STORYMIRROR

Leela bantaiah

Others

4  

Leela bantaiah

Others

ಹಬ್ಬಗಳ ನಾಡಿನಲ್ಲಿ! ಹಬ್ಬಗಳ ಅಧಿಪತ್ಯ!!

ಹಬ್ಬಗಳ ನಾಡಿನಲ್ಲಿ! ಹಬ್ಬಗಳ ಅಧಿಪತ್ಯ!!

9 mins
248


     ಸಂಸ್ಕೃತಿ, ಸಂಪ್ರದಾಯ ಭರಿತವಾದ ನಮ್ಮ ದೇಶದಲ್ಲಿ ಧಾರ್ಮಿಕ ಹಬ್ಬಗಳಿಗೆ ವಿಶೇಷವಾದ ಪ್ರತ್ಯೇಕವಾದ ಸ್ಥಾನವಿದೆ ಹಾಗೂ ಹಬ್ಬಗಳ ಅಧಿಪತ್ಯದ ಸಾರ್ವಭೌಮತ್ವವಿದೆ ಎಂದರೆ ತಪ್ಪಗಲಾರದು. ವರ್ಷದ 365 ದಿನವೂ ಒಂದಲ್ಲ ಒಂದು ಕಡೆ ಹಬ್ಬ, ಜಾತ್ರೆ, ವ್ರತ, ಅಮಾವಾಸ್ಯೆ, ಹುಣ್ಣಿಮೆ,ಆರಾಧನೆಯಂತಹ ಧಾರ್ಮಿಕ ಆಚರಣೆಗಳು ನಡೆಯುತ್ತಲೇ ಇರುತ್ತವೆ. 
         

     ನಮ್ಮ ಪೂರ್ವಜರು ದಿನ ನಿತ್ಯದ ಒತ್ತಡಗಳಿಂದ ಹೊರಬರಲು, ಪೌರಾಣಿಕ ಹಿನ್ನೆಲೆಗಾಗಿ, ಆದರ್ಶ ವ್ಯಕ್ತಿಗಳ ಸ್ಮರಣೆಗಾಗಿ, ಪ್ರಕೃತಿಗೆ ಕೃತಜ್ಞತೆ ಸಲ್ಲಿಸಲು ಶ್ರದ್ಧಾ ಭಕ್ತಿಗಳಿಂದ, ಕ್ರಮಬದ್ದವಾಗಿ ಪದ್ದತಿಗಳಿಂದ, ವಿಧಿ ವಿಧಾನಗಳಿಂದ ಹಬ್ಬಗಳನ್ನು ಆಚರಿಸಬೇಕೆಂದು ತಿಳಿಸಿಕೊಟ್ಟಿದ್ದಾರೆ. 

    ಪ್ರಕೃತಿಯ ಭಾಗವಾಗಿರುವ ನಾವು, ಪ್ರಕೃತಿಯಿಂದ ಪ್ರತಿನಿತ್ಯ ಉಪಯೋಗಗಳನ್ನು ಪಡೆದುಕೊಳ್ಳುವ ನಾವು, ಪ್ರಕೃತಿಯ ಸಹಜವಾದ ಬದಲಾವಣೆಗಳನ್ನು ಸಂಭ್ರಮಿಸುತ್ತಾ ಭಕ್ತಿಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುವಂತೆ ಮಾಡಿದ್ದಾರೆ‌. 
     
       ಬೆಳಕನ್ನು ನೀಡೋ ಸೂರ್ಯನಲ್ಲಿ, ದಾಹವನ್ನು ತಣಿಸೊ ನೀರಿನಲ್ಲಿ, ಉಸಿರಾಡಲು ಗಾಳಿಯನ್ನು ಒದಗಿಸುವ ಮರಗಿಡಗಳಲ್ಲಿ, ಆಹಾರವನ್ನು ಕೊಡೊ ಭೂಮಿಯಲ್ಲಿ ದೇವರನ್ನು ಕಾಣುತ್ತಾ ಪೂಜಾ ವಿಧಿವಿಧಾನಗಳ ಮೂಲಕ ಧನ್ಯವಾದಗಳನ್ನು ಹೇಳುವ ದಿನವನ್ನೂ ಸಹ ಹಬ್ಬವನ್ನಾಗಿ ಆಚರಿಸುತ್ತೇವೆ. 
          
     ಕೇವಲ ಪ್ರಕೃತಿಯ ಬದಲಾವಣೆಯನ್ನು ಸಂಭ್ರಮಿಸದೆ ಒಂದೊಂದು ಹಬ್ಬವು ಋತುಮಾನಗಳಿಗನುಣವಾಗಿ ಅದರ ಗುಣಧರ್ಮವನ್ನು ವೈಜ್ಞಾನಿಕವಾಗಿಯೂ ಕಂಡುಕೊಳ್ಳಬಹುದಾಗಿರುವುದು ನಮ್ಮ ಸಂಸ್ಕೃತಿಯ ಜಾಣ್ಮೆ ಮತ್ತು ವೈಶಿಷ್ಟ್ಯವಾಗಿದೆ.

     ವಿಜ್ಞಾನಕ್ಕನುಣವಾಗಿಯೇ ಸಂಪ್ರದಾಯ ಮಾಡಲಾಗಿದೆಯೋ ಅಥವಾ ಪ್ರತಿಯೊಂದು ಸಂಪ್ರದಾಯಕ್ಕೂ ತನ್ನದೇ ಆದ ವಿಜ್ಞಾನ ಇದೆಯೋ , ಇರುವಂತೆ ಭಾಸ ಸೃಷ್ಟಿಸಿರುವುದು ನಮ್ಮ ಪೂರ್ವಜರ ಬುದ್ಧಿವಂತಿಕೆಯಾಗಿದೆ. 
           
      ಸಂಪ್ರದಾಯ ಆಚರಿಸುವವರಿಗೆ ಪೌರಣಿಕ ಹಿನ್ನೆಲೆಯು ಹಬ್ಬವನ್ನು ಆಚರಿಸಲು ಕಾರಣವಾದರೆ ವೈಜ್ಞಾನಿಕ, ವೈಚಾರಿಕತೆಯನ್ನು ನಂಬುವವರಿಗೆ ವಿಜ್ಞಾನ ಸಹಿತವಾಗಿಯೂ ಕಾರಣ ನೀಡಿ ಅವರು ಸಹ ಹಬ್ಬದಲ್ಲಿ ಭಾಗಿಯಾಗುವಂತೆ ಮಾಡುವುದು ನಮ್ಮ ಹಬ್ಬಗಳು.
         
