Exclusive FREE session on RIG VEDA for you, Register now!
Exclusive FREE session on RIG VEDA for you, Register now!

Shanthi Tantry

Drama Tragedy Others


2  

Shanthi Tantry

Drama Tragedy Others


“ಅದೇ ಮಾತು…”

“ಅದೇ ಮಾತು…”

3 mins 118 3 mins 118

“ಎಮ್. ಆರ್. ಐ. ಮಾಡಿಸುವ”, ಎಂದು ನನ್ನ ವೈದ್ಯೆ ಹೇಳಿದಾಗ, ಒಮ್ಮೆ ಧಕ್ ಎಂದಿತು ಮನ.


ಏಕಾಏಕಿ ಎಡಗಣ್ಣಿನಲ್ಲಿ ಡಬಲ್ ವಿಶನ್ ಕಾಣಲು ಶುರುವಾದಾಗ ಸ್ವಲ್ಪ ಹೆದರಿ, ನನ್ನ ವೈದ್ಯರಿಗೆ ಸಂದೇಶ ಕಳುಹಿಸಿದೆ. “ಮಧ್ಯಾಹ್ನ ೧:೧೫ ಬರಬಹುದೇ”, ಎಂಬ ಉತ್ತರ ಬಂತು. ಕೂಡಲೇ ಹೊರಟೆ. ದಾರಿ ಉದ್ದಕ್ಕೂ ಎಡಗಣ್ಣನ್ನು ಒಂದು ಕೈಯಿಂದ ಮುಚ್ಚಿ ಮತ್ತೊಂದು ಕೈಯಿಂದ ಡ್ರೈವ್ ಮಾಡಬೇಕಾಗಿ ಬಂದಾಗಲೇ ಗೊತ್ತಾಗಿದ್ದು, ವಿಷಯ ಗಂಭೀರವಾಗಿಯೇ ಇದೆ ಎಂದು.


ನನ್ನ ಸಂಬಂಧಿಯಾದ ಕಾರಣ ನನ್ನ ಚರಿತ್ರೆಯೆಲ್ಲಾ ಸ್ವಲ್ಪ ವಿಷದವಾಗಿಯೇ ಅರಿತಿದ್ದ ನನ್ನ ವೈದ್ಯೆ, ಎಲ್ಲಾ ತಿಳಿದೇ ತೆಗೆದುಕೊಂಡ ನಿರ್ಣಯವೆಂದು ಅರ್ಥವಾದರೂ, ಪುನಃ ಕೇಳಿದೆ, “ಎಮ್. ಆರ್. ಐ. ಮಾಡಿಸಲೇ ಬೇಕೆ? ನನಗೆ ಕ್ಲಾಸ್ಟ್ರೊ ಫೋಬಿಯಾ ಇದೆ ಅಲ್ಲವೇ?” “ಆ ಲ್ಯಾಬ್ ನಲ್ಲಿ ದೊಡ್ಡ ಮೆಷಿನ್ ಇದೆ. ಹಾಗಾಗಿ ಪರವಾಗಿಲ್ಲ. ಒಂದು ಮಾತ್ರೆ ಬರೆದುಕೊಡುವೆ. ಹೋಗುವ ಒಂದು ಗಂಟೆಯ ಮುಂಚೆ ತೆಗೆದುಕೊಂಡರೆ ಸರಿ. ಸ್ವಲ್ಪ ನಿದ್ದೆಯೂ ಬರಬಹುದು. ಒಳ್ಳಯದೇ ಅಲ್ಲವೇ?” – ಪ್ರತ್ಯುತ್ತರ. ಅದಕ್ಕೆ ಪ್ರತಿಯಾಗಿ ಏನು ಹೇಳಬೇಕೆಂದು ತೋಚದೆ, ಕೊಟ್ಟ ಚೀಟಿಯನ್ನೆಲ್ಲಾ ಹಿಡಿದು ಹೊರನಡೆದೆ.


