Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Natesh MG

Tragedy Thriller classics

3.5  

Natesh MG

Tragedy Thriller classics

ಪೋಸ್ಟ್ ಮಾರ್ಟಂ.

ಪೋಸ್ಟ್ ಮಾರ್ಟಂ.

6 mins
145


"ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯ " ಅದು .


ಆವತ್ತು , ತಾಲೂಕಿನ "ಮುಖ್ಯ ವೈದ್ಯಾಧಿಕಾರಿ , ಪೊಲೀಸ್ ಇನ್ಸ್ಪೆಕ್ಟರ್ " ಮತ್ತು .....ಸರ್ಕಾರಿ ಆಸ್ಪತ್ರೆಯ ಜವಾನ "ಶಿವಪ್ಪ "ಹೊರಗಡೆ ಕುಳಿತಿದ್ದರು .


ಆವತ್ತಿನ ವಿಚಾರಣೆಯಲ್ಲಿ "ಶಿವಪ್ಪ "ಎಂಬ ಸರಕಾರಿ ಜವಾನನ "ಭವಿಷ್ಯ" ನಿರ್ಧಾರ ಮಾಡಲಿದ್ದು , ಪಕ್ಕ ಕುಳಿತ ಇನ್ಸಪೆಕ್ಟರ್ ....ಹಾಗೂ ಮುಖ್ಯ ಆರೋಗ್ಯ ಅಧಿಕಾರಿಯ ಮುಖದಲ್ಲಿ , "ಅವಹೇಳನೆಯ "ನಗು ಕಂಡುಬರುತ್ತಿತ್ತು.

ಜಿಲ್ಲಾಧಿಕಾರಿಗಳು ಬಂದ ನಂತರ , ಅಲ್ಲಿನ ಜವಾನ ಕೂಗಿ ಹೇಳಿದ್ದ . "ಎಲ್ಲರೂ ಒಳಗೆ ಬರಬೇಕೆಂದು ". ಎಲ್ಲರೂ ಒಳಗೆ ನಡೆದಿದ್ದರು , ಕೊನೆಯಲ್ಲಿ ಶಿವಪ್ಪ ಮಾತ್ರ ,ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಹೋಗಿ ನಿಂತಿದ್ದ .

        

ಅಷ್ಟರಲ್ಲೇ ಒಳಗೆ ನಮಸ್ಕರಿಸಿ , ನುಗ್ಗಿ ಬಂದಿದ್ದ ಸರ್ಕಾರಿ ವಕೀಲ ,ರಾಜೀವ ನಾಯ್ಕ . ಎದುರಿಗಿನ ಜಿಲ್ಲಾಧಿಕಾರಿಗಳಾದ ಚಕ್ರವರ್ತಿ ಅವರಿಗೆ , ಎಲ್ಲವೂ ನಿಚ್ಚಳ ಆಗಿತ್ತು . ಶಿವಪ್ಪ ಕುಡಿದು ಬಂದು , ಉದ್ಯೋಗ ಮಾಡಿದ ಎಂದು . ಅದಕ್ಕಾಗಿ ಆತ , ಸತ್ತವರ ಬಳಿ "ನೂರು ರೂಪಾಯಿ ಲಂಚ ಪಡೆದಿದ್ದಾನೆ " ಎಂಬುದು ಕೂಡ . ವಿಚಾರಣೆ ಎಂಬುದು ಕೇವಲ ಒಂದು ಭಾಗ ಅಷ್ಟೇ , ಅವನನ್ನು ಕೆಲಸದಿಂದ "ವಜಾ "ಮಾಡಲು ... ಎಂಬುದು ಕೂಡ ಅರಿತಿದ್ದರು ಅವರು. ಶಿವಪ್ಪ ಒಳಗೆ ಇದ್ದ "ಕಟಕಟೆಯಲ್ಲಿ "ನಿಂತಿದ್ದ . ಆತನ ಮುಖದಲ್ಲಿ ಮಾತ್ರ ಆವತ್ತು , ಹಿಂದೆಂದೂ ಕಾಣದ ದುಃಖ ಇತ್ತು.

