ನಂಜುಂಡ
ನಂಜುಂಡ


ಸೂಕ್ಷ್ಮಾಣು ;
ಪೂರ್ಣ ಪರಾವಲಂಬಿ ಜೀವಾಣು,
ಮರೆತ ಮೈ- ಅಣು ಕಣಗಳೊಳಗೆ ನುಸುಳು ,
ಕೆರಳಿ ಬೆಳೆಬೆಳೆದು ಹಿಂಡಿ ಅದುಮಿದಲೆ ಕೊರಳು.
ಕುಟಿಲ ಕಾರಸ್ಥಾನದ ನೆರಳು.
ನಿಮಗೆಂದಿಗೆ ಉರುಳು ?
ಹುಡುಕುವ ಬೇಟೆಯ ಘೋರ ಭಯದಲಿ
ಬರಿಗಾಲ ಬಿಕಾರಿ ಹೊರಟೆಯೆಲ್ಲೊ ಶಿಕಾರಿ !
ಕೈಲಿ ಆರತಿ ಕಂಕುಳಲ್ಲಡಗಿದ ತುಫಾಕಿ
ವೇದ ಮಂತ್ರಘೋಷ ಕಂಠಸ್ಥ ಶಾಂತಿಸುತರು ; ೧೦
ಬಢಾ ಪಾಪಿ ! ತೆರೆಮರೆಯಲ್ಲಡಗಿ ಮುಳ್ಳುತಂತಿ
ಬೇಲಿ ಸುಟ್ಟು ವಿಜ್ರಂಭಿಸುವ ವಂಧ್ಯಪುತ್ರರು.
ವಿಂಧ್ಯಹಿಮಾದ್ರಿ ಪರ್ವತವನ್ನೇರುವ ತಲಹು
ಹಗಲುಗನಸುರುಳಿ ತೆವಳುತ್ತೇಳು ಸುಕೃತ ನೆಲೆ
ಯಟ್ಟಡಿಯಲಿ ರಕ್ಕಸ ಮೈಯೆಲ್ಲಾ ಮೊಳೆವ
ಮೊನೆ ರಕ್ತರಾಜಿಗೆ ಮಸಲತ್ತು.
ಅಗಚಾಟಲು, ಅವಾಂತರ ಗೆರೆಗಳನ್ನೆಳೆವ
ಮನೋವೈಕಲ್ಯದಿ ಮೇರೆಮೀರಿ ಉನ್ಮಾದ ವ್ಯಾಧಿ.
ದಿಟದ ಮರೆಯಲಿ ಮೃಷೆಯ ತಾರೆ ?
ತಂತ್ರ ತನಯ : ಮಂತ್ರ- ಸ್ವತಂತ್ರ ೨೦
ಸಂಚಿನಚಲ ಖೆಡ್ಡಕ್ಕೆಳೆವ ಕಿರುಹಾಸಿನ ಹಾದಿ ;
ದೆವ್ವ ತಲೆತುಂಬು ವಕ್ರಾಕೃತಿಯ ದರ್ಪಣ
ಬಿಂಬಗಳಲೆಲ್ಲಾ ಬೆಂಕಿ ನಾಲಿಗೆಯ ಡ್ರ್ಯಾಗನ್
ಸಿಕ್ಕವರಷ್ಟೂ ಬೂದಿ--- ಶೂನ್ಯಾವಶೇಷ .
ಹೌದು, ತುಂಬಾ ಸಸ್ತದ ಸಂಗ್ರಹಾಲಯ !
ಕೊಂಡರೇನಂತೆ ? ಅಗ್ಗದ ಅರಗದ ಪರಮಾನ್ನ ,
ಗಟಾರಕೆ ಸುರಿವ ಮುನ್ನ ಜೀರ್ಣಾಂಗ ಜಠರಕೆ.
ಭ್ರಮಾಲೋಕದಲಿ ಬಲೆ ಹೆಣೆವ ಹುಸಿ
ಮಾಯೆ, ಮಂಪಿನ ಚಿತ್ತ ಫಲಿತಾಂಶ ಶೂನ್ಯ!
ಮೋಹದ ಬಲೆಯೊಳಗೆ ಕಾಣದ ನಿಗೂಢ ೩೦
ಲಿಪಿ ಬಿಡಿಸಲೆತ್ನಿಸಿ ಸೋತ ನವ್ಯ ಭಾರತ,
ನಿಲ್ಲದ ಸತತ ಸೋಲಿನ ಸರಣಿ ಅಪಘಾತ.
ಸ್ನಾಯುಕ್ಷಯ ಹತ್ತಿ ನರಳುವ ಪುರು ಸತ್ವ
--- ಅಂಗಾಂಗ ಕಸಿಮಾಡಿ ಜೀವ ವಾರ್ಧಕ್ಯ.