ಮನೆಗೆ ಬಂದವಳೇ, “ಎಮ್. ಆರ್. ಐ. ಮತ್ತು ಕ್ಲಾಸ್ಟ್ರೊ ಫೋಬಿಯಾ” ಎಂದು ಕಂಪ್ಯೂಟರ್ ನಲ್ಲಿ ಟೈಪಿಸಿದೆ. ದರ ದರಾ ಎಂದು ಪೇಜ್ ಗಟ್ಟಲೆ ಲಿಂಕ್ ಗಳು ಉರುಳಿದವು. ಒಂದೊಂದೇ ಲಿಂಕ್ ಒತ್ತಿ ಓದುತ್ತಾ ಸಾಗಿದೆ. ಎಮ್. ಆರ್. ಐ. ಯಂತ್ರದ ಬಗ್ಗೆ, ಅದರ ಕಾರ್ಯ ನಿರ್ವಹಣೆ, ಅದರೊಳಗೆ ಹೋಗುವ ರೀತಿ, ಕ್ಲಾಸ್ಟ್ರೊ ಫೋಬಿಯಾ ಇರುವವರ ಅನುಭವ, ಕ್ಲಾಸ್ಟ್ರೊ ಫೋಬಿಯಾ ಇರುವವರು ಮಾಡಬಹುದಾದ ಕಸರತ್ತುಗಳು, ಸರಿಸುಮಾರು ಮೂರು ಗಂಟೆ ಕುಳಿತು ನನಗೆ ಬೇಕಾದ ಮಾಹಿತಿಯನ್ನೆಲ್ಲಾ ಓದಿ ಮುಗಿಸಿದೆ.


೧) “ಇದು ಬರೇ ೩೦ ನಿಮಿಷದಲ್ಲಿ ಮುಗಿಯುತ್ತದೆ”, ಎಂಬ ಮಂತ್ರದ ಸ್ಮರಣೆ.

೨) ಸಂಖ್ಯೆ ಒಂದರಿಂದ ನಿಧಾನವಾಗಿ ಎಣಿಸುವುದು. ಎಷ್ಟು ನಿಧಾನಕ್ಕೆ ಎಣಿಸುವಿರೋ ಅಷ್ಟು ಬೇಗ ಸಮಯ ಹೋಗುವುದು.


ಇದೆರಡು ಕಸರತ್ತು ನಾನು ಮಾಡುವೆ ಎಂದು ಧೈರ್ಯ ತೆಗೆದುಕೊಂಡು ರಾತ್ರಿ ಮಲಗಿದೆ. ಕಣ್ಣು ಮುಚ್ಚಿ ಆ ದೊಡ್ಡ ಮೆಷಿನ್ ಒಳಗೆ ಹೋಗುವ ದೃಶ್ಯವನ್ನು ಎಣಿಸಲೂ ಸಾಧ್ಯವಾಗಲಿಲ್ಲ. ಧಡಕ್ ಎಂದು ಎದ್ದೆ. “ನಾನು ಎಮ್. ಆರ್. ಐ. ಮಾಡಿಸಿಕೊಳ್ಳುವುದಿಲ್ಲ.” ಖಡಾಖಂಡಿತವಾಗಿ ಪತಿಗೆ ತಿಳಿಸಿದೆ. “ಕಣ್ಣು ಮುಚ್ಚಿಕೊಂಡರೆ ಏನೂ ಗೊತ್ತಾಗುವುದಿಲ್ಲ”, ಪತಿರಾಯರ ಉಪದೇಶ. “ಕಣ್ಣು ಮುಚ್ಚಿಕೊಳ್ಳಲಾಗದಿರುವುದೇ ಇಲ್ಲಿ ಇರುವ ಸಮಸ್ಯೆ ಅಲ್ಲವೇ?”, ಎಂದೆ.

ಕ್ಲಾಸ್ಟ್ರೊ ಫೋಬಿಯಾ ಇಲ್ಲದವರಿಗೆ ಅದನ್ನು ಹೇಗೆ ಅರ್ಥಮಾಡಿಸುವುದು ಎಂದೇ ತಿಳಿಯದಾದೆ. “ಕಣ್ಣಿನ ದೃಷ್ಟಿ ಹೋದರೆ ಹೋಗಲಿ, ನೋಡಬೇಕಾದದ್ದೆಲ್ಲ ನೋಡಿಯಾಗಿದೆ. ಓದಲು ಬ್ರೇಲ್ ಕಲಿಯುವೆ.” ಎಂದೆ. “ಮೊದಲು ಎಮ್. ಆರ್. ಐ. ಮಾಡಿಸಿಕೊಂಡು, ಮತ್ತೆ ಏನು ಬೇಕಾದರೂ ಮಾಡು”, ಎಂದು ಸ್ಥಿತಪ್ರಜ್ಞರಂತೆ ನುಡಿದು, ನಡೆದೇ ಬಿಟ್ಟರು.