   ಚಕ್ರವರ್ತಿ ಸಾಹೇಬರು ಕೂಡ , ಆತನ ಕಡೆ ನೋಡಿದರು ಕನಿಕರದಿಂದ .  ಅಷ್ಟರಲ್ಲಿ ಶುರು ಮಾಡಿದ್ದ , ತನ್ನ ವಾದವನ್ನು ಸರಕಾರಿ ವಕೀಲ ಪಂಡಿತ್ .  ಸ್ವಾಮಿ , ಇಲ್ಲಿ ನಿಂತವನು "ಶಿವಪ್ಪ "ಎಂದು . ಸರಕಾರಿ ಆಸ್ಪತ್ರೆಯಲ್ಲಿ , ಮೂವತ್ತು ವರ್ಷದಿಂದ ಕೆಲಸ ಮಾಡುತ್ತಿದ್ದಾನೆ . "ಡೀ ದರ್ಜೆಯ ನೌಕರನಾಗಿ ".

                     

"ಅವನ ಮೇಲಿನ ಮೊದಲ ಆರೋಪ ....ಕುಡಿದು ಕೆಲಸ ಮಾಡಿದ ಎಂದು . ಹಾಗೂ ಎರಡನೇ ಆರೋಪ ..... ಸುಟ್ಟ ಗಾಯದಿಂದ ಮೃತಪಟ್ಟ "ಹೆಂಗಸಿನ "ಶರೀರ ಪೋಸ್ಟ್ ಮಾರ್ಟಂ ಮಾಡಲು .....ಅವರ ತಂದೆಯಿಂದಲೇ ನೂರು ರೂಪಾಯಿ "ಲಂಚ " ತೆಗೆದುಕೊಂಡಿದ್ದ ಎಂಬುದು".  ಸರಕಾರಿ ವಕೀಲ ಇಷ್ಟು ಹೇಳಿ , ತನ್ನ ವಾದ ಹೇಗೆ ಇದೆ ಎಂದು? ....ಒಳಗೆ ಕುಳಿತ , ಪೋಲಿಸ್ ಇನ್ಸ್ಪೆಕ್ಟರ್ ಕಡೆ ನೋಡಿದ ಆತ .  ಅವರ ಕಣ್ಣಲ್ಲಿ ಕೂಡ ಮೆಚ್ಚುಗೆ . ಒಂದು ಉತ್ತಮ ಕೆಲಸದಲ್ಲಿ ಇದ್ದವರು , ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದವರು ....ಒಬ್ಬ ಸಣ್ಣ ನೌಕರನ ವಿರುದ್ಧ ನಿಂತು ಬಿಟ್ಟಿದ್ದರು ಆವತ್ತು .  ತಾವು ಎಷ್ಟು "ಪ್ರಾಮಾಣಿಕರು "ಎಂದು ತೋರಿಸಿಕೊಳ್ಳಲು.   ಕೇಳುತ್ತಾ ಇದ್ದ ಶಿವಪ್ಪ , ತನ್ನ ಮೇಲಿನ ಆರೋಪವನ್ನು . ಯಾವುದೂ "ಸುಳ್ಳು "ಇರಲಿಲ್ಲ .

  

 ಮುಂದೆ ವಕೀಲ ನುಡಿದಿದ್ದ."ಸ್ವಾಮಿ ಅದಕ್ಕೆ ಸಂಬಂಧಪಟ್ಟಂತೆ ಇರುವ ಎಲ್ಲಾ "ದಾಖಲೆಗಳನ್ನು ", ನಿಮ್ಮಮುಂದೆ ಈಗಾಗಲೇ ಹಾಜರು ಮಾಡಿದ್ದೇನೆ . ಅದನ್ನು ಪರಿಗಣಿಸಿ ತಾವು , ಅಲ್ಲಿ ನಿಂತಿರುವ "ಆರೋಪಿಯನ್ನು "ತಕ್ಷಣಕ್ಕೆ ಜಾರಿಗೆ ಬರುವಂತೆ ...ಕೆಲಸದಿಂದ ವಜಾ ಮಾಡಬೇಕೆಂದು ಕೋರಿಕೆ " ಎಂದು , ಕೈ ಮುಗಿದು ಕುಳಿತಿದ್ದ .  ಎಲ್ಲರಿಗೂ ಅರಿವು ಇತ್ತು , ಶಿವಪ್ಪ ಕೆಲಸದಿಂದ ವಜಾ ಆಗುತ್ತಾನೆ ಎಂದು .  "ನಿನ್ನ ಕಡೆ ವಾದ ಮಾಡಲು ಯಾರು ಇಲ್ಲವೇ " ಎಂದು ಕೇಳಿದ್ದರು , ಜಿಲ್ಲಾಧಿಕಾರಿ ಚಕ್ರವರ್ತಿಯವರು . ಅದೊಂದು "ಪ್ರಕ್ರಿಯೆ "ಮಾತ್ರ ಉಳಿದಿತ್ತು ಅಷ್ಟೇ.  ಕೈ ಮುಗಿದು ಹೇಳಿದ್ದ ಶಿವಪ್ಪ .