     ಹಬ್ಬ ಎಂದಾಕ್ಷಣ ಮನೆಯ ವಾತಾವರಣವೇ ಬದಲಾಗಿ ಹೋಗುತ್ತದೆ, ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ, ಹಬ್ಬಕ್ಕೆ ಪೂರ್ವ ತಯಾರಿ ಮಾಡಿಕೊಂಡು, ಹಬ್ಬದ ದಿನ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ಉತ್ಸಾಹ ಲವಲವಿಕೆಯಿಂದ ಮನೆಮಂದಿ ಎಲ್ಲಾ ಸೇರಿ ವಿಶೇಷ ಭಕ್ಷ್ಯ ಭೋಜನಗಳನ್ನು ತಯಾರಿಸಿ ಸವಿಯುವುದು ಕೂಡ ನಾಲಿಗೆಗೂ ,ಹೊಟ್ಟೆಗೂ, ಮನಸ್ಸಿಗೂ ಸಂತೃಪ್ತಿಯನ್ನು ಕೊಡುತ್ತದೆ.
           
     ನಮ್ಮ ದೇಶದ ಒಂದೊಂದು ರಾಜ್ಯಗಳಲ್ಲಿಯೂ ಹಬ್ಬಗಳ ಹೆಸರು, ಪದ್ದತಿ, ಆಚರಣೆಗಳು ಬೇರೆ ಬೇರೆಯಾಗಿದ್ದರೂ ಮೂಲ ಆಶಯ ಒಂದೇ ಆಗಿರುತ್ತದೆ. ನಾನು ಈ ಮೊದಲೇ ಹೇಳಿದಂತೆ ನಮ್ಮ ದೇಶದಲ್ಲಿ 365 ದಿನಗಳಲ್ಲೂ ಒಂದಲ್ಲ ಒಂದು ಕಡೆಯಲ್ಲಿ ಹಬ್ಬಗಳು ತಮ್ಮ ಅಧಿಪತ್ಯವನ್ನು ಸಾರಿವೆ. ಋತುಮಾನಗಳಿಗನುಗುಣವಾಗಿ ಪ್ರಸಿದ್ಧಿಯಾಗಿರುವ ಹಬ್ಬಗಳು ಯಾವುದೆಲ್ಲಾ ಇದೆ ಎಂಬುದನ್ನು ನೋಡುವ. 

 * ಮೊದಲಿಗೆ ವಸಂತ ಋತುವಿನ ಹಬ್ಬಗಳು : 
                ಯುಗಾದಿ, ರಾಮನವಮಿ, ವಸಂತ ನವರಾತ್ರಿ, ಚಿತ್ರ ಪೂರ್ಣಿಮಾ, ಅಕ್ಷಯ ತೃತೀಯ, ವೈಶಾಖ ಶುಕ್ಲ ಪಂಚಮಿ, ವೈಶಾಖ ಶುಕ್ಲ ದಶಮಿ, ನರಸಿಂಹ ಜಯಂತಿ, ವೈಶಾಖ ಪೂರ್ಣಿಮಾ ಇವಿಷ್ಟು ವಸಂತ ಋತುವಿನಲ್ಲಿ ಬರುವ ಚೈತ್ರ ಮತ್ತು ವೈಶಾಖ ಮಾಸದಲ್ಲಿ ಆಚರಿಸುವ ಹಬ್ಬಗಳಾಗಿವೆ. 
    
      ಯುಗಾದಿಯನ್ನು ಬ್ರಹ್ಮ ದೇವರು ಸೃಷ್ಟಿಯನ್ನು ಆರಂಭಿಸಿದ ದಿನ ಮತ್ತು ಪ್ರಕೃತಿಯ ಬದಲಾವಣೆಯ ಚೈತ್ರಮಾಸದ ಮೊದಲ ದಿನವೆಂದು ವರ್ಷದ ಪಂಚಾಂಗವನ್ನು ಪೂಜಿಸಿ, ಬೇವು ಬೆಲ್ಲ ತಿಂದು ಆಚರಿಸಿದರೆ , 

    ರಾಮನವಮಿಯನ್ನು ಶ್ರೀರಾಮರು ಜನ್ಮ ತಾಳಿದ ದಿನವನ್ನು ಶ್ರೀ ರಾಮನವಮಿಯನ್ನಾಗಿ ಆಚರಿಸಲಾಗುತ್ತದೆ. 

   ವಸಂತ ನವರಾತ್ರಿಯನ್ನು ಚೈತ್ರ ಶುಕ್ಲ ಪಾಡ್ಯಮಿಯಿಂದ ನವಮಿಯವರೆಗೂ ಕೆಲವರು ಮಾತ್ರ ಆಚರಿಸುತ್ತಾರೆ. 
         
      ಚಿತ್ರ ಪೂರ್ಣಿಮೆಯು ಕರಗದ ಹುಣ್ಣಿಮೆಯೆಂದು ಹಲವು ಊರುಗಳಲ್ಲಿ ಪ್ರಸಿದ್ಧಿಯಾಗಿದ್ದರೆ,

   ಅಕ್ಷಯಾ ತೃತೀಯವು ತ್ರೇತಾಯುಗ ಪ್ರಾರಂಭವಾದ ದಿನ ಎಂದೇ ಪ್ರಸಿದ್ಧಿಯಾಗಿದೆ.

    ವೈಶಾಖ ಶುಕ್ಲ ಪಂಚಮಿಯು ಶ್ರೀ ಶಂಕರ ಭಾಗವತ್ಪಾದರ ಜಯಂತಿಯಾಗಿದೆ, ವೈಶಾಖ ಶುಕ್ಲ ದಶಮಿಯಲ್ಲಿ ವೆಂಕಟೇಶ ಕಲ್ಯಾಣೋತ್ಸವ ನಡೆಸಲಾಗುತ್ತದೆ. 
   
   ನರಸಿಂಹ ಜಯಂತಿಯು ಹಿರಣ್ಯಕಶಿಪುವಿನ ಸಂಹಾರಕ್ಕಾಗಿ ಸಾಕ್ಷಾತ್ ನಾರಾಯಣ ನರಸಿಂಹರಾಗಿ ಅವತರಿಸಿದ ದಿನವಾಗಿದೆ. 

   ವೈಶಾಖ ಪೂರ್ಣಿಮವು ಉದುಕುಂಭದಾನಕ್ಕೆ ಮತ್ತು ವ್ಯಾಸ ಪೂರ್ಣಿಮೆ ಎಂದು ಪ್ರಸಿದ್ಧವಾಗಿದೆ. 
       
* ಗ್ರೀಷ್ಮ ಋತುವಿನ ಹಬ್ಬಗಳು : 
               ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸದಲ್ಲಿ ಕಾರ ಹುಣ್ಣಿಮೆ, ಮಣ್ಣೆತ್ತಿನ ಅಮಾವಾಸ್ಯೆ, ದಕ್ಷಿಣಾಯನ ಪುಣ್ಯಕಾಲ ಆಚರಿಸಿದರೆ ಇದೇ ಋತುವಿನಲ್ಲಿ ಬರುವ ಮತ್ತೊಂದು ಮಾಸವಾದ ಆಷಾಡದಲ್ಲಿ ಆಷಾಡ ಬಹುಳ ಅಮಾವಾಸ್ಯೆ, ಆಷಾಡ ಶುಕ್ರವಾರಗಳು, ಏಕಾದಶಿಯನ್ನು ಆಚರಿಸಲಾಗುತ್ತದೆ. 
        