ಮಧ್ಯಾಹ್ನದ ಹೊತ್ತಿಗೆ ಬಲಗಣ್ಣಿನಲ್ಲೂ ಡಬಲ್ ವಿಶನ್ ಶುರುವಾಗಿ, ಈಗ ಪ್ರಪಂಚವೆಲ್ಲಾ ಒಟ್ಟಾರೆ ಮೂರು ನಾಲ್ಕು ಚಿತ್ರಗಳಾಗಿ ಕಾಣ ಶುರುವಾಯಿತು. ದಾರಿ ಕಾಣದೆ ದೇವರ ಮೊರೆಹೊಕ್ಕೆ. “ದೇವರೇ, ನನಗೆ ಆ ಎಮ್. ಆರ್. ಐ. ಮೆಷಿನ್ ಒಳಗೆ ಹೋಗುವ ಭಯ ಹೋಗಲಾಡಿಸು.” ನನ್ನ ಪ್ರಾರ್ಥನೆಯ ತೀವ್ರತೆಗೆ ಕಣ್ಣು ತೇವಗೊಂಡು ಅಳು ಉಕ್ಕಿ ಬಂತು. ಅರೆಕ್ಷಣ ಅದೇನೋ ಧೈರ್ಯ ತುಂಬಿ ಬಂತು.


“ದೇವರು ನನ್ನ ಕೈಬಿಡಲಾರ”, ಎಂಬ ಧೈರ್ಯದೊಂದಿಗೆ, ಮರುದಿನ ಗೊತ್ತುಮಾಡಿದ್ದ ಎಮ್.ಆರ್.ಐ ಪರೀಕ್ಷೆಗೆ ಅಣಿಯಾದೆ. ರೇಡಿಯಾಲಜಿ ಲ್ಯಾಬ್ ಗೆ ಫೋನ್ ಮಾಡಿ, “ಎಮ್.ಆರ್.ಐ ಮಾಡಿಸಿಕೊಳ್ಳುವಾಗ ನನ್ನ ಪತಿ ನನ್ನ ಜೊತೆ ಇರಬಹುದೇ?” ಎಂಬ ನನ್ನ ಪ್ರಶ್ನೆಗೆ ಅವರಿಂದ ಸಕಾರಾತ್ಮಕ ಉತ್ತರ! “ಪರೀಕ್ಷೆಗೊಳಗಾಗುವ ಸಮಯದಲ್ಲಿ ನೀವು ಕೊಡುವ ಹೆಡ್ ಫೋನ್ ನಲ್ಲಿ ನನಗೆ ಬೇಕಾದ ಆಡಿಯೋ ಹಾಕುವಿರಾ?” ಎಂಬ ಪ್ರಶ್ನೆಗೆ, “ಆ ಆಡಿಯೋ ಸ್ಪಾಟಿಫೈ’ ನಲ್ಲಿ ಇದ್ದರೆ ಸಾಧ್ಯ”, ಎಂಬ ಸಕಾರಾತ್ಮಕ ಉತ್ತರ! ಕೂಡಲೇ ಸ್ಪಾಟಿಫೈ ನಲ್ಲಿದ್ದ ಚೆಲ್ಲಕೆರೆ ಸಹೋದರರ, ‘ಶ್ರೀ ರುದ್ರ’, ‘ಶ್ರೀ ವಿಷ್ಣು ಸಹಸ್ರನಾಮ’, ಮತ್ತು ‘ಶ್ರೀ ಲಲಿತಾ ಸಹಸ್ರನಾಮ’ದ ಹೆಸರುಗಳನ್ನು ಒಂದು ಚೀಟಿಯಲ್ಲಿ ಸ್ಪಷ್ಟವಾಗಿ ದಪ್ಪ ಅಕ್ಷರದಲ್ಲಿ ಬರೆದಿಟ್ಟುಕೊಂಡೆ. ಇಷ್ಟೆಲ್ಲಾ ತಯಾರಿಯೊಂದಿಗೆ, ಆ ಮೆಷಿನ್ ಒಳಗಿರುವ ೩೦ ನಿಮಿಷವೂ ಒಂದು ಚೂರೂ ಅಲ್ಲಾಡದೇ ವಿಪಾಸನದಲ್ಲಿ ಕಲಿತ ಅಭ್ಯಾಸವನ್ನು ಪಾಲಿಸುತ್ತೇನೆಂದು ನಿರ್ಧರಿಸಿದೆ.


