ರಾಮ ಕಾಣೆಯಾಗಿದ್ದಾನೆ
ರಾಮ ಕಾಣೆಯಾಗಿದ್ದಾನೆ


ಸೂರ್ಯ ನಟ್ಟನಡು ನೆತ್ತಿಯವರೆಗೆ
ಬಂದರೂ ಕುಂಭಕರ್ಣರಂತೆ ಮಲಗಿರುವವರ
ಮೊಖಕ್ಕೆ ನೀರೆರಚಬೇಕು
ನೆತ್ತಿಗೆ ಎಣ್ಣೆ ಸುರಿಯಬೇಕು
ತಲೆಬುರುಡೆ ದಾಟಿ ಮಿದುಳಿಗಿಳಿಯುವವರೆಗೂ
ಕೊತ ಕೊತ ಕುದಿಯುತ್ತಿರುವ ನೀರಿನಲ್ಲದ್ದಿ
ಗಸ ಗಸ ತಿಕ್ಕಿ ತಿಕ್ಕಿ ತೊಳೆಯಬೇಕು
ಮಿದುಳಿಗಂಟಿದ ಕೇಸರಿ ಎಣ್ಣೆಯ ಜಿಡ್ಡು
ತೊಳೆದುಕೊಂಡು ಹೋಗುವವರೆಗೂ
ಬಿಸಿನೀರಿನಲ್ಲಿ ತೊಯ್ಯಿಸಿ ಹಿಂಡಬೇಕು
ಹಿಂಡಿ ಹಿಂಡಿ ಒಣಗಿಸಬೇಕು ನೆಲಾಗಣಿಯ ಮೇಲೆ
ಎಂದೋ ಬಾಲ್ಯದಲ್ಲಿ ಅಜ್ಜಿಮುತ್ತಜ್ಜಿಯರು
ರಾತ್ರಿ ನಿದ್ರೆಹೋಗುವವರೆಗೂ ಹೇಳಿದ ಕಥೆಗಳಲ್ಲಿ
ಕೋರೆಹಲ್ಲು ಅಕರಾಳ ವಿಕರಾಳ ಕರ್ರಗಿನ
ಕೆಂಪುಕಣ್ಣುಗಳ ರಾಕ್ಷಸಸರು ಕನಸಿನಲ್ಲಿ ಬಂದು
ಬೆಚ್ಚಿಬೀಳಿಸುತ್ತಿದ್ದರು ತೊಟ್ಟ ಚಡ್ಡಿಯಲ್ಲೇ
ಉಚ್ಛೆ ಹೊಯ್ದುಕೊಳ್ಳುವ ಹಾಗೆ
ಇನ್ನು ಮುಂದೆ ಈ ಹೊತ್ತಿನ ತಾಯಂದಿರು
ಕಥೆ ಹೇಳುವ ಅಜ್ಜಿಗೆ ಪದೋನ್ನತಿ ಹೊಂದಿದಾಗ
ಹೇಳುವಳು ವ್ಯಾಟ್ಸಾಪ್ ರಾಕ್ಷಸಸರ ಭಜರಂಗೀ
ಕೋರೆಹಲ್ಲು ದಾಡಿ ರಾಕ್ಷಸಸರು
ಶ್ರೀರಾಮನ ಹೆಸರಲ್ಲಿ ಕೊಂದ ಕಥೆಗಳ
ಮಹಾಕಾವ್ಯಗಳಾಗಲಿವೆ ಹಿಂದೂ ಧರ್ಮದ
ಪುರಾವೆ ದೇವರ ಗರ್ಭಗುಡಿಯಲ್ಲಿ
ಕೂಡಿಹಾಕಿ ಅತ್ಯಾಚಾರವೆಸಗಿ ಕೊಂದ ಅಸೀಫಾಳ ಕಥೆ
ರಾಮ ರಾಮಾ ಮರ್ಯಾದಾ ಪುರುಷೋತ್ತಮಾ..
ನೀನಿರಬೇಕಿತ್ತೀಗ ನಿನ್ನ ನಾಮಕೆ ಮಸಿ ಬಳಿದು
ನಾಮ ಹಾಕುತ್ತಿರುವವರ ಮೊಖ ನೋಡಬೇಕಿತ್ತೀಗ
ಛಪ್ಪನ್ನಾರು ಕೋಟಿ ರಾಕ್ಷಸಸರ ದೊಡ್ಡಿಯಲ್ಲಿ
ರಾಮ ಮಂದಿರದ ರಾಮ ಕಾಣೆಯಾಗಿದ್ದಾನೆ.
ನಿದ್ದೆಯಲ್ಲಿರದಿದ್ದರೂ ನಿದ್ದೆಯಲ್ಲಿದ್ದವರಂತೆ ನಟಿಸುವವರ
ಮೊಖಕ್ಕೆ ನೀರೆರಚಬೇಕು ನೆತ್ತಿ ಕೆಂಪಾಗುವವರಿಗೂ
ನೆತ್ತಿಗೆ ಎಣ್ಣೆ ಸುರಿಯಬೇಕು ಮೈ ನೀಲಿಯಾಗುವವರೆಗೂ
ತವಕದಿಂದ ಕಾಯುತ್ತಿರುವ ತಬಸುಮ್
ತಬ್ರೀಜ್ ಮತ್ತೆ ಬರುವನೆ?