Nagaraja Gowda

Others

4.8  

Nagaraja Gowda

Others

ಮೂಢತೆಯ ಮರೆಸಿದ ಕರಾಳ ರಾತ್ರಿ

ಮೂಢತೆಯ ಮರೆಸಿದ ಕರಾಳ ರಾತ್ರಿ

5 mins
1.4K


ಇದೊಂದು ನನ್ನ ಬಾಲ್ಯದ ದಿನಗಳಲ್ಲಿ ನಡೆದ ನೈಜ ಘಟನೆ ಆಧರಿತ ಕಥೆ. ಅಂದು ನಾನು ಪ್ರಾಥಮಿಕ ಶಿಕ್ಷಣದಲ್ಲಿ ಇರುವ ಸಮಯ. ಉರಿ ಬಿಸಿಲಿನ ದಿನಗಳು ಮುಗಿದು ಮಳೆಗಾಲ ಸಮೀಪಿಸಿತು. ಈ ದಿನಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ಬರುವ ಮಳೆಯು ನಿಲ್ಲದ ಮಳೆ. ಮಲಗಿರುವ ಜೀವರಾಶಿಯನ್ನು ತಟ್ಟಿ ಎಬ್ಬಿಸುವ ಸಾಮಥ್ರ್ಯ ಆ ಮಳೆಗಿತ್ತು. ಅಂತು ಮಳೆಗಾಲ ಶುರುವಾಗುತ್ತಿದ0ತೆ ಹಳ್ಳಗಳಲ್ಲಿ ನೀರು ಹರಿಯಲಾರಂಭಿಸಿತು.


ನಮ್ಮೂರಲ್ಲಿ ಮಳೆಗಾಲದ ಶುರುವಿನಲ್ಲಿ ಏಡಿ ಹಿಡಿಯುವ ಹುಚ್ಚು ತುಂಬಾ ಜನರಲ್ಲಿದೆ. ಇದಕ್ಕೆ ಕಾರಣಗಳು ಇದೆ. ಒಣಗಿರುವ ಹಳ್ಳಗಳಲ್ಲಿ ನೀರು ಹರಿಯಲಾರಂಭಿಸಿದಾಗ, ಮಣ್ಣಿನ ಒಳಭಾಗದಲ್ಲಿ ಜಾಗ ಮಾಡಿಕೊಂಡು ಸೇರಿರುವ ಏಡಿಗಳೆಲ್ಲಾ ಮೇಲ್ಭಾಗಕ್ಕೆ ಬಂದು ಓಡಾಡುತ್ತವೆ. ಅದು ರಾತ್ರಿ ಸಮಯದಲ್ಲಿ ಇನ್ನೂ ಹೆಚ್ಚು. ಆ ಸಮಯದಲ್ಲೇ ಎಲ್ಲಾ ಜನ ಅವುಗಳನ್ನು ಹಿಡಿಯಲು ಹೋಗುವುದು ಇಲ್ಲಿನ ರೂಡಿ. ಈ ಹುಚ್ಚು ಆ ಸಣ್ಣ ವಯಸ್ಸಿನಲ್ಲೇ ನನಗೂ ಇತ್ತು.


