ಕಾಲೇಜು ಕನ್ಯೆ
ಕಾಲೇಜು ಕನ್ಯೆ
ಭವಿಷ್ಯದ ಸುಂದರ ಕನಸುಗಳ ಹೊತ್ತ ಕನ್ಯೆ
ಕಾಲೇಜು ಮೆಟ್ಟಿಲು ಹತ್ತಿದಳು ಮೊನ್ನೆಮೊನ್ನೆ
ತರಗತಿಗಳು ನಡೆಯುವಾಗಲೂ ಮೌನವಿಲ್ಲ
ಬಣ್ಣ ಬಣ್ಣದ ಜೀವನ ಸಾಗಿತ್ತು ಮೆಲ್ಲಮೆಲ್ಲ
ಇವಳಂದ ಕಂಡು ಹೊಗಳಿದರು ಹುಡುಗರು
ಇವಳ ಹೆಸರಲ್ಲೇ ಹಾಡು ಕಟ್ಟಿ ಹಾಡಿದರು
ಬಣ್ಣ ಬಣ್ಣದ ಬಟ್ಟೆ , ರಂಗು ರಂಗಿನ ಕನಸು
ಓದಿನಕಡೆ ಹರಿಯಲೇ ಇಲ್ಲ ಈವಳ ಮನಸು
ಎಲ್ಲರೆದುರು ಮಿಂಚುವ ಹುಚ್ಚು ಹಂಬಲ
ಹೀಗೇ ಕಳೆಯುತ್ತಿತ್ತು ಆ ಮಹತ್ವದ ಕಾಲ
ಇವಳ ಮೇಲೆ ಬಿತ್ತು ಉಪನ್ಯಾಸಕನ ದೃಷ್ಟಿ
ಇವಳೆಣಿಸಿದಳು ‘ಅವ ನನಗೇ ಆದ ಸೃಷ್ಟಿ’
ಉಪನ್ಯಾಸದಲ್ಲಿ ಇವಳಕಡೆಗೇ ಅವನ ನೋಟ
ಕಣ್ಣಲಿ ಈಕೆ ಅಳೆಯುತ್ತಿದ್ದಳು ಅವನ ಮೈಮಾಟ
ಮೈ – ಮನಗಳಲಿ ಕಾಡಿದೆ ಅವನದೇ ರೂಪ
ಹಗಲಿರುಳು ನಡೆದಿದೆ ಅವನದೇ ಜಪ-ತಪ
ಗೆಳತಿ ಹೇಳಿದಳು ತಾಳ್ಮೆ ಸಹನೆಯ ಬುದ್ಧಿ
ಆಗ ಇವಳೆಂದಳು “ ನೀನು ತುಂಬಾ ಪೆದ್ದಿ”
ಸಲುಗೆ ಕರೆತಂದಿದೆ ಇವಳ ಮನೆಯವರೆಗೆ
ಸಾಗಿದೆ ಜೋಡಿ ರಜೆಯಲಿ ಮತ್ತೊಂದೂರಿಗೆ
ಕಾಣಲಿಲ್ಲ ಏನು ಯೌವನದ ಹಸಿ-ಬಿಸಿಯಲಿ
ಒಂದಾದರೂ ಒಂದು ದಿನ ‘ಕಾಮಪ್ರೇಮ’ದಲಿ
ಹಬ್ಬಿದೆ ಊರಿಂದೂರಿಗೆ ಕಾಡ್ಗಿಚ್ಚಿನಂತೆ ಸುದ್ಧಿ
ಮನೆಯಲ್ಲಿ ಕೇಳಿದರು ಇವಳನ್ನು ಗುದ್ದಿಗುದ್ದಿ
ಸಮಯ ಸಾಧಕ ಮತ್ತೆ ಬರಲಿಲ್ಲ ಕಾಲೇಜಿಗೆ
ಆರ್ಧಕಾಲದಲೆ ಹೋದ ಅವನ ದೂರದೂರಿಗೆ
ಮತ್ತೆ ಕಾಲೇಜಿಗೆ ಬರಲು ಇವಳಿಗೆ ಮುಖವಿಲ್ಲ
ನೆನಪಾಗಿದೆ ಈಗ ಗೆಳತಿಯ ಆ ಬುದ್ಧಿ ಮಾತೆಲ್ಲ
ಕಾಲೇಜುಗಳು ‘ಕಾಮಪ್ರೇಮ’ದ ಕೇಂದ್ರಗಳಲ್ಲ
ಮೈಮನ ಮರೆವ ಹುಡುಗಾಟಗಳು ಇಲ್ಲಿ ಸಲ್ಲ
ಗುರಿ ಬದುಕು ಭವಿಷ್ಯ ರೂಪಿತ ಕೇಂದ್ರಗಳು
ಸ್ನೇಹ – ಸೌಹಾರ್ದತೆ ಬೆಳೆಸುವ ತೋಟಗಳು
