Ashritha G

Classics Inspirational Others

4.5  

Ashritha G

Classics Inspirational Others

ಸವಿ ನೆನಪುಗಳು ಬೇಕು...

ಸವಿ ನೆನಪುಗಳು ಬೇಕು...

3 mins
381



"ಅತ್ತೆ ಚಹಾ ತಗೂಳ್ಳಿ"! ಎಂದು ಚಹಾ ಲೋಟವನ್ನು ಸೊಪ್ಪು ಹೆಚ್ಚುತ್ತಿದ್ದ ಅತ್ತೆ ಗೋಪಿಯಮ್ಮನ ಬಳಿ ಇಟ್ಟು ಚಹಾ ಪಾತ್ರೆಯನ್ನು ಬಚ್ಚಲಿಗೆ ತೊಳಿಯಲು ಹೊರಟಾಗ ಚಹಾ ಸೋಸುವ ಜರಡಿ ಕೆಳಗೆ ಬಿತ್ತು..ಕಪ್ಪಾಗಿದ್ದ ಜರಡಿಯನ್ನ ನೋಡುತ್ತಾ ಗೋಪಿಯಮ್ಮ ಮಾತು ಶುರುಮಾಡಿದರು.


" ಅಲ್ವೇ ರುಕ್ಕು ಹೋದ ವರ್ಷ ಜಾತ್ರೆಯಲ್ಲಿ ತಗೊಂಡ ಜರಡಿ ಅದು.. ಇಷ್ಟು ಹಾಳಾಗಿದೆ..ನಾವೆಲ್ಲಾ ಒಂದು ಜರಡಿಯನ್ನು ನಾಲ್ಕು ವರುಷ ಉಪಯೋಗಿಸ್ತಿದ್ವಿ.ನೀನೆಂತ ಸರಿ ತಿಕ್ಕಿ ತೋಳಿತಿಲ್ವಾ ಹೇಗೆ"?


"ಅಯ್ಯೋ ಅತ್ತೆ ನೀವು ಹೇಳಿ ಕೊಟ್ಟು ಹಾಗೆ ಬಿಸಿ ನೀರಿನಲ್ಲಿ ನೆನೆಸಿಟ್ಟು ತೊಳಿತಿನಿ. ಆದ್ರು ಯಾಕೆ ಹೀಗಾಗಿದೆ ಅಂತ ಗೊತ್ತಿಲ್ಲ.ಬಹುಷ ಕಳೆದ ಜಾತ್ರೆಯಲ್ಲಿ ಮಾಮುಲಿ ತಗೊಳ್ತಾ ಇದ್ವಲಾ ಆ ಸಾವಿತ್ರಮ್ಮನ ಅಂಗಡಿ.ಅದು ಇರಲ್ಲಿಲ್ಲ ಅಂತ ಬೇರೆ ಕಡೆ ತಗೊಂಡ್ವಿ ನೋಡಿ ಅದೇ ಎಡವಟ್ಟಾಯ್ತು ಅನ್ಸುತ್ತೆ.ಈ ಸತಿ ಏನೇ ತಗೊಂಡ್ರು ಹೊಸ ಅಂಗಡಿ ಬೇಡ..ಪರಿಚಯ ಇರೋ ಅಂಗಡಿಯಲ್ಲೇ ತಗೊಳೋಣ."


"ಹೌದು ಮಾರಾಯ್ತಿ..ಕಳೆದ ವರ್ಷ ಜಾತ್ರೆಯಲ್ಲಿ ಸಾವಿತ್ರಿ ಮಗಳ ಹೆರಿಗೆ ದಿನ ಅಂತ ಅಂಗಡಿ ಹಾಕಿರಲ್ಲಿಲ್ಲ ಅಂತಿದ್ಲು..ಈ ವರ್ಷ ಅಂಗಡಿ ಇಡಬಹುದು ಅಲ್ಲೆ ತಗೋ ಮರಿಬೇಡ.."


ಸರಿ ಅತ್ತೆ ಎನ್ನುತ್ತಾ ಒಲೆಯ ಬೆಂಕಿಯನ್ನು ಕೆಡಿಸಿ ಅನ್ನ ಬಸಿಯಲು ಹೋದಳು.. ಸೊಪ್ಪು ಸೋಸಿ ಸೊಸೆಯನ್ನು ಹುಡುಕುತ್ತಾ ಹೊರಟ ಗೋಪಿಯಮ್ಮ ಮಾತಿಗಿಳಿದರು.


