Gireesh pm Giree

Abstract Drama Action

4  

Gireesh pm Giree

Abstract Drama Action

ಪ್ರೀತಿ

ಪ್ರೀತಿ

2 mins
427



ಮನದೊಳಗೊಂದು ಸಣ್ಣ ಕಂಪನ. ಏನದು… ಮಧುರ ತಂಗಾಳಿ ಸುಮಧುರವಾಗಿ ಸ್ಪರ್ಶಿಸುವಂತೆ ಭಾಸವಾಗುತ್ತಿದೆ. ಮಲ್ಲಿಗೆಯ ಮೊಗ್ಗಿನ ಸುಗಂಧ ಸೆಳೆಯುವಂತೆ, ಅವಳತ್ತ ನನ್ನ ಹೃದಯ ಜಾರುವಂತೆ, ವಾಲುವಂತೆ ಮಾಡಿದ್ದಂತೂ ಸುಳ್ಳಲ್ಲ.


ಅದು ಮಳೆಗಾಲದ ಸಮಯ. ಕಾಲೇಜ್ ಬಿಟ್ಟು ಆಗ ತಾನೆ ರೈಲು ನಿಲ್ದಾಣದತ್ತ ಮಿತ್ರರೊಂದಿಗೆ ಹೆಜ್ಜೆಹಾಕಿದ್ದೆ. ದಾರಿಯಲ್ಲಿ ಬೇಕರಿಯ ಮಸಾಲ ತಿಂಡಿ ಚಪ್ಪರಿಸುತ್ತಾ ರೈಲು ಏರಿದ್ದೆ. ಆ ದಿನಗಳಲ್ಲಿ ನನ್ನ ಕೈಯಲ್ಲಿ ಮೊಬೈಲ್ ಇರಲಿಲ್ಲ. ಗೆಳೆಯರು ಅವರಷ್ಟಕ್ಕೆ ಮೊಬೈಲ್‌ನಲ್ಲಿ ತಲ್ಲೀನರಾಗುತ್ತಿದ್ದರು. ಹಾಗಾಗಿ ಸಮಯ ಕಳೆಯಲೆಂದು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡಿದ್ದೆ. ಹಾಗೊಂದು ದಿನ ಪುಸ್ತಕ ಓದುತ್ತಿರುವಾಗ ನನ್ನೆದುರಿನಲ್ಲಿ ಯಾವುದು ಬಣ್ಣದ ಚಿಟ್ಟೆ ಹಾರಿ ಹೋದಂತಾಯಿತು. 


ಒಮ್ಮೆ ಅವಳತ್ತ ಕಣ್ಣಾಡಿಸಿದೆ, ನೋಡಲು ತುಂಬಾನೇ ಚೆನ್ನಾಗಿದ್ದಳು. ನಗುಮುಖ ಕಂಡು ಒಮ್ಮೆ ಬೆರಗಾದೆ. ಅವಳು ನನ್ನ ನೋಡಿ ನಗುವಂತೆ, ನನ್ನನ್ನೇ ತಿರುಗಿ ಇಣುಕಿ ನೋಡುವಂತೆ ಭಾಸವಾಯಿತು. ನನ್ನ ಎದುರು ಸೀಟಿನಲ್ಲಿ ಅವಳು ಕುಳಿತಳು. ಕೈಯಲ್ಲಿದ್ದ ಪುಸ್ತಕ ನನಗೇ ತಿಳಿಯದೆ ಮುಚ್ಚಿತ್ತು. ಏನೋ ಒಂಥರಾ ಆನಂದ, ಸಂಭ್ರಮ. ಹುಚ್ಚು ಪ್ರೀತಿಯೇ ಹಾಗೆ, ಅದರ ಆರಂಭವೇ ತಿಳಿಯದು, ಕೊನೆ ಮಾತ್ರ ಊಹಿಸಲೂ ಆಗದು. ನನ್ನ ದೃಷ್ಟಿ ಅವಳತ್ತಲೇ ನೆಟ್ಟಿತ್ತು. ಆಕೆ ಬ್ಯಾಗನ್ನು ಪಕ್ಕದಲ್ಲೇ ಇಟ್ಟಿದ್ದಳು. ಯಾರನ್ನೋ ಕಾಯುತ್ತಿರುವಂತಿತ್ತು. ಪದೇಪದೇ ಗಡಿಯಾರ ನೋಡಿಕೊಳ್ಳುತ್ತಿದ್ದಳು. ಅಷ್ಟರಲ್ಲಿಯೇ ನನಗೊಂದು ಅಚ್ಚರಿ-ಆಘಾತ ಕಾದಿತ್ತು, ಬಾಯಾರಿದ ಅನುಭವವಾಯ್ತು. ಆಕೆ ಕಾಯುತ್ತಿದ್ದುದು ತನ್ನ ಪ್ರಿಯಕರನ ಬರುವಿಕೆಗಾಗಿ ಎಂದು ಅರಿವಾಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಮನಸ್ಸಲ್ಲಿ ಮೂಡಿದ್ದ ಮಧುರ ಭಾವನೆಯೊಂದು ಕರಗಿ ಹೋದಂತಾಯಿತು. ಅರೆ ಮನಸ್ಸಿನಿಂದ ಮುಚ್ಚಿಟ್ಟ ಪುಸ್ತಕವನ್ನು ಮತ್ತೆ ತೆರೆದು ಓದಲಾರಂಭಿಸಿದೆ...


ಚಿಕ್ಕ ಘಟನೆಯಾದರೂ ನಾನದರಿಂದ ಅನೇಕ ವಿಷಗಳನ್ನು ಕಲಿತೆ. ಅಂದಕ್ಕೆ ಮರುಳಾಗಿ ಪ್ರೀತಿ ಹುಟ್ಟಿಕೊಳ್ಳಬಾರದು, ಬದಲಾಗಿ ಅಂತರಂಗವ ಅರಿತು, ಮನಸ್ಸಿನ ಭಾವನೆಗಳನ್ನು ತಿಳಿದುಕೊಂಡು ಪ್ರೀತಿಸಬೇಕು. ಇಲ್ಲದಿದ್ದರೆ ಹುಚ್ಚು ಕುದುರೆಯ ಹಿಂದೆ ಓಡಿದಂತೆ, ರೈಲು ಹೋದ ಮೇಲೆ ಟಿಕೆಟ್ ಪಡೆದಂತೆ, ಎಲ್ಲವೂ ವ್ಯರ್ಥವಾಗಿಬಿಡುತ್ತದೆ. ಹಣ, ಸಮಯ, ಯೌವನ ಕರಗುವುದೇ ತಿಳಿಯದು. ಯಾವತ್ತೂ ಹಣ ನೋಡಿ ಪ್ರೀತಿಸಬೇಡಿ, ಗುಣ ನೋಡಿ ಪ್ರೀತಿಸಿ. ಯಾಕೆಂದರೆ ಹಣಕ್ಕಿಂತ ಗುಣದ ಬೆಲೆಯೇ ಹೆಚ್ಚು, ದೇಹ ಸೌಂದರ್ಯಕ್ಕಿಂತ ಹೃದಯದ ಸೌಂದರ್ಯ ದೊಡ್ಡದು. ಅದು ವಜ್ರಕ್ಕಿಂತ ಕಠಿಣ ಮತ್ತು ಅಪರಂಜಿ.


ಪ್ರೇಮ ಸಾಗರದೊಳಗೆ ಎಲ್ಲರಿಗೂ ಈಜಲಾಗದು. ಇಲ್ಲಿ ನಿರಂತರ ಅಲೆಗಳು ಎದುರಾಗುತ್ತಲೇ ಇರುತ್ತದೆ. ಇಲ್ಲಿ ಈಜು ಅರಿತವನು ದಡ ಸೇರಬಲ್ಲ. ಈಜು ಅರಿಯದವ ಬೆಂಕಿಗೆ ಮುತ್ತಿಡುವ ದುಂಬಿಯಂತೆ ನೀರಲ್ಲಿ ಜಾರಿ ಹೋಗುತ್ತಾನೆ. ಇಲ್ಲಿ ಮನಸ್ಸು ಸದಾ ಜಾಗೃತವಾಗಿರಲಿ. ಏಕೆಂದರೆ ಪ್ರೀತಿ ದೊರೆತರೆ ಅದು ಬಾಳ ಬೆಳಗುವ ನಂದಾದೀಪವಾಗಬಹುದು, ಇಲ್ಲವಾದರೆ ಬಾಳನ್ನೇ ಸುಡುವ ಜ್ವಾಲೆಯಾಗಬಹುದು...



Rate this content
Log in

Similar kannada story from Abstract