ಪ್ರಗತಿಪಥದತ್ತ ಎಚ್ಚರಿಕೆಯ ಕರೆಗಂಟೆ ಸಪ್ಪಳ,
ಯಕ್ಷಿಣಿ ಸೃಷ್ಟಿಕರ್ತನ ಸಮ್ಮೋಹನ ವಿದ್ಯೆ.
ರಕ್ತಸಿಕ್ತ ಕುಡಗೋಲಿನಂತ್ಯ ಕಾಣದ ಕಥೆಯೆ ?
ಹೊರಬರಲಾರೆ, ಗೊಂದಲದ ಗುರಿಯೇನಿಹದೋ ?
ತಿಳಿದೂ ತಡೆಯಲಾರದೆ ಕಣ್ಮುಂದಿನ ಸೋಲು
ಕಣ್ಣೆದುರು ಮಾಯಕದ ಅರಗಿನರಮನೆ . ೪೦
ದ್ವಂದ್ವ ನಾಟಕ : ಅದೇ ರಂಗಮಂದಿರದ ನೆಳಲು ,
ಪಾತ್ರ ಪರವಶ ಕುತೂಹಲಕ್ಕಷ್ಟೆ ಬಿದಿರತೆರೆ
ಸನಾತನ ಸಂತಾನ ಕೃಪಾಪೋಷಿತರೆ !
ತುಲಾಭಾರಕ್ಕಿಲ್ಲಿ ಅಣಿಮಾಡಿ ಬಾಹುಗಳ ಘಟಬಂಧನ
ಶತಮಾನದಿಂದಲೂ ಮುಗಿಯದ ಇರುಳ ಮೆರವಣಿಗೆ .
ಕೃತಕ ದಿಕ್ಸೂಚಿಯೋಪಾದಿ ಕಾರ್ಯ ನಿರ್ವಯಿಸುತ
ತಿರು ತರುಗಿ ಗಾಣದ ಎತ್ತಿನ ಪಾಡು.
ಶಕುನಿ ಸತ್ತು ದಾಳಗಳು ಉರುಳುತ್ತಲೆ ಇವೆ.
ನಿತ್ಯ ಮಾರಣಹೋಮ, ಮಸಣ ಬೂದಿ
ತನ್ನ ವಿಸ್ತಾರ ಹರುಹಿನ ಕಾಲುವೆಯ ಕಲಕಿ ೫೦
ಅಶಾಂತಿಯ ಸೊಂಕಿನಾಲೋಚನಾ ಲಹರಿ.
ನಮ್ಮೊಳಗಿನ ವೈರಿ ಯಾರು ?
ಬಗ್ಗಿದರೆ ಬೆನ್ನಿರಿವ ಬ್ರೂಟಸ್,
ಇಲ್ಲೆ ನೆಲೆಯೂರಿದ್ದು, ತನ್ನಿಚ್ಛೆಯೆಂತೆ ಕಣ್ಣು ತಪ್ಪಿಸಿ
ಮಾರ್ಜಾಲ ಮಾಯಾವಿ ಕಪಟ ವೇಷಧಾರಿಯ ಕಥೆ.
ಸೃಷ್ಟಿ ಸಮಾಜ ಒಡೆವ ಪಿಶಾಚ ರಚಿತ ದುಷ್ಟಸಿದ್ದಾಂತ ,
ಕೊಳದ ವಿಷವರ್ತುಲದ್ದಲ್ಲಡಗುವ ಉರಗ, ಕ್ರಿಮಿಕೀಟ,
ನೊಣ, ಸೊಳ್ಳೆ ಸಂತತಿಯ ದುರ್ನಾತ ದಾಸ್ಯ!
ಕಾಲ ಮಿಂಚುವ ಮುನ್ನ ;
ನಾಳೆಗಳು, ಪಾತಾಳಕೆ ಕುಸಿಯುವ ಸದ್ದು ೬೦
ಗದ್ದಲ ಕತ್ತಲೆಯ ತಮಸ್ಸಿನ ಸ್ವರೂಪ ಸಾವಿರದ
ನಾಳ ನಾಳದಿಂದ ಹರಿವ ಹಾಲಾಹಲ ಹೀರಿ ;
ಇನ್ನೆಷ್ಟುದಿನ ಸಹನೆಯ ಕಟ್ಟೆ ತಡೆಹಿಡಿಯಲು ?
ಶಿವನೊಡಲನ್ನು ಸೇರಿದ ವಿನಾಶಪೂರ್ವ ತೇಜ
ತೆರೆವ ತ್ರಿನೇತ್ರ ದೃಷ್ಟಿ, ಸೃಷ್ಟಿ ಲಯದ ಗುಡುಗು .
ನಮ್ಮೊಳಗಿನ ಅಂಧಕಾರದೆದೆಗೆ ಆಂತರ್ಯದ ಜ್ಞಾನ
ಉದ್ದೀಪನಗೊಳಿಸುತ - ಆತ್ಮಜ್ಯೋತಿ ಬೆಳಗು