ಏನಾದರೂ ಸರಿ ಆ ದಿನ ರಾತ್ರಿ ಹೋಗಲೇಬೇಕು ಎನ್ನುವ ನಿರ್ಧಾರಕ್ಕೆ ಬಂದೆ. ಆದರೆ ಮನೆಯವರು ಇದಕ್ಕೆ ಸಮ್ಮತಿಸುವ ಯಾವುದೇ ಸಾಧ್ಯತೆಯು ಇರಲಿಲ್ಲ. ಇದಕ್ಕಾಗಿ ನಾನು ನೆರೆಮನೆಯ ಅಂಕಲ್ ಜೊತೆ ಈ ವಿಷಯದ ಬಗ್ಗೆ ಮಾತಾಡಿ ಅವರನ್ನ ಒಪ್ಪಿಸಿದೆ. ಅವರು ಬ್ಯಾಟರಿ ರೆಡಿ ಮಾಡು ಹೋಗೋಣ ಎಂದರು, ಹಾಗೆ ನಮ್ಮ ಮನೆಯವರನ್ನೂ ಕೂಡ ಅವರೇ ಒಪ್ಪಿಸಿದರು, ಆಗಿನ ದಿನಗಳಲ್ಲಿ ವಿದ್ಯುತ್ ಬ್ಯಾಟರಿಗಳನ್ನು ನಾವು ಬಳಸುತ್ತಿರಲಿಲ್ಲ, ಶೆಲ್‍ಗಳ ಬ್ಯಾಟರಿಯನ್ನೇ ಬಳಸುತ್ತಿದ್ದೆವು. ರಾತ್ರಿಯ ಈ ಯೋಜನೆಗೆ ನಾನು ಬ್ಯಾಟರಿಗೆ ಶೆಲ್ ತರಬೇಕಿತ್ತು. ಹೇಗೋ ದೊಡ್ಡಮ್ಮನನ್ನು ಪೀಡಿಸಿ ಶೆಲ್‍ಗೆ ಬೇಕಾದಷ್ಟು ಹಣ ಪಡೆದು ಸ್ಕೂಲ್‍ನಿಂದ ಬರುವಾಗ ಬ್ಯಾಟರಿಗೆ 3 ಶೆಲ್ ತಂದೆನು. ಅಂದು ಸಂಜೆ ಮುಗಿದು ಕತ್ತಲಾಯಿತು. ಸ್ಕೂಲ್ನಲ್ಲಿ ಈ ಬೇಟೆಯ ಕನಸ್ಸೇ ಕಾಣುತ್ತಿದ ನನಗೆ ಕತ್ತಲಾಗುತ್ತಿದ್ದಂತೆ ಮನೆಯಲ್ಲಿ ಕೂರಲಾಗುತ್ತಿರಲಿಲ್ಲ. ಬ್ಯಾಟರಿಗೆ ಶೆಲ್ ಹಾಕಿ ರೆಡಿ ಮಾಡಿದ ನಾನು ಅಂಕಲ್ ಬರುವ ದಾರಿಯನ್ನೇ ಕಾಯುತ್ತಿದ್ದೆ. ಸಮಯ ಜಾರಲಾರಂಭಿಸಿತು, ಅಮ್ಮ ಬಂದು "ಅಂಕಲ್ ಯಾಕೋ ಇವತ್ತು ಬರಲ್ಲ, ನಾಳೆ ರಾತ್ರಿ ಹೋದರೆ ಆಯಿತು, ಈಗ ಮಲಗು" ಎಂದರು. ಅಂಕಲ್ ಬಂದೇ ಬರುವರೆಂದು ಹೇಗೋ ಅಮ್ಮನನ್ನು ಒಪ್ಪಿಸಿದೆ. ಆದರೆ ಅಂಕಲ್ ಮಾತ್ರ ಇನ್ನೂ ಬಂದೇ ಇಲ್ಲ ಮನೆಯವರಲ್ಲ ಮಲಗಲು ಹೊರಟರು. ನಾನು ಈ ಯಪ್ಪ ಎಲ್ಲಿ ಹೋದ ಅಂದು ಅಂಕಲ್‍ನ ಮನಸ್ಸಿನಲ್ಲೇ ಬೈಯತ್ತ ಕುಳ್ಳಿತಿದ್ದೆ. ಆದರೆ ಆ ಸಮಯಕ್ಕೆ ಯಾರೋ ಜೋರಾಗಿ ನಮ್ಮ ಅಜ್ಜಿಯ ಹೆಸರು ಕರೆಯುತ್ತಾ ಬರುತ್ತಿರುವ ಶಬ್ಧ ಕೇಳಿಸಿತು. ಆ ಧ್ವನಿ ನಮ್ಮ ನೆರೆಮನೆಯ ಅಂಕಲ್ ದೇ. ಇನ್ನೂ ಎಲ್ಲಾ ಮಲಗಬೇಕು ಅನ್ನುವ ಸಮಯಕ್ಕೆ ಪೇಟೆಗೆ ಹೋಗಿ ಬರುವುದು ತಡವಾಯ್ತು ಅನ್ನೊ ನೆಪ ಹೇಳಿಕೊಂಡು ಅಂಕಲ್ ಬಂದರು. ಬ್ಯಾಟರಿ ಜೊತೆ ಆಟವಾಡುತ್ತಿದ್ದ ನನ್ನ ಮನಸ್ಸಿನಲ್ಲಿ ಎಲ್ಲೋ ಒಂದೆಡೆ ಖುಷಿ ಉಕ್ಕಿತು. ಕೋಪಗೊಂಡ ಮನಸ್ಸಿನ ಮೂಲೆಯಲ್ಲಿ ಖುಷಿ ಕಂಡ ಕ್ಷಣ ಅದು.


