Shridevi Patil

Tragedy Inspirational Others

4  

Shridevi Patil

Tragedy Inspirational Others

ಕನ್ನಡ ನಾಡು,ಚಿನ್ನದ ಬೀಡು

ಕನ್ನಡ ನಾಡು,ಚಿನ್ನದ ಬೀಡು

2 mins
223


ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು!


ಮೊದಲನೆಯದಾಗಿ ಎಲ್ಲರಿಗೂ ೬೬ ನೇಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕೇವಲ ಒಂದು ದಿನಕ್ಕೆ ಶುಭಾಶಯ ಕೋರಿ ಮುಗಿಸಿದರೆ ಮುಗಿದೇ ಹೋಯ್ತಾ ಕನ್ನಡದ ಮೇಲಿನ ಪ್ರೇಮ? ಯಾಕೆಂದರೆ ನಾವು ಮಾಡುವುದು ಹೀಗೆಯೇ ಇರುತ್ತದೆ.


ಯಾವಾಗ ಮಹಾರಾಷ್ಟ್ರದವದವರು ಬೆಳಗಾವಿ ತಮಗೆ ಸೇರಿದ್ದೆಂದು ಗದ್ದಲ ಮಾಡುತ್ತಾರೋ , ನಮ್ಮ ಗಡಿಯ ಯಳ್ಳೂರು ಪ್ರಾಂತವು ನಮ್ಮದೆಂದು ಜಗಳಕ್ಕಿಳಿಯುತ್ತಾರೋ ಆಗಲೇ ಅಲ್ಲವೇ ನಮ್ಮೆಲ್ಲರ ಕನ್ನಡಾಭಿಮಾನ ಉಕ್ಕಿ ಹರಿಯುವುದು , ಮುಷ್ಕರ ಮುಂತಾದವುಗಳೆಲ್ಲವೂ ಜರುಗುವುದು , ಸ್ವಲ್ಪ ಶಾಂತವಾದ ತಕ್ಷಣ ಎಲ್ಲವೂ ಶಾಂತವಾಗಿಯೇ ಬಿಡುತ್ತದೆ. ನಾನು ಕ ರ ವೇ ದ ಮೂಲಕ ಕನ್ನಡ ಜಾಗೃತಿ ಮೂಡಿಸುವೆ , ನಾನು ಕನ್ನಡ ಸಾಹಿತ್ಯ ಪರಿಷತ್ತ ಮೂಲಕ ಕನ್ನಡ ಅಭ್ಯುದಯ ಮಾಡುವೆ , ಎಂದು ನಮ್ಮ ನಮ್ಮಲ್ಲಿಯೇ ಸಂಘ ಸಂಸ್ಥೆಗಳನ್ನು ಮಾಡಿಕೊಂಡು ಕನ್ನಡದ ಮೇಲಿನ ಪ್ರೇಮವನ್ನು ತೋರಿಸುತ್ತಾರೆ. ಆದರೆ ಕನ್ನಡದ ಹಬ್ಬವು ನಿರಂತರವಾಗಿರಲಿ , ಎಲ್ಲರಲ್ಲೂ ಕನ್ನಡಕ್ಕಾಗಿ ಮಿಡಿಯುವ ಮನಸ್ಸು ಮೂಡಲಿ ಎನ್ನುವುದು ನನ್ನ ಆಶಯ.


