ಚಾಟಿ ಹಿಡಿದಿರುವ ಸೂತ್ರಧಾರಿ ನೀನು
ನೀ ಆಡಿಸಿದಂಗೆ ಆಡುವ ಪಾತ್ರಧಾರಿ ನಾನು
ನಿನ್ನ ಕೈಲಾಡೋ ಬುಗುರಿ ನಾನು
ಸಾವಿಗೂ ನನ್ನೆದುರು ಸುಳಿಯಲು ಅಂಜಿಕೆಯಂತೆ!
ಸತ್ತಮೇಲೂ ಎಲ್ಲಿ ನನ್ನಾತ್ಮದ ಲೇಖನಿ
ಸಾವನ್ನು ಕುರಿತು ಸಾವಿರ ಗೀಚುವುದೆಂದು..
ಗಿಡವ ನೆಡದಿದ್ದರೂ,
ನೆಟ್ಟು ಬೆಳೆದಿರುವ ಮರವ ಉಳಿಸದೆ -
ಮಂದಿರದ ಮರವ ಅದೆಷ್ಟು ಬಾರಿ ಸುತ್ತಿ ಬಂದರೂ ಏನು ಪ್ರಯೋಜನ!
ಕಲೆಗಾರನ ಅಂಗೈಯೊಳಗೆ ಸ್ಪರ್ಶ ಮಣಿ ನೀನಾಗು
ಕುಂಚದಿ ಚಿತ್ರಿಸಿದ ಅಂದದ ಆಕಾರಕೆ ನಿನ್ನ ಸ್ಪರ್ಶತೆಯೆ ಮೆರುಗು.
ಅಂಗೈ ರೇಖೆಗಳ ಯೋಗದಿಂದ ಬೆಳೆದವರು ಬೆರಳಣಿಕೆಯಷ್ಟು
ದುಡಿವ ಕೈಗಳ ಶಕ್ತಿಯಿಂದ ಸಾಧಿಸಿದವರು
ಸಾಗರದಷ್ಟು.
ಕಾಣದಣೆಬರಹವ ತಿಳಿಯುವ ವ್ಯರ್ಥ ಪ್ರಯತ್ನವೇತಕೇ,
ಕಾಣುವ ಕೈ ಬರಹಗಳಿಂದಲೇ ನಿರೂಪಿಸು ನಿನ್ನ ಸಾಮರ್ಥ್ಯದ ರೇಖೆ
ನಶಿಸದ ನಂದಾದೀಪವಾಗಿ ನೀನಿರೇ
ಅಳಿಯದ ಅನಂತವಾದ ಬತ್ತಿಯಾಗಿ ನಾನಿರುವೆ
ನೀಲಿ ನಭದ ಹಾಸಿನಲಿ ರೆಕ್ಕೆ ಬಿಚ್ಚಿದ ಪಕ್ಕಿಗಳ ಹಾರಾಟ!
ಹೊನ್ನ ಕಿರಣಗಳ ಹೊಳಪಿನಲಿ ಜಗಮಗಿಸುವ ಪುಷ್ಪಗಳ ನೋಟ!
ಮಾತಿನಾಚೆಯ ನಗುವ ಮಿಂಚನು ಹೇಗೆ ಹಿಡಿಯಲಿ
ಮಾತಿನಡುವೆಯ ಗುಳಿಯ ಕದಪನು ಹೇಗೆ ವರ್ಣಿಸಲಿ!