತು. ಯಾವುದಾದರು ನಿದಿ ಸಿಗಬೇಕು ಇಲ್ಲ ಆಕಾಶದಿಂದ ದುಡ್ಡು ಸುರಿಯಬೇಕು ಅಥವಾ ಮನೆಯ ಗಿಡದಲ್ಲಿ ದುಡ್ಡು ಬಿಡಬೇಕು, ಆಗ ನೆಮ್ಮದಿಯಾಗಿ ಈ ಕೆಲಸ/ಉದ್ಯೋಗ ಬಿಟ್ಟು ಆರೋಗ್ಯವಾಗಿ ಜೀವನ ಮಾಡಬಹುದು ಅನ್ನೋ ಕಲ್ಪನೆ ಬಂದು, ಸ್ವಲ್ಪ ನಗೆ ಬಂದ ಹಾಗಯ್ತು.


ಮನೆಗೆ ಬಂದು ಸ್ವಲ್ಪ ತಿಂಡಿ ತಿಂದು ಮಲಗಿದವನಿಗೆ ಯತಾಪ್ರಕಾರ ಅರೆನಿದ್ದೆ, ತಲೆನೋವು. ತಥ್ ಎಂದು ಎದ್ದು ಸ್ನಾನ ಮಾಡಿ ಹೊರಗೆ ಅಡ್ಡಾಡಿ ಬರಲು ಹೋದ ಅರವಿಂದ. ಹೊರಗೆ ರಸ್ತೆಯಲ್ಲಿ ತಿರುಗಾಡುತ್ತಾ ಬರಬೇಕಾದರೆ, ಯಾರೋ ಒಬ್ಬ ಕರಪತ್ರಗಳನ್ನು ಹಂಚುತ್ತಿರುವುದು ನೋಡಿದ. ಆತ ಅರವಿಂದನಿಗೂ ಒಂದು ಕೊಟ್ಟು ಹೋದ. ಅರವಿಂದ ಏನದು ಅಂತ ನೋಡಿದರೆ “ಧನಕನಕಗಳ ಸಂಪದ್ಬರಿತ ಲೋಕ ಬೇಕೇ?” ಎಂದು ದೊಡ್ಡದಾಗಿ ಕಂಡಿತು. ಚಕ್ಕನೆ ಹಂಚುತ್ತಿದ್ದವನನ್ನು ನೋಡಿದ. ಆತ ಅಷ್ಟರಲ್ಲಾಗಲೆ ಹಂಚುವಿಕೆ ಮುಗಿಸಿ ಸೈಕಲ್ ಏರುತ್ತಿದ್ದ. ಈಗ ಅರವಿಂದ ಮುಂದೆ ಓದಿದ. ಅದರಲ್ಲಿ ಮುಂದೆ ಹೀಗೆ ಬರೆದಿತ್ತು.

ಧನಕನಕಗಳಿಂದ ಕೂಡಿದ ಲೋಕದಲ್ಲಿ ವಿಹರಿಸಬೇಕೆ? ಐಷ್ವರ್ಯದ ವಿವಿದ ಬಣ್ಣಗಳನ್ನು, ಅದರ ನಾನಾ ಸೊಬಗನ್ನು ಅಸ್ವಾದಿಸಬೇಕೇ? ಹಾಗಾದಲ್ಲಿ, ಕೆಳಗೆ ಕೊಟ್ಟಿರುವಂತೆ ಮಾಡಿ ಎಂದಿತ್ತು. ಕೆಳಗೆ:

ಈ ಕರಪತ್ರವನ್ನು ಕೇವಲ ೨೧ ಪ್ರತಿ ಮಾಡಿಸಿ ಜನರಿಗೆ ಹಂಚುವುದು, ಹಾಗು ಕೆಳಗಿನ ಮಂತ್ರವನ್ನು ಕುಬೇರ ಮೂಲೆಯಲ್ಲಿ ಕುಳಿತು ಜಪಿಸುವುದು ಇದರಿಂದ ವಿಸ್ಮಯಕಾರಿಯಾದ ಸಂಪತ್ತಿನ ಲೋಕದ ಸಾಯುಜ್ಯವನ್ನು ಅನುಬವಿಸುವಿರಿ. ಮಂತ್ರ; “ಓಂ ಹ್ರೀಂ ಶ್ರೀಂ ಕುಭೇರಾಯಾನಮಃ”


