STORYMIRROR

Prajna Raveesh

Abstract Romance Others

3.4  

Prajna Raveesh

Abstract Romance Others

ನಿನ್ನ ಪ್ರೀತಿಗೆ ಅದರ ರೀತಿಗೆ...!!

ನಿನ್ನ ಪ್ರೀತಿಗೆ ಅದರ ರೀತಿಗೆ...!!

3 mins
487


ಅಭಯ್ ಹೆಸರಿಗೆ ತಕ್ಕಂತೆ ತುಂಬಾ ಧೈರ್ಯಶಾಲಿ ಹುಡುಗ. ಅವನಿಗೆ ಸಣ್ಣ ವಯಸ್ಸಿನಿಂದಲೇ ತಂದೆ ತಾಯಿ ಜೀವನದ ಸವಾಲುಗಳನ್ನು ಎದುರಿಸುವ ಕಲೆಯನ್ನು ಹಾಗೂ ಸವಾಲುಗಳನ್ನು ಎದುರಿಸಲು ಧೈರ್ಯವೂ ಬೇಕು ಎಂದು ಅವನಲ್ಲಿ ಆತ್ಮವಿಶ್ವಾಸ, ಧೈರ್ಯ, ಛಲವನ್ನು ತುಂಬಿದ್ದರು. ಸಣ್ಣ ವಯಸ್ಸಿನಿಂದಲೇ ಆತನಿಗೆ ಕರಾಟೆಯನ್ನೂ ಕಲಿಸಿದ್ದರು. ಮಗನು ಯಾವುದೇ ಕಠಿಣ ಸಂದರ್ಭಗಳಲ್ಲಿಯೂ ಸೋಲಬಾರದು, ಒಂದು ವೇಳೆ ಸೋತರೂ ಕೂಡ ಸೋಲನ್ನು ಧೈರ್ಯದಲ್ಲಿ ನಗು ನಗುತಾ ಎದುರಿಸಬೇಕು ಎಂದು ತಮ್ಮ ಮಾತುಗಳಿಂದ ಆತ್ಮವಿಶ್ವಾಸ, ಧೈರ್ಯವನ್ನು ತುಂಬುತ್ತಿದ್ದರು ಅಭಯ್ ನ ಅಪ್ಪ, ಅಮ್ಮಾ. ಇದರಿಂದ ಅಭಯ್ ಗೆ ಎಂತಹ ಕಠಿಣ ಸಂದರ್ಭಗಳಲ್ಲೂ ಬದುಕಬಲ್ಲೆ ಹಾಗೂ ಸೋಲನ್ನು ಧೈರ್ಯದಿಂದ ಎದುರಿಸುವೆ ಎಂಬ ಛಲವೂ ಹುಟ್ಟಿಕೊಂಡಿತ್ತು.


ಅಂಜಲಿ ತುಂಬಾ ಧೈರ್ಯವಂತೆ, ಚುರುಕು ಹಾಗೆಯೇ ಸ್ವಲ್ಪ ಜೋರಿನ ಹುಡುಗಿ ಎಂದೇ ಹೇಳಬಹುದು. ನೋಡಲು ತುಂಬಾ ಮುದ್ದು ಮುದ್ದಾಗಿ, ಆಕರ್ಷಕವಾಗಿದ್ದಳು ಅಂಜಲಿ. ಎಂತಹ ಹುಡುಗರೂ ಕೂಡ ಇವಳ ಅಂದಕೆ ಬೀಳದೇ ಇರಲು ಸಾಧ್ಯವೇ ಇಲ್ಲ!!, ಅಷ್ಟೊಂದು ಸುಂದರಿಯಾಗಿದ್ದಳು ಅಂಜಲಿ.