"ಲಕ್ಷ್ಮಿ ಪೋನ್ ಮಾಡಿದಾಗ ಹೇಳ್ತಿದ್ಲು ಅನ್ನ ಬಸಿಯಲು ಅದೆಂತದೋ ತೂತು ಇರುವ ಮುಚ್ಚಳ ಸಿಗುತ್ತಂತೆ.ಈ ರೀತಿ ಬಟ್ಟೆ ಕಟ್ಟಿ ಬಸಿಯುವ ಕಷ್ಟವಿಲ್ಲ ಅಂತಿದ್ಲು.ಈ ಸರಿ ಜಾತ್ರೆಯಲ್ಲಿ ಅದನ್ನು ಹುಡುಕೋಣ.ನೀನು ನನ್ನ ಮಗಳೇ ಅಲ್ವಾ " ಎಂದು ಹೆಮ್ಮೆಯಿಂದ ತಲೆ ಸವರಿ ಹೊರಟ ಅತ್ತೆಯನ್ನು ನೋಡುತ್ತಾ ಸೊಸೆ ರುಕ್ಮಿಣಿ ಕಣ್ತುಂಬಿ ಕೊಂಡಳು.


ಶನಿವಾರವಾದ ಕಾರಣ ಮಕ್ಕಳು ಮಧ್ಯಾಹ್ನದ ಊಟದ ಹೊತ್ತಿಗೆ  ಶಾಲೆಯಿಂದ ಬಂದು ಕೈ ಕಾಲು ತೊಳೆದು ಊಟಕ್ಕೆ ಕುಳಿತಾಗ


"ಅಮ್ಮ ಶಾಲೆಗೆ ಹೋಗುವಾಗ ಬ್ಯಾಗ್ ಹರಿದು ಹೋಯಿತು ಮಾರಾಯ್ತಿ..ಈಗ ಹುಲಿಗೆ ಹಾಕಿ ಕೊಡು..ಬರೊ ವರ್ಷಕ್ಕೆ ಹೊಸ ಬ್ಯಾಗ್ ಕೊಡಿಸೊದಕ್ಕೆ ಅಪ್ಪಂಗೆ ಹೇಳ್ತ್ಯಾ??


"ಎಂತದಾ!! ಕಳೆದ ವರ್ಷ ಜಾತ್ರೆಗೆ ತಗೊಂಡ್ ಬ್ಯಾಗ್ ಇಷ್ಟು ಬೇಗ ಹಾಳಾಯ್ತಾ? ಈ ವರ್ಷದ ಜಾತ್ರೆಗೆ ಇನ್ನು ಎರಡು ತಿಂಗಳಿದೆ ಅಪ್ಪನತ್ರ ಹೇಳಿ ನೋಡ್ತೀನಿ"


"ನಾನೆಂತ ಮಾಡಲಿ ಅಷ್ಟೊಂದು ಪುಸ್ತಕ ಹೊತ್ತುಕೊಂಡು ಹೋಗುವಾಗ ಹರಿದು ಹೋಗುತ್ತೆ" ಎನ್ನುವಾಗ ಗೋಪಿಯಮ್ಮ ಹಾಜರಾದರು...


"ಎಂಥ ಮಾಣಿ ಊಟ ಮಾಡೋಕೆ ಎಂಥ ರಗಳೆ"


"ನೋಡಿ ಅತ್ತೆ ಕಳೆದು ವರ್ಷ ಕೊಡಿಸಿದ ಬ್ಯಾಗ್ ಹರಿದು ಹೋಯಿತಂತೆ".


"ಅಯ್ಯೋ ಅಷ್ಟೊಂದು ಪುಸ್ತಕ ಇದ್ರೆ ಇನ್ನೇನಾಗುತ್ತೆ..? ಈ ವರ್ಷ ಜಾತ್ರೆಗೆ ತಗೊಂಡ್ರಾಯ್ತು" ಎಂದ ಅಜ್ಜಿಯನ್ನು ಮುದ್ದಿಸಿ ಆಡಲು ಓಡಿದ ಮೊಮ್ಮಗನನ್ನು ನೋಡಿ " ಏ ಮಾಣಿ ಬಿಸಿಲಿನಲ್ಲಿ ಸೊಕ್ಕ ಬೇಡ .ಬೇಗ ಮನೆಗೆ ಬಾ ಸಂಜೆ ಪಕೋಡ ಮಾಡಿಕೊಡ್ತೀನಿ".