"ತಡರಾತ್ರಿ ಆಗಿದೆ ಇವತ್ತು ಹೋಗೋದು ಬೇಡ" ಎಂದರು ಅಜ್ಜಿ, ಮತ್ತೆ ಮನೆಯವರು ಕೂಡ ಇದಕ್ಕೆ ಪುಸಲಾಯಿಸಿದರು. ಆದರೆ ನನ್ನ ಹಟಕ್ಕೆ ಮನೆಯವರು ಸುಮ್ಮನಿರಬೇಕಾಯಿತು. ಅಂಕಲ್ "ಆಯ್ತು ಬಿಡು ನಿನ್ನಿಷ್ಟದಂತೆ ಆಗಲಿ, ನಡಿ ಹೊರಡುವ" ಅಂದರು. ಅಂಕಲ್ ಸೂಚನೆಯಂತೆ ಹಿಡಿದ ಏಡಿಗಳನ್ನು ಕೂಡಿ ಹಾಕಲು ಮನೆಯ ಒಂದು ಕೊಡ ಎತ್ತಿಕೊಂಡು ಹೊರಟೇ ಬಿಟ್ಟೆವು.


ಸಮಯ ಸುಮಾರು 10 ಗಂಟೆ. ಎಲ್ಲೂ ಬೆಳಕಿರದ ಆ ಸಮಯ ನಮಗೆ ಘಾಡ ಮಧ್ಯರಾತ್ರಿಯಂತೆ ಭಾಸವಾಗುತ್ತಿತ್ತು.. ತಣ್ಣನೆಯ ಗಾಳಿ ಮೈಗೆ ನಾಟಿ, ಮೆಲ್ಲಗೆ ಚಳಿಯ ಭಾವನೆ ಮೂಡಿಸಿತು. ಇವೆಲ್ಲವನ್ನೂ ಲೆಕ್ಕಿಸದೇ ನಾನು ಮತ್ತೆ ಅಂಕಲ್ ಒಂದೊಂದು ಬ್ಯಾಟರಿ ಹಿಡಿದುಕೊಂಡು ಹಳ್ಳದ ಕಡೆ ಹೊರಟೆವು. ದೂರದ ಹಳ್ಳಗಳಲ್ಲಿ ಯಾರೋ ಬ್ಯಾಟರಿ ಹಿಡಿದು ಓಡಾಡುತ್ತಿರುವುದು ಕೂಡ ನಮಗೆ ಕಾಣಿಸುತ್ತಿತ್ತು. ಅವರು ಆಗ ನಮಗೆ ಪ್ರತಿಸ್ಪರ್ಧಿಗಳು ನಮಗಿಂತ ಮುಂಚೂಣಿಯಲ್ಲೇ ಏಡಿ ಹಿಡಿಯುವ ಕಾರ್ಯದಲ್ಲಿ ತೊಡಗಿದ್ದರು. ಅಂಕಲ್ ಮಾತಿನಂತೆ ಅವರನ್ನು ಲೆಕ್ಕಿಸದೆ ಹಳ್ಳದ ದಡವನ್ನು ಸಮೀಪಿಸಿದೆವು. ಆದರೆ ಎಲ್ಲೋ ನನ್ನ ಮನದ ಮೂಲೆಯಲ್ಲಿ ಎಲ್ಲಾ ಏಡಿಗಳನ್ನು ಅವರೇ ಹಿಡಿದರೆ ನಮಗೇನು ಉಳಿಯುವುದು ಎನ್ನುವ ಪ್ರಶ್ನೆ ಕಾಡತೊಡಗಿತು. ಅಂಕಲ್ ಹಳ್ಳವನ್ನು ಇಳಿಯಲು ಹೊರಟರು, ನಾನು ಅವರನ್ನು ಹಿಂಬಾಲಿಸಿದೆ. ಕಾಲು ತಣ್ಣನೆಯ ನೀರು ಮುಟ್ಟುತ್ತಿದ್ದಂತೆ, ಮೈಮೇಲಿನ ರೋಮಗಳೆಲ್ಲಾ ಬಡಿದೆದ್ದಂತಾಯಿತು. ತಣ್ಣನೆಯ ಆ ನೀರು ಮೈಗೆ ನಾಟಿದ ಚಳಿಯನ್ನು ಇಮ್ಮಡಿಸಿತು.