ಇನ್ನೊಂದನ್ನು ನಾನು ಹೇಳಲೇಬೇಕು , ಕರ್ನಾಟಕದಲ್ಲಿ ಕನ್ನಡವೇ ಮೊದಲು ಎಂದು ಹೇಳುತ್ತಾರೆ. ಅದು ನಿಜವೇ ಆದರೆ ನಾವಿರುವ ಬೆಳಗಾವಿಯಲ್ಲಿ ನನಗೆ ಇಲ್ಲಿಯವರೆಗೂ ಕಾಣಸಿಲ್ಲ. ಹೆಚ್ಚಾನು ಹೆಚ್ಚು ಜನರು ಮಾತನಾಡುವುದೇ ಮರಾಠಿ , ಇಲ್ಲವೇ ಹಿಂದಿ. ನಾನು ಬೆಳೆದಿದ್ದು ಹಾವೇರಿಯ ಪುಟ್ಟ ಹಳ್ಳಿಯಲ್ಲಿ. ಕನ್ನಡ ಬಿಟ್ಟು ಬೇರೆ ಭಾಷೆ ಬಾರದೆ ಇರುವಂತಹ ಹಳ್ಳಿ. ಓದಿದ್ದರಿಂದ ಅಲ್ಪ ಸ್ವಲ್ಪ ಆಂಗ್ಲ ಭಾಷೆ , ಹಿಂದಿ ಭಾಷೆ ಗೊತ್ತು. ಆದರೆ ಆ ಮರಾಠಿ ಭಾಷೆ ಎಲ್ಲಿಂದ ಬರಬೇಕು ಹೇಳಿ? ಒಮ್ಮೆ ನನ್ನ ಮಗಳಿಗೆ ಹುಷಾರಿಲ್ಲದೆ ಆಸ್ಪತ್ರೆಗೆ ಅಡ್ಮಿಟ್ ಆಗಬೇಕಾದ ಪರಿಸ್ಥಿತಿ ಬಂದೊದಗಿತ್ತು. ಆಗ ನಾನು ಮಗಳೊಂದಿಗೆ ಆಸ್ಪತ್ರೆಯಲ್ಲಿದ್ದಾಗ ನಮ್ಮ ಯಜಮಾನರು ರಜೆ ಇಲ್ಲವೆಂದು ಡ್ಯೂಟಿಗೆ ಹೋಗಿದ್ದರು. ಆ ಸಮಯದಲ್ಲಿ ನನಗೆ ಬರುವ ಅಲ್ಪ ಸ್ವಲ್ಪ ಹಿಂದಿ ಭಾಷೆಯಲ್ಲಿ ಹೇಗೋ ಮೂರು ದಿನ ನಿಭಾಯಿಸಿದ್ದೆ. ಯಾಕೆಂದರೆ ಅಲ್ಲಿಯ ಸಿಬ್ಬಂದಿಗಳು ಕನ್ನಡದವರು , ಆದರೆ ಕನ್ನಡ ಭಾಷೆ ಬಾರದಿರುವ ಕನ್ನಡದವರು. ಮರಾಠಿ ಭಾಷೆ ಮಾತನಾಡುವ ಅವರಿಗೆ ನಾನು ಕನ್ನಡದಲ್ಲಿ ಹೇಳಿದ್ದು ತಿಳಿಯುತ್ತಿರಲಿಲ್ಲ. ನೈಟ್ ಡ್ಯೂಟಿ ನರ್ಸಮ್ಮನಿಗೆ ಹಿಂದಿನೂ ಬರುತ್ತಿರಲಿಲ್ಲ. ಊಹೆ ಮಾಡಿಕೊಳ್ಳಿ ನಮ್ಮಿಬ್ಬರ ಸಂವಾದ ಹೇಗಿತ್ತು ಎಂದು.


ನಾಳೆ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಹೇಳಿದ್ದರು. ನಾನು ನಾಳೆ ಅಲ್ವಾ , ಶ್ರೇಯಾ ಪಪ್ಪಾ ಬರ್ತಾರೆ ಬಿಡು ಎಂದು ಸುಮ್ಮನಾಗಿದ್ದೆ. ಆ ನರ್ಸಮ್ಮ ಇವತ್ತು ರಾತ್ರಿಗೆ ಎಲ್ಲ ಬಿಲ್ ಪೇ ಮಾಡಿ ಕ್ಲಿಯರ್ ಮಾಡಿಕೊಳ್ಳಿ , ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ಡಾಕ್ಟರ್ ಬಂದ ಮೇಲೆ ಔಷಧಿ ಬರೆಸಿಕೊಂಡು ಹೋಗಿ ಎಂದು ಮರಾಠಿಯಲ್ಲಿ ಹೇಳಿ ಹೋಗಿದ್ದಳು. ನನಗೋ ಆಕೆ ಮಾತನಾಡಿದ ಆ ಪದಗಳಲ್ಲಿ ಅರ್ಥವಾಗಿದ್ದು ಡಿಸ್ಚಾರ್ಜ್ ಒಂದೇ.


