Exclusive FREE session on RIG VEDA for you, Register now!
Exclusive FREE session on RIG VEDA for you, Register now!

Shanthi Tantry

Inspirational


2  

Shanthi Tantry

Inspirational


ಪಶ್ಚಾತ್… ತಾಪ

ಪಶ್ಚಾತ್… ತಾಪ

2 mins 99 2 mins 99

ನನ್ನ ಅಮ್ಮನ ತಂದೆ ಕನ್ನಡ ಪಂಡಿತರು.


ಅಮ್ಮನ ಬಾಲ್ಯದಲ್ಲಿ ಶಿವರಾಮ ಕಾರಂತರಾದಿಯಾಗಿ ಹಲವು ಸಾಹಿತಿಗಳು ಮನೆಗೆ ಬರುತ್ತಿದ್ದರಂತೆ ನನ್ನ ಅಜ್ಜನೊಡನೆ ಸಮಾಲೋಚಿಸಲು. ಅವರ ಮಾತುಕತೆ ತಡ ರಾತ್ರಿಯವರೆಗೆ ನಡೆಯುತ್ತಿತ್ತಂತೆ. ಆಗ ನನ್ನಮ್ಮ, ‘ಇವರೆಲ್ಲಾ ಯಾವಾಗ ಮನೆಗೆ ಹೋಗುತ್ತಾರೆ. ನಾವೆಲ್ಲಾ ಯಾವಾಗ ಊಟ ಮಾಡಿ ಮಲಗುವುದು’, ಎಂದು ನಿದ್ದೆಗಣ್ಣಿನಲ್ಲಿ ಕಾಯುತ್ತಿದ್ದರಂತೆ. 

‘ಈಗ ಅದನ್ನು ಎಣಿಸಿದರೆ ಪಶ್ಚಾತ್ತಾಪವಾಗುತ್ತದೆ. ಆ ಸಣ್ಣ ವಯಸ್ಸಿನಲ್ಲಿ ನನಗೆ ಅದರ ಬೆಲೆಯೇ ಗೊತ್ತಿರಲಿಲ್ಲ,’ ಎಂದು ಅಮ್ಮ ಎಷ್ಟೋ ಬಾರಿ ಹೇಳಿದ ನೆನಪು.


ಮುಂದೆ ತಮ್ಮ ಜೀವನದಲ್ಲಿ ಸಾಹಿತ್ಯ ಮತ್ತು ಆಧ್ಯಾತ್ಮದಲ್ಲಿ ಅತೀವ ಆಸಕ್ತಿ ಹೊಂದಿದ್ದ ನನ್ನ ಅಮ್ಮ, ಬಹಳಷ್ಟು ಪುಸ್ತಕಗಳನ್ನು ಓದಿದವರು. ಮೂಲ ರಾಮಾಯಣ, ಮಹಾಭಾರತ, ಶ್ರೀ ರಾಮಕೃಷ್ಣ ವಚನವೇದ, ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ ಮೊದಲುಗೊಂಡು ಅನೇಕ ಆಧ್ಯಾತ್ಮಿಕ ಕೃತಿಗಳನ್ನು, ಹಿರಿಯ ಸಾಹಿತಿಗಳ ಹಲವಾರು ಪುಸ್ತಕಗಳನ್ನು ಓದಿದವರು. ಎಷ್ಟೋ ಬಾರಿ ಅಮ್ಮ ನಾನು ಫೋನ್ ಮಾಡುವಾಗ, ‘ನೋಡು, ಈ ವಿಷಯ ಪೇಪರಿನಲ್ಲಿ ಬಂದಿದೆ. ನಿನ್ನೊಂದಿಗೆ ಹಂಚಿಕೊಳ್ಳಲು ಕಾಯುತ್ತಿದ್ದೆ’, ಎಂದದ್ದುಂಟು.


ಇದೇ ಎರಡು ವರ್ಷದ ಹಿಂದೆಯಷ್ಟೇ ನನ್ನ ಮಗಳು ಹೇಳಿದ ನೆನಪು. ‘ಅಮ್ಮ, ನೀವು ಯಾಕೆ ಅಜ್ಜಿಯೊಡನೆ ಒಂದೊಂದು ಪುಸ್ತಕ ಹಿಡಿದು, ಓದಿ, ಅದರ ವಿಚಾರ ವಿನಿಮಯ ಮಾಡಬಾರದು’, ಎಂದು. ಈ ಸಲಹೆಯನ್ನು ನಾನು ನನ್ನ ಕೆಲಸದ ಒತ್ತಡದಿಂದಲೋ ಇನ್ನು ಯಾವ ಕಾರಣದಿಂದಲೋ ಏನೋ ಪರಿಗಣಿಸಲಿಲ್ಲ. ಪಶ್ಚಾತ್ತಾಪ ಪಡುವ ಸರದಿ ಇಂದು ನನ್ನದಾಗಿದೆ.


ಅಮ್ಮನಿಗೆ ಕಡೇಯ ಬಾರಿ ವಿದಾಯ ಹೇಳಿಬರಲು ಇದೇ ಫೆಬ್ರವರಿಯಲ್ಲಿ ಬೆಂಗಳೂರಿಗೆ ಹೋದಾಗ, ಅಮ್ಮನ ಸೀರೆಗಳಿಡುವ ಕಪಾಟಿನಲ್ಲಿ ಅವರು ನೀಟಾಗಿ ಮಡಿಚಿದ ಸುಮಾರು ಕನ್ನಡ ಪೇಪ ರ ಕಟ್ಟಿಗ್ಸ್ ಸಿಕ್ಕಿದವು. ಅದೆಲ್ಲವನ್ನೂ ಹೆಕ್ಕಿ ಹೆಕ್ಕಿ ತಂದೆ.