ಉದ್ದೇಶ ಮತ್ತು ಮನಸ್ಸು ಏಡಿಯ ಕಡೆ ಇರುವುದರಿಂದ ಈ ಚಳಿಯನ್ನು ಲೆಕ್ಕಿಸದೆ ಮುನ್ನುಗ್ಗಿದೆನು. ಬ್ಯಾಟರಿಯ ಬೆಳಕಿಗೆ ಕಪ್ಪು ಬಣ್ಣದ ಏಡಿಗಳು ಓಡಾಡುತ್ತಿರುವುದು ಕಾಣುತ್ತಿದವು. ಅಂಕಲ್ ಒಂದೊಂದನ್ನೆ ಕೈಯಿಂದ ಹಿಡಿದು ಕೊಡಕ್ಕೆ ಹಾಕುತ್ತಿದ್ದರು. ಅವುಗಳನ್ನು ಹಿಡಿಯುವ ಮನಸ್ಸು ನನ್ನೊಳಗೆ ಇದ್ದರೂ, ಕೊಡವನ್ನ ಹಿಡಿದ ನನಗೆ ಅದು ಸಾಧೈವಾಗುತ್ತಿರಲಿಲ್ಲ. ಹಳ್ಳದಲ್ಲಿರುವ ಕಲ್ಲು ಬಂಡೆಗಳ್ಳನ್ನ ಹತ್ತಿಕೊಂಡು, ಸಿಕ್ಕ ಏಡಿಗಳನ್ನ ಹಿಡಿಯುತ್ತಾ ಮುನ್ನುಗಿದೆವು.


