ಎಂತ ಸಾವ...! ಸಾವನದುರ್ಗ
ಎಂತ ಸಾವ...! ಸಾವನದುರ್ಗ


ನಮ್ಮ ಊರು ಬೆಂಗಳೂರು, ದೇಶದ ನಾನಾ ಭಾಗಗಳಿಂದ ಜನರನ್ನು ತನ್ನತ್ತ ಸೆಳೆದುಕೊಂಡು ಅವರ ತವರನ್ನೇ ಮರೆಸುವ ತಾಕತ್ತು ಇರೋದು ನಮ್ಮ ಬೆಂಗಳೂರಿಗೆ ಮಾತ್ರ.
ಅದಕ್ಕೆ ಕಾರಣ ಕರ್ನಾಟಕದ ಪ್ರಾಕೃತಿಕ ಸಿರಿವಂತಿಕೆಯನ್ನು ತೋರುವ ಗಿರಿಧಾಮಗಳು ಬೆಂಗಳೂರನ್ನು ಸುತ್ತುವರೆದಿರೋದು. ಅಂತಹ ಗಿರಿಧಾಮಗಳಲ್ಲಿ ಒಂದನ್ನು ನಿಮಗೆ ಇಂದು ಪರಿಚಯಿಸಲು ಮನಸ್ಸಾಗಿದೆ.
ಶೀರ್ಷಿಕೆ ನೋಡಿಯೇ ನಿಮಗೆಲ್ಲ ತಿಳಿದಿರಬಹುದು, ಹೌದು ಖಂಡಿತ ನಾನು ಹೇಳ ಹೊರಟಿರುವುದು ಇಡೀ ಏಷ್ಯಾದಲ್ಲೆ ಅತಿದೊಡ್ಡ ಏಕಶಿಲಾ ಬೆಟ್ಟಗಳಲ್ಲಿ ಒಂದಾದ ಸಾವನದುರ್ಗ.
ಈ ಚಾರಣ ನನ್ನ ಸಹೋದ್ಯೋಗಿಗಳೊಂದಿಗೆ ಹೊರಟದ್ದು. ಈ ಹಿಂದೆ ಶಿವಗಂಗೆ ಬೆಟ್ಟ ಹತ್ತಿದ್ದೆವಾದರೂ ಮತ್ತೆ ಯಾವುದಾದರೂ ಬೆಟ್ಟಕ್ಕೆ ಹೋಗಬೇಕು ಅಂತ ತುಂಬಾ ದಿನದಿಂದ ಅನಿಸುತ್ತಿತ್ತು.
ನಮ್ಮದು ಸಣ್ಣ ತಂಡವಾದರೂ ಆತ್ಮೀಯತೆಗೇನು ಕಡಿಮೆ ಇಲ್ಲ... ಆದರೂ ಎಲ್ಲಿಗಾದರೂ ಪ್ರವಾಸಕ್ಕೆ ಹೋಗಬೇಕೆಂದರೆ ಎಲ್ಲರನ್ನು ಹೊರಡಿಸುವುದು ಪ್ರಯಾಸವೇ ಸರಿ..! ಪ್ರವಾಸೀ ತಾಣ ಆಯ್ಕೆ ಆದರೆ ದಿನಾಂಕ ನಿಗದಿಯಾಗಲ್ಲ, ದಿನಾಂಕ ನಿಗದಿ ಆದ್ರೆ ಬರುವವರು ಒಪ್ಪೊಲ್ಲ..! ಈ ಬಾರಿಯೂ ಅದೇ ಕಥೆ.. ಐದಾರು ತಾಣಗಳನ್ನು ಕೆಲವು ದಿನಾಂಕಗಳನ್ನು ಬದಲಾಯಿಸಿದ ನಂತರ ಎಲ್ಲರೂ ಸಾವನದುರ್ಗವನ್ನು ಯಾವುದೇ ವಿರೋಧವಿಲ್ಲದೆ ಒಪ್ಪಿಕೊಂಡರು. ನಮ್ಮ ತಂಡದ ನಾಯಕಿ ಸಹನಾರನ್ನು ಹೊರತುಪಡಿಸಿ...!
ಆಕಸ್ಮಿಕವಾಗಿ ಆಯ್ಕೆಯಾದ ಸಾವನದುರ್ಗದ ಬಗ್ಗೆ ಹೆಚ್ಚೇನೂ ತಿಳಿಯದೆ ಅರೆಬರೆ ತಯಾರಿ ನಡೆಸಿ ನಮ್ಮ ಗುರುಗಳಾದ ವಿನಯ್ ಜಾಧವ್ ರವರ ಸಲಹೆಯಂತೆ ಎಲ್ಲರೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಹತ್ತಿರದ ಬಸ್ ನಿಲ್ದಾಣಕ್ಕೆ ಬರಲು ತೀರ್ಮಾನಿಸಿದೆವು.
ಬೆಳಿಗ್ಗೆ ಹೊರಡಲು ಒಪ್ಪಿದ್ದು ಭಾರತೀಯ ಕಾಲಮಾನ 7 ಗಂಟೆಗೆ... ನನ್ನ ಆಲೋಚನೆಯ ಪ್ರಕಾರ ಎಲ್ಲರೂ ಕನಿಷ್ಟ ಪಕ್ಷ 7 30ಕ್ಕೆ ಬರುತ್ತಾರೆ ಎಂದು... ನನ್ನ ಊರನ್ನು ನಾನು 6 ಗಂಟೆಗೆ ಬಿಟ್ಟೆ...! ಆದರೆ ಅಲ್ಲಿ ಆಗಿದ್ದೇ ಬೇರೆ... ಎಲ್ಲಾ ಬಂದು ಬಸ್ ನಿಲ್ದಾಣ ತಲುಪುವ ಹೊತ್ತಿಗೆ 8 ಗಂಟೆ ಮೀರಿ ಹೋಗಿತ್ತು..!
ನಮ್ಮ ಗುರುಗಳು ಬೇರೆ ಬಸ್ ಹೋಗೋದು ನಮ್ಮ ಮನೆ ರಸ್ತೆಯಲ್ಲೇ.... ನಾನು ಇಲ್ಲೇ ಹತ್ತೋದು ಅಂತಾ ಹೇಳಿದ್ರು ಹಾಗಾಗಿ ವರ್ಷ ಹಾಗೂ ಲಲಿತಾ ನಮ್ಮ ಗುರುಗಳ ಜೊತೆ ಬರುತ್ತೇವೆ ಎಂದಿದ್ದರು...