ಮನೆಗೆ ಮರಳಿ, ಓದಲು ಅಣಿಯಾದಾಗ, ಕೈಗೆ ಸಿಕ್ಕಿದ ಮೊದಲ ಲೇಖನವೇ – ‘ಮೋಹವನ್ನು ನಾಶಮಾಡುವ ಮೂಲಕ ದುಃಖವನ್ನು ನಾಶಮಾಡಬೇಕು ಎನ್ನುವುದೇ ಗೀತೆಯ ಸಂದೇಶದ ಸಾರ’, ಎಂಬ ಸಾರಾಂಶವುಳ್ಳ ೨೦ ಡಿಸೆಂಬರ ೨೦೧೫ ದಿನಪತ್ರಿಕೆಯ ಲೇಖನ. ಈ ದಿನ ನಾನಿದನೋದಲೆಂದೇ ಅಮ್ಮ ಕಟ್ ಮಾಡಿ ಇಟ್ಟಂತಿತ್ತು. ‘ನನ್ನ ಅಮ್ಮನೊಂದಿಗೆ ನಾನು ಇನ್ನೂ ಮಾತನಾಡಬೇಕಿತ್ತು’, ಎಂಬ ಯೋಚನೆ ಕಾಡದ ದಿನವಿಲ್ಲ.


‘ನನ್ನ ಅಮ್ಮನನ್ನು ಇನ್ನೂ ಸಂತೋಷ ಪಡಿಸಬಹುದಾಗಿತ್ತು’, ಎಂಬ ವ್ಯಥೆ ಶಾಶ್ವತವಾಗಿರುವಂತಿದೆ.ನಾಳೆಗಳನ್ನು ನಮ್ಮದಾಗಿಸಿಕೊಳ್ಳಬಹುದು ಆದರೆ ನಿನ್ನೆಗಳನ್ನು ನಮ್ಮದಾಗಿಸಿಕೊಳ್ಳುವ ಬಗೆ ಹೇಗೆ? ಶೂನ್ಯದ ಕರಾಳತೆ ಅರ್ಥವಾಗಲು ಅರ್ಧ ಶತಮಾನವೇ ಹಿಡಿಯಿತು. ನನ್ನ ತಂದೆ-ತಾಯಿ ಅರ್ಧನಾರೀಶ್ವರರಂತೆ ಬಾಳಿದವರು. ಇಂದು ನನ್ನ ತಂದೆ, ಅಮ್ಮನ ಆಧ್ಯಾತ್ಮದ ಒಲವಿನ ಸಂಪೂರ್ಣ ಹೊಣೆ ಹೊತ್ತವರಂತೆ, ಭಗವದ್ಗೀತೆ, ಕಗ್ಗ ತಾತ್ಪರ್ಯ, ವೇದದ ಪರಿಚಯ ಎಂದು ತಮ್ಮನ್ನು ಅದರ ಅಧ್ಯಯನದಲ್ಲಿಯೇ ತೊಡಗಿಸಿಕೊಂಡಿದ್ದಾರೆ. 


ನನ್ನ ಬೇಸರದ ನುಡಿಗೆಲ್ಲಾ ಅವರ ಗೀತೆಯ ಉತ್ತರ, – ‘ಕರ್ಮ ಯೋಗ’, ‘ನಿನ್ನ ಕರ್ತವ್ಯವನ್ನು ನೀನು ಮಾಡು’.

ಮೊದಲಿನಿಂದಲೂ ಶಿಸ್ತುಬದ್ಧ ಜೀವನವನ್ನು ನಡೆಸಿಕೊಂಡು ಬಂದಿರುವ ನನ್ನ ತಂದೆ, ಇಂದೂ ಕೂಡ ಪ್ರತಿ ದಿನವನ್ನು ಹೊಸ ಜೀವನವೆಂಬಂತೆ ಸ್ವೀಕರಿಸುವುದು ನನ್ನ ಪಾಲಿಗೊಂದು ಆದರ್ಶದ ಮಾರ್ಗದರ್ಶನ.

ತಮ್ಮ ಬೆಳಗಿನ ಸ್ನಾನ-ಜಪ-ಪಾನಾದಿಗಳನ್ನು ಮುಗಿಸಿ ‘ಐ ಆಮ್ ರೆಡಿ’, ಎಂದು ಕಳುಹಿಸುವ ಟೆಕ್ಸ್ಟ್ ಮೆಸೇಜ್; ಸಂಜೆಯ ವಾಯುವಿಹಾರಕ್ಕೆ ಹೊರಟು, ‘ಐ ಆಮ್ ಇನ್ ದ ಪಾರ್ಕ್’, ಎಂದು ಕಳುಹಿಸುವ ಟೆಕ್ಸ್ಟ್ ಮೆಸೇಜ್; ನಂತರದ ಅರ್ಧ ಮುಕ್ಕಾಲು ಗಂಟೆ ನಡೆಯುವ ನಮ್ಮ ದಿನನಿತ್ಯದ ವಾಟ್ಸಪ್ ವಿಡಿಯೋ ಮಾತುಕತೆ,


– ಇವೇ ಇಂದು ನನ್ನ ಜೀವನದ ಹೈಲೈಟ್!!


Rate this content
Log in

More kannada story from Shanthi Tantry

Similar kannada story from Inspirational