MAITHILI RAGHUPATHI

Comedy Classics Others

4.5  

MAITHILI RAGHUPATHI

Comedy Classics Others

ಸೌಭದ್ರಕ್ಕನ ಮನೆ ಮದುವೆ

ಸೌಭದ್ರಕ್ಕನ ಮನೆ ಮದುವೆ

3 mins
279


ನಮ್ಮ ಊರ ಸೌಭದ್ರಕ್ಕ ಎಂದರೆ ಎಲ್ಲರಿಗೂ ಮೊದಲು ನೆನಪಾಗೋದೇ ಗಡಿಬಿಡಿ. ಗಡಿಬಿಡಿ ಎಂದರೆ ಸೌಭದ್ರಕ್ಕ, ಸೌಭದ್ರಕ್ಕ ಎಂದರೆ ಗಡಿಬಿಡಿ ಎನ್ನುವಷ್ಟರ ಮಟ್ಟಿಗೆ ಅವಳ ಗಡಿಬಿಡಿ. ಈಗ ಅವಳಿಗೆ ಅರವತ್ತೈದರ ಆಸುಪಾಸಿನ ಹರೆಯ. ಒಂಟಿ ಹೆಂಗಸಾದರೂ ಧೈರ್ಯದಲ್ಲಿ ಹತ್ತು ಗಂಡಸರ ಧೈರ್ಯ ಆಕೆಗೆ. ಯಾವಾಗಲೋ ಅವಳ ಮನೆಗೊಮ್ಮೆ ಕಳ್ಳರು ಬಂದಿದ್ದರಂತೆ, ನಾಲ್ಕು ಮಂದಿ ಇದ್ದರಂತೆ. ಇವಳೊಬ್ಬಳೇ ಅವರನ್ನು ಎದುರಿಸಿ, ಒಬ್ಬ ಕಳ್ಳನನ್ನು ಹಿಡಿದು ಕಟ್ಟಿಯೂ ಹಾಕಿದ್ದಳಂತೆ, ಅಷ್ಟರ ಮೇಲೆ ಕಳ್ಳರಿಗೆ ಅವಳ ಮನೆ ಎಂದರೆ ಭಯವಂತೆ. ಹಾಗಂತ ಅಜ್ಜಿ ಹೇಳುತ್ತಿದ್ದರು. ಇಂತಹ ಹೆಣ್ಣಿಗೆ ಗಂಡುಬೀರಿ ಪಟ್ಟದ ಜೊತೆ ಗಡಿಬಿಡಿ ಸೌಭದ್ರೆ ಪಟ್ಟವೂ ಅಂಟಿಕೊಂಡು ಬಂದಿತ್ತು. ಸೌಭದ್ರಕ್ಕನ ಮದುವೆಯೂ ಒಂದು ಗಡಿಬಿಡಿಯಲ್ಲಿಯೇ ನಡೆದಿತ್ತಂತೆ. ಆಗಿನ ಕಾಲದಲ್ಲಿಯೇ ಸೌಭದ್ರಕ್ಕ ಪ್ರೀತಿ ಮಾಡಿ ಅಪ್ಪಣ್ಣಜ್ಜನ್ನ ಮದುವೆಯಾಗಿದ್ದಳು. ಅಪ್ಪಣ್ಣಜ್ಜ ಪಾಪದವ, ಬ್ಯಾಡ ಮರಾಯ್ತಿ ನಿನ್ನ ಸಹವಾಸ ಎಂದು ಹೇಳಿದ್ದಕ್ಕೆ ಮುಹೂರ್ತನೂ ನೋಡದೆ ಪುರೋಹಿತರನ್ನ ಅಪ್ಪಣ್ಣಜ್ಜನ ಮನೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿ ಟವೆಲ್ ಉಟ್ಟು ಹೊರ ಬಂದಿದ್ದ ಅಪ್ಪಣ್ಣಜ್ಜನ ಕೈಯಿಂದ ತಾಳಿ ಕಟ್ಟಿಸಿಕೊಂಡಿದ್ದಳಂತೆ. ತಡಿಯೇ ಅಂಗಿಯಾದರೂ ಹಾಕಿಕೊಂಡು ಬರುತ್ತೇನೆ ಎಂದದ್ದಕ್ಕೆ ಅಂಗಿ ಹಾಕೋಕೆ ಬಿಟ್ರೆ ನೀ ನನ್ನ ಸಹವಾಸ ಬೇಡ ಎಂದು ಓಡಿ ಹೋಗ್ತೀಯ ಅದೆಲ್ಲ ಏನೂ ಬೇಡ ಕಟ್ಟು ತಾಳಿನ ಎಂದು ಹೇಳಿ ತಾಳಿ ಕಟ್ಟಿಸಿಕೊಂಡಿದ್ದಳಂತೆ, ಅವಳ ಗಡಿಬಿಡಿ ಎಷ್ಟಿತ್ತೆಂದರೆ ಸಿದ್ದೆ ಪಕ್ಕದಲ್ಲಿ ಇದ್ದ ನೀರಿನ ತಂಬಿಗೆಯನ್ನೇ ಒದ್ದು ಒಳಬಂದಿದ್ದಳಂತೆ. ಹೀಗಿರುವ ಸೌಭದ್ರಕ್ಕ ತನ್ನ ಸಾಕು ಮೊಮ್ಮಗಳ ಮದುವೆಗೆ ತಯಾರಿ ಮಾಡಿಕೊಂಡಿದ್ದಳು. ಮೊನ್ನೆಯಷ್ಟೇ ಅವಳ ಮೊಮ್ಮಗಳ ಮದುವೆಯೂ ಮುಗಿಯಿತು.‌ ಭರ್ಜರಿ ಮದುವೆ... ಅದು. ಗಡಿಬಿಡಿ ಮಾಡಿ ಮದುವೆ ಮಾಡಿದರೂ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಮದುವೆ ಸಾಂಗವಾಗಿ ನೆರವೇರಿತ್ತು.