"ಹೇ.....ಆಯ್ತು ಅಜ್ಜಿ" ಎಂದು ಆಡಲು ಓಡಿದ.

ಊಟಕ್ಕೆ ಬಂದ ಮಗ ಶಂಕರನ ಕಂಡು...


"ಅಲ್ಲಾ ಶಂಕರು ಪ್ರತಿ ವರ್ಷ ಇಷ್ಟರಲ್ಲೇ ಜಾತ್ರೆಗೆ ಕಾಗದ ಬರುತ್ತಿತ್ತು ಈ ವರ್ಷ ಎಂತಕೆ ಇನ್ನೂ ಬಂದಿಲ್ಲ."


"ಓಹೋ ಜಾತ್ರೆ ಪಟ್ಟಿ ರೆಡಿಯಾಯ್ತು ಅಂತಾಯ್ತು.. ಬರ್ತಾರೆ ಬೆಳಗ್ಗೆ ಪಟ್ಟೇಲರು ಸಿಕ್ಕಿದ್ರು.ಈ ಸತಿ ಜಾತ್ರೆ ಬೇಗ ಅಂತೆ ಬರೋ ತಿಂಗಳೇ ಅಂದ ಹಾಗಿತ್ತು. ಅದು ಯಾವುದೋ ತಾರೀಕು ಹೇಳಿದ್ರೂ ಮರೆತೆ ಮಾರಾಯ್ತಿ..ಕಾಗದ ಬರುತ್ತೆ ಮನೆಗೆ " ಎನ್ನುವ ವೇಳೆಗೆ ಊರಿನ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನ ಮನೆಯ ಆಳು ಕಾಗದ ತಂದುಕೊಟ್ಟು ಹೊರಟ..


"ತಗೊಳ್ಳೆ ಅಮ್ಮ ಹಬ್ಬದ ಕಾಗದ ಬಂತು.. ಅತ್ತೆ ಸೊಸೆ ಕೂತು ಏನೇನು ಬೇಕು ಎಂದು ಪಟ್ಟಿ ಮಾಡಿ ವರ್ಷಕ್ಕೆ ಒಮ್ಮೆ ಬರುವ ಜಾತ್ರೆ ಏನೆಲ್ಲಾ ಬೇಕೋ ತಗೊಂಡ್ ಬಿಡಿ ಪದೇ ಪದೇ ಅಂಗಡಿಯಿಂದ ತರೋಕೆ ಹೇಳ್ಬೇಡಿ" ಎಂದು ಕಾಗದ ಕೈಗಿಟ್ಟು ತೋಟಕ್ಕೆ ಹೊರಟ..