ಅಭಯ್ ತನ್ನ ಬೈಕ್ ನಲ್ಲಿ ಕಾಲೇಜ್ ಕಡೆಗೆ ಹೋಗುತ್ತಿದ್ದಾಗ, ಅಂಜಲಿ ಕುರುಡು ಮುದುಕಿಯನ್ನು ರಸ್ತೆ ದಾಟಿಸುವ ದೃಶ್ಯ, ಅನಾಥ ಮಕ್ಕಳಿಗೆ ಒಂದಷ್ಟು ಸಹಾಯ ಮಾಡಿ, ಅವರ ಮೊಗದಲ್ಲಿ ನಗು ತರಿಸುವಲ್ಲಿ ಅಂಜಲಿಯೂ ಅವರ ಜೊತೆ ಸೇರಿ ಮಕ್ಕಳಂತೆ ಆಡಿ, ನಲಿದು ಅವರ ಜೊತೆ ಒಂದಷ್ಟು ಸಮಯವನ್ನು ಕಳೆಯುವ ದೃಶ್ಯವು ಕಂಡು ಬಂತು.


ಮೊದಲ ನೋಟದಲ್ಲಿಯೇ ಅವಳನ್ನು ನೋಡುತ್ತಾ, ಪ್ರೇಮ ಲೋಕದಲ್ಲಿ ಕಳೆದು ಹೋಗಿದ್ದನು ಅಭಯ್!!, ಯಾರೋ ಗುರುತು, ಪರಿಚಯ ಇಲ್ಲದವರಿಗೇ ಇಷ್ಟೊಂದು ಪ್ರೀತಿ ತೋರಿಸಿ, ಸಹಾಯ ಮಾಡುವ ಹುಡುಗಿ, ನನ್ನನ್ನು, ನನ್ನ ಮಕ್ಕಳನ್ನು, ಮುಪ್ಪಿನಲ್ಲಿ ನನ್ನ ತಂದೆ ತಾಯಿಯನ್ನು ಅದೆಷ್ಟು ಪ್ರೀತಿ, ಕಾಳಜಿ ವಹಿಸಿ ನೋಡಬಹುದು ಈ ಹುಡುಗಿ ಎಂದು ಅನಿಸಿತು ಅಭಯ್ ಗೆ. 


ಅಂಜಲಿ ಹತ್ತಿದ ಬಸ್ ನ ಹಿಂದೆಯೇ ತನ್ನ ಬೈಕ್ ನ್ನು ಚಲಾಯಿಸಿದ ಅಭಯ್. ಅಂಜಲಿ ತಾನು ಓದುತ್ತಿರುವ ಕಾಲೇಜ್ ನಲ್ಲಿಯೇ ಇಳಿದಾಗ, ಅವಳೂ ಕೂಡ ನಾನು ಓದುತ್ತಿರುವ ಕಾಲೇಜ್ ನಲ್ಲಿಯೇ ಓದುತ್ತಿರುವುದು ಎಂದು ಮನದಟ್ಟಾಯಿತು ಅಭಯ್ ಗೆ. ತನ್ನ ಬೈಕ್ ನ್ನು ಕಾಲೇಜ್ ನ ಗೇಟ್ ನ ಬಳಿ ಇಟ್ಟು, ಅವಳನ್ನೇ ಹಿಂಬಾಲಿಸಿಕೊಂಡು ಹೋದ ಅಭಯ್. ಅಂಜಲಿಯನ್ನು ಹಿಂಬಾಲಿಸಿದ ಅಭಯ್ ಗೆ ಅವಳ ಹೆಸರು ಹಾಗೂ ಅವಳ ತರಗತಿಯ ಪರಿಚಯವಾಯಿತು.


