Shrinivas Kulkarni

Crime Inspirational Others

4  

Shrinivas Kulkarni

Crime Inspirational Others

ಖಾಜಾಬಿಯ ಪತ್ತೇದಾರಿಕೆ!

ಖಾಜಾಬಿಯ ಪತ್ತೇದಾರಿಕೆ!

4 mins
174


ಎಲ್ಲ ಊರುಗಳಿಗೂ ಬರುವಂತೆ ನಮ್ಮೂರಿಗೂ ಒಬ್ಬ

ಸನ್ಯಾಸಿ ಬಂದು ಊರ ಹೊರಗಿನ ಹನುಮನ ಗುಡಿಯಲ್ಲಿ ಬೀಡುಬಿಟ್ಟ. ಉದ್ದನೇ ದಾಡಿ, ಸೊಂಟಕ್ಕೊಂದು ಲಂಗೋಟಿ, ಹಣೆಗೆಲ್ಲ ವಿಭೂತಿ ಬಡಿದುಕೊಂಡಿದ್ದ ಅವನನ್ನು ನಮ್ಮೂರಿನ ಜನ ವಿಭೂತಿ ಪುರುಷನೆಂದೇ ಬಗೆದರು.

 ಆತನು ಯಾರು,ಎಲ್ಲಿಂದ ಬಂದವ ಎಂಬುದರ ಗೊಡವೆಗೆ ಹೋಗದೇ ಆತನಿಗೆ ನಮಸ್ಕರಿಸಿ ತಮ್ಮತಮ್ಮ ಸಮಸ್ಯೆ ಹೇಳಿಕೊಳ್ಳತೊಡಗಿದಾಗ ಬಂದಾತನಿಗೂ ಅದುವೇ ಬೇಕಿತ್ತೇನೋ. ಒಮ್ಮೆ ನಮ್ಮೂರ ಗವಳಿಗನ ಎಮ್ಮೆಯೊಂದು ಕಳೆದು ಹೋಯ್ತು. ಆತ ಇವನ ಬಳಿ ಬಂದು ಎಮ್ಮೆ ಕಳಿದಿದೆ ಎಂದಾಗ " ಉತ್ತರ ದಿಕ್ಕಿನಾಗ ಮೂರು ಹರದಾರಿ ಹೋಗಿ ನೋಡು. ಆ ಊರಾಗ ಪಶ್ಚಿಮ ದಿಕ್ಕಿಗೆ ಮುಖಾ ಮಾಡಿದ ಮನ್ಯಾಗ ನಿನ್ ಎಮ್ಮಿ ಸಿಗತದ " ಎಂದಾತ ಹೇಳಿದ.


ನಮ್ಮೂರಿಗೆ ಮೂರು ಹರದಾರಿ ಎಂದರೆ ಮಣ್ಣೂರೇ. ಸರಿ, ಗವಳಿ ಮಣ್ಣೂರಿಗೆ ಹೋದ. ಅಲ್ಲಿನ್ನು ಪಶ್ಚಿಮಕ್ಕೆ ಮುಖ ಮಾಡಿದ ಮನೆಗಳನ್ನು ಹುಡುಕುತ್ತ ಹೋಗಬೇಕಲ್ಲ? ಅದನ್ನೂ ಮಾಡಿದ. ಪಶ್ಚಿಮಕ್ಕೆ ಮುಖ ಮಾಡಿದ ಬಾಗಿಲುಗಳಿರುವ, ಬಾಗಿಲೆದುರು ಕೊಟ್ಟಿಗೆಗಳಿರುವ ಮನೆ ಹುಡುಕುತ್ತ ಹೊರಟಾಗ ಆತನಿಗೆ ಮೊದಲು ಸಿಕ್ಕಿದ್ದು ಆ ಊರ ಗೌಡರ ಮನೆಯೇ.


ಗೌಡರು ಅದೇ ತಾನೇ ಮಧ್ಯಾಹ್ನದ ಊಟ ಮಾಡಿ

ಮನೆ ಜಗುಲಿಯ ಮೇಲೆ ಕುಳಿತಿದ್ದರು. ದೂರದಿಂದಲೇ ಯಾರೋ ಏನನ್ನೋ ಹುಡುಕಿಕೊಂಡು ಬರುತ್ತಿರುವುದನ್ನು ಕಂಡರು. ಗವಳಿಗ ಹತ್ತಿರ ಬರುತ್ತಲೇ " ಯಾರ್ನೀವೂ? " ಎಂದು ಕೇಳಿದಾಗ ಗವಳಿಗ ತನ್ನ ಪರಿಚಯ ಹೇಳಿ ತನ್ನ ಎಮ್ಮೆ ಕಳೆದು ನಾಲ್ಕು ದಿನಗಳಾದದ್ದನ್ನು ಹೇಳಿದ. 