ಅಂತೂ ಕಾಯುತ್ತಿದ್ದ ಊರ ಜಾತ್ರೆ ಬಂದೇ ಬಿಟ್ಟಿತು.ಗೋಪಿಯಮ್ಮನ ಕುಟುಂಬ ಬಾಡಿಗೆಯ ಕಾರನ್ನು ಗೊತ್ತು ಮಾಡಿ ಜಾತ್ರೆಗೆ ಹೊರಟು ನಿಂತರು. ದೇವಸ್ಥಾನದಿಂದ ಒಂದು ಮೈಲಿ ದೂರದಲ್ಲಿಯೇ ಕಾರನ್ನು ನಿಲ್ಲಿಸಿ ದೇವಸ್ಥಾನಕ್ಕೆ ನಡೆದು ಹೊರಟರು. ಎಲ್ಲೆಲ್ಲೂ ಜನಜಂಗುಳಿ ಸಾಲು ಸಾಲು ಅಂಗಡಿಗಳು. ಎಲ್ಲವನ್ನು ದಾಟಿ ಕ್ಯೂ ನಿಂತು ದೇವಿಯ ದರ್ಶನವನ್ನು ಮುಗಿಸಿ ಪೂಜೆ ಸಲ್ಲಿಸಿ ಸಾವಿತ್ರಮ್ಮನ ಅಂಗಡಿಯನ್ನು ಹುಡುಕಲು ಆರಂಭಿಸಿದರು. ಹುಡುಕುತ್ತಾ ಸಾಗುವಾಗ ರಥ ಬೀದಿಯ ಕೊನೆಯಲ್ಲಿ ಸಾವಿತ್ರಮ್ಮ ಕಾಣಿಸಿಬಿಟ್ಟರು. ಅವರ ಅಂಗಡಿಗೆ ಧಾವಿಸಿ ಬೇಕಾದ ಎಲ್ಲಾ ವಸ್ತುವನ್ನು ಕೊಂಡುಕೊಂಡರು.. ರುಕ್ಮಿಣಿಯಂತೂ ಕೈ ತುಂಬಾ ಬಳೆ ಸ್ಟಿಕರ್ ಹೀಗೆ ತನಗೆ ಬೇಕಾದ ವಸ್ತುಗಳನ್ನೆಲ್ಲಾ ಕೊಂಡುಕೊಂಡಳು..ಮಕ್ಕಳಂತೂ ಜಾತ್ರೆಯಲ್ಲಿ ಇದ್ದಂತಹ ಆಟಗಳನ್ನು ಆಡುತ್ತಾ ಇರುವ ತಿಂಡಿ ತಿನಿಸುಗಳನ್ನೆಲ್ಲ ಸವಿಯುತ್ತಾ ಸಂಭ್ರಮಿಸಿದರು. ಊರ ಜಾತ್ರೆ ವಿಜ್ರಂಭಣೆಯಿಂದ ನಡೆಯಿತು. ಕಣ್ಮನ ತುಂಬಿಕೊಂಡು ಗೋಪಿ ಅಮ್ಮನ ಕುಟುಂಬ ಮನೆಗೆ ಸಂತೋಷದಿಂದ ಮರಳಿದರು.

ರಾತ್ರಿ ತಡವಾಗಿ ಬಂದ ಕಾರಣ ಎಲ್ಲರೂ ಮಲಗಿ ನಿದ್ದೆಗೆ ಜಾರಿದರು.ಮುಂಜಾನೆ ಎದ್ದು ಕಾಫಿ ಮಾಡಲೆಂದು ಕಾಫಿ ಪಾತ್ರೆಯನ್ನು ಒಲೆ ಮೇಲೆ ಇಟ್ಟ ರುಕ್ಮಿಣಿ ಕೈಗೆ ಕಾಫಿ ಪಾತ್ರೆಯ ಹಿಡಿಕೆ ಮುರಿದು ಬಂತು.


"ಅಯ್ಯೋ ದೇವರೆ...!ಬರುವ ವರುಷದ ಜಾತ್ರೆಯವರೆಗೂ ಹೊಸ ಪಾತ್ರೆಗೆ ಕಾಯಬೇಕಲ್ಲಾ ಎಂದು ಮನದಲ್ಲಿ ಮಂಡಿಗೆ ಮುರಿಯುತ್ತಾ ಹಿಡಿಕೆ ಇಲ್ಲದ ಪಾತ್ರೆ ಯಲ್ಲಿಯೇ ಕಾಫಿ ಮಾಡಿ ಎಲ್ಲರಿಗು ಕೊಟ್ಟಳು..