ಸೌಭದ್ರಕ್ಕನ ಸಾಕು ಮೊಮ್ಮಗಳು ಇದರ ಬಗ್ಗೆ ಹೇಳ್ತಾ ಹೋದರೆ ಸಮಯ ತುಂಬಾ ಬೇಕಾಗುತ್ತದೆ. ಅದರ ಬಗ್ಗೆ ಇನ್ನೊಂದು ದಿನ ಹೇಳ್ತೇನೆ. ಇವತ್ತು ಅವಳ ಮದುವೆ ಸುದ್ದಿ ಹೇಳ್ತೇನೆ.


ಸೌಭದ್ರಕ್ಕನ ಸಾಕು ಮೊಮ್ಮಗಳು ಶಾಲಿನಿ, ಡಿಗ್ರಿ ಓದಿ ಮುಗಿಯುವುದರ ಒಳಗೆ ಒಳ್ಳೆಯ ವರ ಬಂತು ಎಂದು ಸೌಭದ್ರಕ್ಕ ಮದುವೆಗೆ ಮೊಮ್ಮಗಳನ್ನ ಒಪ್ಪಿಸಿದ್ದಳು. ತಾನೇ ಓಡಾಡಿ ಎಲ್ಲ ಕಡೆ ಮದುವೆ ಕರೆಯ ಮಾಡಿದ್ದಳು, ಈಗ ಮೂರು ತಿಂಗಳ ಹಿಂದೆಯೇ ಕರೆಯ ಪ್ರಾರಂಭಿಸಿ ಕಾಶ್ಮೀರದ ತುದಿಯ ವರೆಗೂ ಹೋಗಿ ನೆಂಟರಿಷ್ಟರನ್ನು ಕರೆದು ಬಂದಿದ್ದಳು. ಹೊರ ದೇಶದಲ್ಲಿ ಇರುವವರಿಗೆಲ್ಲ ಫೋನ್ ಮೂಲಕವೇ ಮದುವೆ ಕರೆಯ ಮಾಡಿದ್ದಳು.