ಹೀಗಾಗಿ ಬಸ್ ನಿಲ್ದಾಣದಲ್ಲಿ ನನ್ನ ಜೊತೆಗೂಡಿದ್ದು ಲತಾ, ಶಾಲಿನಿ, ರುಬಿಯಾ ಹಾಗೂ ಇರ್ಫಾನ್.
ಈ ಪ್ರವಾಸದಲ್ಲಿ ನಮ್ಮ ಬಳಿ ಇದ್ದದ್ದು ಅರೆಬರೆ ಮಾಹಿತಿ ಬಿಡಿ ಆದರೆ ಈ ಲೇಖನ ಓದುತ್ತಿರುವ ನಿಮಗೆ ನಾನು ಖಚಿತ ಮಾಹಿತಿಯನ್ನೇ ಬಿಚ್ಚಿಡುತ್ತೇನೆ...!
ಸಾವನದುರ್ಗ ಬೆಂಗಳೂರಿನಿಂದ ಸುಮಾರು 52ಕಿಮೀ ಹಾಗೂ ಮಾಗಡಿ ಇಂದ 13ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ (ಕೃಷ್ಣರಾಜೇಂದ್ರ ಮಾರುಕಟ್ಟೆ) ನೇರವಾದ ಬಸ್ ವ್ಯವಸ್ಥೆ ಇದೆ ಆದರೆ ನಿಮ್ಮ ಮುಂದೆ ಈ ಎರಡು ಆಯ್ಕೆಗಳಿವೆ.
1. ಬಿಎಂಟಿಸಿ ಯ ವೇಗದೂತ ಬಸ್ ನಲ್ಲಿ ಹೋದರೆ ಬೆಟ್ಟ ಹತ್ತಲು ಎಂದಿಗೂ ಮನಸಾಗದು.. ಸುಮಾರು 70 ಕ್ಕೂ ಹೆಚ್ಚು ನಿಲುಗಡೆಗಳನ್ನು ಹೊಂದಿರುವ ಮಾರ್ಗದಲ್ಲಿ ಸಾಗಿದರೆ 50ಕಿಮೀಗೆ ಕೇವಲ 4 ಗಂಟೆಗಳಲ್ಲಿ ಕ್ರಮಿಸಬಹುದು.
ಅಥವಾ
2. KSRTC ಗ್ರಾಮಾಂತರ ಸಾರಿಗೆ ಬಸ್ ನಲ್ಲಿ ಮಾಗಡಿ ನಿಲ್ದಾಣಕ್ಕೆ ಮುನ್ನ ಬರುವ ಹೊಸಪೇಟೆ ಗೇಟ್ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಆಟೋ ಮೂಲಕ ಬೆಟ್ಟದ ಬುಡವನ್ನು ತಲುಪುವುದು.
ಸ್ವಂತ ವಾಹನದಲ್ಲಿ ಪ್ರಯಾಣಿಸಲು ಬಯಸುವವರು ಮೇಲೆ ಸೂಚಿಸಿದ ಮಾಹಿತಿಯನ್ನು ಕಡೆಗಣಿಸಿ...
ನಮ್ಮದು ಎರಡನೇ ಆಯ್ಕೆ...!
ಬಸ್ ಮಾರುಕಟ್ಟೆಯಿಂದ ಹೊರಟು ಸುಂಕದಕಟ್ಟೆ, ತಾವರೆಕೆರೆ ಮಾರ್ಗವಾಗಿ ಮಾಗಡಿ ತಲುಪುತ್ತದೆ.
ನಮ್ಮ ಗುರುಗಳು ಕೊಟ್ಟಿಗೆ ಪಾಳ್ಯದಲ್ಲಿ ಬಸ್ ಹತ್ತಿದರು... ಬರೋವಾಗ ಸ್ವಲ್ಪ ತಿಂಡಿ ತಿನಿಸು ತರುವ ಹೊಣೆ ಹೊತ್ತಿದ್ದರು...! ನಾವೂ ಬರಬೇಕಾದರೆ ಸೌತೆಕಾಯಿ, ಕಿತ್ತಳೆ ಹಣ್ಣುಗಳನ್ನು ತಂದಿದ್ದೆವು. ಹೀಗೆ ನಮ್ಮ ಪ್ರಯಾಣ ಮುಂದುವರೆಯಿತು...
ಬೆಳಿಗ್ಗೆ ಬೇಗ ಹೊರಟ ಕಾರಣ ಯಾರು ಕೂಡ ತಿಂಡಿ ತಿಂದಿರಲಿಲ್ಲ...! ಹೊಸಹಳ್ಳಿ ಗೇಟ್ ನಲ್ಲಿ ಬಸ್ ನಿಂದ ಕೆಳಗಿಳಿದ ನಾವು ಸುತ್ತಮುತ್ತಲೂ ಕಣ್ಣಾಡಿಸಿ ಅಲ್ಲಿನ ಸ್ಥಳೀಯ ಹೋಟೆಲ್ ನಲ್ಲಿ ತಿಂಡಿ ಮುಗಿಸಿದೆವು...!
ನಮ್ಮ ಗುರುಗಳು ಮಾತ್ರ ಕೆಲವು ಬಾರಿ ಬೆಟ್ಟದ ಬುಡದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು.. ಹೀಗಾಗಿ ನಮ್ಮ ಗುರುಗಳೇ ಈ ಪ್ರವಾಸದ ಮಾರ್ಗದರ್ಶಕರಾಗಿದ್ದರು.