ಇನ್ನೇನು 50 ಮೀಟರ್ ದೂರ ಕ್ರಮಿಸದರಲ್ಲಿ, ನನಗೆ ಎಲ್ಲೋ ಗೆಜ್ಜೆ ಶಬ್ಧ ಜೋರಾಗಿ ಕೇಳಿಸಿತು. ನಾವು ಏಡಿ ಹಿಡಿಯುವುದನ್ನ ಬಿಟ್ಟು ಒಮ್ಮೆ ನಿಂತೆವು, ಶಬ್ಧ ಮತ್ತೆ ಕೇಳಲೇ ಇಲ್ಲ. "ಏನೋ ಶಬ್ಧ ಅದರ ಬಗ್ಗೆ ಯೋಚಿಸಬೇಡ ನಡಿ" ಎಂದು ಅಂಕಲ್ ಸೂಚಿಸಿದರು. ಇನ್ನೇನು 2-3 ಅಡಿ ಕ್ರಮಿಸಿದಲ್ಲಿ ಮತ್ತೆ ಅದೇ ಗೆಜ್ಜೆ ಶಬ್ಧ ಕೇಳಿಸಿತು. ಅದೇ ಸಮಯಕ್ಕೆ ಸರಿಯಾಗಿ ತಲೆಯ ಮೇಲೆ ಏನೋ ಬೀಳುವಂತೆ ಅನಿಸಿತು. ನಾವು ತಟ್ಟನೆ 5 ಅಡಿ ಮುಂದೆ ಓಡಿದೆವು. ತಿರುಗಿ ನೋಡಿದರೆ ನಾವು ಹಿಂದೆ ನಿಂತ ಜಾಗದ ಪಕ್ಕದಲ್ಲೇ ಮರದ ಕೊಂಬೆಯೊಂದು ಮೇಲಿಂದ ಬ0ದು ಬಿದ್ದಿತು. ನಾವು ಓಡಿ ಮುಂದೆ ಹೋಗಿಲ್ಲವಾದಲ್ಲಿ, ಅದು ನಮ್ಮ ಮೈ ಮೇಲೆ ಬೀಳುವ ಕೊಂಬೆಯಾಗಿತ್ತು. "ಅಬ್ಬಾ!, ಜೀವ ಉಳಿಯಿತು" ಎಂದು ನಿಟ್ಟುಸಿರು ಬಿಡುವ ವೇಳೆಯಲ್ಲಿ ಮತ್ತೆ ಅದೇ ಗೆಜ್ಜೆ ಶಬ್ಧ ಮೊಳಗಿತು. ಅಷ್ಟು ಹೊತ್ತು ಧೈರ್ಯ ಕಳೆದುಕೊಳ್ಳದ ಅಂಕಲ್ ಮೊಗದಲ್ಲಿ ಆ ಕ್ಷಣದಲ್ಲಿ ಎಲ್ಲೊ ಭಯದ ಛಾಯೆ "ಇಲ್ಲೂ ಭೂತ ಇದೆಯಾ" ಎಂದು ಅಂಕಲ್ ನನ್ನನ್ನ ಪ್ರಶ್ನಿಸಿದರು. "ಭೂತನಾ!", ಎಂದು ನಾನು ಮರುಪ್ರಶ್ನಿಸಿದೆ. ಸಣ್ಣ ಚಳಿಗೆ ಮಿಡಿಯುತ್ತಿದ್ದ ಮೈ ಒಮ್ಮೆಲೆ ಬೆವರಿತು. ತಣ್ಣಗಿನ ನೀರಲ್ಲೂ ಬೆವರಿದ ಕ್ಷಣ ಅದು. ಮನದ ಮೂಲೆಯಲ್ಲಿ ಭಯಗೊಂಡಿದ್ದ ಅಂಕಲ್, ಧೈರ್ಯದಲ್ಲಿರುವಂತೆ ನನ್ನೆದುರು ನಟಿಸಿದರು. "ಏನೋ ಇರಬಹುದು, ತಲೆ ಕೆಡಿಸಿಕೊಳ್ಳಬೇಡ ನಡಿ" ಎಂದರು. ನಾನು ಅವರನ್ನ ಹಿಂಬಾಲಿಸಿದೆ. ಕ್ಷಣಾರ್ಧದಲಲ್ಲಿ ಮನಸ್ಸು ಏಡಿಯಿಂದ ಭೂತದ ಕಡೆ ವರ್ಗಾವಣೆಗೊಂಡಿತು. ಏಡಿ ಹಿಡಿಯುವ ಯೋಚನೆಗಳೆಲ್ಲ ಕಳೆದುಹೋದವು. ಅದಕ್ಕೆ ಇರಬಹುದು 'ಮನಸ್ಸು ಪಕ್ಕಾ 420' ಅಂಥ ಹೇಳೋದು. ಬ್ಯಾಟರಿ ಬೆಳಕಿಗೆ ನನ್ನ ನೆರಳು ನನಗೆ ವಿಕೃತ ರೂಪದಂತೆ ಕಾಣುತ್ತಿತ್ತು. ನೀರಿನ ಮೇಲೆ ಬಳಿಯ ಬಣ್ಣದ ಆಕೃತಿಗಳೆಲ್ಲ ಓಡಾಡಿದಂತೆ ಭಾಸವಾಗುತ್ತಿತ್ತು. ಸ್ವಲ್ಪ ದೂರ ಕ್ರಮಿಸಿದ0ತೆ ಗೆಜ್ಜೆ ಶಬ್ಧ ದೂರವಾದಂತೆ ಭಾವಿಸಿತು. ಆಗಲೇ ಏಡಿಗಳಿಂದ ಕೊಡ ತುಂಬಿಸಿಕೊಂಡಿದ್ದ ನಾವು ಇಲ್ಲಿಗೆ ಸಾಕು ಅನಿಸಿ ಮನೆ ಕಡೆ ಹೊರಟೆವು. ದಾರಿಯುದ್ದಕ್ಕೂ ನನಗೆ ಗೆಜ್ಜೆಯ ಶಬ್ಧವೇ ಕೇಳಿದಂತೆ ಭಾಸವಾಗುತ್ತಿತ್ತು. ಮನೆ ತಲುಪಿದೆವು ಆಗ ಸಮಯ ಸುಮಾರು ರಾತ್ರಿ 11 ಗಂಟೆ. ನಾವು ಬರುವ ಸಪ್ಪಳಕ್ಕೆ ಮನೆಯ ದೀಪ ಬೆಳಗಿತು. ನಮ್ಮ ಬರುವಿನ ದಾರಿ ಕಾಯುತ್ತಿದ್ದ ಅಮ್ಮ ಬಾಗಿಲು ತೆರೆದು ಹೊರಬಂದಳು.


ಅವರ ಮನೆ ಕಡೆಗೆ ತೆರಳಬೇಕಾದ ಅಂಕಲ್ ನಡೆದ ಈ ಘಟನೆಯನ್ನ ವಿವರಿಸಲು ನನ್ನನ್ನ ಹಿಂಬಾಲಿಸಿದರು. ನಮ್ಮ ಬರುವುನಿಂದ ಎಚ್ಚರಗೊಂಡಿದ್ದ ಮನೆಯವರಿಗೆ ಅಂಕಲ್ ನಡೆದ ವಿಷಯವನ್ನೆಲ್ಲಾ ವಿವರಿಸಿದರು. "ಬೇಡ, ಬೇಡ ಅಂದರು, ಮತ್ತೆ ಯಾಕೆ ಹೋದ್ರಿ?" ಎಂದು ಅಮ್ಮ ನಮಗೆ ಬೈದರು. ಇಷ್ಟಕ್ಕೆ ಮುಗಿಸಿದ ಅಂಕಲ್ ಅವರ ಜೀವನದಲ್ಲಿ ನಡೆದ ಒಂದೆರಡು ಭಯಾನಕ ಕಥೆಗಳನ್ನು ಇದಕ್ಕೆ ಸೇರಿಸಿ ನಡೆದ ಘಟನೆಯನ್ನು ಇನ್ನೂ ಅಲಂಕರಿಸಿದರು. ಅವುಗಳನ್ನೆಲ್ಲಾ ಕೇಳುತ್ತಿದ್ದಂತೆ ನನಗಾಗಿದ್ದ ಭಯ ಇಮ್ಮಡಿಸಿತು. ಈ ಕಥೆಗಳನ್ನ ಹೇಳಿದ ನಂತರ ಅಂಕಲ್ "ನೀವು ಮಲಗಿ, ನಾನು ಹೊರಡುವೆ" ಎಂದು ಅವರ ಮನೆಯ ಕಡೆ ಹೆಜ್ಜೆ ಹಾಕಿದರು. ಅಂಕಲ್ ಏನೋ ಹೊರಟರು, ಆದರೆ ನನ್ನ ಮನಸ್ಸಲ್ಲಿ ಹುಟ್ಟಿದ ಭಯ ಯಾಕೋ ಹೊರಡುವಂತೆ ಕಾಣಲಿಲ್ಲ. ಒಂಟಿಯಾಗಿ ನನ್ನದೇ ಕೋಣೆಯಲ್ಲಿ ಮಲಗುತ್ತಿದ್ದ ನನಗೆ ಆ ದಿನ ಯಾಕೋ ಧೈರ್ಯ ಬರಲಿಲ್ಲ, ಸಣ್ಣ ಮಗುವಿನಂತೆ ನಾನು ಅಮ್ಮನ ಮಡಿಲು ಸೇರಿದೆ. ಅವರ ಹಾಸಿಗೆ ಕಡೆಗೆ ಧಾವಿಸುವುದನ್ನ ನೋಡಿ ಅವರು(ಅಮ್ಮ) ನಸುನಕ್ಕರು. ಎಲ್ಲಾ ಮರೆತಂತೆ ಮಲಗಿರುವ ನನಗೆ, ಎಲ್ಲೋ ಆ ದೃಶ್ಯಗಳೇಲ್ಲ ಕಣ್ಮುಂದೆಯೇ ಬ0ದು ಹೊಗುತ್ತಿತ್ತು. ಆ ಕ್ಷಣಕ್ಕೆ ಅಮ್ಮನ ಉಸಿರಿನ ವೇಗವೇ ನನಗೆ ಧೈರ್ಯವಾಗಿತ್ತು. ಹೇಗೋ ಭಯದಿಂದಲೇ ಆ ರಾತ್ರಿ ಕಳೆದೆ.


ಮರುದಿನ ಎಂದಿನಂತೆ ಸ್ಕೂಲ್‍ಗೆ ಹೊರಟೆ. ಹೋಗುವ ದಾರಿಯಲ್ಲಿ ನೆನ್ನೆ ರಾತ್ರಿ ಹೋದ ಹಳ್ಳ ದಾಟಿಯೇ ಹೋಗಬೇಕಾಗಿತ್ತು. ಕಂಡು, ಕಾಣದ ದೇವರನ್ನೆಲ್ಲಾ ನೆನೆಯುತ್ತಾ ಹಳ್ಳದ ಕಡೆ ನಡೆದೆ. ಹಳ್ಳ ದಾಟುವಾಗ ದೂರದಲ್ಲಿ ಬಿದ್ದಿದ್ದ ಕೊಂಬೆ ಕಾಣಿಸಿತು, ಅವು ನನ್ನನ್ನೇ ನೋಡಿ ನರ್ತಿಸುವಂತೆ ಅನಿಸಿತು. ಇನ್ನೂ ಭಯಗೊಂಡ ನಾನು ಅಲ್ಲಿಂದ ಓಡಿದೆ. ಹಳ್ಳ ದಾಟಿದ ಮೇಲೆ ನನ್ನ ಗೆಳೆಯನ ಮನೆ ಬರುತ್ತೆ ದಿನಲೂ ಅವನೊಂದಿಗೆ ಸ್ಕೂಲ್‍ಗೆ ಹೋಗುತ್ತಿದ್ದ ನಾನು, ಅಂದು ಹಳ್ಳದಿಂದ ಓಡಿ ನೇರವಾಗಿ ಅವನ ಮನೆ ತಲುಪಿದೆ. ಮನೆಯ ಒಳನಡೆಯುತ್ತಿದ್ದಂತೆ ಆತ "ಏನಾಯ್ತು, ನೆನ್ನೆಯ ಬೇಟೆ?" ಎಂದು ಪ್ರಶ್ನಿಸಿದ. ಬೇಟೆ ಹಾಗಿರಲಿ "ಕೇಳು ಏನ್ಯಾತು" ಎಂದು ನಡೆದ ಘಟನೆಯನ್ನೆಲ್ಲಾ ವಿವರಿಸಿದೆ.


ಈ ಘಟನೆ ಗೆಳೆಯನನ್ನೇ ಒಮ್ಮೆ ಮೂಕವಿಸ್ಮಿತನನ್ನಾಗಿ ಮಾಡಿತು. ಘಟನೆ ನಡೆದ ಸ್ಥಳ ಅವನ ಮನೆಯ ಸಮೀಪದಲ್ಲೇ ಇದ್ದು, ಆತ "ಯಾವಾಗ ನೀವು ಹೋಗಿದ್ದು?" ಎಂದ. ನಾನು "ಸುಮಾರು 10 ಗಂಟೆಯ ಆಸುಪಾಸು" ಎಂದೆ. ಅದಕ್ಕೆ ಉತ್ತರಿಸಿದ ಆತ "ಅಯ್ಯೋ ದಡ್ಡ, ಆ ಸಮಯದಲ್ಲಿ ಹಟ್ಟಿ(ದನದ ಕೊಟ್ಟಿಗೆ)ಯಲ್ಲಿ ಕಟ್ಟಿದ ನಮ್ಮ ಮನೆಯ ಎತ್ತಿನ ಹಗ್ಗ ಬಿಚ್ಚಿದ್ದು, ತಪ್ಪಿಸಿಕೊಂಡು ಎತ್ತು ಕುಣಿಯುತ್ತಿತ್ತು. ಹೀಗಾಗಿ ಅದರ ಕೊರಳಲ್ಲಿ ಕಟ್ಟಿದ ಗೆಜ್ಜೆಯ ಶಬ್ಧ ಜೋರಾಗಿ ಮೊಳಗಿತು. ಇದು ರಾತ್ರಿ ಸುಮಾರು 15 ನಿಮಿಷಗಳ ಕಾಲ ನಮಗೆ ತೊಂದರೆ ಕೊಟ್ಟಿದೆ. ನಂತರ ಹಗ್ಗ ಕಟ್ಟಿದೆವು" ಎ0ದ. "ಹೌದಾ!" ಎಂದು ನಾನು ತುಂಬಾ ಆಶ್ಚರ್ಯದಿಂದ ಕೇಳಿದೆ. "ಹೌದು, ಈ ಶಬ್ಧ ಕೇಳಿಯೇ ನೀವು ಭಯಗೊಂಡಿದ್ದೀರಿ" ಎಂದು ಆತ ಮನಸ್ಸಿನಲ್ಲಿ ಮೂಡಿದ ಛಾಯೆಯನ್ನು ದೂರ ಮಾಡಿದ.


ಆದರೂ ನನಗೆ "ಕೊಂಬೆ ಹೇಗೆ ಬಿತ್ತು?" ಎನ್ನೊ ಇನ್ನೊಂದು ಪ್ರಶ್ನೆ ಕಾಡತೊಡಗಿತು. ಆಗ ನನಗೆ ರಾತ್ರಿ ಸಮಯದಲ್ಲಿ ಜೋರಾಗಿ ಬೀಸಿದ ಗಾಳಿಯ ನೆನಪಾಯ್ತು,

ಗಾಳಿಯ ರಭಸಕ್ಕೆ ಕೊಂಬೆ ಬಿದ್ದಿರುವೆ ವಿನಹಾ ಯಾವುದೇ ಭೂತದ ಪ್ರಭಾವದಿಂದಲ್ಲ ಎಂದು ಸಮಾಧಾನವಾದೆ. ಘಟನೆಯ ಹಿಂದಿನ ಈ ಸತ್ಯ ನನ್ನಾ ಎಲ್ಲಾ ಊಹೆಗಳನ್ನು ಮಣ್ಣು ಮುಕ್ಕಿಸಿದವು. ಆ ದಿನ ಎಂದಿನಂತೆ ನಗುನಗುತ್ತಾ ಸ್ಕೂಲ್‍ಗೆ ತಲುಪಿದೆ.