ಗೌಡರು ನಗುತ್ತ ಎದ್ದುನಿಂತು " ಹಂಗಾರ ಅದು ನಿಮ್ಮ ಎಮ್ಮೀನsss " ಎಂದರು. " ಅದು ಹ್ಯಾಂಗೋ ಏನೋ ನಮ್ಮ ಎಮ್ಮಿಗೋಳ ಜೋಡಿ ಅದೂ ಬಂದ್ ಬಿಟ್ಟೈತಿ.

ನಾ ನಮ್ಮೂರಿನದೇ ಯಾರದಾದರೂ ಇರಬೇಕು, ಇವೊತ್ ಬಂದ ಕೇಳತಾರ ,ನಾಳೆ ಬಂದ್ ಕೇಳತಾರ ಅಂತ ಸುಮ್ಮನss ಇದ್ದೆ." ಎನ್ನುತ್ತ ಕೊಟ್ಟಿಗೆಯ ಕಡೆಗೆ ನಡೆಯುತ್ತ ಬರ್ರಿ ಎಂದು ಗವಳಿಗನನ್ನು ಕರೆದರು. ಎಮ್ಮೆ ಗವಳಿಗನನ್ನು ಕಂಡು ಖುಷಿಯಿಂದ ಡುರ್ ಎಂದು ಸದ್ದು ಮಾಡಿತು. ಎಮ್ಮೆ ಸಿಕ್ಕಿದ್ದು ಗವಳಿಗನಿಗೆ ಸಂತೋಷ ತಂದಿತು. ಖುಷಿಯಿಂದ ಗೌಡರಿಗೆ ಇನ್ನೂರರ ನೋಟು ಕೊಡಲು ಹೋದಾಗ ಗೌಡರು " ಛೇ,ಛೇ, ಇದೆಲ್ಲಾ ಬ್ಯಾಡಾ, ನಿಮ್ಮ ಎಮ್ಮಿ, ನೀವು ತಗೊಂಡು ಹೊಂಟೀರಿ    ಇದಕೆಲ್ಲಾ ರೊಕ್ಕಾ, ರೂಪಾಯಿ ಯಾಕ?" ಎಂದರು.


" ಹಾಂಗ ಅನಬ್ಯಾಡರೀ ಗೌಡರ, ನಾಕ ದಿನಾ ಅದಕ ಜ್ವಾಪಾನವಾಗಿ ಕಟ್ಟಿ ಹಾಕಿ, ಕಣಕೀ, ಮೇವಾ ತಿನಿಸೀರಿ. ಅದರ ಖರ್ಚು...."


" ನಿನ್ ಎಮ್ಮಿ ನನಗೇನು ಒಜ್ಜಿ ಆಯ್ತಂತ ತಿಳಕೊಂಡೀ ಏನು? ಹತ್ತರೊಳಗ ಅದು ಹನ್ನೊಂದು,ಅಷ್ಟss" ಎನ್ನುತ್ತ ಎಮ್ಮೆಗೆ ಕಟ್ಟಿದ ಹಗ್ಗವನ್ನು ಬಿಚ್ಚಿದರು. ಗವಳಿಗ ಎಮ್ಮೆ ಹೊಡೆದುಕೊಂಡು ನಮ್ಮೂರ ಸೇರಬೇಕಾದರೆ ಸರಿರಾತ್ರಿಯಾಗಿತ್ತು.


ಮರುದಿನ ಊರಲ್ಲೆಲ್ಲ ಇದೇ ಸುದ್ದಿ. ಹನುಮನ ಗುಡಿಯಲ್ಲಿನ ಸನ್ಯಾಸಿ ಗವಳಿಗನಿಗೆ ಹೇಳಿದ ಜ್ಯೋತಿಷ್ಯ ನೂರಕ್ಕೆ ನೂರು ನಿಖರವಾಗಿತ್ತೆಂದೂ, ಆತ ಹೇಳಿದ ದಿಕ್ಕಲ್ಲೇ ಎಮ್ಮೆ ಸಿಕ್ಕಿತೆಂದೂ ಸುದ್ದಿ ಹಬ್ಬಿದಾಗ ಜನ ತಮ್ಮ ತಮ್ಮ ಭವಿಷ್ಯ ಕೇಳಲು ಮುಂದಾದರು.