ಅವತ್ತೊಂದು ದಿನ ಕಾಶ್ಮೀರದಲ್ಲಿ ಇದ್ದ ತನ್ನ ತಮ್ಮನ ಮಗಳ ಮಗಳ ಮನೆಗೆ ಹೋಗಿದ್ದಳು ಮೊಮ್ಮಗಳ ಮದುವೆ ಕರೆಯ ಮಾಡೋಕೆ. ಹೋಗುವ ತನಕ ಗಡಿಬಿಡಿ, ಬರುವ ತನಕ ಗಡಿಬಿಡಿ, ಅಲ್ಲಿಂದ ಹೊರಡುವಾಗ ನನ್ನ ಮದುವೆ ಬನ್ನಿ ಎಂದೇ ಕರೆದು ಬಿಟ್ಟಿದ್ದಳಂತೆ. ಕೊನೆಗೆ ಅವರು ತಿದ್ದಿ ಹೇಳಿದ ಮೇಲೆ ನಕ್ಕು ಗಡಿಬಿಡಿಯಲ್ಲಿಯೇ ಚಪ್ಪಲಿ ಹಾಕಿಕೊಂಡು ವಿಮಾನ ಏರಿ ದೆಹಲಿ ತಲುಪಿದ್ದಳಂತೆ, ದೆಹಲಿಯಲ್ಲಿ ತನ್ನ ಅಣ್ಣನ ಮಗನ ಮನೆಗೆ ಹೋಗಿ ನೋಡಿದರೆ ತನ್ನ ಚಪ್ಪಲಿ ಬಿಟ್ಟು ಬೇರೆ ಯಾರದ್ದೋ ಚಪ್ಪಲಿ ಹಾಕಿಕೊಂಡು ಬಂದಿದ್ದಳು, ದೆಹಲಿಯಿಂದ ಹೊರಡುವಾಗ ಮತ್ಯಾರದ್ದೋ ಚಪ್ಪಲಿ ತೊಟ್ಟು ಬೆಂಗಳೂರಿಗೆ ಬಂದಿದ್ದಳು. ಹೀಗೆ ಅವಳ ಗಡಿಬಿಡಿ.