     ಕಾರ ಹುಣ್ಣಿಮೆಯು ಸಾವಿತ್ರಿ ಸೌಭಾಗ್ಯ ಪಡೆದದಿನ. ಹೆಣ್ಣು ಮಕ್ಕಳು ಉಪವಾಸವಿದ್ದು ಆಲದ ಮರಕ್ಕೆ ಪೂಜೆ ಸಲ್ಲಿಸುವ ದಿನವಾಗಿದೆ.

    ಮಣ್ಣೆತ್ತಿನ ಅಮಾವಾಸ್ಯೆಯು ರೈತರ ಹಬ್ಬವಾಗಿದೆ. ರೈತರ ಜೊತೆಗಾರನಾದ ಬಸವನಿಗೆ ಕೃತಜ್ಞತೆ ಸಲ್ಲಿಸಲು ಈ ಹಬ್ಬವನ್ನು ಮಣ್ಣಿನ ಮಕ್ಕಳು ಆಚರಿಸುತ್ತಾರೆ. 
     
     ದಕ್ಷಿಣಾಯನ ಪುಣ್ಯಕಾಲದಲ್ಲಿ ಸಕಲ ಜಲಾಶಯಗಳಲ್ಲಿಯೂ ಗಂಗಾದೇವಿಯ ಸಾನಿಧ್ಯವಿರುವುದರಿಂದ ಸ್ನಾನಕ್ಕೆ ಮಹತ್ವ ಕೊಡಲಾಗುತ್ತದೆ .ಗಂಗಾ ಪೂಜೆ, ನೈವೇದ್ಯ ಹಾಗೂ ಪಿತೃತರ್ಪಣಕ್ಕೆ ಪ್ರಸಿದ್ಧಿಯಾಗಿದೆ. 

   ಆಷಾಡ ಬಹುಳ ಅಮಾವಾಸ್ಯೆಯಂದು ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ. 
    
      ಆಷಾಡ ಶುಕ್ರವಾರಗಳಂದು ಹೆಣ್ಣು ದೇವರಗಳ ದರ್ಶನ ಮಾಡಿ ಪೂಜೆ ಸಲ್ಲಿಸುವುದು ವಾಡಿಕೆ ,

    ಆಷಾಡ ಶುಕ್ಲ ಏಕಾದಶಿಯಂದು ಗಾಳಿಪಟವನ್ನು ಹಾರಿಸುವುದು ರೂಡಿ. ಇದು ಪ್ರಥಮೈಕಾದಶಿ ಎಂದು ಪ್ರಸಿದ್ಧಿ ಮತ್ತು ವಿಷ್ಣು ಮಲಗುವ ದಿನ. 

* ವರ್ಷ ಋತುವಿನ ಹಬ್ಬಗಳು : 
                  
      ವರ ಮಹಾಲಕ್ಷ್ಮಿ ವ್ರತ, ಶ್ರಾವಣ ಶನಿವಾರಗಳು, ನಾಗರ ಚೌತಿ, ನಾಗರ ಪಂಚಮಿ, ಸಿರಿಯಾಳ ಷಷ್ಠಿ, ಶ್ರಾವಣಿ (ಶ್ರಾವಣ ಮಾಸದ ಹುಣ್ಣಿಮೆಯ ದಿನ ಉಪಾಕರ್ಮವನ್ನು ಆಚರಿಸುವ ದಿನ), ಗಾಯತ್ರಿ ಪ್ರತಿಪದಾ (ಉಪಾಕರ್ಮದ ಮರುದಿನ ಸಹಸ್ರ ಗಾಯತ್ರಿಯನ್ನು ಮಾಡುವ ವಿಧಿ), ಕೃಷ್ಣ ಜನ್ಮಾಷ್ಟಮಿ, ಸ್ವರ್ಣಗೌರಿ ವ್ರತ, ಗಣೇಶ ಚತುರ್ಥಿ, ಋಷಿ ಪಂಚಮಿ(ಸ್ತ್ರೀಯರು ಋತುದೋಷದ ಪರಿಹಾರಕ್ಕಾಗಿ ಸಪ್ತ ಋಷಿಗಳನ್ನು ಪೂಜಿಸುವುದು, ತಾಯಿಯ ಪರವಾಗಿ ಗಂಡು ಮಕ್ಕಳು ಈ ವ್ರತವನ್ನು ಆಚರಿಸುತ್ತಾರೆ), ಅನಂತಪದ್ಮನಾಭ ಪೂಜೆ, ಅನಂತನ ಹುಣ್ಣಿಮೆ, ಭಾದ್ರಪದ ಬಹುಳ ಈ ಹಬ್ಬಗಳೆಲ್ಲವನ್ನೂ ಶ್ರಾವಣದಿಂದ ಭಾದ್ರಪದದವರೆಗಿರುವ ವರ್ಷ ಋತುವಿನಲ್ಲಿ ಆಚರಿಸಲಾಗುತ್ತದೆ. 
           
    ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯ ಹಿಂದಿನ ಶುಕ್ರವಾರದ ದಿನ ವರ ಮಹಾಲಕ್ಷ್ಮಿ ವ್ರತದ ಪೂಜೆಯನ್ನ ಗೋಧೂಳಿ ಲಗ್ನದಲ್ಲಿ ಮಾಡಬೇಕೆಂದು ವಿಧಿ. 

   ಪ್ರತಿ ಶ್ರಾವಣ ಶನಿವಾರಗಳು ತಿರುಪತಿಯ ಶ್ರೀನಿವಾಸನನ್ನು ಆರಾಧಿಸಲು ಮೀಸಲು ,

    ನಾಗರ ಚೌತಿಯಂದು ಸ್ತ್ರೀಯರು ಸ್ನಾನ ಮಡಿ ಮಾಡಿ ತಂಬಿಟ್ಟು ಚಿಗಳಿಗಳಿಂದ ನಾಗರ ಹುತ್ತಕ್ಕೆ ತನಿ ಎರೆಯುತ್ತಾರೆ. 

   ಪಂಚಮಿಯು ಸಹೋದರರಿಗಾಗಿ ಆಚರಿಸಲ್ಪಡುವ ಹಬ್ಬವಾಗಿದೆ . ನಾಗ ದೇವರಲ್ಲಿ ಸಹೋದರರ ಸುಖ ಸಂತೋಷಕ್ಕಾಗಿ ಸಹೋದರಿಯರು ಪ್ರಾರ್ಥಿಸಿಕೊಳ್ಳುತ್ತಾರೆ.
     
       ಸಿರಿಯಾಳ ಷಷ್ಠಿ ಯಂದು ಮಣ್ಣಿನಲ್ಲಿ‌ ಸಿರಿಯಾಳನನ್ನು ಮಾಡಿ ಪೂಜಿಸಿ ಮೊಸರನ್ನ ಮತ್ತು ಕಡುಬನ್ನು ನೈವೇದ್ಯಕ್ಕಿಡಲಾಗುತ್ತದೆ. 