"ಯಾರನ್ನೂ ಕೂಡ ವಾದ ಮಾಡಲು , ನಾ ನೇಮಕ ಮಾಡಿಲ್ಲ ಸ್ವಾಮಿ "ಎಂದು .  "ಎಲ್ಲವೂ ಸತ್ಯವೇ ಅವರು ಹೇಳಿದ್ದು .ಆದರೆ ತಾವು ದಯವಿಟ್ಟು , ನನ್ನ ಐದು ನಿಮಿಷದ ಮಾತು ಕೇಳಿ" ಎಂದು ವಿನಂತಿ ಮಾಡಿದ್ದ . "ಕುಡಿದಿದ್ದು ಹೌದು ಮಹಾ ಸ್ವಾಮಿ , ಯಾಕೆ ಅಂದರೆ "..... ಆತನ ಕಣ್ಣಲ್ಲಿ ನೀರಿತ್ತು . "ಆದರೆ ನಾನು "ಕುಡುಕನಲ್ಲ "ಮಹಾಸ್ವಾಮಿ ".


"ಆದರೆ ಈ "ಪೋಸ್ಟ್ ಮಾರ್ಟಂ "ಮಾಡಲು ಹೋಗುವಾಗ , ಅದು ನನಗೆ ಅದು ಬೇಕೆ ಬೇಕು . ಈ ಮೂವತ್ತು ವರ್ಷದಿಂದ , ನಾನು ಇದನ್ನೇ ಮಾಡಿದ್ದೇನೆ ಕೂಡ ". ಚಕ್ರವರ್ತಿ ಅವರಲ್ಲಿ ಕುತೂಹಲ . ಈತನಲ್ಲಿ ಮಾತನಾಡಲು , ಏನು ವಿಷಯ ಇರುತ್ತೆ ಎಂದು. "ಅಲ್ಲಿ ಸತ್ತವರ ದೇಹವನ್ನು ಕೊಯ್ದು , ಅದರಲ್ಲಿ ವೈದ್ಯರು ಹೇಳಿದ ಅಂಗವನ್ನು ತೆಗೆದು ...ಮತ್ತೆ ಶರೀರವನ್ನು "ಹೊಲಿಯುವ "ಕೆಲಸ ನನ್ನದು . ಮಾಮೂಲಿ ಮನಸು ಅದಕ್ಕೆ ಒಗ್ಗುವುದಿಲ್ಲ . ಯಾಕೆ ಅಂದರೆ , ಸತ್ತ ಸಣ್ಣ ಮಕ್ಕಳ "ತಲೆ "ಒಡೆದು ,ಅವರ ಮೆದುಳಿನ ಭಾಗ ತೆಗೆಯಬೇಕು . ಅದು ಕೂಡ , ಅವರ ತಲೆಗೆ "ಸುತ್ತಿಗೆ "ಪೆಟ್ಟು ಹಾಕಿ".

ಶಿವಪ್ಪ ಭಾವುಕನಾಗಿ ಹೋಗಿದ್ದ . ಅಲ್ಲಿನ ಪ್ರತಿ ಚಿತ್ರ , ಅವನ ಕಣ್ಣ ಮುಂದೆ ಬರುತ್ತಿತ್ತು. "ದೇಹ ಸತ್ತಿರಬಹುದು ಸ್ವಾಮಿ , ಆದರೆ ಅದನ್ನು ಮತ್ತಷ್ಟು ಹಿಂಸಿಸಿ ...ಅದರ ಎದೆಯ ಭಾಗವನ್ನು , ಹೊಟ್ಟೆಯನ್ನು ಕೊಯ್ದು ...ಅದರ "ತುಣುಕು "ಇಡುವ ಕೆಲಸ ನನ್ನದು , ವೈದ್ಯರು ಹೇಳಿದ ಹಾಗೆ . ಕಡೆಗೆ ಕೂಡ ...ಅದನ್ನು ಸೇರಿಸಿ ಹೊಲೆಯಬೇಕು ನಾನು , ಪೇಟೆಯಲ್ಲಿ ಸಿಗುವ ಹಗ್ಗದಿಂದ .ಬಿಗಿದು ಹೋದ ಮಾಂಸದಲ್ಲಿ , "ಸೂಜಿ " ಬರೋಲ್ಲ ಸ್ವಾಮಿ , ಅದಕ್ಕೆ ದೊಡ್ಡ "ದಬ್ಬಣ "ಬೇಕು .