ಆ ಸನ್ಯಾಸಿ ಯಾರು ಯಾರಿಗೆ ಎಷ್ಟೆಷ್ಟು, ಏನೇನು ಭವಿಷ್ಯ ಹೇಳಿದನೋ, ಅವುಗಳಲ್ಲೆಷ್ಟು ಸತ್ಯವಿತ್ತೋ ಗೊತ್ತಿಲ್ಲವಾದರೂ ಜನ ಮರುಳೋ,ಜಾತ್ರೆ ಮರುಳೋ ಎನ್ನುವಂತಾಯ್ತು. 


ನಮ್ಮೂರ ನೇಕಾರರಲ್ಲಿ ಮುಸಲ್ಮಾನ ಬಾಂಧವರೇ ಜಾಸ್ತಿ. ಅವರನ್ನು ನಾವೆಲ್ಲ ಪಿಂಜಾರ ಎಂದೇ ಗುರುತಿಸುವುದು.

ಕೌದಿ ಹೊಲೆದುಕೊಡುವುದು, ಗಾದಿ ತಯಾರಿಸುವುದು ಇವುಗಳಲ್ಲವರು ಪರಿಣಿತರು.ಮೊದಲೆಲ್ಲ ನೂಲು ತೆಗೆದು ಬಟ್ಟೆ ತಯಾರಿಸುತ್ತಿದ್ದರಾದರೂ ಈಗೆಲ್ಲ ಬಟ್ಟೆ ತಯಾರಿಸುವ ಮಿಲ್ಲುಗಳೇ ಬಂದಿರುವುದರಿಂದ ಲಾಭವಿರದ ಆ ಕೆಲಸ ಬಿಟ್ಟು ಕೊಟ್ಟಿರುವರು. ಇಂಥೊಬ್ಬ ಪಿಂಜಾರ ಅಲ್ಲಾವುದ್ದೀನನ ಮಗಳು ಖಾಜಾಬೀಗೆ ಅದೇನೋ ಸಮಸ್ಯೆ. ಆಕೆ ಒಮ್ಮಿಂದಿಮ್ಮೆಲೇ ಭಯಪಟ್ಟವರಂತೆ ಆಡುತ್ತಿದ್ದಳು. ಆಗೆಲ್ಲ ನಡುಗುವುದು, ಚೀರುವುದು ಇರುತ್ತಿತ್ತು. ಮೊದಲೆಲ್ಲ ಇದು ಅಪಸ್ಮಾರವಿರಬಹುದೆಂದು ವೈದ್ಯರಿಗೆ ತೋರಿಸಿದರು, ಹಕೀಮರಿಗೆ ತೋರಿಸಿದರು. ಅವರ ಪರೀಕ್ಷೆಯಂತೆ ಇದು ದೈಹಿಕ ರೋಗವಾಗಿರದೇ ಯಾವುದೋ ಮಾನಸಿಕ ರೋಗ ಎಂದು ಪರಿಗಣಿಸಲಾಯ್ತಾದರೂ ಅಲ್ಲಾಉದ್ದೀನನ ಹೆಂಡತಿ ಮಮ್ತಾಜಳು ಮಾತ್ರ ಅದನ್ನು ನಂಬಲಿಲ್ಲ. " ಮಾನಸಿಕ ಮಾಡಕೊಳ್ಳಾಕ ಅಕಿಗೇನಾಗೇತಿ ಧಾಡೀ? ಖಮ್ಮಗ ಮೂರ ಹೊತ್ ಊಟಾ ಮಾಡತಾಳ, ಮನೀ ಕೆಲಸಾನೂ ನಾನೇ ಮಾಡೂದು. ಅಕಿಗೇನರೇ ದೆವ್ವಗಿವ್ವ ಬಡಕೊಂಡಿರಬೇಕೂ ಅನಸ್ತದ." ಎಂದು ತಾಯಿಯಾದವಳೇ ಹೇಳಿಕೊಳ್ಳ ತೊಡಗಿದಾಗ ಅಕ್ಕಪಕ್ಕದವರು ರೆಕ್ಕೆ ಪುಕ್ಕ ಹಚ್ಚದಿರುತ್ತಾರೆಯೇ? ಅಲ್ಲಲ್ಲಿ ದರ್ಗಾಗಳಿಗೆ ಕರೆದೊಯ್ದದ್ದಾಯ್ತು. ಮೌಲ್ವಿಮುಲ್ಲಾಗಳು ಕೊಟ್ಟ ತಾಯಿತ ಕಟ್ಟಿದ್ದಾಯ್ತು. ಯಾವುದಕ್ಕೂ ಸಮಸ್ಯೆ ಬಗಿ ಹರಿಯಲಿಲ್ಲ.  