ಬಿಡುವಿನ ವೇಳೆಯಲ್ಲಿ ಆಗಾಗ ಅಂಜಲಿಯ ತರಗತಿಯ ಕಡೆಗೆ ಹೋಗುತ್ತಿದ್ದ ಅಭಯ್!!, ಅಂಜಲಿಯ ರೂಪಕ್ಕೆ ಮರುಳಾಗಿ ಅವಳ ತರಗತಿಯ ಓರ್ವ ಹುಡುಗ, ಅಂಜಲಿಗೆ ಪ್ರೇಮ ಪತ್ರವನ್ನು ಕೊಟ್ಟ ಕಾರಣಕ್ಕಾಗಿ ಅಂಜಲಿ ಅವನಿಗೆ ವಿಪರೀತ ಬೈದಿದ್ದಳು, ಅಷ್ಟೇ ಅಲ್ಲದೇ ಕೆನ್ನೆಗೆ ಒಂದೇಟು ಹೊಡೆದಿದ್ದಳು!! ಇದರಿಂದ ಅಭಯ್ ಬೆಚ್ಚಿ ಬಿದ್ದ. ತಾನು ಹೇಗಪ್ಪಾ ಅಂಜಲಿಗೆ ತನ್ನ ಪ್ರೀತಿಯನ್ನು ನಿವೇದಿಸಲಿ ಎಂದು ತಳಮಳಿಸುತ್ತಿದ್ದ.


ಹೀಗೆ ದಿನಗಳು ಕಳೆಯುತ್ತಿರಲು ಒಂದು ದಿನ ಅಂಜಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ, ವೃದ್ಧ ದಂಪತಿಗಳಿಗೆ ಅಪಘಾತವಾಗಿ ಅವರು ಜೀವನ್ಮರಣಗಳ ನಡುವೆ ಹೋರಾಡುವ ಪರಿಸ್ಥಿತಿಯಲ್ಲಿ, ಅಲ್ಲಿ ನಿಂತಿದ್ದ ಜನರೆಲ್ಲಾ ಅಪಘಾತವಾದ ದೃಶ್ಯವನ್ನು ನೋಡಿ, ತಮ್ಮ ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರೇ ಹೊರತು ಯಾರೂ ಕೂಡ ವೃದ್ಧರನ್ನು ಆಸ್ಪತ್ರೆಗೆ ಕರೆದೊಯ್ಯುವ ಮನಸ್ಸು ಮಾಡಿರಲಿಲ್ಲ.


ಅದೆಲ್ಲಿಂದಲೋ ಬೈ

ಕ್ ನಲ್ಲಿ ಬಂದ ಅಭಯ್, ಆ ಕರುಣಾಜನಕ ದೃಶ್ಯವನ್ನು ಕಂಡ ಕೂಡಲೇ ಅವರನ್ನು ಆಸ್ಪತ್ರೆಗೆ ಒಯ್ಯುವ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿದ್ದ!! ಅಭಯ್ ನನ್ನು ಮೊದಲ ಬಾರಿಗೆ ನೋಡಿದ ಅಂಜಲಿ, ಅವನ ರೂಪಕ್ಕೆ ಮಾತ್ರವಲ್ಲ ಅವನಲ್ಲಿದ್ದ ಹೃದಯ ಶ್ರೀಮಂತಿಕೆಗೂ ಶರಣಾಗಿ ಬಿಟ್ಟಿದ್ದಳು!! 


ಈಗ ಮೌನವಾಗಿಯೇ ಒಬ್ಬರಿಗೊಬ್ಬರು ಪ್ರೀತಿಸತೊಡಗಿದರು. ಆದರೆ ಪದವಿ ಶಿಕ್ಷಣದ ಅಂತ್ಯದವರೆಗೂ ಒಬ್ಬರಿಗೊಬ್ಬರು ಮೌನವಾಗಿ, ತಮ್ಮ ಮನಸ್ಸಿನಲ್ಲಿಯೇ ಪ್ರೀತಿಸಿದರು ಹೊರತು ಇಬ್ಬರೂ ಕೂಡ ಪ್ರೇಮ ನಿವೇದನೆ ಮಾಡುವ ಮನಸ್ಸು ಮಾಡಿರಲಿಲ್ಲ!!, ಇಬ್ಬರಿಗೆ ಪ್ರೇಮ ನಿವೇದನೆ ಮಾಡುವ ಧೈರ್ಯವೂ ಇರಲಿಲ್ಲ!!