ನಿಗದಿತ ವೇಳೆಗೆ ಲ್ಯಾಬ್ ಗೆ ತೆರಳಿ, ಔಪಚಾರಿಕ ಕಾಗದ ಪತ್ರವನ್ನೆಲ್ಲಾ ಭರ್ತಿ ಮಾಡಿ, ಪತಿಯೊಡನೆ ಒಳ ನಡೆದೆ. “ನನ್ನ ಹೆಸರು ಬ್ರೆಂಟ್”, ಲ್ಯಾಬ್ ತಂತ್ರಜ್ಞ ತನ್ನ ಪರಿಚಯ ಮಾಡಿಕೊಟ್ಟ. “ನನಗೆ ಕ್ಲಾಸ್ಟ್ರೊ ಫೋಬಿಯಾ ಇದೆ. ಅದರೊಳಗೆ ಹೋಗುವುದರ ಬಗ್ಗೆ ತುಂಬಾ ಆತಂಕ ಇದೆ.” – ಮೊದಲು ತಿಳಿಸಿದೆ. “ನಿಮ್ಮ ಆತಂಕವನ್ನು ಅರ್ಥಮಾಡಿಕೊಳ್ಳಬಲ್ಲೆ”, ವಿನಮ್ರವಾಗಿ ಉತ್ತರಿಸಿ, ಎಮ್. ಅರ್. ಐ ಮೆಷಿನ್ ಇರುವ ಆ ಸೌಂಡ್ ಪ್ರೂಫ್ ಕೋಣೆಯೊಳಗೆ ಕರೆದೊಯ್ದು, ಮೆಷಿನ್ ನ ಸಮಗ್ರ ಪರಿಚಯ, ಅದರ ಕಾರ್ಯವಿಧಾನ, ನಡೆಯುವ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಶಾಂತವಾಗಿಯೇ ಪರಿಚಯಿಸಿದ ಬ್ರೆಂಟ್, ಧರಿಸಲು ದೊಡ್ಡ ಗಾತ್ರದ ಹೆಡ್ ಫೋನ್ ಅನ್ನು ಕೈಗಿತ್ತಾಗ, ನಾ ತಂದಿದ್ದ ಚೀಟಿಯನ್ನು ಅವರ ಕೈಗಿತ್ತು, “ಈ ಆಡಿಯೋ ಈಗಲೇ ಹಾಕಬಹುದೇ?” ಎಂದೆ. “ಓ, ದಾರಾಳವಾಗಿ”, ಎಂದೆನ್ನುತ್ತಲೇ ಗಾಜಿನ ಗೋಡೆಯಿಂದ ಬೇರ್ಪಟ್ಟಿದ್ದ ತನ್ನ ನಿಯಂತ್ರಣಾ ಕೋಣೆಗೆ ತೆರಳಿ, ಆಡಿಯೋ ಚಲಾಯಿಸಿದ ಕೂಡಲೇ, ಇಡೀ ಕಟ್ಟಡವೇ ತಿಧ್ವನಿಸುವಂತೆ ಮೂಳಗಿತು… ‘ಓಂ ನಮೋ ಭಗವತೇ ರುದ್ರಾಯ…..’. ನೆಮ್ಮದಿಯಿಂದ ಹೆಡ್ ಫೋನ್ ಧರಿಸಿ, ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಸಿಕೊಂಡು, ‘ನಾ ಚಲಿಸಲಾರೆ’ ಎಂಬ ದೃಢ ನಿರ್ಧಾರದೊಂದಿಗೆ, ಸಂಪೂರ್ಣ ಏಕಾಗ್ರತೆಯಲ್ಲಿ ರುದ್ರಮಂತ್ರವನ್ನು ಕೇಳುತ್ತ, ಮೆಷಿನ್ ನಲ್ಲಿ ಮಲಗಿದೆ. ಶ್ರೀ ರುದ್ರ ಮುಗಿಯುತ್ತಲೇ, ಶ್ರೀ ವಿಷ್ಣು ಸಹಸ್ರನಾಮ ಶುರುವಾಯಿತು. ಅದರರ್ಧ ಮುಗಿಯುತ್ತಿದ್ದಂತೆ, ‘ಮೇಡಮ್, ಮುಗಿಯಿತು. ನೀವು ಒಳ್ಳೆಯ ರೀತಿಯಲ್ಲಿ ಸಹಕರಿಸಿದಿರಿ’, ಎಂದು ಹೆಡ್ ಫೋನಿನಲ್ಲಿ ಕೇಳಿಬಂತು.


ಬ್ರೆಂಟ್ ಕೋಣೆಯೊಳಗೆ ಪ್ರವೇಶಿಸಿ, ಮೆಷಿನ್ ನಿಂದ ನನ್ನನ್ನು ನಿಧಾನಕ್ಕೆ ಹೊರತೆಗೆದು, ಹೆಡ್ ಫೋನ್, ಕಣ್ಣಿನ ಪಟ್ಟಿಯನ್ನೆಲ್ಲಾ ಬಿಚ್ಚುತ್ತಿದ್ದಂತೆಯೇ, ತುಂಬು ಹೃದಯದಿಂದಲೇ ನಾನೆಂದೆ, ‘ಅತ್ಯಂತ ಧನ್ಯವಾದಗಳು’. ಕೂಡಲೇ ಆ ಆರಡಿ ಎತ್ತರದ ಬಿಳಿ ಅಮೇರಿಕನ್ ತನ್ನ ಎರಡೂ ಕೈಗಳನ್ನು ಜೋಡಿಸಿ, ವಿನಮ್ರತೆಯಿಂದಲೇ, ಅಪ್ಪಟ ಭಾರತೀಯನಂತೆ, ಶಿರಬಾಗಿ ನಮಸ್ಕರಿಸಿದ.  ಅರೇ…. ಶ್ರೀ ರುದ್ರದ ಪ್ರಭಾವ ಬ್ರೆಂಟಿನ ಮೇಲೂ ಆಯಿತೇ?!


ಎರಡೇ ದಿನದಲ್ಲಿ ಫಲಿತಾಂಶ ಹೊರಬಂತು – ಮೆದುಳಿನ ಒಳಗೆ ಏನೇನೂ ತೊಂದರೆ ಇಲ್ಲ. ಮತ್ತೆರಡೇ ವಾರದಲ್ಲಿ – ಡಬಲ್ ವಿಶನ್ ತನ್ನಿಂದ ತಾನಾಗಿಯೇ ಸಂಪೂರ್ಣ ಮಾಯ.

ಇಷ್ಟೆಲ್ಲದರ ಪರಿಣಾಮ, ಇಂದು ಕ್ಲಾಸ್ಟ್ರೊ ಫೋಬಿಯಾ ನನ್ನಿಂದ ಹೇಳ ಹೆಸರಿಲ್ಲದಂತೆ ಸಂಪೂರ್ಣವಾಗಿ ಹೊರ ಹೋಗಿದೆ; ದೇವರೊಂದಿಗಿನ ನನ್ನ ಸಂಬಂಧ ಮತ್ತಷ್ಟು ದೃಢವಾಗಿದೆ. ಇದು ನಡೆದು ಸುಮಾರು ಸಮಯವಾಯಿತು. ಪುನಃ ನೆನಪಿಗೆ ಬರಲು ಕಾರಣ…


ನಿನ್ನೆ ಅಂತರ್ಜಾಲದಲ್ಲಿ ಏನೋ ಹುಡುಕುತ್ತಿದ್ದಾಗ, ಇತ್ತೀಚೆಗಷ್ಟೇ ಯೂ ಟ್ಯೂಬಿನಲ್ಲಿ ಅಪ್ ಲೋಡ್ ಆದ ಜಾರ್ಜ್ ಫ್ಲಾಯ್ಡ್ ನ ಕೊಲೆ ಮಾಡಿದ ಆರಕ್ಷಕರಲ್ಲಿ ಒಬ್ಬನ ಬಾಡಿ ಕ್ಯಾಮರಾದ ಚಿತ್ರಣ ನೋಡ ಸಿಕ್ಕಿದ್ದು. ಅದರಲ್ಲಿ ಆರಕ್ಷಕರು ಅವನ ಕೈಗೆ ಬೇಡಿ ಹಾಕಿ ಆ ಸಣ್ಣ ಪೋಲೀಸ್ ಕಾರಿನೊಳಗೆ ಬಲವಂತವಾಗಿ ಕೂಡಿಸಲು ಹೊರಟಾಗ, ಜಾರ್ಜ್ ಫ್ಲಾಯ್ಡ್ ಸ್ಪಷ್ಟವಾಗಿ ಹೇಳುತ್ತಿರುವ ಅದೇ ಮಾತು…


“… ನನಗೆ ಕ್ಲಾಸ್ಟ್ರೊ ಫೋಬಿಯಾ ಇದೆ. ಅದರೊಳಗೆ ಹೋಗುವುದರ ಬಗ್ಗೆ ತುಂಬಾ ಆತಂಕ ಇದೆ….”Rate this content
Log in

More kannada story from Shanthi Tantry

Similar kannada story from Drama