ಇಷ್ಟೆ ಇದ್ದದ್ದು. ಅರವಿಂದನಿಗೆ ನಗೆ ಬರಲು ಶುರುವಾಯ್ತು. ಇದೇನು, ಮಂತ್ರ ಹೇಳಿದರೆ ಮಾವಿನಕಾಯಿ ಉದುರುವುದೇ. ಅದರಲ್ಲೂ ಸಿರಿತ ಇಷ್ಟು ಸುಲಭವೇ. ಇದು ಮಾಮುಲಿಯಾಗಿ ಅಷ್ಟು ಪ್ರತಿ ಮಾಡಿ ಹಂಚಿ, ಹಾಗೆ ಹೀಗೆ ಎಂದು ಹೇಳುವ ಕರಪತ್ರದ ತರಹದ್ದೆ ಅಂದುಕೊಂಡ. ಆದರೂ, ಅಂತಹ ಕರಪತ್ರದಲ್ಲಿ ಓದಿದವರು ಪ್ರತಿ ಮಾಡಿಸಿ ಹಂಚದಿದ್ದರೆ ಎನೇನೋ ಕೆಟ್ಟದಾಗುತ್ತೆ ಎನ್ನುವ ಬೆದರಿಕೆ ಇರುತ್ತೆ, ಇಲ್ಲಿ ಅಂತಹ ಯಾವುದೇ ಬೆದರಿಕೆ ಇಲ್ಲ. ನಿಮಗೆ ಬೇಕಾ ಮಾಡಿ, ಇಲ್ಲ ಬಿಡಿ ಅನ್ನೋ ಹಾಗಿದೆ ಒಕ್ಕಣೆ. ಅಲ್ಲದೆ, ಸಾಮನ್ಯವಾಗಿ ನೂರು/ಸಾವಿರ ಪ್ರತಿಗಳು ಮಾಡಿಸಿ ಎನ್ನುವ ಕರಪತ್ರಗಳನ್ನು ನೋಡಿದ್ದೇನೆ. ಆದರೆ ಇದೇನು, ಕೇವಲ ೨೧ ಪ್ರತಿ ಸಾಕು ಎಂದಿದೆ ಅಂದುಕೊಂಡ. ಇನ್ನೊಂದು ಅಂಶವೆಂದರೆ ಹೀಗೆ ಮಾಡಿದವರಿಗೆ ಹಾಗಯ್ತು ಹೀಗಾಯ್ತು ಅಂತ ಏನೇನೋ ಇರುತ್ತೆ. ಇಲ್ಲಿ ಅಂತಹದ್ದು ಏನೂ ಇಲ್ಲ. ಅರವಿಂದನಿಗೆ ಕುತೂಹಲ ಶುರುವಾಯ್ತು.


ಇಷ್ಟಕ್ಕೂ ಬರಿ ೨೧ ಪ್ರತಿ ಅಂದರೆ ನೆರಳಚ್ಚು ಮಾಡಿಸಿ ಹಂಚಬಹುದಲ್ಲ, ಇದರಲ್ಲಿ ಖರ್ಚೇನೂ ಇಲ್ಲ, ನೋಡೋಣ ಎಂಬ ಕುತೂಹಲ ಉಂಟಾಯಿತು. ಅಲ್ಲೇ ಇದ್ದ ಅಂಗಡಿಯಲ್ಲಿ ನೆರಳಚ್ಚು ಮಾಡಿಸಿಕೊಂಡು, ತಾನು ಕೂಡ ಮನೆಗೆ ಬರ್ತಾ ಸಿಕ್ಕವರ ಕೈಗಳಲ್ಲಿ ಒಂದೊಂದು ಪ್ರತಿ ಕೊಟ್ಟು ಬಂದ. ತನಗೆ ಬಂದ ಪ್ರತಿಯನ್ನು ಜೋಪಾನವಾಗಿ ಎತ್ತಿಟ್ಟುಕೊಂಡ. ಮನೆಗೆ ಬಂದು, ಊಟ ಮಾಡಿ ಹಾಸಿಗೆಯಲ್ಲಿ ಕೂತು ತನ್ನ ಪ್ರತಿಯನ್ನು ತೆಗೆದು ಕುಬೇರ ಮೂಲೆಯ ಕಡೆಗೆ ತಿರುಗಿ ಓದತೊಡಗಿದ. ಸುಮಾರು ಇಪ್ಪತ್ತು ಸಲ ಓದಿರಬೇಕು, ಕಣ್ಣು ಕತ್ತಲೆಯಾದ ಹಾಗಾಯ್ತು. ಶ್ವಾಸಕ್ರಿಯೆಯಲ್ಲಿ ಬದಲಾವಣೆಯಾದ ಹಾಗಾಯ್ತು. ಮತ್ತೆ ಹಗುರವಾದ ಅನುಭವ. ಎದುರುಗಡೆ ಗೋಡೆಯಲ್ಲಿ ಕಿಂಡಿ ಕಾಣಿಸುತ್ತಾ ಇದೆ. ಅರೆರೇ ದೊಡ್ಡದಾಯ್ತು ಕಿಂಡಿ. ಈಗ ಅರವಿಂದ ವಿಸ್ಮಯ ಪಡುತ್ತಾ ಇರುವಾಗ, ದೊಡ್ಡ ದ್ವಾರದ ಹಾಗೆ ನಿರ್ಮಾಣ ಆಗಿತ್ತು, ಆಕಡೆ ಒಂದು ರೀತಿಯ ಮಂದ ಪ್ರಕಾಶ. ಏನಾದರಾಗಲಿ ನೋಡೆಬಿಡುವ ಎಂದು ಅರವಿಂದ ಒಳಗೆ ನುಗ್ಗಿಬಿಟ್ಟ. ಒಳಗೆ ನೋಡಿದರೆ, ಅದ್ಭುತ ಮಾಯಾಲೋಕ. ಎಲ್ಲಿ ನೋಡಿದರು ಚಿನ್ನ, ವಜ್ರ, ವೈಡೂರ್ಯ. ಗಿಡ, ಮರ, ಸಸ್ಯ ಎಲ್ಲವೂ ವಜ್ರ ಖಚಿತ. ಮೊದಮೊದಲು ಹಿಂಜರಿಕೆಯಾದರೂ, ಮುಂದೆ ಅರವಿಂದ ಹೊಂದಿಕೊಳ್ಳುತ್ತಾ ಹೋದ. ಅರೆರೇ, ಏನಪ್ಪಾ ಇದು ಎಂತಾ ಕಡೆಗೆ ಬಂದೆ ಅಂದುಕೊಂಡ ಅರವಿಂದ. ಸಾದ್ಯವಾದಷ್ಟು ಇಲ್ಲಿನ ಸಂಪತ್ತನ್ನ ಎತ್ತಿಕೋಬೇಕು ಎಂದು ವಜ್ರ, ಮಾಣಿಕ್ಯಗಳ ಗುಡ್ಡಗಳ ಕಡೆಗೆ ಹೋದ. ಅದರ ವೈಭವ, ಅದರ ದೃಶ್ಯ ಸೌಂದರ್ಯ ಮೈದುಂಬಿ ಅನುಭವಕ್ಕೆ ಬಂದಿತು. ಇದು ಕನಸಲ್ಲ, ನಾನು ಇದರ ಎಲ್ಲ ದೃಶ್ಯಗಳನ್ನು ಕಣ್ಣಿನಲ್ಲಿ ದಾಖಲಿಸಿಕೊಳ್ಳುತ್ತಿದ್ದೇನೆ, ಮನಃಪೂರ್ವಕ ಅನುಭವಿಸುತ್ತಿದ್ದೇನೆ ಅಂತಾ ಏನೇನೋ ಹೇಳಿಕೊಳ್ಳುತ್ತಾ ಚಿನ್ನ, ಬೆಳ್ಳಿ ಖನಿಜಗಳನ್ನು ಸವರಿ ಅನಂದಿಸಿದ. ಅಷ್ಟರಲ್ಲೇ ತನಗೆ ಕರಪತ್ರ ಹಂಚಿದವನೂ ಅತನಿಗೆ ಕಂಡ. ಅವನೂ ಹೀಗೆಯೇ ವಿಹರಿಸುತ್ತಾ ಇದ್ದ, ಆದರೇ ಏನೂ ಮಾತಾಡಲಿಲ್ಲ. ಅರವಿಂದ ಸ್ವಲ್ಪ ಹೊತ್ತು ವಿಹರಿಸುತ್ತಾ ಇದ್ದಮೇಲೆ, ಏನಾದರು ತೆಗೆದುಕೊಳ್ಳೋಣ ಎಂತ ಯೋಚನೆ ಬಂತು, ಹಾಗೆಯೇ ನಗುವು ಬಂತು. ಈ ವಜ್ರ, ವೈಡೂರ್ಯ ಎಲ್ಲ ಕೇವಲ ಕಲ್ಲುಗಳು ಅಷ್ಟೆ, ಚಿನ್ನ ಬೆಳ್ಳಿ ಎಲ್ಲ ಕೇವಲ ಖನಿಜ ಅಷ್ಟೆ. ಮಣ್ಣು ಕಲ್ಲುಗಳಿಗು ಇದಕ್ಕು ಏನೂ ವ್ಯತ್ಯಾಸ ಅನಿಸತೊಡಗಿತು. ಇದೇನು ವೈರಾಗ್ಯ ಬಂದುಬಿಟ್ಟಿತೇ ಅಂದುಕೊಂಡ. ಯಾವುದು ಬೇಕೆಂದು ಹಂಬಲಿಸಿದ್ದನೋ ಅದರ ಮೇಲೆ ಮೋಹ ಬರುತ್ತಿಲ್ಲವಲ್ಲ, ಏನಾಯ್ತು, ಏಕೆ ಹೀಗೆ ಅಂದುಕೊಂಡ. ಹೊಟ್ಟೆ ತುಂಬಿದ ಮೇಲೆ ಊಟ ಮತ್ತೆ ಮತ್ತೆ ಮಾಡಲಾಗದು ಎನ್ನಿಸತೊಡಗಿತು. ಅಷ್ಟರಲ್ಲಿ ಎದುರಲ್ಲಿ ಕಿಂಡಿ ಕಾಣಿಸತೊಡಗಿತು. ಒಂದು ತೃಪ್ತಿಯ ಮುಗುಳ್ನಗೆಯೊಂದಿಗೆ ಆ ಕಿಂಡಿಯಲ್ಲಿ ನಡೆದ.