ಪದವಿ ಶಿಕ್ಷಣದ ಅಂತ್ಯದಲ್ಲಿ ಪ್ರೇಮಿಗಳ ದಿನ ಬಂತು. ಈ ದಿನವಾದರೂ ಅಂಜಲಿಗೆ ತನ್ನ ಪ್ರೇಮ ಸಲ್ಲಾಪವನ್ನು ಮಾಡದೇ ಹೋದರೆ, ಆಕೆಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಪರಿಸ್ಥಿತಿ ಬಂದೀತು ಎಂದು ಚಿಂತೆಗೀಡಾದ ಅಭಯ್!! ಅಂಜಲಿಗೆ ನಾನೇಕೆ ಅಂಜಲಿ?! ಎಂದುಕೊಂಡು ಏನಾದರೂ ಆಗಲಿ ಒಂದು ಗುಲಾಬಿಯನ್ನು ಹಿಡಿದುಕೊಂಡು ಹೋಗಿ ಪ್ರೇಮ ಸಲ್ಲಾಪವನ್ನು ಮಾಡಿಯೇ ಬಿಡುತ್ತೇನೆ ಎಂದು ಮನೆಯಿಂದ ಕಾಲೇಜ್ ನತ್ತ ಸಾಗಿದ ಆದರೆ ಅವಳ ತರಗತಿ ಹತ್ತಿರ ಬರುತ್ತಿದ್ದಂತೆ ಹೃದಯದಲ್ಲಿ ಅದೇನೋ ಕಂಪನ ಶುರುವಾಯಿತು ಅಭಯ್ ಗೆ. ಜೀವನದಲ್ಲಿ ಎಂದಿಗೂ ಭಯ ಪಡದವನು ಈ ದಿನ ಮಾತ್ರ ವಿಪರೀತ ಭಯ ಪಡುತ್ತಿದ್ದೇನಲ್ಲಾ ಎಂದು ಅನ್ನಿಸತೊಡಗಿತು ಅಭಯ್ ಗೆ!!, ಜೀವನದ ಈ ಪರಿಸ್ಥಿತಿಯಲ್ಲಿ ಮಾತ್ರ ತಾನು ಕಲಿತಿರುವ ಕರಾಟೆಯೂ ಉಪಯೋಗಕ್ಕೆ ಬರದು, ಅಪ್ಪ, ಅಮ್ಮನ ಧೈರ್ಯ, ಛಲ, ಆತ್ಮವಿಶ್ವಾಸದ ನುಡಿಗಳೂ ಕೂಡ ಉಪಯೋಗಕ್ಕೆ ಬರದಾಯಿತಲ್ಲಾ ಎಂದು ಮರುಕ ಪಟ್ಟನು ಅಭಯ್!!


ಏನೇ ಆಗಲಿ ತನ್ನೆಲ್ಲಾ ಧೈರ್ಯವನ್ನು ಅದುಮಿಟ್ಟುಕೊಂಡು, ಧೈರ್ಯದಲ್ಲಿ ಅಂಜಲಿಯತ್ತ ಧಾವಿಸಿ, ತಾನು ತಂದಿರುವ ಕೆಂಗುಲಾಬಿಯನ್ನು ಅಂಜಲಿಗೆ ಕೊಟ್ಟು, ತನ್ನ ಪ್ರೇಮ ನಿವೇದನೆಯನ್ನು ಮಾಡಿದ ಅಭಯ್!!, ಅಂಜಲಿಗೆ ಆಕಾಶವೇ ಧರೆಗೆ ಇಳಿಯಿತೋ ಏನೋ ಎಂಬಷ್ಟು ಖುಷಿಯಾಯಿತು!! ಅಂಜಲಿ ತನ್ನ ಕಿರು ನೋಟದಲ್ಲಿಯೇ, ಹೂ ನಗೆಯ ಬೀರಿ, ಅಭಯ್ ನ ಪ್ರೇಮಕ್ಕೆ ಒಪ್ಪಿಗೆಯನ್ನು ಸೂಚಿಸಿದಳು.