ವರುಷಗಳು ಉರುಳಿದವು.ಗೋಪಿಯಮ್ಮ ವೃದ್ಧಾಪ್ಯದಿಂದ ಸಾವನ್ನಪ್ಪಿದರು.. ರುಕ್ಮಿಣಿಯ ಮಗ ಬೆಳೆದು ಪಟ್ಟಣದಲ್ಲಿ ಕೆಲಸಕ್ಕೆ ಸೇರಿಕೊಂಡ.ಊರ ಹಬ್ಬಕ್ಕೆ ಪ್ರತಿ ವರುಷ ಹೇಳಿದರೂ ಕೆಲಸದ ಕಾರಣದಿಂದ ಬರಲಾಗದು ಎಂದು ಹೇಳುತ್ತಿದ್ದ.. ಬೇಕಾದ ಎಲ್ಲಾ ವಸ್ತುಗಳನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿ ಮನೆಗೆ ಕಳುಹಿಸುತ್ತಿದ್ದ. ಮೊದಲಿನಂತೆ ಜಾತ್ರೆಯಲ್ಲಿ ಕೊಂಡುಕೊಳ್ಳಬೇಕೆಂದು ಕಾಯುವ ಪರಿಸ್ಥಿತಿ ಈಗ ರುಕ್ಮಿಣಿಗಿರಲಿಲ್ಲ .ಆದರೆ ಜಾತ್ರೆಗೆಂದು ಸಂಭ್ರಮದಿಂದ ಹೋಗುತ್ತಿದ್ದ ಕಾಲ ಕಳೆದು ಹೋಗಿತ್ತು."ಆಡಂಬರವಾಗಿ ವೈಭವಯುತವಾದ ಅಲಂಕಾರ ಗೌಜು ಗದ್ದಲವೇನು ಇರುತ್ತದೆ ಆದರೆ ಮುಂಚಿನ ಭಕ್ತಿ ಶ್ರದ್ಧೆ ಹಾಗೂ ಆಸಕ್ತಿ ಮೂರನ್ನು ಕಳೆದುಕೊಂಡು ನೆಪ ಮಾತ್ರಕ್ಕೆ ಊರ ಹಬ್ಬ ಎಂದು ಹೋಗಿ ಬರುವಂಥಾಗಿದೆ " ಎಂದು ಅದೇಷ್ಟೋ ಬಾರಿ ಗಂಡನಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಳು..ಅಗಲಿದ ಅತ್ತೆಯನ್ನು ನೆನೆದು ಕಣ್ಣೀರಿಡುತ್ತಿದ್ದಳು."ಕಾಲಕ್ಕೆ ತಕ್ಕಂತೆ ಕೋಲಕಟ್ಟಬೇಕು" ಎಂದು ಹೇಳುತ್ತಾ ಅವಳಿಗೆ ನಾಲ್ಕು ಸಮಾಧಾನದ ಮಾತನ್ನು ಹೇಳಿ ತೋಟಕ್ಕೆ ಹೋಗುತ್ತಿದ್ದ..


 ಹಳ್ಳಿಯಿಂದ ಬಂದು ಪಟ್ಟಣ ಸೇರಿದವರಿಗೆ ಪುನಹ ಅಲ್ಲಿಗೆ ಹೋಗುವ ಮನಸ್ಸಿಲ್ಲ. ಅಲ್ಲಿ ನಡೆಯುತ್ತಿದ್ದ ಜಾತ್ರೆ ಈಗಲೂ ನಡೆಯುತ್ತಿದೆ.ಆದರೆ ಹಿಂದೆ ಜಾತ್ರೆಗೆ ಹೋಗಬೇಕೆಂದು ಬಯಸುತ್ತಿದ್ದ ಮನಸ್ಸು ಈಗಿಲ್ಲ. ಒಂದು ವೇಳೆ ಹೋದರೂ ಆಗಿನಂತೆ ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ. ಅದೆಷ್ಟೋ ಮಕ್ಕಳಿಗೆ ಜಾತ್ರೆ ಎಂಬುದರ ಅರ್ಥ ತಿಳಿದೇ ಇಲ್ಲ.. ಜಾತ್ರೆಯ ಸವಿಯನ್ನು ಅನುಭವಿಸಲೇ ಇಲ್ಲ... ನಮ್ಮ ಬಾಲ್ಯ ಊರ ಜಾತ್ರೆಯ ಸಂಭ್ರಮದ ಕ್ಷಣಗಳ ನೆನಪುಗಳಿಂದ ತುಂಬಿದೆ.ಬದುಕಿನಲಿ ಸವಿ ನೆನಪುಗಳು ತುಂಬಿರಬೇಕು.. ಪ್ರಸ್ಥುತ ಸ್ಥಿತಿ ಗತಿಗಳನ್ನು ಅವಲೋಕಿಸಿದರೆ ಈಗಿನ ಮಕ್ಕಳಿಗೆ ಮುಂದೊಂದು ದಿನ ಅವರ ಬಾಲ್ಯದಲ್ಲಿ ಟಿವಿ ಮೊಬೈಲನ್ನು ಹೊರತುಪಡಿಸಿ ಬಹುಷಃ ಬೇರೆ ಯಾವುದೇ ಸವಿ ನೆನಪುಗಳು ಇರುವುದಿಲ್ಲವೆಂದು ಕಾಣುತ್ತದೆ...



Rate this content
Log in

Similar kannada story from Classics