ಸನ್ಯಾಸಿಯ ಸುದ್ದಿ ಕಿವಿಗೆ ಬೀಳುತ್ತಲೂ ಒಮ್ಮೆ ಅವನ ಬಳಿಯೂ ಮಗಳನ್ನು ಕರೆದೊಯ್ದರೆ ತಪ್ಪೇನು ಎನ್ನಿಸಿತು.

ಒಂದು ಅಮಾವಾಸ್ಯೆಯಂದು ಅಲ್ಲಾವುದ್ದೀನ ಮತ್ತು ಮಮ್ತಾಜರು ತಮ್ಮ ಮಗಳು ಖಾಜಾಬಿಯನ್ನು ಕರೆದುಕೊಂಡು ಸನ್ಯಾಸಿ ಇದ್ದಲ್ಲಿಗೆ ಬಂದರು.

ಖಾಜಾಬಿಯನ್ನು ನೋಡಿದೊಡನೆಯೇ ಅವಳಿಗೆ ಪಿಶಾಚಿಯೊಂದರ ಭಾದೆಯಿದೆಯೆಂದೂ ಅದನ್ನು ತೊಲಗಿಸಲು ಇಂಥಿಂಥ ಹೋಮ, ಇಂಥಿಂಥ ಸಾಮಾನುಗಳು ಬೇಕು , ಮುಂದಿನ ಅಮಾವಾಸ್ಯೆ ಎಲ್ಲ ಸಜಾಮುಗಳ ಸಹಿತ ಬರಬೇಕು ಎಂದ. ಹೋಮದ ವೆಚ್ಚ ಎರಡು ಸಾವಿರ ಎಂದ.


ದಂಪತಿಗಳು ಲೆಕ್ಕ ಹಾಕಿದರು. ಇದು ಬಹಳ ವೆಚ್ಚದ್ದು. ಆದರೆ ವಿಧಿಯೇ ಇಲ್ಲ. ಇದರಿಂದ ಮಗಳಿಗೆ ಒಳ್ಳೆಯದಾಗುವುದಿದ್ದರೆ ತಪ್ಪೇನಿದೆ ಎಂದು ಕೊಂಡು ಮತ್ತೇ ಬಂದ ಅಮಾವಾಸ್ಯೆಯಂದು ಮಗಳನ್ನು ಕರೆದುಕೊಂಡು ಹೋದರು. ಈ ಬಾರಿ ಅವರ ಜೊತೆಗೆ ಮನೆಯ ಸಾಕಿದ ನಾಯಿಯೂ ಬೆನ್ನು ಹತ್ತಿ ಬಂತು!.


ಸನ್ಯಾಸಿ ಖಾಜಾಬಿಯನ್ನು ಎದುರಿಗೆ ಕುಳ್ಳಿರಿಸಿಕೊಂಡು ಏನೇನೋ ಮಂತ್ರ ಜಪಸಿದ. ಮುಷ್ಟಿಯಲ್ಲಿದ್ದ ಬೂದಿಯನ್ನು ಅವಳ ಮೇಲೆ ಎರಚಿದ. ಮೈಮೇಲೆ ಬೆಂಕಿ ಬಿದ್ದಂತಾಗಿ ಹೌ ಹಾರಿದ ಖಾಜಾಬೀ ಮೈಕೈ ಝಾಡಿಸುತ್ತ ಧುತ್ತೆಂದು ಎದ್ದು ನಿಂತಳು. ಮೈಮೇಲೆ ಬೂದಿ ಎರಚಿದ ಸನ್ಯಾಸಿಯನ್ನು ಬಿಡಬಾರದೆಂದುಕೊಂಡು ಅವನ ಮೇಲೆಯೇ ಜಿಗಿದು ನೆಲಕೆ ಕೆಡವಿದಳು. ಅವರ ಮನೆಯ ನಾಯಿಗೂ ಅದೇನೋ ಕೋಪ ಬಂದು ಸನ್ಯಾಸಿಯ ತಲೆಗೂದಲು ಕಚ್ಚಿ ಜಗ್ಗತೊಡಗಿತು.