ಇದರಿಂದ ಅಭಯ್ ಗೆ ಆದ ಸಂತೋಷಕ್ಕೆ ಪಾರವೇ ಇಲ್ಲ!! ಇಬ್ಬರೂ ಒಬ್ಬರಿಗೊಬ್ಬರು ಮಾತನಾಡತೊಡಗಿದರು. ಅಭಯ್, ಅಂಜಲಿ ನೀನು ಕುರುಡ ವೃದ್ದೆಗೆ, ಅನಾಥ ಮಕ್ಕಳಿಗೆ ನೆರವಾದ ರೀತಿಗೆ, ಆ ನಿನ್ನ ಪ್ರೀತಿಗೆ ನಾನು ಶರಣಾದೆ ಎಂದ. ಹಾಗೆಯೇ ಅಂಜಲಿಯೂ ಕೂಡ ನೀನು ಅಪಘಾತಕ್ಕೀಡಾದ ವೃದ್ಧ ದಂಪತಿಗಳಿಗೆ ಚಿಕಿತ್ಸೆ ಕೊಡಿಸಿದ ರೀತಿಗೆ, ಆ ನಿನ್ನ ಪ್ರೀತಿಗೆ ಶರಣಾದೆ ಎಂದಳು. 


ಅವರಿಬ್ಬರಿಗೂ ಮನೆಯಲ್ಲಿ ತಮ್ಮ ಪ್ರೀತಿಯನ್ನು ತಮ್ಮ ಅಪ್ಪ, ಅಮ್ಮಾ ಒಪ್ಪಿಕೊಳ್ಳುವರೇ ಎಂಬ ಭೀತಿ ಇತ್ತು. ಪ್ರೇಮ ನಿವೇದನೆ ಮಾಡಿ ಹಲವು ವರುಷಗಳು ಸಂದವು. ಹೀಗೆ ಹೆದರಿಕೊಂಡು ಕೂತರೆ ಯಾವ ಕಾರ್ಯವೂ ಆಗದು, ಪ್ರೇಮ ವಿಫಲವಾದೀತು ಎಂದುಕೊಂಡು, ಇನ್ನು ಮನೆಯಲ್ಲಿ ತಾವು ಪ್ರೀತಿಸುವ ವಿಷಯವನ್ನು ಹೇಳದೇ ಇರುವುದು ಸರಿಯಲ್ಲ ಎಂದುಕೊಂಡು, ಅಭಯ್ ತನ್ನ ಅಪ್ಪ, ಅಮ್ಮನನ್ನು ಒಪ್ಪಿಸುವಲ್ಲಿ ಗೆಲುವು ಸಾಧಿಸಿದ ಹಾಗೆಯೇ ಅಂಜಲಿಯ ಮನೆಗೆ ಬಂದು ಅಂಜಲಿಯ ಅಪ್ಪ, ಅಮ್ಮನನ್ನು ಕೂಡ ಒಪ್ಪಿಸುವಲ್ಲಿ ಗೆಲುವು ಸಾಧಿಸಿದ!! ಹೀಗೆ ಹೆದರಿದರೆ ಜಯವಿಲ್ಲ ಧೈರ್ಯವಿದ್ದರೆ ಮಾತ್ರ ಜೀವನದಲ್ಲಿ ಜಯ ಗಳಿಸಲು ಸಾಧ್ಯ ಎಂದು ಅರಿತುಕೊಂಡು, ಇಬ್ಬರೂ ಕೂಡ ಮುಂದಿನ ಜೀವನವನ್ನು ಏನೇ ಕಷ್ಟಗಳು ಬಂದರೂ ಕೂಡ ಮುಗುಳ್ನಗುತ್ತಾ, ಧೈರ್ಯದಲ್ಲಿ ಎದುರಿಸುವಲ್ಲಿ ಹೆಜ್ಜೆ ಇಟ್ಟರು.


Rate this content
Log in

Similar kannada story from Abstract