ಎಲ್ಲವೂ ಆರಾಮವಾಗಿಯೇ ನಡೆದಿತ್ತು. ಸೌಭದ್ರಕ್ಕ ಅದೆಷ್ಟೇ ಗಡಿ ಬಿಡಿ ಮಾಡಿದರೂ ಮದುವೆಯಲ್ಲಿ ಮಾತ್ರ ಯಾವುದೇ ಎಡವಟ್ಟುಗಳನ್ನೂ ಮಾಡಿರಲಿಲ್ಲ. ಮೊನ್ನೆ ಅವಳ ಮೊಮ್ಮಗಳ ಮದುವೆ. ಎಲ್ಲವೂ ಸುಸೂತ್ರವಾಗಿಯೇ ನಡೆದಿತ್ತು. ನೆಂಟರಿಷ್ಟರೆಲ್ಲ ಬಂದು ಸೇರಿಯಾಗಿತ್ತು. ಇನ್ನೇನು ಮದುಮಗಳನ್ನು ಮಂಟಪಕ್ಕೆ ಕರೆತರಬೇಕು, ಅಷ್ಟರಲ್ಲಿ ಸೌಭದ್ರಕ್ಕ ಗಡಿಬಿಡಿಯಿಂದ ಬಂದು ಆತಂಕದಲ್ಲಿ ಏನನ್ನೋ ಹುಡುಕ ತೊಡಗಿದಳು ನಿಧಾನವಾಗಿ ನಾನು ಹೋಗಿ ಕೇಳಿದೆ ಏನು ಬೇಕು ಎಂದು. ಅಯ್ಯೋ ಮರಾಯ್ತಿ ಮದುವಣತಿ ಸೀರೆನೇ ಕಾಣ್ತಾ ಇಲ್ಲ ಎಂದು ಹೇಳಿದಳು... ನನಗೂ ಶಾಕ್ ಆದದ್ದು ಸುಳ್ಳಲ್ಲ. ಮಂಟಪಕ್ಕೆ ಬರುವ ಸಮಯದಲ್ಲಿ ಮದುವಣತಿ ಉಡಬೇಕಾದ ಸೀರೆ ಕಾಣ್ತಾ ಇಲ್ಲ ಎಂದರೆ ಏನರ್ಥ? ಯಾವುದಕ್ಕೂ ಮತ್ತೊಂಮ್ಮೆ ಸರಿಯಾಗಿ ವಿಚಾರಿಸೋಣ ಎಂದು ದಾರೆ ಸೀರೆಯಾ? ಎಂದು ಕೇಳಿದೆ. ಸೌಭದ್ರಕ್ಕ ಹೌದು ಮರಾಯ್ತಿ.. ಏನು ಮಾಡೋದು ಅಂತನೇ ತಿಳಿತಾ ಇಲ್ಲ ಎಂದು ಅವಳ ಆತಂಕವನ್ನು ನನಗೂ ಸ್ವಲ್ಪ ನೀಡಿದಳು. ನಾನು ನನ್ನ ಅಮ್ಮನಿಗೆ ಹೇಳಿದೆ, ಪಕ್ಕದ ಮನೆ ಅಕ್ಕನಿಗೂ ತಿಳಿಯಿತು. ಹೀಗೆ ಒಬ್ಬರಿಂದ ಒಬ್ಬರಿಗೆ ವಿಷಯ ರವಾನೆ ಆಯಿತು. ಮೊದಲು ಗುಸು ಗುಸು ಇದ್ದ ವಿಷಯ ಕೊನೆಗೆ ನಮ್ಮ ಕಿಟ್ಟಣ್ಣನ ಬಾಯಿಂದ ಯಾರು ಮದುವಣತಿಯ ಸೀರೆ ತೆಗೆದುಕೊಂಡಿದ್ದೀರಾ? ಯಾರಾದರೂ ನೋಡಿದ್ದರೂ ಬೇಗ ತಿಳಿಸಿ ಎಂದು ದೊಡ್ಡದಾಗಿ‌ ಮೈಕ್ ನಲ್ಲಿ ಕೂಗುವ ಹಂತಕ್ಕೆ ಬಂತು. ಕೊನೆಗೆ ಸೌಭದ್ರಕ್ಕನ ಮೊಮ್ಮಗಳು ಕಿಟ್ಟಣ್ಣನ ಕೂಗು ಕೇಳಿ ಓಡೋಡಿ ಬಂದು ಯಾವ ಸೀರೆ ಎಂದು ಕೇಳಿದ್ದಕ್ಕೆ ಸೌಭದ್ರಕ್ಕ ದಾರೆ ಸೀರೆ ಎಂದಳು. ಅಯ್ಯೋ ಅಜ್ಜಿ ನೀನು ಉಟ್ಟಿರುವುದೇ ನನ್ನ ದಾರೆ ಸೀರೆ. ನಿನ್ನ ಗಡಿಬಿಡಿ‌ ಹೊಡೆತಕ್ಕೆ ನನ್ನ ಸೀರೆ ನೀನು ಉಟ್ಟು ಬಂದೆ. ನನಗೆ ಮೊದಲೇ ನಿನ್ನ ಬುದ್ದಿ ಗೊತ್ತಿರೋದ್ರಿಂದ ಮತ್ತೊಂದು ಸೀರೆ ನಾನು ತೆಗೆದುಕೊಂಡಿದ್ದೆ. ಎಂದು ಹೇಳಿದ ಮೇಲೆ ಎಲ್ಲರ ಆತಂಕವೂ ದೂರಾದದ್ದು. ಒಂದು ದೊಡ್ಡ ತಲೆಬಿಸಿ ಸಿನಿಮೀಯ ರೀತಿಯಲ್ಲಿ ಮರೆಯಾಗಿ ಹೋದದ್ದು.



Rate this content
Log in

Similar kannada story from Comedy