ಹೂ ನಗು
ಹೂ ನಗು
ಶ್ಯಾಮರಾಯರಿಗೆ ತಮ್ಮ ತೋಟದಲ್ಲಿ ಗುಲಾಬಿ ಹೂಗಳನ್ನು ಇಂದು ಸಹ ಕದ್ದಿರುವುದು ಕಂಡು ವಿಪರೀತ ಸಿಟ್ಟು ಬಂತು.
ಸತ್ತ ಹೆಂಡತಿಯ ಪಟಕ್ಕೂ ಮುಡಿಸಲು ಒಂದೇ ಒಂದು ಹೂವು ಇರುತ್ತಿರಲಿಲ್ಲ.
ನಾನು ಆ ಹೂವಿನ ಕಳ್ಳ ಯಾರೆಂದು ಕಂಡುಹಿಡಿದೆ ಸುಮ್ಮನಿರೋದಿಲ್ಲ ಅಂದುಕೊಂಡು ಹಲ್ಲು ಮಸೆಯುತ್ತಾ ವಾಕಿಂಗ್ ಗೆ ಹೊರಟರು.
ಶ್ಯಾಮರಾಯರು ಮನೆಯ ಮುಂದಿನ ವಿಸ್ತಾರವಾದ ವರಾಂಡದಲ್ಲಿ ಅವರ ಹೆಂಡತಿಯೊಡನೆ ಚೆಂದವಾದ
ವಿವಿಧ ಬಣ್ಣಗಳ ಗುಲಾಬಿ ಗಿಡಗಳನ್ನು ನೆಟ್ಟಿದ್ದರು. ಗುಲಾಬಿ ಗಿಡಗಳು ಸೊಗಸಾಗಿ ಬೆಳೆದು
ಟಿಸಿಲಿಗೊಂದು ಹೂವುಗಳನ್ನು ಕೊಡುವಾಗ ಮಕ್ಕಳಿಲ್ಲದ ಶ್ಯಾಮರಾಯರು , ಜಾನಕಿ ರವರು ಗಿಡಗಳು, ಹೂವುಗಳನ್ನೆ ಮಕ್ಕಳೆಂದು ಸಂಭ್ರಮಿಸಿದ್ದರು.
ಪ್ರತಿದಿನ ವಾಕಿಂಗ್ ಗೆ ಹೋಗುತ್ತಿದ್ದ ಶ್ಯಾಮರಾಯರು ಗುಲಾಬಿಗಳನ್ನು ಅಪಹರಿಸಿದ್ದ ದಿನದಿಂದ ಮನಸ್ಸನ್ನು ಕೆಡಿಸಿಕೊಂಡು ವಾಕಿಂಗ್ ನ್ನು ತಪ್ಪಿಸಿದ್ದರು. ಆದರಿಂದು ಅವರು ವಾಕಿಂಗ್ ಬರುವ ಜಾಗದಲ್ಲಿ ಒಬ್ಬಾಕೆ ಕಟ್ಟಿದ ಹೂಗಳ ಜೊತೆಯಲ್ಲಿ ಗುಲಾಬಿಯನ್ನು ಇಟ್ಟು ಮಾರುತ್ತಿದ್ದರು. ಅದನ್ನು ನೋಡಿದ ರಾಯರು ಆಕೆಯ ಬಳಿ ಬಂದು ಒಂದು ಗುಲಾಬಿಯನ್ನು ಕೈಗೆ ತೆಗೆದುಕೊಂಡು ನೋಡಿದರು. ಸಂಶಯವೇ ಇಲ್ಲ, ಅವರ ತೋಟದ್ದೇ.
'ಎಷ್ಟಮ್ಮ ಒಂದು ಹೂವಿಗೆ' ಎಂದು ರಾಯರು ಕೇಳಿದಾಗ ಆಕೆ 'ಹದಿನೈದು ರೂಪಾಯಿ ಕಣ್ರಪ್ಪ' ಸರಿ ಎಂದು ಒಂದು ಹೂವಿಗೆ ದುಡ್ಡು ಕೊಟ್ಟು ತೆಗೆದುಕೊಂಡು ಬಂದು ಜಾನಕಿರವರ ಪಟಕ್ಕೆ ಮುಡಿಸಿದರು. ಮರುದಿನ ಹೂವು ಮಾರುವಾಕೆಯು ಮಾಡುವ
ಕಳ್ಳತನವನ್ನ ಕಂಡು ಹಿಡಿಯಲೇಬೇಕೆಂದು ನಿರ್ಧರಿಸಿ ನಿದ್ರಿಸಿ ಬೆಳಗ್ಗೆ 5:30ಕ್ಕೆಲ್ಲಾ ಎದ್ದು
ಹೊರಗೆ ಲೈಟ್ ಕೂಡ ಹಾಕದೆ ಒಂದೇ ಒಂದು ಕಿಟಕಿ ತೆರೆದು ಕುಳಿತರು. ಕಾಂಪೌಂಡ್ ಹಾರಿದ ಸದ್ದು ಕೇಳಿ ಕಿಟಕಿಯ ಬಳಿ ನಿಂತರು. ಅಲ್ಲಲ್ಲಿ ಹರಿದು ತೇಪೆ ಹಾಕಿದ ಫ್ರಾಕ್ ತೊಟ್ಟಿದ್ದ 7-8 ವರ್ಷದ ಪುಟ್ಟ ಪೋರಿಯೊಬ್ಬಳು
ಪುಟ್ಟ ಬಟ್ಟೆ ಬ್ಯಾಗ್ ಹಿಡಿದು ಗುಲಾಬಿಗಳನ್ನು ಕೀಳುತ್ತಿದ್ದಳು ಅವಸರವಾಗಿ. ಆ ಅವಸರದಲ್ಲಿ ಹೂ
ಕೀಳುವಾಗ ಪುಟ್ಟ ಕೈಗೆ ಮುಳ್ಳೊಂದು ತಗುಲಿತು. ಆ ಹುಡುಗಿ ನೋವಿನಿಂದ ಮುಖ ಕಿವುಚಿದಾಗ ರಾಯರ
ಕರುಳು ಚುರುಕೆಂದಿತು. ಎಲ್ಲಾ ಗುಲಾಬಿಗಳನ್ನು ಕಿತ್ತು ಬ್ಯಾಗ್ ಗೆ ಹಾಕಿಕೊಂಡು ಕಾಂಪೌಂಡ್ ಹಾರಿ
ಓಡಿದಳು.
ರಾಯರಿಗೆ ಸಿಟ್ಟೆ ಮರೆತು ಹೋಗಿತ್ತು.
ವಾಕಿಂಗ್ ಗೆ ಹೋದಾಗ ಹೂವು ಮಾರುವಾಕೆಯೊಡನೆ ಹರಿದ ಶಾಲೆಯ ಸಮವಸ್ತ್ರ ಧರಿಸಿ ನಿಂತಿದ್ದ
ಹುಡುಗಿಯನ್ನು ನೋಡಿದ ರಾಯರು ಅವಳ ಬಳಿಗೆ ಬರುವುದು ಕಂಡು ಆ ಹುಡುಗಿಯ ಕಣ್ಣುಗಳಲ್ಲಿ ಭಯ
ಇಣುಕಿತು. ರಾಯರು ಆ ಪುಟ್ಟ ಹುಡುಗಿಯ ಕೈಯಿಂದಲೇ ಗುಲಾಬಿ ಈಸಿಕೊಂಡು ಇಪ್ಪತ್ತು ರೂಪಾಯಿ ನೀಡಿ ಇಂದು ಸಂಜೆಯೇ ಬಂದು ಹೂ ಕೂಯ್ದುಕೊಂಡು ಹೋಗು ಎಂದು ತಲೆನೇವರಿಸಿ ಹೊರಟರು. ರಾಯರು
ಹಿಡಿದ ಗುಲಾಬಿಯಲ್ಲಿಯೂ, ಪುಟ್ಟ ಪೋರಿಯ ಮೊಗದಲ್ಲೂ ನಗೆ ಮೂಡಿತ್ತು.