ಹೊಸಹಳ್ಳಿ ಗೇಟ್ ನಿಂದ ಹಲವಾರು ಆಟೋ ರಿಕ್ಷಾಗಳು ಬೆಟ್ಟದ ಬುಡದವರೆಗು ತಲುಪಲು ಸಹಕಾರಿಯಾಗಿದೆ.... ಆಟೋರಿಕ್ಷಾ ದಲ್ಲಿ ಕುಳಿತು ಈ ದಾರಿಯಲ್ಲಿ ಬಸ್ ವ್ಯವಸ್ಥೆ ಯಾಕಿಲ್ಲ ಅಂತ ಯೋಚಿಸುತ್ತಿದ್ದಂತೆ.... ಆಟೋ ಹಿಂಬಾಗದಲ್ಲಿ ಒಂದು ಸರ್ಕಾರಿ ಬಸ್ ನಮ್ಮನ್ನ ಹಿಂಬಾಲಿಸುತ್ತಿದದ್ದು ನನಗೆ ಕಾಣಿಸಿ... ನಾನ್ ಅಂದೆ ಗುರುಗಳಿಗೆ...! ಏನ್ರೀ ಗುರುಗಳೇ ನಿಮ್ ಮಾತು ಕೇಳಿ ನಾವು ಆಟೋ ಹತ್ತಿದ್ವಿ... ಇನ್ನೊಂದ್ ಸ್ವಲ್ಪ ಹೊತ್ತು ಕಾದಿದ್ರೆ ಬಸ್ನಲ್ಲಿ ಬರಬಹುದಿತ್ತಲ್ಲ...! ಅಂತ...!
ನಮ್ಮ ಗುರುಗಳು ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಬದಲು ಒಂದು ಕಣ್ಣಿನ ಉಬ್ಬನ್ನು ಎತ್ತಿ ಒಂದು ನೋಟ ನೀಡುತ್ತಾರೆ.... ಅದರಲ್ಲೇ ನಾವು ಉತ್ತರ ಹುಡುಕಬೇಕು ಅಷ್ಟೇ...!
ನಮ್ಮ ಗುರುಗಳು ಆಟೋ ಹತ್ತಿದ ಕ್ಷಣವೇ ಆಟೋ ಚಾಲಕನಿಗೆ ತನಗಿಷ್ಟವಾದ ಹಾಡು ಹಾಕಲು ತಾಕೀತು ಮಾಡಿದರು... ಆಟೋದಲ್ಲಿ ಇದ್ದದ್ದು ಕೇವಲ 10 ರಿಂದ 15 ನಿಮಿಷ ಪ್ರಯಾಣ ಅಷ್ಟೇ.....! ಒಂದೆರಡು ಹಾಡುಗಳು ಮುಗಿಯುವಷ್ಟರಲ್ಲಿ ಆಟೋದಲ್ಲಿ ಒಂದೆರಡು ಸೆಲ್ಫೀ ಕ್ಲಿಕ್ಕಿಸಿದೆ, ಆಗ ಆಟೋ ಚಾಲಕ ಆಟೋ ನಿಲ್ಲಿಸಿದ ನಾನು ನಮ್ಮ ಗುರುಗಳು, ಇರ್ಫಾನ್, ಲತಾ ಹಾಗೂ ಶಾಲಿನಿ ಆಟೋ ದಿಂದ ಇಳಿದು ನೋಡಿದರೆ... ಆಟೋ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವರ್ಷ ಲಲಿತಾ ಹಾಗೂ ರುಬಿಯ ಆಗಲೇ ಆಟೋ ನಲ್ಲೆ ಫೋಟೋ ಸೆಷನ್ ಶುರು ಮಾಡಿದ್ದರು...
ಸಾವನದುರ್ಗ ಬೆಟ್ಟದ ಬುಡದಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವಿದೆ. ದೇವರ ದರ್ಶನ ಮುಗಿಸಿ ಪ್ರಸಾದ ಸವಿದು ಬೆಟ್ಟ ಏರಲು ಸುತ್ತ ಮುತ್ತಲು ದಾರಿಗಾಗಿ ಕಣ್ಣು ಹಾಯಿಸಿದೆವು..
ತುಂಬಾ ಹುಡುಕುವ ಅಗತ್ಯತೆ ಇಲ್ಲ, ದಾರಿ ದೇವಾಲಯದ ಎಡಭಾಗಕ್ಕೆ ಒಂದು ಮಣ್ಣಿನ ಕಾಲುದಾರಿ ಇದೆ ಅದೇ ದಾರಿ ಇರಬಹುದೆಂದು ನಮ್ಮ ಗುರುಗಳು ನಮ್ಮನ್ನು ಕರೆದೊಯ್ದರು. ಅಲ್ಲಿ ನಮಗೆ ಕಂಡಿದ್ದು ಮಾತ್ರ ಬೃಹತ್ತಾದ ಏಕಶಿಲಾ ಪರ್ವತ ಅದುವೇ ಸಾವನದುರ್ಗ ಬೆಟ್ಟ.
ಕರ್ನಾಟಕದಲ್ಲಿ ಏಕಶಿಲಾ ಬೆಟ್ಟಗಳು ಇರಬಹುದು ಆದರೆ ಪ್ರಕೃತಿದತ್ತವಾಗಿ ಇರುವ ಈ ಬೆಟ್ಟದಲ್ಲಿ ಯಾವುದೇ ಆಧುನಿಕ ಸಲಕರಣೆಗಳನ್ನು ಉಪಯೋಗಿಸಿ ಬೆಟ್ಟವನ್ನು ಏರಲು ಕಂಬಿಗಳಾಗಲಿ, ಅಥವಾ ಕಲ್ಲಿನ ಮೆಟ್ಟಿಲುಗಲಾಗಳಿ ಇಲ್ಲ, ಕೆಲವು ಕಡೆ ಬೆಟ್ಟವನ್ನು ಕೊರೆದು ಮೆಟ್ಟಿಲುಗಳನ್ನು ನಿರ್ಮಿಸಲು ಪ್ರಯತ್ನಗಳು ನಡೆದಿವೆಯಾದರೂ ಅದರಲ್ಲಿ ಸಫಲಾರಾಗಿಲ್ಲ ಅಂತ ನನಗನ್ನಿಸುತ್ತೆ..!