" ಲೇ ಸನ್ಯಾಸೀ, ಅದ್ಯಾವ ದೆವ್ವ ನನ್ನ ಮೈ ಸೇರಕೊಂಡೈತೀ ಹೇಳು" ಎನ್ನುತ್ತ ಸನ್ಯಾಸಿಗೆ ರಪರಪ ಬಾರಿಸತೊಡಗಿದಳು. ಅಲ್ಲಾವುದ್ದೀನ ಮತ್ತು ಮಮ್ತಾಜರಿಗೆ ಖಾಜಾಬಿಯನ್ನು ನಿಯಂತ್ರಿಸುವುದು ದುಸ್ತರವಾಯ್ತು. ಹೇಗೋ ಬಿಡಿಸಿದರು. ಬಿಡಿಸಿದ್ದೇನೋ ಆಯ್ತು ಆದರೆ ಖಾಜಾಬಿಯ ಸಿಟ್ಟು ಮಾತ್ರ ಕರಗಿರಲಿಲ್ಲ.

 

" ಇದೇ ಮುಂಡೇಮಗ ರಸೂಲನನ್ನು ಕೊಂದದ್ದು, ಹೌದು ಇವನೇ, ಇವ್ನ ಬಿಡಬಾರ್ದು,ಬಿಡಬಾರ್ದು. ಈಗಲೇ ಇಂವ್ಗ ಪೋಲಿಸರ್ ಕೈಯಾಗ ಕೊಡಬೇಕು" ಎಂದು ಖಾಜಾಬಿ ಅನ್ನತೊಡಗಿದಾಗ ದಂಪತಿಗಳಿಗೆ ಏನೊಂದೂ ಅರ್ಥವಾಗಲಿಲ್ಲ.


ಹೌದು, ಸುಮಾರು ಮೂರು ವರುಷಗಳ ಹಿಂದೆ ನಮ್ಮೂರಿನ ರಸೂಲ ಎಂಬ ಮುಸ್ಲಿಂ ಯುವಕನ ಕೊಲೆಯಾಗಿತ್ತು. ಆ ಕೊಲೆಗೆ ರಸೂಲನು ಬೇರೊಂದು ಹೆಣ್ಣಿನ ಜತೆಗೆ ಅನೈತಿಕ ಸಂಬಂಧ ಬೆಳೆಸಿದ್ದೇ ಕಾರಣವಾಗಿತ್ತು. ಖಾಜಾಬಿ ಆ ಕೊಲೆಯನ್ನು ಕಣ್ಣಾರೆ ಕಂಡಿದ್ದಳು. ಕಂಡವಳು ಅವಳೊಬ್ಬಳೇ ಆದ್ದರಿಂದ ಕೊಲೆಗಾರ ಅವಳಿಗೆ ಹೆದರಿಕೆ ಹಾಕಿದ. " ಯಾರ ಮುಂದಾದರೂ ಹೇಳಿದರೆ ನಿನಗೆ, ನಿನ್ನ ತಾಯಿತಂದೆಗೆ ಇದೇ ಗತಿ" ಎಂದು. ಆ ಹೆದರಿಕೆ ಹಾಕಿದ ಮುಖಕ್ಕೂ ಈ ಸನ್ಯಾಸಿಯ ಮುಖಕ್ಕೂ ಪಕ್ಕಾ ತಾಳೆಯಾಗುತ್ತಿತ್ತು. ಗೊಗ್ಗರು ದನಿಯೂ ಅದೇ.


ಮಗಳು ಹೇಳುತ್ತಿರುವುದೇನು ಎಂಬುದು ಅಲ್ಲಾವುದ್ದೀನನಿಗೆ ಮೊದಲು ಅರ್ಥವಾಗಲಿಲ್ಲ. ರಸೂಲ ಆತನ ಲಂಗೋಟಿ ಗೆಳೆಯ. ಆತನ ಕೊಲೆಯಾಗಿದ್ದು,ಕೊಲೆಗಾರ ಕಣ್ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಸುದ್ದಿ ಆತಗೆ ಗೊತ್ತು. 


" ಇವನ ಹೆಸರು ಗೊತ್ತೇನು?" ಎಂದು ಖಾಜಾಬೀಗೆ ಕೇಳಿದ.


" ಗೊತ್ತಿರದss ಏನು? ಬಡಗ್ಯಾರ ಮಾನ್ಯಾ ಇಂವಾ. .

ಹೀಂಗ ಗಡ್ಡಾ ಬಿಟ್ಟು ಲಂಗೋಟೀ ಹಾಕಿದರ ಯಾರಿಗೂ ಗೊತ್ತಾಗೂದಿಲ್ಲ ಅಂತ ತಿಳಕೊಂಡಾನ!"


ತನ್ನ ಪೂರ್ವೇತಿಹಾಸವನ್ನೆಲ್ಲ ಈ ಹುಡುಗಿ ಬಯಲು ಮಾಡಿದ್ದು ಕಂಡು ಸನ್ಯಾಸಿ ