ಅವಮಾನದ ಬೇಗೆ
ಅವಮಾನದ ಬೇಗೆ
ನಿರ್ಜನವಾದ ಕಾಡು. ಎಲ್ಲೆಲ್ಲೂ ಪ್ರಾಣಿ ಪಕ್ಷಿಗಳ ಅರಚಾಟ ಕಿರುಚಾಟ. ಅಂತಹ ಕಾಡಿನ ಮಧ್ಯದಲ್ಲಿ ತುಂಬು ಗರ್ಭಿಣಿಯೊಬ್ಬಳು ಮೂರ್ಛೆ ತಪ್ಪಿ ಬಿದ್ದಿದ್ದಾಳೆ. ಮುಖ ಕಳೆಗುಂದಿದೆ, ಮುಡಿ ಬಿಚ್ಚಿ ಕೂದಲೆಲ್ಲಾ ಹರಡಿಕೊಂಡಿದೆ. ಮಣ್ಣಿನ ಜೊತೆ ಮಳೆ ಹನಿಯೂ ಸೇರಿದ್ದರಿಂದ ಮೈಯೆಲ್ಲಾ ಕೆಸರಾಗಿದೆ. ಭೂತಾಯಿಯ ಸೌಂದರ್ಯ ಸವಿಯಲು ಬಂದು ವನ್ಯ ಮೃಗಗಳಿಂದ ತೊಂದರೆಗೊಳಗಾದ ಸ್ವರ್ಗದ ರಂಭೆಯೋ, ಮೇನಕೆಯೋ ಎಂಬಂತೆ ಕಾಣುತ್ತಿದ್ದಾಳೆ.
ದೂರದಲ್ಲಿ ಹೊಸ ದಿನದ ಕೆಲಸಗಳಿಗೆ ಸಹಿ ಹಾಕಿ ನಿಧಾನವಾಗಿ ಮೇಲೇರುತ್ತಿರುವ ಸೂರ್ಯ ಕಾಣಿಸುತ್ತಿದ್ದಾನೆ. ಕಾಡಿನ ಎಲ್ಲಾ ಪ್ರಾಣಿ ಪಕ್ಷಿಗಳು ಆಹಾರ ಹುಡುಕುತ್ತಾ ಹೋಗುತ್ತಿವೆ. ಅಲ್ಲೇ ತುಸು ದೂರದಲ್ಲಿ ಕೆಂಬಣ್ಣದ ಹಣ್ಣುಗಳಿದ್ದ ಮರದಲ್ಲಿ ಮಂಗಗಳು ಮುಗಿ ಬಿದ್ದಿತ್ತು. ಕೆಲವು ಮಂಗಗಳು ಹಣ್ಣನ್ನು ಕೀಳಿ ತಮ್ಮ ಎರಡೂ ಹಸ್ತಗಳ ಮಧ್ಯೆ ಇಟ್ಟು ಅದುಮಿದಾಗ ಹಣ್ಣಿನಿಂದ ಬೀಳುತ್ತಿದ್ದ ರಸವನ್ನು ನಾಲಿಗೆ ಹೊರಚಾಚಿ ಚಪ್ಪರಿಸುತ್ತಿದ್ದರೆ, ಮರದ ತುದಿ ಏರಿ ಕೂತಿದ್ದ ಪುಟಾಣಿ ಕೋತಿಮರಿ ತನ್ನ ತಾಯಿಯ ಬಾಲ ಎಳೆದು ಕೀಟಲೆ ಕೊಡುತ್ತಿತ್ತು. ಇನ್ನೊಂದೆಡೆ ಪಕ್ಕದ ಮರವೇರಿ ಕೂತಿದ್ದ ಮಂಗ ತನ್ನ ಮರಿಗಳ ಮೈಯಲ್ಲಿದ್ದ ಹೇನನ್ನು ತೆಗೆದು ಬಾಯಿಗೆಸೆಯುತ್ತಿತ್ತು.
ಹೀಗೆ ಎಲ್ಲಾ ಮಂಗಗಳು ತಮ್ಮ ಕೆಲಸದಲ್ಲಿ ನಿರತರಾಗಿದ್ದರೆ ಒಂದು ಮುದಿ ಕಪಿರಾಯ ಹಣ್ಣೊಂದನ್ನು ಕೈಯಲ್ಲಿ ಹಿಡಿದುಕೊಂಡು ಮರದಿಂದ ಮರಕ್ಕೆ ಜಿಗಿಯುತ್ತಾ ಹೋಗುತ್ತಿತ್ತು. ಕುಳಿತುಕೊಳ್ಳಲು ಅನುಕೂಲವಾಗುವ ಕೊಂಬೆ ಕಂಡಾಕ್ಷಣ ಆ ಕಡೆ ಹೆಜ್ಜೆ ಇರಿಸಿತು. ಬದುಕಿನ ಸಂಜೆಯ ಸಮಯವಾದ್ದರಿಂದ ನಿರುತ್ಸಾಹ, ನಿರಾಸಕ್ತಿಯಿಂದಾಗಿ ದೇಹ ಜಿಡ್ಡು ಗಟ್ಟಿತ್ತು. ಹಣ್ಣನ್ನು ತನ್ನ ನಡುಗುವ ಕೈಯ ಮಧ್ಯದಲ್ಲಿ ಇಟ್ಟು ಅದುಮಿದಾಗ ಹೊರ ಬಂದ ಕೆಂಪಾದ ಹಣ್ಣಿನ ರಸ ಗುರಿ ತಪ್ಪಿ ನಾಲಗೆಯ ಪಕ್ಕದಿಂದ ಕೆಳಗೆ ಬೀಳತೊಡಗಿತು. ಎಲೆಗಳ ಮಧ್ಯೆ ನುಸುಳಿ ಬೀಳುತ್ತಿದ್ದ ಹಣ್ಣಿನ ರಸ ಸೂರ್ಯನ ಬೆಳಕಿಗೆ ಹವಳದಂತೆ ಮಿನುಗುತ್ತಾ ಆಕೆಯ ತುಟಿಯ ಮೇಲೆ ಬಿತ್ತು. ಗುಲಾಬಿ ದಳದ ಮೇಲೆ ನೀರ ಹನಿ ಬಿದ್ದಾಗ ನೀರಿನ ಭಾರಕ್ಕೆ ಗುಲಾಬಿ ದಳ ಕೆಳಬಾಗಿ ಯತಾಃಸ್ಥಿತಿಗೆ ಬರುವಂತೆ ಈಕೆಯ ತುಟಿಯೂ ಕೊಂಚ ಬಾಗಿತು. ಹಣ್ಣಿನ ರಸ ತುಟಿಯಿಂದ ಹರಿದು ಬಾಯಿ ಸೇರಿತು. ಆಗಲೇ ಹೂವಿನ ಸುಗಂಧ ಹೊತ್ತು ತಂದ ಗಾಳಿ ಅಲ್ಲಿ ಜೋರಾಗಿ ಬೀಸಿತು. ಮರದ ಎಲೆಗಳ ಮೇಲೆ ಒಟ್ಟು ಸೇರಿದ್ದ ನೀರ ಹನಿಗಳು ಗಾಳಿಯ ರಭಸಕ್ಕೆ ಮುಖದ ಮೇಲೆ ಬೀಳತೊಡಗಿದವು.
ಆಕೆಗೆ ಎಚ್ಚರವಾಯಿತು. ನಿಧಾನವಾಗಿ ಎದ್ದು ಮುಖ ತುಂಬಾ ಹರಡಿದ್ದ ಕೇಶರಾಶಿಯನ್ನು ಸರಿಪಡಿಸಿ, ಮೈಯಲ್ಲಿ ಅಂಟಿಕೊಂಡಿದ್ದ ಕೆಸರು ಮಣ್ಣನ್ನು ಕೊಡವಿ ಇನ್ನೇನು ಎಂದು ಯೋಚಿಸುತ್ತಾಳೆ. ಜೇನು ನೊಣಗಳು ಝೇಂ ಎಂದು ಶಬ್ದ ಮಾಡುತ್ತಾ ಮರದ ಮೇಲ್ಗಡೆ ಹಾರಿ ಹೋಯಿತು. ಕತ್ತೆತ್ತಿ ನೋಡುತ್ತಾಳೆ. ಮುಂಜಾನೆಯ ಭಾಸ್ಕರನು ಈ ಚೆಲುವೆ ಯಾರೆಂದು ನೋಡಲು ಹಂಬಲಿಸುತ್ತಿರುವಂತೆ ಎಲೆಗಳ ಮಧ್ಯೆ ಮಿನುಗುತ್ತಿದ್ದಾನೆ.
ಪಕ್ಕದಲ್ಲಿಯೇ ಜುಳುಜುಳು ಶಬ್ದ ಕೇಳಿದಾಗ ಆ ಕಡೆ ನಡೆಯುತ್ತಾಳೆ. ಕಲ್ಲುಗಳ ಮೇಲೆ ಪಾದ ಊರಿ ನಡೆಯುವಾಗ ಆಕೆಯ ಪಾದ ಕೆಂದಾವರೆಯಂತಾಗುತ್ತಿತ್ತು. ಹೇಗೋ ಕಷ್ಟಪಟ್ಟು ನಡೆದು ಹೊಳೆ ಕಡೆ ಬಂದಳು. ಹೊಳೆ ತುಂಬಾ ಅಲ್ಲಲ್ಲಿ ಅರಳಿದ್ದ ತಾವರೆಗಳು ಸೂರ್ಯನನ್ನು ನೋಡುತ್ತಿತ್ತು. ನೀರಿಗಿಳಿದು ತನ್ನ ಪ್ರತಿಬಿಂಬ ನೋಡುತ್ತಾಳೆ. ಬೆವರ ಜೊತೆ ಮಣ್ಣುಸೇರಿ ಆಕೆಯ ಗುರುತು ಹಿಡಿಯುವಂತಿಲ್ಲ. ಎರಡು ಮೂರು ಬಾರಿ ಬೊಗಸೆ ತುಂಬಾ ನೀರನ್ನು ಮುಖಕ್ಕೆರಚಿಕೊಳ್ಳುತ್ತಾಳೆ. ಅವಳ ಗಮನ ಕಾಲಿನ ಬೆರಳುಗಳನ್ನು ಚುಂಬಿಸುತ್ತಿದ್ದ ಮೀನಿನ ಕಡೆ ಹೋಯಿತು. ರೆಕ್ಕೆ ಬಡಿಯುತ್ತಾ ಈಜುತ್ತಿದ್ದ ಆ ಮೀನಿನ ಮೈ ಸೂರ್ಯನ ಬೆಳಕಿಗೆ ಫಳಫಳನೆ ಹೊಳೆಯುತ್ತಿತ್ತು. ಆಗಲೇ ಮರದಿಂದ ನೀರಿಗೆ ಎಲೆ ಬಿದ್ದುದರಿಂದ ಮೀನು ಗಾಬರಿಯಿಂದ ಕೆಸರಿನ ಮಧ್ಯೆ ಮರೆಯಾಯಿತು. ನಿಧಾನಕ್ಕೆ ತಲೆ ಎತ್ತುತ್ತಾರೆ. ಆಶ್ಚರ್ಯ!
ತಾವರೆಗಳೆಲ್ಲಾ ಆಕೆಯ ಕಡೆ ಮುಖ ಮಾಡಿತ್ತು. ಅಷ್ಟೇ ಅಲ್ಲಾ, ಕಾಡಿನ ಎಲ್ಲಾ ಪ್ರಾಣಿಪಕ್ಷಿಗಳು ನದಿ ದಡದಲ್ಲಿ ಸೇರಿದ್ದವು."ಸೀತಾ ಮಾತೆ!" ಕಪಿಗಳ ಹಿಂಡಲ್ಲಿದ್ದ ಆ ಮುದಿ ಕಪಿ ಉದ್ಗರಿಸಿತು. "ಸೀತಾ ಮಾತೆಗೆ ಪ್ರಣಾಮಗಳು" ಎಲ್ಲಾ ಪ್ರಾಣಿ ಪಕ್ಷಿಗಳು, ಕ್ರಿಮಿಕೀಟಗಳೂ ಕೈ ಜೋಡಿಸಿ ತಲೆ ಬಾಗಿದವು. ಮಹಾವೃಕ್ಷವೂ ಪ್ರಣಾಮವೆಂಬಂತೆ ರೆಂಬೆ ಕೊಂಬೆಗಳನ್ನು ಬಾಗಿಸಿದವು. ಗಿಡಮರಗಳೂ ಅಲುಗಾಡಿದವು. ಹೂವುಗಳು ಸಂಪೂರ್ಣವಾಗಿ ಅರಳಿ ಸುವಾಸನೆ ಬೀರಿದವು. ತಂಗಾಳಿಯು ಮೆಲ್ಲನೆ ಬೀಸಿತು. ನದಿ ನೀರಿನ ಅಲೆ ಕಲ್ಲಿಗೆ ಬಡಿದು ನೀರನ್ನು ಚಿಮ್ಮಿಸುವ ಮೂಲಕ ಪ್ರಣಾಮವನ್ನು ಸೂಚಿಸಿತು.
"ತಾಯಿ ನೀವಿಲ್ಲಿ?" ಎಂದು ಜಿಂಕೆ ಪ್ರಶ್ನಿಸಿತು. ಅತ್ತ ಕಡೆಯಿಂದ ಮೌನವೇ ಉತ್ತರವಾಗಿ ಬಂತು. "ಮಾತೆ, ನೀವು ಆಯಾಸಗೊಂಡಿರುವಿರಿ. ಮೊದಲು ವಿಶ್ರಾಂತಿ ಪಡೆಯಿರಿ" ಗಜರಾಜನ ಸಲಹೆ. "ಹೌದು ಮಾತೆ. ನೀವು ಆ ಮರದ ಕೆಳಗೆ ವಿಶ್ರಮಿಸಬಹುದು" ಎಂದು ಹೇಳಿ ಮರದ ಕಡೆ ಹಾರಿತು ಗಿಳಿ. ಜಾನಕಿ ಆ ಕಡೆ ಹೆಜ್ಜೆಯಿರಿಸಬೇಕಾದರೆ ಮರಗಿಡಗಳು ತಮ್ಮ ಹಸಿರೆಲೆಗಳನ್ನು ಉದುರಿಸಿ ಕಲ್ಲು ಮುಳ್ಳುಗಳನ್ನು ಮರೆಮಾಚಿ ಪಾದಕ್ಕೆ ನೋವಾಗದಂತೆ ಕಾಳಜಿ ವಹಿಸಿದವು. ಅದರ ಮೇಲೆ ನಡೆದು ಮುಂದೆ ಸಾಗುವಾಗ ಮೂಡುತ್ತಿದ್ದ ಹೆಜ್ಜೆ ಗುರುತು ಅವಳ ನೋವನ್ನು ಸಾರಿ ಹೇಳುತ್ತಿತ್ತು. ಮರ ತನ್ನ ಬೇರನ್ನು ಸ್ವಲ್ಪ ಮೇಲೆ ಎಳೆದು ಕುಳಿತು ಕೊಳ್ಳಲು ಅನುಕೂಲವಾಗುವಂತೆ ಮಾಡಿತು. ಪಕ್ಕದಲ್ಲೇ ಇದ್ದ ಬಳ್ಳಿ ತನ್ನ ಹೂವನ್ನು ಅದರ ಮೇಲೆ ಉದುರಿಸಿತು. ಸೀತೆ ಕುಳಿತಾಗ ಮಯೂರಗಳು ತಮ್ಮ ಗರಿಯನ್ನೇ ಚಾಮರವನ್ನಾಗಿಸಿತು. ಮುದಿಕಪಿಯು ಸೀತಾಮಾತೆಗೆ ಅತ್ಯುತ್ಸಾಹದಿಂದ ಹಣ್ಣುಗಳನ್ನು ತಂದು ಕೊಟ್ಟು ಉಪಚರಿಸಿತು. ಹುಲಿ, ಜಿಂಕೆ, ಹಾವು, ಮುಂಗುಸಿ ಎಲ್ಲವೂ ವೈರತ್ವ ಮರೆತು ಸತ್ಕರಿಸಿದವು. ಮುದಿ ಕಪಿಯು ಸೀತೆಯಲ್ಲಿ "ತಾಯಿ ಸೀತಾಮಾತೆ, ನಮ್ಮ ದರ್ಶನದಿಂದ ನಮಗೆ ಸಂತೋಷವಾಗಿದೆ. ಆದರೂ ನಿಮ್ಮನ್ನು ಈ ಕಾಡಿನಲ್ಲಿ ಈ ಸ್ಥಿತಿಯಲ್ಲಿ ನೋಡಿ ಬೇಸರವಾಗಿದೆ. ಏನಾಯಿತೆಂದು ಪ್ರಶ್ನಿಸಿದರೆ ನೀವು ಏನೂ ಉತ್ತರಿಸುತ್ತಿಲ್ಲ. ಬೇರೆಯಾರಲ್ಲಾದರೂ ಕೇಳೋಣವೆಂದರೆ ಯಾರೂ ಕಾಣಿಸುತ್ತಿಲ್ಲ. ನಿಮ್ಮ ಜೊತೆ ಸಖಿ, ಸೇವಕರು ಯಾರೂ ಬರಲಿಲ್ಲವೇ? ಅಥವಾ ನೀವೇ ದಾರಿ ತಪ್ಪಿ ಇಲ್ಲಿಗೆ ಬಂದಿರುವಿರೇ? ಅಥವಾ ಯಾರಾದರು ರಾಕ್ಷಸರು ನಿಮ್ಮನ್ನು ಅಪಹರಿಸಿ ಇಲ್ಲಿಗೆ ತಂದರೆ.... ಇಲ್ಲ ಇಲ್ಲ, ಖಂಡಿತ ಸಾಧ್ಯವಿಲ್ಲ. ಅಂದು ರಾವಣ ನಿಮ್ಮನ್ನು ಅಪಹರಿಸಿದಾಗ ಶ್ರೀ ರಾಮ ಸಮುದ್ರಕ್ಕೇ ಸೇತುವೆ ಕಟ್ಟಿ ನಿಮ್ಮನ್ನು ರಕ್ಷಿಸಿದ್ದನಲ್ಲವೇ? ಅಲ್ಲದೆ ರಾಮ ನಿಮ್ಮನ್ನು ಕಣ್ಣಿನಂತೆ ಕಾಪಾಡುವನು. ಆದರೂ ನೀವಿಲ್ಲಿ ...." ಮಾತು ಮುಗಿಯುವ ಮೊದಲೇ ಜಾನಕಿಯು ಕಣ್ಣೀರು ಸುರಿಸಲು ಆರಂಭಿಸಿದಳು. ಭೂಜಾತೆಯ ಕಣ್ಣೀರು ಕಂಡು ಎಲ್ಲರೂ ಭಯದಿಂದ ಮೌನರಾದರು. ಸ್ವಲ್ಪ ಹೊತ್ತು ಕಣ್ಣೀರು ಸುರಿಸಿ ಗಡಸು ದ್ವನಿಯಲ್ಲಿ,
"ಒಂದು ಹೆಣ್ಣು ತನಗಾಗುವ ಅವಮಾನವನ್ನು ಎಷ್ಟೆಂದು ಸಹಿಸಿಕೊಳ್ಳಬಹುದು?" ಸೀತೆಯ ಮಾತಿನಲ್ಲಿ ದುಃಖ, ಬೇಸರವಿತ್ತು.
"ಏನು? ನಿಮಗೆ ಅವಮಾನವಾಯಿತೆ? ಏನು ಹೇಳುತ್ತಿರುವಿರಿ ಮಾತೆ?" ಎಲ್ಲಾ ಪ್ರಾಣಿ ಪಕ್ಷಿಗಳು ಆಶ್ಚರ್ಯಚಕಿತರಾದವು.
"ಹೌದು. ಶ್ರೀ ರಾಮನೇ ನನ್ನನ್ನು ಅನುಮಾನಿಸಿ ಅವಮಾನಿಸಿದ್ದಾನೆ. ಯಾವನೋ ಒಬ್ಬ ಅಗಸ ಅವನ ಹೆಂಡತಿಗೆ ಬಯ್ಯುತ್ತಾ ಪರಪುರುಷನೊಂದಿಗಿದ್ದ ನಿನ್ನನ್ನು ಪುನಃ ಸ್ವೀಕರಿಸಲು ನಾನೇನು ರಾಮನಲ್ಲ ಎಂದು ಶ್ರೀ ರಾಮನನ್ನು ನಿಂದಿಸಿದನು. ಆತನ ಮಾತು ಕೇಳಿ ಶ್ರೀ ರಾಮನು ನಾನು ರಾವಣನ ಬಂದಿಯಾಗಿ ಇದ್ದೆ ಎಂದು ನನ್ನ ಪವಿತ್ರತೆಯನ್ನು ಅನುಮಾನಿಸಿ ನಡುರಾತ್ರಿಯಲ್ಲೇ ತುಂಬು ಗರ್ಭಿಣಿಯೆಂಬುದನ್ನೂ ಮರೆತು, ಸ್ವಂತ ಬುದ್ಧಿಯನ್ನೂ ಉಪಯೋಗಿಸದೆ ಲಕ್ಷ್ಮಣನಿಗೆ ನನ್ನನ್ನು ಕಾಡಲ್ಲಿ ಬಿಟ್ಟು ಬರಲು ಆಜ್ಞಾಪಿಸಿದನು. ಲಕ್ಷ್ಮಣನೂ ಅಣ್ಣನ ಆಜ್ಞೆ ಮೀರಲಾರದೆ ಒಪ್ಪಿಕೊಂಡನು. ರಾವಣನ ವಧೆಯ ನಂತರ ಅಯೋಧ್ಯೆಗೆ ಮರಳಿದಾಗ ನನ್ನನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದಾಗ ನಾನು ಪ್ರವಿತ್ರಳು ಎಂದು ಸಾಬೀತಾದರು ಈಗ ಅನುಮಾನಿಸಿದ್ದಾರೆ. ಎಂದೂ ಪರಪುರುಷನನ್ನು ಬಯಸದ ನನ್ನಂತಹ ಪತಿವ್ರತೆಯನ್ನು ಅನುಮಾನಿಸಿ ಅವಮಾನಿಸಿದ್ದಾನೆ. ನನಗೂ ಸ್ವಾಭಿಮಾನವಿದೆ. ಬೇಕಾದಾಗ ಕರೆಸಿಕೊಳ್ಳಲು, ಬೇಡವಾದಾಗ ಕಾಡಿಗಟ್ಟಲು ನಾನೇನು ಆಟದ ಗೊಂಬೆಯಲ್ಲ."
ಎಲ್ಲರೂ ನಿಶಬ್ದವಾಗಿ ಸೀತೆಯ ಮಾತುಗಳನ್ನು ಆಳಿಸಿದರು. ದೂರದಲ್ಲಿ ನಿಂತಿದ್ದ ಕೋತಿಮರಿ ತನ್ನ ತಾಯಿಯಲ್ಲಿ,
"ಅಮ್ಮಾ, ಹಾಗಾದರೆ ಸೀತಾಮಾತೆ ಶ್ರೀ ರಾಮನಲ್ಲಿಗೆ ಹೋಗುವುದಿಲ್ಲವೇ? ಅಯೋಧ್ಯೆಯ ಸಡಗರ, ಸಂಭ್ರಮ ಇವತ್ತಿಗೆ ಮುಗಿಯಿತೆ ಅಮ್ಮಾ?" ಎಂದಿತು.
"ಇಲ್ಲ ಕಂದಾ, ಮಾತೆ ಸೀತೆ ಮತ್ತು ಶ್ರೀ ರಾಮ ಲಕ್ಷೀನಾರಾಯಣರ ಸ್ವರೂಪವಂತೆ. ಲಕ್ಷೀನಾರಾಯಣರು ಎಂದಾದರೂ ಬೇರೆಯಾಗುವುದುಂಟೆ? ಈ ಕಾಡಿನಾಚೆ ಇರುವ ವನದಲ್ಲಿನ ಋಷಿ ಮುನಿಗಳು ಸೀತೆಯನ್ನು ನೋಡಿದರೆ ಎಲ್ಲವೂ ಸರಿಯಾಗುತ್ತದೆ. ಇದಲ್ಲಾ ಆ ಪರಮಾತ್ಮನ ಲೀಲೆ." ಎಂದಿತು ತಾಯಿ ಕೋತಿ.
ಅಷ್ಟರಲ್ಲೇ ದೂರದ ಮರದೆಡೆಯಲ್ಲಿ ಶಿಷ್ಯರೊಡನೆ ಬರುತ್ತಿರುವ ವಾಲ್ಮೀಕಿ ಮುನಿ ಕಾಣುತ್ತಾರೆ. ತಾಯಿ ಕೋತಿಯ ಮುಖದಲ್ಲಿ ಮಂದಹಾಸ ಮೂಡಿತ್ತು, ದೂರದಲ್ಲಿ ಗೋಚರಿಸುತ್ತಿದ್ದ ಕಾರ್ಮೋಡವೂ ಕರಗಿತ್ತು.
*****************
(ಗಮನಿಸಿ:ಈ ಕತೆಯ ಕೆಲವು ಭಾಗಗಳು ಕಾಲ್ಪನಿಕ)