ಸಾವನದುರ್ಗ ಬೆಟ್ಟವನ್ನ ಬರೀ google map ನಲ್ಲಿ ನೋಡಿದ್ದ ನಾನು ಎಲ್ಲ ಬೆಟ್ಟಗಳಲ್ಲಿ ಈ ಬೆಟ್ಟವೂ ಒಂದು ಅಂತಾ ಅಂದುಕೊಂಡಿದ್ದೆ...! ಆದರೆ ಬೆಟ್ಟವನ್ನು ಹತ್ತಿರದಿಂದ ನೋಡಿದಾಗಲೇ ತಿಳಿದದ್ದು ನಾನು ಈ ತರಹದ ಬೆಟ್ಟವನ್ನು ಹಿಂದೆಂದೂ ಏರಿಯೇ ಇಲ್ಲ ಅಂತ...
ಕಾಲುದಾರಿಯಿಂದ ಬರುತ್ತಿದ್ದಂತೆ ಕಂಡ ಬೃಹದಾಕಾರದ ಈ ಬೆಟ್ಟ ನೋಡುತ್ತಲೇ ಶಾಲೆಗಳಲ್ಲಿ ಆಡುತ್ತಿದ್ದ ಜಾರುಬಂಡಿಯಂತೆ ಕಂಡಿತು... ಆದರೂ ಎದೆಯಲ್ಲಿ ಕಳವಳ ಇಷ್ಟು ದೊಡ್ಡ ಜಾರುಬಂಡಿ ಏರುವುದು ಹೇಗೆ...? ಏರಿದರೂ ಇಳಿಯುವುದು ಹೇಗೆ ಅಂತ...
ನಮ್ಮ ತಂಡದಲ್ಲಿದ್ದ ಅತೀ ಸಾಹಸೀ ಪ್ರವಾಸಿಗ ಎಂದರೆ ಅದು ಇರ್ಫಾನ್. ಕಳೆದಬಾರಿ ಶಿವಗಂಗೆ ಬೆಟ್ಟಕ್ಕೆ ತಪ್ಪಿಸಿಕೊಂಡಿದ್ದ... ಈ ಬಾರಿ ನಮ್ಮ ಜೊತೆಗಾರನಾಗಿ ಬೆಟ್ಟ ಹತ್ತುವಾಗ ಮುಂಚೂಣಿಯಲ್ಲಿದ್ದ...!
ನಾವು ಹೋಗುವಷ್ಟರಲ್ಲಾಗಲೆ ತುಂಬಾ ಯುವಕ ಯುವತಿಯರು ಬೆಟ್ಟವನ್ನು ಹತ್ತಿ ಇಳಿಯುತ್ತಿರುವುದು ಕಂಡಿತು. ಆ ಕ್ಷಣಕ್ಕೆ ಅನ್ನಿಸಿದ್ದು ಬೆಟ್ಟ ಏರುವುದಕ್ಕಿಂತ ಇಳಿಯುವುದು ಸುಲಭವೆಂದು...
ನನ್ನ ಯೋಜನೆಯಂತೆ ಬೆಟ್ಟದ ಬುಡದಿಂದ ಮೆಲ್ಲನೆ ಹತ್ತಲು ಶುರು ಮಾಡಿದೆವು. ನನ್ನ ಊಹೆಯ ಪ್ರಕಾರ ಈ ಹಿಂದೆ ಈ ತರಹದ ಬೆಟ್ಟವನ್ನು ಯಾರೂ ಕಂಡಿಲ್ಲ,.! ಎಲ್ಲ ಬೆಟ್ಟಗಳಲ್ಲೂ ಸರ್ವೇ ಸಾಮಾನ್ಯವಾಗಿ ಬಂಡೆ ಕಲ್ಲನ್ನು ಕೊರೆದು ಮೆಟ್ಟಿಲುಗಳನ್ನು ನಿರ್ಮಿಸಿರುತ್ತಾರೆ... ಆದರೆ ಈ ಬೆಟ್ಟದ ಕಥೆಯೇ ಬೇರೆ. ಈ ಬೆಟ್ಟ ಹತ್ತಲು ಯಾವುದೇ ರೀತಿಯ ಹಿಡಿತ ನಮ್ಮ ಕೈ ಕಾಲುಗಳಿಗೆ ಇಲ್ಲ...
ಸುತ್ತ ಮುತ್ತಲಿನ ಬೃಹದಾಕಾರದ ಬಂಡೆಗಳು, ಅದರ ಪಕ್ಕಕ್ಕೆ ಪಾತಾಳವನ್ನೆ ಸದೃಶ ವಾಗಿಸುವ ಬಂಡೆಯ ಜಾರು ನೋಟ.
ಅದರೊಂದಿಗೆ ಸುತ್ತುವರೆದಿರುವ ಹಸಿರಿನ ವನಸಿರಿ ನಮ್ಮ ಕಣ್ಣುಗಳನ್ನು ತಂಪಾಗಿರಿಸಿತ್ತು.
ಅದಷ್ಟಕ್ಕೆ ನಾವು ಸುಮ್ಮನಿರುತ್ತಿವಾ, ಬರುವಾಗ ತಂದಿದ್ದ ಸೌತೆಕಾಯಿ, ಕಿತ್ತಳೆ ಹಣ್ಣು ತೆಗೆದು ಒಂದೊಂದೇ ಖಾಲಿ ಮಾಡಿ ಇನ್ನೂ ಏನಾದರೂ ಇದೆಯಾ ಅಂತ ಹುಡುಕಿದೆವು.
ಹತ್ತುವಾಗ ಬಲಕ್ಕೆ ಒಂದು ಬಂಡೆಯ ಮೇಲೆ ನಿಂತರೆ ಅಲ್
ಲಿನ ಹಸಿರಿನ ಗಿಡಮರಗಳ ಭವ್ಯ ನೋಟ ಸಿಗುತ್ತಿತ್ತು.. ನೋಡ ನೋಡುತ್ತಿದ್ದಂತೆ ಎಲ್ಲರೂ ಆ ಬಂಡೆಯ ಮೇಲೆ ಜಮಾಯಿಸಿ ಬಿಟ್ಟರು... ಅಲ್ಲಿನ ಬೆಟ್ಟದ ಬಲಕ್ಕೆ ನಮಗೆ ವಿಸ್ತಾರವಾದ ಮಂಚನಬೆಲೆ ಜಲಾಶಯ ಕಂಡಿತು.
ಬಂಡೆಯ ಮೇಲೆ ಕುಳಿತು ಆ ವನ್ಯ ಸಂಪತ್ತನ್ನು ಕಣ್ಣಿನ ರೆಪ್ಪೆಗಳ ಅಂತರದಲ್ಲಿ ಕಲೆ ಹಾಕುತ್ತಿದ್ದರು.. ಅಷ್ಟರಲ್ಲಿ ಅಲ್ಲಿದ್ದ ರುಬಿಯಾ ಮೊಬೈಲ್ ನಲ್ಲಿ ಸೆಲ್ಫಿ ತೆಗೆಯಲು ಶುರು ಮಾಡಿದ್ದಳು. ಸ್ವತಃ ತಮ್ಮ ಫೋಟೋವನ್ನು ತಾವೇ ತೆಗೆದರೆ ಅದನ್ನು ಸೆಲ್ಫಿ ಎನ್ನುತ್ತಾರೆ... ಆ ಕಡೆ ಇಂದ ಒಂದು ಈ ಕಡೆ ಇಂದ ಒಂದು ಫೋಟೋ ಕ್ಲಿಕ್ಕಿಸುವ ಕೆಲಸ ನಡೆಯುತ್ತಿತ್ತು.. ಈ ಫೋಟೋ ಗಳಲ್ಲಿ ಗುಂಪಿನ ಫೋಟೋಗಳೂ ಉಂಟು..
ಹೀಗೇ ಮೊಬೈಲ್ ಫೋನ್ ಗಳಲ್ಲಿ ಕಳೆದು ಹೋಗಿದ್ದ ಕೆಲವರು.. ತಮ್ಮ ಮೊಬೈಲ್ನಲ್ಲಿ tik tok ಮಾಡಬೇಕು ಎಂದು ಎಲ್ಲರನ್ನೂ ಒಪ್ಪಿಸಲು ಯತ್ನಿಸಿದರು...
ಈ ಟಿಕ್ ಟಾಕ್ ನಿಂದ ಈಗಲೂ ತುಂಬಾ ದೂರವೇ ಉಳಿದಿರುವ ನಾನು ಈ ಪ್ರಯತ್ನದಿಂದ ಹಿಂದೆ ಸರಿದೆ... ಅದು ಅವರಿಗೆ ವರವಾಗಿ ಪರಿಣಮಿಸಿತು. ಹೇಗೆಂದರೆ ಈ ಟಿಕ್ ಟಾಕ್ ಮಾಡಲು ಯಾರಾದರೂ ಕ್ಯಾಮೆರಾ ಮ್ಯಾನ್ ಅವಶ್ಯವಿತ್ತು ಬೇರೆ ವಿಧಿ ಇಲ್ಲದೆ ಆ ಗೋಜಿಗೆ ನಾನು ಸಿಲುಕಿದೆ.
ಒಂದಾಯ್ತು ಎರೆಡಾಯ್ತು ಮೂರೂ ಆಯ್ತು ಇನ್ನೂ ಯಾರೂ ಮುಂದೆ ಬೆಟ್ಟ ಹತ್ತೋಕೆ ಸಿದ್ಧವಿಲ್ಲ...! ಆಗ ಆಕ್ಷಣ ಆ ಟಿಕ್ ಟಾಕ್ ಕಂಡು ಹಿಡಿದವ ನನಗೆ ಸಿಕ್ಕಿದ್ದರೆ ಅಲ್ಲೇ ಇದ್ದ ಕಲ್ಲುಗಳಿಂದ ಹೊಡೆದು ಗಾಯಗೊಳಿಸುತಿದ್ದೆ. ಆದ್ರೆ ಆ ಪಾಪೀ ಎಲ್ಲೋ ಚೀನಾದ ಮೂಲೆಯಲ್ಲಿ ಇರುತ್ತಾನೆ.. ನನ್ನ ಕೈಗೆ ಎಲ್ಲಿ ಸಿಗಬೇಕು... ಅಲ್ವಾ...?
ಸುಮಾರು ಅರ್ಧ ತಾಸಿನ ನಂತರ ಎಲ್ಲರೂ ಮೆಲ್ಲಗೆ ಎದ್ದು ಬೆಟ್ಟ ಏರಲು ಸಿದ್ಧರಾದರು. ಆಕಾಶ ಶುಭ್ರವಾಗಿ ನೀಲಿ ಬಣ್ಣದ ದಿಗಂತ ಕಾಣುತಿತ್ತು. ಸೂರ್ಯನ ಕಿರಣಗಳು ಕೂಡ ಯಾವುದೇ ಅಡೆ ತಡೆ ಇಲ್ಲದೆ ನೇರವಾಗಿ ನಮ್ಮ ಮೇಲೆ ದಾಳಿ ಮಾಡಿತ್ತು. ಆದರೆ ಅಲ್ಲಿನ ತಂಪಾದ ಗಾಳಿ ಜೋಗುಳದ ಜೋಕಾಲಿಯಂತೆ ನಮ್ಮನ್ನು ತೋಗುತ್ತಾ ಆಯಾಸ ನೀಗಿಸುತಿತ್ತು. ಸ್ವಲ್ಪ ದೂರ ನಡೆದಂತೆ ಒಂದು ಕೋಟೆಯ ಮಾದರಿಯ ದೊಡ್ಡ ದೊಡ್ಡ ಕಲ್ಲುಗಳಿಂದ ಮಾಡಲ್ಪಟ್ಟ ಗೋಡೆ ಎದುರಾಯ್ತು...! ನನಗಂತೂ ಕೋಟೆ ಅದರ ಇತಿಹಾಸ ತಿಳಿಯೋಕೆ ತುಂಬಾ ಖುಷಿ. ಆ ದಪ್ಪ ದಪ್ಪನಾದ ಕಲ್ಲುಗಳ ಬೃಹತ್ ಗೋಡೆಗಳನ್ನು ನೋಡುತ್ತಾ ಮುನ್ನಡೆದ ನನಗೆ ನಿರಾಸೆ ಕಣ್ಣೆದುರಿಗೆ ಇತ್ತು. ಆ ಗೋಡೆಗಳ ಹಿಂಭಾಗ ಶತ್ರುಗಳ ದಾಳಿಗೆ ಅಥವಾ ಕಾಲಾನುಕ್ರಮದಲ್ಲಿ ನಡೆದ ಪ್ರಕೃತಿ ವಿಕೋಪಗಳಿಗೋ ಸಿಲುಕಿ ಹಾಳಾಗಿ ಹೋಗಿತ್ತು. ಅಲ್ಲಿಂದ ಮುಂದೆ ಅಲ್ಲಲ್ಲಿ ಬೃಹತ್ ಗಾತ್ರದ ಕಲ್ಲು ಬಂಡೆಗಳು ದುಂಡಾಗಿ ಇದ್ದರೂ ಒಂದಕ್ಕೊಂದು ಅಂಟಿಕೊಂಡು ಆ ಬೆಟ್ಟದ ಮೇಲೆ ನಿಂತಿದ್ದವು...! ಆ ಕಲ್ಲು ಬಂಡೆಗಳು ಹುಟ್ಟಿ ಎಷ್ಟು ಶತಮಾನಗಳು ಕಳೆದಿವೆಯೋ ನಮಗೆ ಅಂದಾಜು ಕೂಡ ಇಲ್ಲ.
ಅಲ್ಲಿ ಬರೀ ಕಲ್ಲುಗಳು ಮಾತ್ರವಲ್ಲದೆ ಸಣ್ಣ ಸಣ್ಣ ಹುಲ್ಲಿನ ಹಾಸು, ಹಾಗೂ ತುಂಬಾ ವರ್ಷಗಳು ಕಳೆದಂತೆ ಕಾಣುತ್ತಿದ್ದ ಮರಗಳೂ ಚಿತ್ರ ವಿಚಿತ್ರವಾಗಿ ನಮಗೆ ಕಂಡವು.
ಸಾವನದುರ್ಗ ಬೆಟ್ಟದ ಒಂದು ಕಿರು ಪರಿಚಯ ನಿಮಗಾಗಿ :
ಈ ಬೆಟ್ಟವು ದಕ್ಷಿಣದ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಬರುವ ಬೆಟ್ಟವಾಗಿ 1226 ಮೀಟರ್ ಸಾಗರ ಮಟ್ಟಕ್ಕಿಂತ ಎತ್ತರದಲ್ಲಿದೆ.
ಈ ಬೆಟ್ಟವು ಕರಿಗುಡ್ಡ ಹಾಗೂ ಬಿಳಿಗುಡ್ಡ ಎಂಬ ಎರಡು ಗುಡ್ಡಗಳಿಂದ ರೂಪುಗೊಂಡಿದೆ.
ಇತಿಹಾಸದ ಪುಟಗಳಲ್ಲಿ ಈ ಬೆಟ್ಟದ ಉಲ್ಲೇಖ ಮೊದಲಬಾರಿಗೆ ಕ್ರಿಸ್ತಶಕ 1340 ರಲ್ಲೀ ಹೊಯ್ಸಳರ ಮೂರನೇ ಬಲ್ಲಾಳ ಇದನ್ನು ಸಾವಂಡಿ ಎಂದು ಕರೆದಿದ್ದಾನೆ.
ಇದು ಮಾಗಡಿ ಆಳುತ್ತಿದ್ದ ಕೆಂಪೇಗೌಡರ ಎರಡನೇ ರಾಜಧಾನಿಯಾಗಿ ಕ್ರಿಸ್ತಶಕ 1638 ರಿಂದ 1728 ವರೆಗೂ ಇತ್ತೆಂದೂ..! ನಂತರದಲ್ಲಿ ಮೈಸೂರು ಇದನ್ನು ಆಕ್ರಮಿಸಿ ಆನಂತರ ದಳವಾಯಿ ದೇವರಾಜ ಇದನ್ನು ತನ್ನ ಸುಪ್ಪತಿಕೆಗೆ ತೆಗೆದುಕೊಂಡ ಎನ್ನಲಾಗಿದೆ.
ಕ್ರಿಸ್ತಶಕ 1791 ರಲ್ಲಿ ನಡೆದ ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನನ ಸೈನ್ಯದಿಂದ ಲಾರ್ಡ್ ಕಾರ್ನ್ವಾಲಿಸ್ ಈ ಜಾಗವನ್ನು ಕಿತ್ತುಕೊಂಡ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಅದೇ ಕಾಲದ ಬ್ರಿಟಿಷ್ ಬರಹಗಾರ ರಾಬರ್ಟ್ ಹೋಮ್ ತನ್ನ "ಸೆಲೆಕ್ಟ್ ವಿಯೂಸ್ ಇನ್ ಮೈಸೂರ್" ಎಂಬ ಬರಹದಲ್ಲಿ ಈ ಬೆಟ್ಟವನ್ನು "ಸಾವಿನ ದುರ್ಗಾ" ಫೋರ್ಟ್ ಆಫ್ ಡೆತ್ ಎಂದು ಉಲ್ಲೇಖಿಸಿದ್ದಾನೆ.
ಈ ಬೆಟ್ಟ ಅಳಿವಿನ ಅಂಚಿನಲ್ಲಿರುವ ಹಳದಿ ಗಂಟಲಿನ ಬುಲ್ಬುಲ್ ಹಕ್ಕಿಗಳ ನೆಲೆಯಾಗಿದೆ. ಮತ್ತು ಒಂದು ಕಾಲದಲ್ಲಿ ರಣಹದ್ದುಗಳ ವಾಸ ಸ್ಥಾನವಾಗಿ ಈ ಬೆಟ್ಟದ ಸುತ್ತಲಿನ ಕಾಡು ಪ್ರಸಿದ್ದಿಯಾಗಿತ್ತು. ಇಲ್ಲಿ ಈಗಲೂ ಚಿರತೆ ಹಾಗೂ ಕರಡಿಗಳು ಇವೆ ಎಂದು ಸ್ಥಳೀಯರು ಮಾತಾಡಿಕೊಳ್ಳುತ್ತಾರೆ.
ನಾವು ಆ ಬೃಹದಾಕಾರದ ಬೆಟ್ಟವನ್ನು ಹತ್ತುತ್ತಾ ಮುಂದುವರೆದಂತೆ ನಮಗೊಂದು ದೊಡ್ಡ ಬಂಡೆ ಕೆಲವು ಸಣ್ಣ ಪುಟ್ಟ ಕಲ್ಲುಗಳ ಬೆಂಬಲದಿಂದ ನಿಂತಿರುವುದು ಕಂಡಿತು. ಆ ಬಂಡೆಗಳನ್ನು ಅಚ್ಚರಿಯಿಂದ ನೋಡುತ್ತಿರುವಾಗ. ನಮಗೇ ತಿಳಿಯದಂತೆ ಆಕಾಶದಲ್ಲಿನ ಮೇಘರಾಶಿಯನ್ನು ನಮ್ಮ ದಣಿವಾರಿಸುತಿದ್ದ ತಂಗಾಳಿ ನಮ್ಮ ನೆತ್ತಿಯ ಮೇಲೆ ಒಗ್ಗೂಡಿಸುತಿತ್ತು. ಅಲ್ಲಿಂದ ಕೆಲವೇ ಹೆಜ್ಜೆಗಳು ಸಾಗುತಿದ್ದಾಗಲೆ ನಮ್ಮ ಮೇಲೆ ಇದ್ದ ಮೋಡಗಳು ಸಣ್ಣ ಸಣ್ಣ ಮಳೆ ಹನಿಗರೆದವು. ನಾನು ಸುತ್ತಲೂ ಕಣ್ಣಾಡಿಸಿದೆ.. ಆ ಬೆಟ್ಟದಮೇಲೆ ಮಳೆಯಿಂದ ತಪ್ಪಿಸಿಕೊಳ್ಳಲು ನಮಗೆ ಇದ್ದ ಏಕಮಾತ್ರ ಆಯ್ಕೆ ಎಂದರೆ ಅಲ್ಲಿದ್ದ ಒಂದು ದೊಡ್ಡ ಬಂಡೆ. ನಾವೆಲ್ಲ ಹಾರುವ ಹಕ್ಕಿಗಳು ತಮ್ಮ ಗೂಡಿಗೆ ಸೇರುವಂತೆ ಆ ದೊಡ್ಡ ಬಂಡೆ ಅಡಿಯಲ್ಲಿ ಆಸರೆ ಪಡೆದೆವು. ಕೆಲವೇ ಕ್ಷಣಗಳಲ್ಲಿ ಮಳೆ ಜೋರಾಯಿತು...! ಸಾಮಾನ್ಯವಾಗಿಯೆ ಈ ಬೆಟ್ಟವನ್ನು ಹತ್ತಲು ಕಷ್ಟಪಡಬೇಕಿತ್ತು ಆದರೆ ಈಗ ಮಳೆ ಬೇರೆ ಬರುತ್ತಿದೆ... ಬೆಟ್ಟದ ಮೇಲ್ಮೈ ಎಲ್ಲ ನೀರಿನ ಹನಿ ಬಿದ್ದು ಜಾರುವ ಹಾಗಿತ್ತು. ಆ ಬೃಹತ್ ಶಿಖರದ ಮೇಲೆ ಬಿದ್ದ ಹನಿಗಳು ನಾ ಮುಂದೆ ತಾ ಮುಂದೆ ಎಂದು ಹಳ್ಳದಕಡೆಗೆ ಓಡುತ್ತಿರುವುದು ಕಂಡಿತು.
ಆಗಲೇ ಸಮಯ ಮಧ್ಯಾಹ್ನ ಮೂರುಗಂಟೆ ಇನ್ನೂ ಬೆಟ್ಟ ಹತ್ತುವುದು ಅಸಾಧ್ಯ ಎಂದು ಪರಿಗಣಿಸಿ ಹಿಂತಿರುಗಲು ಮಳೆ ನಿಲ್ಲುವ ವರೆಗೂ ಕಾದು ಹಿಂತಿರುಗಲು ಅಣಿಯಾದೆವು.
ಈಗ ಇಳಿಯುವುದು ಬಿಸಿಲಿನ ಬೇಗೆಯಲ್ಲಿ ಆ ಇಳಿಜಾರಿನ ಬೆಟ್ಟವನ್ನು ಇಳಿಯುವುದಕ್ಕಿಂತ ಕಡು ಕಷ್ಟವಾಗಿ ಪರಿಣಮಿಸಿದ್ದು ಮಾತ್ರ ವಿಷಾದಕರ. ಏಕೆಂದರೆ ಮಳೆ ಬಿದ್ದು ಬೆಟ್ಟದ ಕಲ್ಲು ಬಂಡೆಗಳ ಮೇಲೆಲ್ಲಾ ನೀರು ಹರಿಯುತ್ತಿತ್ತು. ಹೀಗಿರುವಾಗ ಮೊದಲೇ ಜಾರುವ ಭಯವಿದ್ದ ನಾನು ಇಳಿಯುವುದಕ್ಕೆ ಹಿಂಜರಿದೆ... ಆದರೆ ಹೇಗಾದರೂ ಮಾಡಿ ಕೆಳಗೆ ಹೋಗಲೇ ಬೇಕಲ್ಲ...! ಅದಕ್ಕಾಗಿ ಒಬ್ಬೊಬ್ಬರನ್ನೇ ಮೆಲ್ಲಗೆ ಹುಷಾರಾಗಿ ಇಳಿಯುವಂತೆ ಹೇಳಿ ಎಲ್ಲರೂ ಒಬ್ಬರ ಹಿಂದೆ ಸಾಧ್ಯವಾದಲ್ಲಿ ಕೈ ಹಿಡಿದು ಮುಂದೆ ಹೊರಟೆವು... ಮುಂದೆ ಚಂದು, ಶಾಲು, ಲಲ್ಲು ವರ್ಷ ಹಾಗೂ ರುಬೀಯ ನಮ್ಮ ಗುರುಗಳ ಜೊತೆ ಮುನ್ನಡೆದರೆ ಇರ್ಫಾನ್ ಅವರ ಹಿಂದೆ ಮತ್ತು ಕೊನೆಯಲ್ಲಿ ಬಾಲಂಗೋಚಿ ಯಂತೆ ನಾನು ಮೆಲ್ಲಗೆ ಹೆಜ್ಜೆ ಇಡುತ್ತಾ ಮುಂದುವರೆದೆವು. ಕೋಟೆಯ ಬಳಿ ಬರುವ ವರೆಗೂ ಸಣ್ಣ ಪುಟ್ಟ ಕಲ್ಲುಗಳು ಹಾಗೂ ಸಣ್ಣ ಕುರುಚಲು ಗಿಡಗಳು ಇದ್ದ ಕಾರಣ ಹೇಗೋ ಅಲ್ಲಲ್ಲಿ ಕಾಲನ್ನು ಮೆಲ್ಲಗೆ ಇಟ್ಟು ಹೆಜ್ಜೆ ದೃಡಪಡಿಸಿಕೊಂಡು ನಡೆದೆವು.