   ಕೃಷ್ಣ ಜನ್ಮಾಷ್ಟಮಿಯು ಭಗವಾನ್ ನಾರಾಯಣರು ಕೃಷ್ಣನ್ನಾಗಿ ಅವತರಿಸಿದ ದಿನವನ್ನಾಗಿ ಆಚರಿಸಲಾಗುತ್ತದೆ. 

       ಸ್ವರ್ಣಗೌರಿ ವ್ರತವನ್ನು ಭಾದ್ರಪದ ಶುಕ್ಲ ತದಿಗೆ, ಗೌರಿ ತದಿಗೆ ಎಂದು ಕರೆಯಲಾಗುತ್ತದೆ .ಹೆಣ್ಣು ಮಕ್ಕಳು ಈ ವ್ರತವನ್ನು ಆಚರಿಸುತ್ತಾರೆ. ಗಣೇಶ ಚತುರ್ಥಿ ವಿಘ್ನನಿವಾರಕನಾದ ಗಣಪತಿಯ ಹಬ್ಬವಿದು. ಪದ್ದತಿ ಇದ್ದ ಮನೆಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಕೂರಿಸಿ ಸಂಭ್ರಮದಿಂದ ಆಚರಿಸುವ ಹಬ್ಬವಿದು. 
      
    ಭಾದ್ರಪದ ಶುಕ್ಲ ಚತುರ್ಥಿಯಂದು ಅನಂತ ಪದ್ಮನಾಭ ಪೂಜೆಯನ್ನು ಮಾಡಲಾಗುತ್ತದೆ. 

   ಭಾದ್ರಪದ ಶುಕ್ಲ ಪೂರ್ಣಿಮೆಯಂದು ಉಮಾಮಹೇಶ್ವರನ ವ್ರತ ಮಾಡಲಾಗುತ್ತದೆ. ಭಾದ್ರಪದ ಬಹುಳದಂದು ಪಿತೃ ಪೂಜೆಯನ್ನು ಮಾಡುವುದಕ್ಕೆ ಮೀಸಲು. ಹದಿನೈದು ದಿನಗಳಲ್ಲಿ ಮಾಡುವ ಶ್ರಾದ್ಧ ಕರ್ಮಕ್ಕೆ ಪಕ್ಷ ಎಂತಲೂ ಕರೆಯುತ್ತಾರೆ.
   
* ಶರತ್ ಋತುವಿನ ಹಬ್ಬಗಳು : 
            ಶರತ್ ಋತುವಿನಲ್ಲಿ ಬರುವ ಅಶ್ವೀಜ ಮಾಸದ ನವರಾತ್ರಿಯಲ್ಲಿ ಸರಸ್ವತಿ ಪೂಜೆ, ದುರ್ಗಾಷ್ಟಮಿ, ಮಹಾನವಮಿ, ವಿಜಯದಶಮಿ, ಕಾವೇರಿ ಸಂಕ್ರಮಣ, ಶಿಗಿ ಹುಣ್ಣಿಮೆಯನ್ನು ಆಚರಿಸಿದರೆ ಕಾರ್ತಿಕ ಮಾಸದಲ್ಲಿ ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಅಶ್ವೀಜ ಬಹುಳ ಅಮಾವಾಸ್ಯೆ, ಬಲಿಪಾಡ್ಯಮಿ, ತುಳಸಿ ಹಬ್ಬ, ಕಾರ್ತಿಕ ಪೂರ್ಣಿಮೆ, ಕಾರ್ತಿಕ ಬಹುಳ ಅಮಾವಾಸ್ಯೆಯನ್ನು ಆಚರಣೆ ಮಾಡಲಾಗುತ್ತದೆ. 
         
       ಅಶ್ವೀಜ ಶುಕ್ಲ ಪಾಡ್ಯಮಿ ದಿನದಿಂದ ಬರುವ ದಶಮಿಯವರೆಗೂ ನವರಾತ್ರಿ, ದಸರಾವನ್ನು ಆಚರಿಸಲಾಗುತ್ತದೆ. ಈ ದಶಮಿಯ ದಿನಗಳಲ್ಲಿಯೇ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದಮಾತ, ಕಾತ್ಯಾಯಿನಿ, ಕಾಳರಾತ್ರಿ (ಕಾಳರಾತ್ರಿ ಪೂಜಿಸಲ್ಪಡುವ ದಿನವೇ ಸರಸ್ವತಿಯ ಪೂಜೆಯನ್ನು ಮಾಡಲಾಗುತ್ತದೆ), ಮಹಾಗೌರಿ, ಸಿದ್ಧಿಧಾತ್ರಿಯ ಆರಾಧನೆಯನ್ನು ಮಾಡಲಾಗುತ್ತದೆ.ದಶಮಿಯಂದು ವಿಜಯದಶಮಿ ಎಂದು ಆಚರಿಸಲಾಗುತ್ತದೆ. 

    ಕಾವೇರಿ ಸಂಕ್ರಮಣದಲ್ಲಿ ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವ ಆಗುವುದನ್ನು ಸಂಭ್ರಮಿಸಲಾಗುತ್ತದೆ. 
        
        ಶಿಗಿ ಹುಣ್ಣಿಮೆಯು ಸಹ ರೈತರ ಹಬ್ಬ. ಮುತ್ತೈದೆಯರು ಭೂಮಿ ತಾಯಿಯ ಬಯಕೆಯನ್ನು ತೀರಿಸಲು ವಿವಿಧ ಅಡುಗೆಯನ್ನು ಮಾಡಿ ಹೊಲ ಗದ್ದೆಗಳಲ್ಲಿ ಎಡೆಯಿಟ್ಟು ಊಟ ಮಾಡುವುದಾಗಿದೆ. 

            ಚತುರ್ದಶಿ ಹಿಂದಿನ ದಿನ ಚಂದ್ರೋದಯ ಸಮಯದಲ್ಲಿ ಅಭ್ಯಂಜನ ಮಾಡಲು ನೀರು ತುಂಬಿಸುವ ದಿನವಾಗಿದೆ. ನರಕ ಚತುರ್ದಶಿಯು ಲೋಕ ಪೀಡಕನಾದ ನರಕಾಸುರನು ಕೃಷ್ಣನ ಪತ್ನಿ ಭೂದೇವಿಯ ಸ್ವರೂಪಿಣಿಯೇ ಆದ ಸತ್ಯಭಾಮೆಯಿಂದ ಹತನಾದ ದಿನವೆಂದು ಪೌರಣಿಕ ಕಥೆಯಿದೆ. ಅಶ್ವೀಜ ಬಹುಳ ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಬಲೀಂದ್ರ ಮತ್ತು ವಾಮನನ ಪೌರಾಣಿಕ ಕಥೆಯುಳ್ಳ ಹಿನ್ನೆಲೆಯಲ್ಲಿ ಬಲಿಪಾಡ್ಯಮಿ ಹಬ್ಬವನ್ನು ದೀಪಗಳನ್ನು ಬೆಳಗಿಸುವುದರ ಮೂಲಕ ಅಚರಿಸಲಾಗುತ್ತದೆ. 
         
     ಜರಾಸಂದ , ವೃಂದಾ, ನಾರಾಯಣರ ಪೌರಾಣಿಕ ಕಥೆಯನ್ನಾಧರಿಸಿ ವೃಂದಾಳೇ ತುಳಸಿಯ ಅವತಾರವೆಂದು ಕಾರ್ತಿಕ ಶುದ್ಧ ಏಕಾದಶಿ ಮತ್ತು ದ್ವಾದಶಿಯಂದು ತುಳಸಿ ಹಬ್ಬವನ್ನು ಆಚರಿಸಲಾಗುತ್ತದೆ. 
         
     ಕಾರ್ತಿಕ ಪೂರ್ಣಿಮೆಯಂದು ದೀಪೋತ್ಸವವೂ ಇಂದಿನಿಂದಲೆ ಆರಂಭವಾಗುತ್ತದೆ. ಇದನ್ನು ದೊಡ್ಡ ಗೌರಿ ಹುಣ್ಣಿಮೆ ಎಂದೂ ಸಹ ಕರೆದು ಸ್ತ್ರೀಯರು ಗೌರಿಪೂಜೆಯನ್ನೂ ಮಾಡುತ್ತಾರೆ. 
         
    ಕಾರ್ತಿಕ ಬಹುಳ ಅಮಾವಾಸ್ಯೆಯು ಕಡೇ ಕಾರ್ತಿಕ ಎಂದು ಪ್ರಸಿದ್ಧಿಯಾಗಿದೆ. ದೀಪೋತ್ಸವ , ತೆಪ್ಪೋತ್ಸವಗಳು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 
              
 * ಹೇಮಂತ ಋತುವಿನ ಹಬ್ಬಗಳು : 
           ಸ್ಕಂದ ಷಷ್ಠಿ, ಹನುಮ ಜಯಂತಿ,ಮಾರ್ಗಶಿರ ಪೂರ್ಣಿಮಾ, ಎಳ್ಳ ಅಮಾವಾಸ್ಯೆ, ಧನುರ್ಮಾಸ, ಬನದ ಹುಣ್ಣಿಮೆ, ಮಕರ ಸಂಕ್ರಾಂತಿ, ಪುಷ್ಯ ಬಹುಳ ಅಮಾವಾಸ್ಯೆಯನ್ನು ಹೇಮಂತ ಋತುವಿನಲ್ಲಿ ಬರುವ ಮಾರ್ಗಶಿರ , ಪುಷ್ಯ ಮಾಸಗಳಲ್ಲಿ ಆಚರಿಸಲಾಗುತ್ತದೆ. 
    
     ಸ್ಕಂದ ಷಷ್ಠೀಯನ್ನು ಸುಬ್ರಾಯನ ಷಷ್ಠಿ ಎಂದು ಸಹ ಕರೆಯಲಾಗುತ್ತದೆ. ಸ್ಕಂದ ಕ್ಷೇತ್ರಗಳಲ್ಲಿ ರಥೋತ್ಸವವು ಜರಗುತ್ತದೆ. 

  ಮಾರ್ಗಶಿರ ದ್ವಾದಶಿಯಂದು ಹನುಮಂತನು ಜನಿಸಿದ ದಿನವಾದ್ದರಿಂದ ಹನುಮ ಜಯಂತಿಯನ್ನು ಅಂದು ಆಚರಿಸಲಾಗುತ್ತದೆ. 
       
     ಮಾರ್ಗಶಿರ ಪೂರ್ಣಿಮೆಯಂದು ಸತಿ ಅನುಸೂಯಾದೇವಿಯ ಪಾತಿವ್ರತ್ಯವನ್ನು ತ್ರಿಮೂರ್ತಿಗಳು ಪರೀಕ್ಷಿಸಿದ ದಿನ. ಹೊತ್ಸಲ ಹುಣ್ಣಿಮೆಯಂದು ಕೂಡ ಕರೆಯಲಾಗುತ್ತದೆ. 
       
     ಎಳ್ಳಿನಷ್ಟೂ ಪಾಪವಿಲ್ಲದಂತೆ ತೊಳೆದು ಹಾಕುವ ಎಳ್ಳಮಾವಾಸ್ಯೆಯ ಸ್ನಾನಕ್ಕೆ ಬಹು ಪ್ರಾಶಸ್ತ್ಯ. ಸೂರ್ಯೋದಯಕ್ಕೆ ಮೊದಲೇ ಸ್ನಾನ ಮಾಡಬೇಕು. ತಂದೆಯ ಆಜ್ಞೆಯಂತೆ ತಾಯಿಯ ಶಿರಚ್ಛೇದನ ಮಾಡಿದ ಪರಶುರಾಮರು ಮಾತೃಹತ್ಯೆಯ ದೋಷದಿಂದ ಪರಿಹಾರವಾದ ದಿನವೆಂದೂ ಪೌರಾಣಿಕ ಕಥೆ ಹೇಳುತ್ತದೆ. ಮತ್ತು ಅನೇಕ ಕಡೆ ಈ ದಿನದಲ್ಲಿ ಜಾತ್ರೆ ನಡೆಯುತ್ತದೆ.
   
        ಸೂರ್ಯನು ವೃಶ್ಚಿಕ ಮಾಸದಂದು ಸಂಕ್ರಮಿಸಿ ಧನುರ್ ರಾಶಿಗೆ ಪ್ರವೇಶಿಸ ಮಾಡುವ ದಿನದಿಂದ ಮಕರ ಸಂಕ್ರಾಂತಿ ಪ್ರವೇಶಿಸುವವರೆಗೂ ಧನುರ್ಮಾಸ ಎಂದು ಕರೆಯುತ್ತಾರೆ. ಸೂರ್ಯೊದಯಕ್ಕೂ ಮೊದಲು ಮಹಾವಿಷ್ಣುವನ್ನು ಈ ದಿನಗಳಲ್ಲಿ ಪೂಜಿಸುವುದು ವಾಡಿಕೆ.

    ಪುಷ್ಯ ಶುಕ್ಲದ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಎಂದು ಕರೆಯುತ್ತಾರೆ. 
       
       ಮಕರ ಸಂಕ್ರಾಂತಿ ಪೊಂಗಲ್ ಎಂದು ಪ್ರಸಿದ್ಧಿಯಾದರೂ ಉತ್ತರಾಯಣ ಕಾಲವೆಂದೂ ಆಚರಣೆಯಲ್ಲಿದೆ. ಸೂರ್ಯನು ಮಕರರಾಶಿಗೆ ಮಕರಸಂಕ್ರಾಂತಿಯಂದು ಪ್ರವೇಶಿಸುತ್ತಾನೆ. ಮಕರ ಸಂಕ್ರಾಂತಿಯನ್ನು ಮೂರು ದಿನಗಳ ಕಾಲವೂ ಕೆಲವರು ಆಚರಸುತ್ತಾರೆ. 
         
       ದಾಸ ಶ್ರೇಷ್ಠರಾದ ಪುರಂದರ ದಾಸರ ಪುಣ್ಯತಿಥಿಯನ್ನು ಪುಷ್ಯ ಬಹುಳ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. 

 *  ಶಿಶಿರ ಋತುವಿನ ಹಬ್ಬಗಳು : 
             ಮಾಘ ಮಾಸದಲ್ಲಿ ರಥ ಸಪ್ತಮಿ, ಮಾಘ ಪೂರ್ಣಿಮೆ, ಮಹಾಶಿವರಾತ್ರಿಯನ್ನು ಆಚರಿಸಿದರೆ ಫಾಲ್ಗುಣ ಮಾಸದಲ್ಲಿ ಕಾಮನಪಾಡ್ಯ, ಹೋಳಿ ಹಬ್ಬವನ್ನು ಶಿಶಿರ ಋತುವಿನಲ್ಲಿ ಆಚರಿಸಲಾಗುತ್ತದೆ. 
         
     ಮಾಘ ಶುಕ್ಲ ಸಪ್ತಮಿಯಂದು ಸೂರ್ಯನ ರಥಕ್ಕೆ ಪೂಜಿಸಲಾಗುತ್ತದೆ‌. ವೈವಸ್ವತ ಮನ್ವಂತರದ ಮೊದಲ ದಿನ ರಥಸಪ್ತಮಿಯಾಗಿದೆ. 
      
      ಮಾಘ ಪೂರ್ಣಿಮೆಯಂದು ವ್ಯಾಸ ಪೂಜೆ, ಕುಲಧರ್ಮದ ಪೂಜೆಯನ್ನು ಮಾಡಲಾಗುತ್ತದೆ. ಹಲವು ಕಡೆಗಳಲ್ಲಿ ರಥೋತ್ಸವವನ್ನು ಆಚರಿಸಲಾಗುತ್ತದೆ. 
     
     ಮಾಘ ಬಹುಳದಲ್ಲಿ ಪ್ರದೋಷ ವ್ಯಾಪಿನಿಯಾದ ಚತುರ್ದಶಿ ದಿನದಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ದೇಶದ ಪ್ರತಿ ಶಿವನ ದೇವಸ್ಥಾನಗಳಲ್ಲಿಯೂ ಶಿವಲಿಂಗಕ್ಕೆ ಅಭಿಷೇಕ, ಬಿಲ್ವಾರ್ಚನೆ, ಪೂಜೆ, ಆರಾಧನೆಯನ್ನು ಮಾಡಲಾಗುತ್ತದೆ. ಶಿವರಾತ್ರಿಯಂದು ಉಪವಾಸ ಇದ್ದು , ರಾತ್ರಿ ಜಾಗರಣೆಯ ಕಾಲದಲ್ಲಿ ಶಿವನ ಉಪಾಸನೆಯನ್ನು ಮಾಡಲಾಗುತ್ತದೆ. 
     
        ಫಾಲ್ಗುಣ ಶುಕ್ಲ ಪಾಡ್ಯಮಿಯ ದಿನವನ್ನು ಕಾಮನ ಪಾಡ್ಯ ಎಂದು ಕೆಲವರು ಆಚರಿಸುತ್ತಾರೆ ಮತ್ತು ಫಾಲ್ಗುಣ ಶುಕ್ಲ ಪಕ್ಷದಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಶಿವನು ಮದನನ್ನು ತನ್ನ ಮೂರನೇ ಕಣ್ಣಿನಿಂದ ದಹಿಸಿದನೆಂದು ಪೌರಾಣಿಕ ಕಥನವೂ ಕೂಡ ಹೋಳಿ ಹಬ್ಬವನ್ನು ಆಚರಿಸಲು ಪ್ರೇರಣೆಯಾಗಿದೆ.
          
    ಇಷ್ಟೆ ಅಲ್ಲದೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮದಾಗಿರುವುದರಿಂದ, ವಿವಿಧ ಧರ್ಮದವರು ನಮ್ಮ ನೆಲೆದಲ್ಲಿ ನೆಲೆಸಿರುವುದರಿಂದ ಜೈನ ಧರ್ಮದವರಾದ ಶ್ವೇತಾಂಬರರು ಉಪವಾಸ ಆಚರಣೆ, ಓಲಿ, ಪರ್ಯುಷಣವನ್ನು ಆಚರಿಸಿದರೆ ದಿಗಂಬರರು ದಶಲಕ್ಷಣ ಪರ್ವನ್ ಆಚರಿಸುತ್ತಾರೆ. 
       
    ಸಿಖ್ಖರು ಮಾಘಿ (ಕರ್ನಾಟಕದಲ್ಲಿ ಈ ಹಬ್ಬವನ್ನು ಸಂಕ್ರಾಂತಿಯನ್ನಾಗಿ ಆಚರಿಸಲಾಗುತ್ತದೆ), ಪರ್ಕಾಶ್ ಉತ್ಸವ್, ದಾಸ್ಮೆಹ್ ಪಾತ್ಶಾಹ್ ಶ್ರೀ ಗುರು ಗೋಬಿಂದ್ ಸಿಂಗ್ ಜಿ, ಸಿಖ್ ಹೊಸ ವರ್ಷ, ಹೊಲ್ಲಾ ಮೊಹಲ್ಲಾ, ವೈಶಾಖಿ, ಗುರು ಅರ್ಜುನ್ ಹುತಾತ್ಮ, ಪಹಿಲ ಪ್ರಕಾಶ್ ಶ್ರೀ ಗುರು ಗ್ರಂಥ ಸಾಹಿಬ್ ಜಿ, ಬಂದಿ ಛೋರ್ ದಿವಸ್, ಗುರು ನಾನಕ್ ಗುರು ಪುರಬ್, ಗುರು ತೇಜ್ ಬಹದ್ದೂರ್ ಹುತಾತ್ಮ, ಸಾಹಿಬ್ಜಾಡೆ ಹುತಾತ್ಮ ಅಷ್ಟೆ ಅಲ್ಲದೆ ಸುಮಾರು 45 ಕ್ಕಿಂತಲೂ ಅಧಿಕ ಹಬ್ಬಗಳನ್ನು ಆಚರಿಸುತ್ತಾರೆ 
      
     ಕ್ರೈಸ್ತ ಧರ್ಮದವರು ಈಸ್ಟರ್, ಕ್ರಿಸ್ಮಸ್, ಜನವರಿ ಒಂದರ ಹೊಸವರ್ಷ, ಶುಭ ಶುಕ್ರವಾರಗಳನ್ನು ಆಚರಿಸಿದರೆ,

   ಇಸ್ಲಾಂ ಧರ್ಮದವರು ಷಬ್-ಎ-ಬರಾತ್, ರಂಜಾನ್, ಬಕ್ರೀದ್, ಮೊಹರಂ ಕಡೇ ದಿನ, ಷಬ್-ಎ-ಕ್ವಾಡರ್ (ಜಮ್ಜಾತ್ ಉಲ್ ವಿದಾ), ಈದ್ ಮಿಲಾದ್ ಅನ್ನು ಆಚರಿಸುತ್ತಾರೆ. 
        
     ಇಷ್ಟೆಲ್ಲಾ ಹಬ್ಬಗಳಿಗೂ ಅದರದೇ ಆದ ಪೌರಾಣಿಕ ಕಥನಗಳಿವೆ, ಆದರ್ಶ ವ್ಯಕ್ತಿಗಳ ಹಿನ್ನೆಲೆಗಳಿವೆ. ಪ್ರಕೃತಿಯೊಡನೆ ಬೆರೆಯುವ ಸಂತೋಷವಿದೆ. ಇದರ ಪ್ರಯುಕ್ತವಾಗಿ ಮನೆಯಲ್ಲಿ ಮಾಡುವ ಪೂಜೆ, ಸಂಭ್ರಮ, ತೃಪ್ತಿಯಿಂದ ಕೂಡಿದ ಧನಾತ್ಮಕ ಶಕ್ತಿಯು ಮನೆಯಲ್ಲಿ ಆವರಿಸುತ್ತದೆ. 
      
       ಪ್ರತಿದಿನ ಮನೆಯನ್ನೂ ಸ್ವಚ್ಛಗೊಳಿಸುತ್ತಿದ್ದರೂ ಹಬ್ಬದ   ದಿನ ಹತ್ತಿರವಾಗುತ್ತಿದ್ದಂತೆಯೇ ಮನೆಯ ಮೂಲೆ ಮೂಲೆಯಲ್ಲಿಯೂ ಧೂಳಿನಿಂದ, ಕಟ್ಟಿರುವ ಜೇಡರ ಬಲೆಯಿಂದ ಸ್ವಚ್ಛಗೊಳಿಸಿ , ಉಪಯೋಗಿಸುವಂತಹ ಪ್ರತಿ ಬಟ್ಟೆಗಳನ್ನು ಮಡಿ ಮಾಡಿ, ಮನೆಯ ವಾತಾವರಣವನ್ನು ಹಬ್ಬದ ಉತ್ಸಾಹದ ಪೂರಕ ದಿನಗಳನ್ನಾಗಿ ಮಾಡುವುದು ಸಹ ಚಮತ್ಕಾರವೇ. 
         
       ದಿನನಿತ್ಯವೂ ಮಾಡಿದ ಕೆಲಸವನ್ನೇ ಮಾಡಿದರೂ ಆಯಾಸಗೊಳ್ಳುವ ನಾವು ಹಬ್ಬದ ಪೂರ್ವ ತಯಾರಿ ಮಾಡಿಕೊಳ್ಳುವಾಗ ಆಯಾಸವಾದರೂ ಉತ್ಸಾಹದ ಚಿಲುಮೆಗಳಾಗಿರುತ್ತೇವೆ. ಹಬ್ಬಗಳು ಶುಚಿತ್ವದ ಪ್ರತೀಕವಾಗಿಯೂ ಗೋಚರಿಸುತ್ತದೆ. 
        
       ಹಬ್ಬಗಳೆಂದರೆ ಬರೀ ಸ್ನಾನ, ಮಡಿ, ಪೂಜೆ, ಆರಾಧನೆ, ಧ್ಯಾನ , ಜಪ ತಪಗಳು ಮಾತ್ರವಲ್ಲದೆ ಯಾವ ಯಾವ ಹಬ್ಬಗಳಿಗೆ ಯಾವ ಯಾವ ಭೋಜನವನ್ನು ತಯಾರಿಸಬೇಕು, ನೈವೇದ್ಯಕ್ಕಿಡಬೇಕು ಎಂಬುದನ್ನು ಸಹ ನಮ್ಮ ಪೂರ್ವಜರು ಸಂಪ್ರದಾಯದ ಸಹಿತವಾಗಿಯೂ ಋತುಗಳ ಬದಲಾವಣೆಗೆ ಹೊಂದಿಕೊಳ್ಳುವಂತಹ ಆಹಾರ ಪದ್ದತಿಯನ್ನು  ಮಾಡಿರುವುದು ವೈಜ್ಞಾನಿಕವಾಗಿಯೂ ದೇಹದಾರೋಗ್ಯಕ್ಕೂ ಹೊಂದಿಕೊಳ್ಳುವ ಆಹಾರಗಳನ್ನೆ ಹಬ್ಬದ ವಿಶೇಷ ತಿನಿಸುಗಳನ್ನಾಗಿ ಮಾಡಿರುವುದು ಅವರ ಧೀಮಂತಿಕೆಯನ್ನು ತಿಳಿಸಿಕೊಡುತ್ತದೆ. 
       
        ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಮೂಲ ಆಶಯ ಇರುತ್ತದೆ.ಆಶಯದಲ್ಲಿನ ತತ್ವಗಳಂತೆ, ಉದ್ದೇಶಗಳಂತೆ ನಡೆದುಕೊಂಡಾಗ ಮಾತ್ರ ಹಬ್ಬಗಳಿಗೆ ಕಳೆ ಬರಲು ಸಾಧ್ಯ. ತಲೆ ತಲೆಮಾರುಗಳು ಸಹ ಕಾಪಾಡಿಕೊಂಡು, ಆಚರಿಸಿಕೊಂಡು ಹೋಗುವಂತೆ ಮಾಡಿರುವ ಹಬ್ಬಗಳನ್ನು ನಮ್ಮ ಹಿರಿಯರು ಅದಕ್ಕೆಂದೆ ಅಧಿಪತ್ಯವನ್ನು ಸ್ಥಾಪಿಸಿಸಿಕೊಟ್ಟು ಬಿಟ್ಟಿದ್ದಾರೆ. ಅಂದಿನಿಂದ ಇಂದಿನವರೆಗೂ ಸಂಭ್ರಮದಿಂದಲೇ ಹಬ್ಬಗಳು ತಮ್ಮ ಅಧಿಪತ್ಯವನ್ನು ಸಾರಿಕೊಂಡು ಬರುತ್ತಿವೆ. 
   
    ಕೊನೆಯದಾಗಿ, 
               
           ಹಬ್ಬಗಳು ನಮ್ಮ ದೇಶದಲ್ಲಿ ಅಧಿಪತ್ಯವನ್ನೇ ಸಾರಿದ್ದರೂ ದಿನೇ ದಿನೇ ತಮ್ಮ ಮೂಲಾ ಆಶಯವನ್ನು ಕಳೆದುಕೊಂಡು ಕೇವಲ ಗೊಂಬೆಗೆ ಶೃಂಗಾರ ಮಾಡುವಂತೆ ಭಾಸವಾಗುತ್ತಿರುವುದು ಬೇಸರದ ಸಂಗತಿಯೇ. ಹಬ್ಬ ಎಂದರೇ ಎಷ್ಟೋ ಜನರ ಮನೆಯಲ್ಲಿ "ಈ ಹಬ್ಬಗಳು ಯಾಕಾದರೂ ಬರುತ್ತದೋ" ಎಂಬ ವಾತು ಕೇಳಿಬರುತ್ತದೆ. ಒಂದು ಕಾರಣ ಆರ್ಥಿಕ ಪರಿಸ್ಥಿತಿಯದ್ದಾದರೆ ಮತ್ತೊಂದು ಕಾರಣ ಮನೆಯನ್ನೆಲ್ಲಾ ಸ್ವಚ್ಛ ಮಾಡಬೇಕಲ್ಲ ಎಂಬ ಸೋಮಾರಿತನ ಪರಮಾವಧಿ ಕಾಣಿಸತೊಡಗುತ್ತದೆ. 
         
        ಹೌದು, ಇಂದು ದುಡ್ಡಿಲ್ಲದೆ ಯಾವ ಹಬ್ಬವನ್ನು ಮಾಡಲಾಗುವುದಿಲ್ಲ. ಪೂಜೆಯ ಸಾಮಾಗ್ರಿಗಳು, ನೈವೇದ್ಯಕ್ಕಿಡುವ ತಿನಿಸುಗಳ ದಿನಸಿ ಸಾಮಾಗ್ರಿಗಳ ಬೆಲೆಯಂತೂ ಆಕಾಶದಲ್ಲಿ ಕುಳಿತಿದೆ. ಒಂದು ಹಬ್ಬವನ್ನು ಮಧ್ಯಮವರ್ಗದ ಕುಟುಂಬದವರು ಸಂಪ್ರದಾಯವಾಗಿ, ಕ್ರಮಬದ್ಧವಾಗಿ ಮಾಡಬೇಕೆಂದರೆ ಸುಮ್ಮನೆ ಆಗುವ ಮಾತಲ್ಲ. ಹಬ್ಬದ ಹಿಂದಿನ ದಿನಗಳಲ್ಲಿ ಹಬ್ಬಕ್ಕೆ ಬೇಕಾಗುವ ಪ್ರತಿಯೊಂದು ಸಾಮಾಗ್ರಿಯ ಬೆಲೆಗಳು ಒಂದಕ್ಕೆ ಎರಡರಷ್ಟಾಗಿರುತ್ತವೆ. ಅದುನ್ನೆಲ್ಲಾ ನೋಡಿಕೊಂಡು ಹಬ್ಬ ಮಾಡುತ್ತೇವೆಂದರೆ ಸಾಲ ಮಾಡಲೇಬೇಕಾದ ಪರಿಸ್ಥಿತಿಯೂ ಕೆಲವರ ಮನೆಗಳಲ್ಲಿದೆ. 
         
       ದೇವರು ಹೇಗೆ ಪೂಜೆ ಮಾಡಿದರೂ ಒಲಿಯುತ್ತಾನೆ ಎಂಬ ಮಾತು ಕೇಳುವುದಕ್ಕೆ ಸರಿ ಎನ್ನಿಸಿದರೂ ಹಬ್ಬದ ಮೂಲ ಆಶಯ, ಕ್ರಮಬದ್ಧವಾದ ಪೂಜೆ, ವಿಧಿ ವಿಧಾನಗಳನ್ನು ತಿಳಿದಿರುವ ಯಾವ ಮನೆಯಲ್ಲಿಯೂ ಹೇಗೇಗೋ ಪೂಜೆ ಮುಗಿಸಲಾರಾರು, ಮುಗಿಸಿದರೂ ಅವರ ಮನಸ್ಸಿಗೆ ನೆಮ್ಮದಿ ಇರಲಾರದು. 
        
         ಇನ್ನೂ ದುಡ್ಡಿರುವ ಕೆಲವರು ಆಡಂಬರಕ್ಕಾಗಿಯೇ ಹಬ್ಬಗಳನ್ನು ಮಾಡಿದರು ಹಬ್ಬದ ಮೂಲ ಉದ್ದೇಶವನ್ನೇ ತಿಳಿದಿರಲಾರರು. ದುಡ್ಡು ಕೊಟ್ಟರೆ ಹಬ್ಬದ ಸಾಮಾಗ್ರಿಗಳ ಸಹಿತವಾಗಿ ಎಲ್ಲವನ್ನೂ ತಂದು ಅಲಂಕಾರ ಮಾಡಿ ಪೂಜೆಯನ್ನು ಮುಗಿಸಿಕೊಟ್ಟು ಹೋಗುವಂತಹ ಕೆಲವು ಜನಗಳಿರುವಾಗ, ತಾವೇ ಮಾರುಕಟ್ಟೆಗೆ ಹೋಗಿ ಚೌಕಾಸಿ ಮಾಡಿಯೋ, ಅಳೆದು ತೂಗಿಯೋ ತಮ್ಮ ಸಂಪ್ರದಾಯ, ಆಚರಣೆಗೆ ಬೇಕಾದ ಸಾಮಾಗ್ರಿಗಳನ್ನು ತಂದು, ತಾವೇ ಮುತುವರ್ಜಿ ವಹಿಸಿ ಮನೆಯನ್ನು ಸಿಂಗರಿಸುವ ತೃಪ್ತಿ ಇಂದು ಮರೆಯಾಗುತ್ತಲಿದೆ. 
       
       ಹಬ್ಬ ಕಾಟಾಚಾರಕ್ಕೂ ಮಾಡುವಂತದ್ದಲ್ಲ, ಆಡಂಬರಕ್ಕೂ ಮಾಡುವಂತದ್ದಲ್ಲ. ಆದರೆ ಇಂದು ಇವೆರೆಡು ಹಬ್ಬದ ಮೂಲೋದ್ದೇಶವನ್ನೇ ಆಕ್ರಮಿಸಿಕೊಳ್ಳುತ್ತಿದೆ. 
       
       ಏನೇ ಆಗಲಿ ಹಬ್ಬಗಳನ್ನು ಆಡಂಬರಕ್ಕೆ ಮಾಡಲಿ, ಅಯ್ಯೋ ಮಾಡಬೇಕಲ್ಲ ಅಂತ ಮಾಡಲಿ, ಅಥವಾ ಮೂಲ ಆಶಯಗಳಿಗೆ ಮೌಲ್ಯಗಳನ್ನು ಕೊಡುತ್ತಾ ಮಾಡಲಿ ತಮ್ಮ ಅಧಿಪತ್ಯವನ್ನು ಹಬ್ಬಗಳು ಸಾರಿರುವುದರಲ್ಲಿ ಸಂಶಯವಿಲ್ಲ. 


-ಲೀಲಾ ಬಂಟಯ್ಯ.
              
           
                    


Rate this content
Log in