ಸ್ಕೂಲ್‍ನಿಂದ ಹಿಂದಿರುಗುವ ವೇಳೆಗೆ ಮನೆಯಲ್ಲಿ ಅಜ್ಜಿ ರಾತ್ರಿ ಹೆದರಿದ ನನಗೆ ಏನೂ ತೊಂದರೆ ಆಗಬಾರದೆಂದು ಏನೇನೋ ಹರಕೆ ಹೊರಲು ಮುಂದಾಗಿದ್ದರು. ಮನೆಗೆ ತಲುಪಿದ ನಾನು ಘಟನೆಯ ಹಿಂದಿನ ಸತ್ಯವನ್ನು ವಿವರಿಸಿದೆ. ಇದು ಅಜ್ಜಿಯ ಎಲ್ಲಾ ಯೋಜನೆಗಳನ್ನು ಕೈ ಬಿಡುವಂತೆ ಮಾಡಿತು. ಮೂಢನಂಬಿಕೆಯನ್ನೇ ರೂಢಿಸಿಕೊಂಡು ಬಂದ ನಮ್ಮ ಮನೆಯ ಮಂದಿಗೆ ಇದು ಒಳ್ಳೆಯ ಪಾಠವಾಗಿ ಪರಿಣಮಿಸಿತು.


ಈ ಕಥೆಯಲ್ಲಿ ನಾನು ಹೇಳಹೊರಟಿರುವುದಿಷ್ಟೇ, ಮೂಢನಂಬಿಕೆಗೆ ಮಾರುಹೋದ ಜನ ಅದರ ಹಿಂದಿನ ಸತ್ಯಾಸತ್ಯತೆಯನ್ನು ಅರಿಯದೇ ಹರಕೆ ಇತ್ಯಾದಿಗಳಿಗೆ ಮುಂದಾಗಿತ್ತಾರೆ. ಮನೆಯಲ್ಲಿದ್ದ ಮಗುವಿಗೆ ಒಂದು ಬಟ್ಟೆ ಕೊಡದ ಇವರು ತಮ್ಮ ಸಂಪಾದನೆಯನ್ನರಲ್ಲಾ ಹೊತ್ತ ಹರಕೆ ತೀರಿಸಲು ಸುರಿಯುತ್ತಾರೆ. ಇದಕ್ಕಾಗಿಯೇ ಇನ್ನೂ ಎಷ್ಟೋ ಮಂದಿ ಅವರವರ ದುಡಿಮೆಯನ್ನು ಈ ವಿಷಯಗಳಿಗೆ ಸುರಿದು ಬಡವರಾಗಿಯೇ ಉಳಿದುಕೊಂಡಿದ್ದಾರೆ.


ವ್ಯಕ್ತಿ ಯಾರೇ ಇರಲಿ ಅಜ್ಞಾನಿ ಆಗಬಾರದು. ಕಣ್ಣಲ್ಲಿ ಕಂಡರೂ ಪರಂಬರಿಸಿ ನೋಡು ಎಂಬ ಮಾತಿನಂತೆ, ನನ್ನ ಜೀವನದಲ್ಲಿ ನಡೆದ ಈ ಘಟನೆ ನಾನು ಮೂಢನಂಬಿಕೆಗಳನ್ನೇ ಮೀರಿ ನಿಲ್ಲುವಂತೆ ಮಾಡಿತು. ಕಲಿತ ಪಾಠ, ಕೇಳಿದ ಕಥೆ, ಓದಿದ ಪುಸ್ತಕ ನಮ್ಮ ಜೀವನದ ಬದಲಾವಣೆಗೆ ಕಾರಣವಾಗುವುದಾದರೆ, ಈ ನನ್ನ ಕಥೆ ಯಾಕೆ ನಿಮ್ಮ ಜೀವನದಲ್ಲಿ ಬದಲಾವಣೆ ತರಬಾರದು?.


ಮೂಢನಂಬಿಗಳನ್ನು ದೂರ ತಳ್ಳಿ , ನೈಜತೆಯನ್ನು ಅರಿತು ಸಾಗುವ ದಾರಿ ನಮ್ಮದಾಗಲಿ ಎನ್ನುವುದೇ ನನ್ನ ಆಶಯ.


Rate this content
Log in