ಬೆಳಿಗ್ಗೆ ಶ್ರೇಯಾ ಪಪ್ಪಾ ಬಂದ ಮೇಲೆ ರಿಸಪ್ಶನ್ ಹತ್ತಿರ ಮಾತನಾಡಿದ ಮೇಲೆ ತಿಳಿಯಿತು ನಮ್ಮದು ನಿನ್ನೆಯೇ ಡಿಸ್ಚಾರ್ಜ್ ಮಾಡಲಾಗಿದೆ. ರಾತ್ರಿ ಕಳೆದು ಬೆಳಿಗ್ಗೆ ಹೋಗಲು ಹೇಳಿದ್ದಾರೆ ಎಂದು. ಅವರು ಹೇಳಿದ್ದು ಹತ್ತು ಗಂಟೆ , ನಾವು ಡಿಸ್ಚಾರ್ಜ ಆಗಿದ್ದು ಹನ್ನೊಂದು ಗಂಟೆ . ಕೇವಲ ಒಂದು ಗಂಟೆ ಹೆಚ್ಚಾಗಿದ್ದರಿಂದ ಒಂದು ಸಾವಿರ ರೂ. ಗಳನ್ನು ಹೆಚ್ಚಾಗಿ ತೆಗೆದುಕೊಂಡರು. ಮರಾಠಿಯಲ್ಲಿ ಏನು ಹೇಳಿದಳೋ , ನಾನು ಅರ್ಧಂಬರ್ಧ ಹಿಂದಿಯಲ್ಲಿ ಏನು ಉತ್ತರಿಸಿದೆನೋ ಒತ್ತಿನಲ್ಲೂ ಸಾವಿರ ರೂ. ಗಳನ್ನು ದಂಡ ಕಟ್ಟಿದಂತಾಗಿತ್ತು.


ನನ್ನದು ಒಂದೇ ಪ್ರಶ್ನೆ , ಕನ್ನಡ ನಾಡಲ್ಲಿ ಹುಟ್ಟಿ , ಕನ್ನಡ ನಾಡಲ್ಲಿ ಬೆಳೆದು , ಕನ್ನಡ ನಾಡಿನ ಅನ್ನ ಉಣ್ಣುವವರಿಗೆ ಕನ್ನಡ ಮಾತನಾಡಲು ಏನು ಕಷ್ಟ ಅಂತ.


ಇದು ಕೇವಲ ಬೆಳಗಾವಿಯದಷ್ಟೇ ಅಲ್ಲ , ನಮ್ಮ ಸುತ್ತಲಿನ ಜಿಲ್ಲೆಯಲ್ಲೂ ಈ ತರಹದ ಎಷ್ಟೋ ಭಾಷಾ ಸಮಸ್ಯೆಗಳಿರುವದನ್ನು ನೋಡಿರುತ್ತೇವೆ , ಕೇಳಿರುತ್ತೇವೆ. ದಯಮಾಡಿ ಎಲ್ಲರಲ್ಲೂ ಕೇಳಿಕೊಳ್ಳುವುದೇನೆಂದರೆ ದಯಮಾಡಿ ಎಲ್ಲರೂ ಕನ್ನಡವನ್ನು ಮಾತನಾಡೋಣ , ಕನ್ನಡವನ್ನು ಉಳಿಸೋಣ , ಕನ್ನಡವನ್ನು ಬೆಳೆಸೋಣ. ಮುಂದಿನ ಜನ್ಮದಲ್ಲಿಯೂ ಇದೆ ಕನ್ನಡ ನಾಡಲ್ಲಿ ಹುಟ್ಟೋಣ. ಇದು ಪುಣ್ಯಭೂಮಿ , ಈ ಮಣ್ಣಲ್ಲಿ ಅದೇನೋ ಒಂದು ದೈವಿಕ ಶಕ್ತಿ ಇದೆ . ಪುಣ್ಯ ಮಾಡಿದವರಿಗೆ ತಾನೇ ಈ ಮಣ್ಣಲ್ಲಿ ಜನ್ಮ ತಾಳುವ ಅವಕಾಶ ಸಿಗುವುದು.


ಕನ್ನಡ ನಾಡು ಚಿನ್ನದ ಬೀಡು ಎಂದು ಹೇಳುತ್ತಾರೆ. ಅದು ನಿಜವೇ ಅಲ್ಲವೇ..



Rate this content
Log in

Similar kannada story from Tragedy