“ಏನೋ ಇದು, ಇವತ್ತು ನೈಟ್ ಶಿಫ಼್ಟ್ ಇಲ್ವಾ. ಕಛೇರಿಗೆ ಹೋಗೊದಿಲ್ವಾ ಇವತ್ತು. ಕೂತುಕೊಂಡೆ ತೂಕಡಿಸುತ್ತಾ ಇದ್ದೀಯಾ” ಅಂತ ತಾಯಿ ಎಬ್ಬಿಸುತ್ತಿದ್ದರು. ಒಹ್, ಹಾಗಾದರೆ ಇಷ್ಟು ಹೊತ್ತು ಕೂತುಕೊಂಡೆ ನಿದ್ದೆ ಮಾಡಿ ಬಿಟ್ಟಿದ್ದೆನಾ ಅಂದುಕೊಂಡು ಎದ್ದ. ಅಯ್ಯೋ, ಹಾಗದ್ರೆ ನಾನು ಕಂಡಿದ್ದು ಕನಸಾ. ಆ ಕುಬೇರ ಮಂತ್ರ ಹೇಳುತ್ತಾ ಇದ್ದಾಗ ಹಾಗೆಯೇ ನಿದ್ದೆ ಹೋಗಿದ್ದೆನಾ ಅಂದುಕೊಳ್ಳುತ್ತಾ ಸಿದ್ದನಾಗಿ ಹೊರಟ. ಎಷ್ಟೇ ಯೋಚಿಸಿದರೂ ಯಾಕೋ ಅದು ಕನಸಲ್ಲ, ನಿಜವೇ ಅಂತ ಅನ್ನಿಸುತ್ತಿತ್ತು. ಕಣ್ಣುಗಳು, ಮನಸ್ಸು ಆ ವೈಭವವನ್ನು ದಾಖಲಿಸಿತ್ತು, ಮತ್ತೆ ಕನಸಾಗಿರಲು ಹೇಗೆ ಸಾದ್ಯ ಅನ್ನಿಸುತ್ತಿತ್ತು. ಏನಾದರಾಗಲಿ ಎಂದು ಹೊರಟವನಿಗೆ, ಇನ್ನೋಮ್ಮೆ ಅದೆ ಒಕ್ಕಣೆ ಇರುವ ಕರಪತ್ರ ಯಾರೋ ಕೈಗಿಟ್ಟು ನಡೆದರು. ಅರವಿಂದ ನೊಡುತ್ತಿರುವಂತೆ ಅದರಲ್ಲಿ ಅಕ್ಷರಗಳು ಎಲ್ಲವೂ ಕಲಸಿದಂತಾಗಿ, ದಾರಿ ಯಾವುದಯ್ಯ ವೈಕುಂಟಕ್ಕೆ ಎಂದು ಕಾಣಿಸಿದಂತಾಯಿತು. ನಗುತ್ತಾ ಹೊರಟ ಅರವಿಂದ.


ಓದುಗರೆ, ನಿಮಗೆ ಇದೇನು ಇಂತಹ ಅನುಭವ ಸಾದ್ಯತೆ ಇದೆಯಾ ಅನ್ನಿಸುತ್ತಾ? ಹಾಗದರೆ ನೀವೂ ಒಮ್ಮೆ ಕರಪತ್ರದಲ್ಲಿ ಹೇಳಿರುವಂತೆ ಮಾಡಿ ನೋಡಿ ಮತ್ತೆ…..


Rate this content
Log in