ಎಂತಹ ಹಣೆಬರಹ ನೋಡಿ ನನ್ನದು " . ಎಂದು ಅಲ್ಲೇ ಕುಸಿದು ಕುಳಿತಿದ್ದ ಆತ . ಕಣ್ಣಲ್ಲಿ "ಧಾರಾಕಾರವಾಗಿ " ನೀರು ಹರಿದು ಹೋಗುತ್ತಿತ್ತು .ಚಕ್ರವರ್ತಿ ಸಾಹೇಬರಿಗೆ ಕೂಡ , ಎಲ್ಲೋ ಮನಸಿಗೆ ತಾಗಿದ ಹಾಗಿತ್ತು ಮಾತು . " ನೀರು ಏನಾದರೂ ಬೇಕ ಶಿವಪ್ಪ "ಎಂದು ಕೇಳಿದ್ದರು . "ಗಂಡನಿಂದ "ಸುಟ್ಟು "ಕರಕಲು ಆದ ಹೆಂಗಸು , ಬೈಕ್ ಮೇಲಿಂದ ಬಿದ್ದ ಮಕ್ಕಳು...ಸಾಲ ತೀರಿಸಲು ಆಗದ "ರೈತನ "ಶರೀರ . ಈಜಲು ಹೋದ "ಮಕ್ಕಳ "ಶರೀರಗಳು ಸ್ವಾಮಿ ,ಅಲ್ಲಿಗೆ ಬರುವುದು .

 ಕೆಲವೊಮ್ಮೆ , ಅಪಘಾತದಲ್ಲಿ "ತಲೆಯೇ" ಇಲ್ಲದ ಶರೀರ . ತುಂಬಿದ ಬಸುರಿಯ ಶರೀರ ಕೂಡ ಕೆಲವೊಮ್ಮೆ ".

ಇದನ್ನು ಹೇಳುವಾಗ , ದೊಡ್ಡದಾಗಿ ಅತ್ತು ಬಿಟ್ಟ ಶಿವಪ್ಪ .  "ಹೇಗೆ ಸ್ವಾಮಿ ಮಾಡಲಿ ನಾನು , ಮಾಮೂಲಿ ಮನುಷ್ಯನಂತೆ ಈ ಕೆಲಸಗಳನ್ನು . ಹೇಗೆ ಬಸುರಿಯ ಹೊಟ್ಟೆಯನ್ನು ಕೊಯ್ದು ....ಕಣ್ಣು ಬಿಡದ ಮಗುವನ್ನು ಎತ್ತಿ ಇಡಲಿ ಹೊರಗೆ .

ಎಲ್ಲಾ "ಹೆಣದ ಕಣ್ಣುಗಳು "ನನ್ನನ್ನೇ ನೋಡುತ್ತಿರುವಾಗ . ಡಾಕ್ಟರ್ ಬಳಿ ಇರುವ , "ಚೂಪು ತುದಿಯ" ಬ್ಲೇಡ್ ಸೌಲಭ್ಯ ಕೂಡ ನನಗಿಲ್ಲ . ನನ್ನ ಬಳಿಯ ಬಾಕು , ನನ್ನ ಬಳಿಯ ಸುತ್ತಿಗೆ ....ಕಡೆಗೆ ಕೂಡ ಯಾವುದೋ ...ಪ್ಲಾಸ್ಟಿಕ್ ಹಗ್ಗದಲ್ಲಿ ಹುಲಿಗೆ ಹಾಕಿ , ಶರೀರವನ್ನು ಒಟ್ಟು ಮಾಡಿ ಕೊಡುವ ಕೆಲಸ ಸ್ವಾಮಿ ನನ್ನದು ". ಕೇಳುತ್ತಿದ್ದ ಚಕ್ರವರ್ತಿ ಅವರ "ಹೃದಯದಲ್ಲಿ" ಕೂಡ ಸಣ್ಣ ಕಂಪನ .  ಕಣ್ಣೀರು ಬಸಿದು ಹೋಗುತ್ತಿತ್ತು ಶಿವಪ್ಪನ ಕಣ್ಣಿನಿಂದ .