ಕೋಟೆಯ ಗೋಡೆಗಳ ರಚನೆಗಳ ಪಕ್ಕದಲ್ಲಿ ಯಾವುದೋ ಯುದ್ಧದ ದಾಳಿಗೆ ಸಿಲುಕಿ ಒಂದು ಕಿಂಡಿ ಅಥವಾ ಓಡಾಡಲು ಜಾಗವಿತ್ತು..! ಮೇಲೆ ಹತ್ತುವಾಗಲೂ ಅದೇ ಜಾಗದಲ್ಲಿ ಹತ್ತಿದ್ದು. ಅಲ್ಲಿಗೆ ಬರುವಷ್ಟರಲ್ಲಿ ನೀರು ಧಾರಾಕಾರವಾಗಿ ಹರಿದು ಅಲ್ಲಿ ಒಂದು ತೊರೆಯ ರೂಪಕ್ಕೆ ಬಂದಿತ್ತು. ಬೆಳಗಿನಿಂದ ಬಿಸಿಲಿಗೆ ಮೈ ಒಡ್ಡಿದ್ದ ಆ ಶಿಲಾ ಬೆಟ್ಟ ಮಳೆ ಹನಿ ಬಿದ್ದಾಗ, ಬಿಸಿ ನೀರಿನ ಹನಿ ಬಿದ್ದಾಗ ಚಿರುಗುಟ್ಟುವ ಸದ್ದು ಹಾಗೂ ಮೆಲ್ಲಗೆ ಹಬೆ ಏಳುತಿತ್ತು. ಅಲ್ಲಲ್ಲಿ ನೀರು ಆವಿಯಾಗಿ ನೆಲ ಒಣಗಿತ್ತು..! ಆ ಬೆಟ್ಟದಲ್ಲಿ ಕುಂಟೆ ಬಿಲ್ಲೆ ಆಟದಂತೆ ಎಲ್ಲೆಲ್ಲಿ ಒಣಗಿರುವ ನೆಲವಿದೆಯೋ ಅಲ್ಲಿಗೆ ನಮ್ಮ ಜಿಗಿತ ಪ್ರಾರಂಭವಾಯಿತು. ಹೇಗೋ ಜಿಗಿದು ನೆಗೆದು ಮುಂದೆ ಬಂದರೆ ಅಲ್ಲಿ ಅತೀ ದೊಡ್ಡ ಜಾರುಬಂಡೆ. ಲಲ್ಲೂ ಚಂದು ಹಾಗೂ ಶಾಲು ಆಗಲೇ ಮುಂದೆ ಇದ್ದಾರೆ. ರುಬಿಯಾ ತನ್ನ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಬೆಟ್ಟದ ಒಂದು ಅಂಚಿನ ಬಳಿ ಬೆಳೆದಿದ್ದ ಸಣ್ಣ ಗಾತ್ರದ ಮರದ ಆಸರೆ ಪಡೆದು ಅದರ ರೆಂಬೆ ಕೊಂಬೆಗಳ ಸಹಾಯದಿಂದ ಇಳಿಯುತಿದ್ದಳು...! ನಾನು ಹಿಂದೆಯೇ ಹೋಗಿ ಅದೇ ರೀತಿ ಇಳಿಯುವ ಪ್ರಯತ್ನ ಪಡದೆ ನನ್ನ ಶೂಗಳ ಮೇಲೆ ಕುಳಿತು ಎರಡೂ ಕೈಗಳನ್ನು ಬೆಟ್ಟವನ್ನು ಸರಿಸುತ್ತಾ ಜಾರುಬಂಡೆಯಲ್ಲಿ ಜಾರುವ ಹಾಗೆ ಜಾರುತ್ತಾ ಕೆಳಗೆ ಬಂದೆ... ನನ್ನ ನೋಡಿ ಕೆಲವರು ನಕ್ಕರಾದರೂ ನನಗೆ ಒಳ್ಳೆಯ ಮಜಾ ಬಂತು.. ಜಾರುಬಂಡಿ ಜಾರಿ....
ಹೇಗೋ ಸರ್ಕಸ್ ಮಾಡಿ ಕೆಳಗಿಳಿದು ಬೆಟ್ಟದ ತಪ್ಪಲಿನಲ್ಲಿ ಇದ್ದ ಕೆಲವು ಸಣ್ಣ ತಿಂಡಿ ಮಳಿಗೆಯಲ್ಲಿ ಸೌತೆಕಾಯಿ ಕೊಂಡು ಅದಕ್ಕೆ ಹಸಿ ಮೆಣಸಿನಕಾಯಿ ಖಾರ ಹಾಗೂ ಉಪ್ಪನ್ನು ಬೆರೆಸಿ ಎಲ್ಲರೂ ಹಂಚಿಕೊಂಡು ತಿಂದು ಹೊಸಹಳ್ಳಿ ಗೇಟ್ ಗೆ ಆಟೋ ಹತ್ತಿದೆವು.
ಹೊಸಹಳ್ಳಿ ಗೇಟ್ ಬಳಿ ಮಾಗಡಿ ಇಂದ ಕೃಷ್ಣರಾಜ ಮಾರುಕಟ್ಟೆಗೆ ಹೊರಟಿದ್ದ ಬಸ್ ಹಿಡಿದು ಮನೆಗಳಿಗೆ ಹಿಂತಿರುಗಿದೆವು. ಹೀಗೆ ಒಂದು ದಿನದ ಪ್ರವಾಸ ಪ್ರಯಾಸವಾಗಿಯೂ ತಿರುಗಬಹುದು ಎಂದು ನನಗೆ ಅರಿವಾಯಿತು. ಅದಕ್ಕಾಗಿಯೇ ಈ ಕಥನದ ಹೆಸರು "ಎಂತ ಸಾವ...! ಸಾವನದುರ್ಗ ಎಂದು..!