"ಪ್ರತಿ ಬಾರಿ ಹೆಣದ ಮುಂದೆ ಕುಳಿತಾಗ , ನನಗೆ ಕಾಣಿಸುವುದು ನನ್ನ ಮಗ , ನನ್ನ ಮಗಳು . ಸತ್ತು ಹೋದ ಹುಡುಗ ಬದುಕಿ ಇದ್ದರೆ , ಎಂಬ ಭಾವನೆ ಸ್ವಾಮಿ . ಈಜಲು ಹೋದ ಮಗುವನ್ನು , ಮತ್ತಷ್ಟು ಹಿಂಸೆ ಕೊಡುತ್ತೇನೆ ಎಂಬ ಸಂಕಟ ಸ್ವಾಮಿ .

ಅಲ್ಲಿ ನನಗೆ ಕಾಣಿಸುವುದು ಶವ ಅಲ್ಲ , ಕಾಣಿಸುವುದು ಅವರ ಮುಂದಿನ ಬದುಕು . ಅದಕ್ಕೆ ಈ ಕೆಲಸ ಮಾಡಲು , "ಮನಸು " ಎಂಬುದು ಇರಬಾರದು ಸ್ವಾಮಿ "...ಎಂದಿದ್ದ ಶಿವಪ್ಪ . ಎಲ್ಲವೂ "ಸತ್ಯವಿತ್ತು "ಆತನ ಮಾತಿನಲ್ಲಿ .

 "ಮನೆಗೆ ಹೋದರೆ , ಅದೆಷ್ಟೇ ಸ್ನಾನ ಮಾಡಿದರೂ ಕೂಡ ಹೋಗದ ನನ್ನ ಕೆಲಸದ ವಾಸನೆ .

        

ರಾತ್ರಿ ಮಲಗಿದರೂ ಕೂಡ ,ಮುಂದೆ ನಿಲ್ಲುವ ಶವದ ಮುಖಗಳು ....." ಹೇಳುತ್ತಲೇ ಇದ್ದ ಆತ . ಹೊಟ್ಟೆಯಿಂದ ಸಂಕಟ , ಎದ್ದು ಹೊರಗೆ ಬರುತ್ತಿತ್ತು ಅವನಿಗೆ . " ಅದಕ್ಕೆ ಸ್ವಾಮಿ , ಮನಸನ್ನು ಕೊಲೆ ಮಾಡಲು ನಾನು ಕುಡಿದು ಹೋಗುತ್ತಿದ್ದೆ ...ಶವಾಗಾರಕ್ಕೆ . ನಾನು ಏನು ಮಾಡುತ್ತಿದ್ದೇನೆ , ಯಾವ ಮುಖ ಅದು ಎಂಬುದು ಕೂಡ ತಿಳಿಯಬಾರದು ನನಗೆ ...ಅದಕ್ಕಾಗಿ ನಾನು "ಕುಡಿದು "ಹೋಗುತ್ತಿದ್ದೆ . ಕಣ್ಣು ಮಸುಕಾಗಿ , ಮನಸು ಎಂಬುದೇ ಸತ್ತು ಹೋಗಬೇಕೆಂದು ...ಕುಡಿಯುತ್ತೇನೆ ಸ್ವಾಮಿ . ನೂರು ರೂಪಾಯಿ ಪಡೆದಿದ್ದು ನಿಜ ಸ್ವಾಮಿ . ಆವತ್ತು ಗಂಡನಿಂದ ಸುಟ್ಟು ಹೋದ , ತುಂಬಿದ "ಬಸುರಿಯ ಹೆಣವನ್ನು "ನಾನು ಕೊಯ್ದು ಹಾಕಬೇಕಿತ್ತು .  ಅವಳ ಹೊಟ್ಟೆಯಲ್ಲಿ ಇದ್ದ ಮಗುವನ್ನು , ಅಳತೆ ಮಾಡಬೇಕಿತ್ತು . ದುಡ್ಡು ಇರಲಿಲ್ಲ ನನ್ನ ಬಳಿ , ಅದಕ್ಕಾಗಿ ಆವತ್ತು ಕೇಳಿದೆ ಸ್ವಾಮಿ "...ಎಂದು ಕೈ ಜೋಡಿಸಿ ನಿಂತು ಬಿಟ್ಟಿದ್ದ . "ಆದರೆ ಅವರ ದುಡ್ಡಿಗೆ , ನಾನೇ ಸ್ಮಶಾನದಲ್ಲಿ ಗುಂಡಿ ಹೊಡೆದು ಕೊಟ್ಟೆ ....ಅದೆಷ್ಟು ಚಿತ್ರಹಿಂಸೆ ಪಟ್ಟು ಹೆಣವಾಗಿ ಹೋದಳು ಆಕೆ ". ದ್ವನಿ ಕಟ್ಟಿ ಬರುತಿತ್ತು ಆತನದು .  ವಾದ ಮಾಡಲು ಬಂದ ಸರಕಾರಿ ವಕೀಲ , ಮೇಲೆ ಕುಳಿತಿದ್ದ "ಚಕ್ರವರ್ತಿ ಸಾಹೇಬರಿಗೆ "ಕೂಡ ಕಣ್ಣು ಮಂಜಾದ ಹೊತ್ತು ಅದು . "ದಯಮಾಡಿ ನನ್ನ ಕೆಲಸದಿಂದ ತೆಗೆದು ಬಿಡಿ ... ಈ ಹೆಣ ಕೊಯ್ದು , ಅದನ್ನು ಜೋಡಿಸುವ ಕೆಲಸದಿಂದ ...ನನಗೆ ಮುಕ್ತಿ ಕೊಡಿಸಿ ಬಿಡಿ ಸ್ವಾಮಿ "ಎಂದು ಗೋಳೋ ಎಂದು ಆತ್ತಿದ್ದ ."ಅತ್ಯಾಚಾರ "ಮಾಡಿ , ಆಕೆಯನ್ನು ಕೊಲೆ ಮಾಡಿ ಹೋದ ಶವವನ್ನು , ನಾನೇ ಮತ್ತೊಮ್ಮೆ ಆಕೆಯನ್ನು ನಗ್ನ ಮಾಡಿ ...ಅದೆಷ್ಟು "ಹಾನಿ "ಆಗಿದೆ ಎಂದು ಹೇಳಬೇಕು ..  ಆಕೆಯ ಪ್ರತಿ ಅಂಗವನ್ನು ಮತ್ತೊಮ್ಮೆ ಕತ್ತರಿಸಿ . ಆಗ ನೆನಪು ಆಗುವುದು ನನ್ನ ಮಗಳು ....ಹೊರಗೆ "ಅಪ್ಪ ಅಮ್ಮನಿಗೆ " ಕೈ ಬೀಸಿ ಶಾಲೆಗೆ ಹೋಗುವ ಹೆಣ್ಣು ಮಕ್ಕಳು .  ಅದೇ "ಅತ್ಯಾಚಾರಿಗಳಿಗೆ " ತಲೆ ಸರಿ ಇರಲಿಲ್ಲವೆಂದು , ಅದಕ್ಕಾಗಿ ಅವರಿಗೆ ಜಾಮೀನು ಕೊಡಬೇಕೆಂದು ....ಜಾಮೀನು ಕೂಡ ಕೊಡಿಸಿ ಬಿಟ್ಟರು ಇಲ್ಲಿ ಕುಳಿತವರು ".


ದುಃಖ ಉಕ್ಕಿ ಬರುತ್ತಿತ್ತು ಆತನಿಗೆ , ತನ್ನ ಕೆಲಸ ಹೋಗುತ್ತದೆ ಎಂದು ಅಲ್ಲ . ತನ್ನ ಮನಸನ್ನು ಕೊಲೆ ಮಾಡಿಕೊಂಡು , ಇನ್ನೆಷ್ಟು ಹೆಣ ಕೊಯ್ದು ಹಾಕಬೇಕೆಂಬ ಸಂಕಟ ಅದು .ಜಿಲ್ಲಾಧಿಕಾರಿಗಳಿಗೆ , ಒಬ್ಬ ಸರಕಾರಿ ಡೀ ದರ್ಜೆ "ನೌಕರನ ನೋವು " ತಿಳಿದ ದಿನ ಅದು . ಮುಂದೆ ಇದ್ದ ಯಾರಿಗೂ ಕೂಡ , ತಮ್ಮ ಕಣ್ಣಲ್ಲಿ ತುಂಬಿದ "ನೀರು "ಕಾಣಿಸಬಾರದು ಎಂದು ...ಮುಖವನ್ನು ತಿರುಗಿಸಿ ಬಿಟ್ಟಿದ್ದರು , ಗಾಳಿ ಬರುತ್ತಿದ್ದ ಕಿಟಕಿಯ ಕಡೆಗೆ. ಆವತ್ತು ತಾನು "ಬರೆಯುವ "ಒಂದೇ ವಾಕ್ಯ , ಅವನ ಮೂವತ್ತು ವರ್ಷದ ಸೇವೆ ....ಸೇವೆಯ ನಂತರ ಬರುವ ಕೆಲ ಸವಲತ್ತು ...ಎಲ್ಲವೂ ನಿಂತು ಹೋಗುತ್ತದೆ ಎಂದು ತಿಳಿದಿತ್ತು .   ನಿರ್ಧಾರ ತೆಗೆದುಕೊಳ್ಳುವ ಸಮಯ ಹತ್ತಿರ ಆಗಿತ್ತು . ಆಗ ನುಡಿದಿದ್ದರು ಅವರು . "ವೈದ್ಯಾಧಿಕಾರಿ , ಮತ್ತು ಇಲ್ಲಿ ಇರುವ ಪೋಲಿಸ್ ಇನ್ಸಪೆಕ್ಟರ್ ಮೇಲೆ ಕೂಡ ...ಕೆಲ ಆರೋಪ ಇದೆ ಅಲ್ಲವೇ".

  "ಆಫ್ ದೀ ರೆಕಾರ್ಡ್ ಇದು "ಎಂದು ಹೇಳಿದ್ದರು. ಆಗ "ತಲೆ ತಗ್ಗಿಸಿ "ಕುಳಿತು ಬಿಟ್ಟರು . ಬಂದಿದ್ದ ತಾಲೂಕಿನ ಮುಖ್ಯ ವೈದ್ಯಾಧಿಕಾರಿ , ಮತ್ತು ಇನ್ಸಪೆಕ್ಟರ್ ."ವಾಪಸ್ ಪಡೆದು ಬಿಡಿ ಕೇಸ್ . ಎಲ್ಲಾ ಪ್ರಕ್ರಿಯೆ ಇನ್ನೊಂದು ಗಂಟೆಯಲ್ಲಿ ಆಗಬೇಕು " ಎಂದು , ಒಳಗೆ ನಡೆದಿದ್ದರು . ಒಳಗೆ ಹೋಗುವಾಗ , ಅವರ ದೃಷ್ಟಿ ಶಿವಪ್ಪನ ಮೇಲೆ ಇತ್ತು .    ಆವತ್ತು ಅವರ "ಮನಸಿಗೂ "ಒಂದು ತೃಪ್ತಿ . ಲಂಚ ಎಂಬುದು ದೊಡ್ಡ ಆರೋಪ ಆದರೂ , ಅದನ್ನು ಒಪ್ಪಿ ಹೇಳಿ ಬಿಟ್ಟಿದ್ದ. ಅದು ಯಾಕೆಂದು . ನಿರಪರಾಧಿ ಅಲ್ಲದೇ ಇದ್ದರೂ , ಆತ ಅಪರಾಧಿ ಅಲ್ಲವೆಂದು ಅನಿಸಿದ ದಿನ ಅದು. ಅದೆಷ್ಟು ಕ್ರೂರ ಜಗತ್ತು , ಆತನ ಪ್ರತಿ ಮಾತು , ನೋವು ಎಲ್ಲವೂ ನಿಜ ಎಂದು ಅನಿಸಿದ್ದು ಆವಾಗಲೇ ಅವರಿಗೆ .


Rate this content
Log in

Similar kannada story from Tragedy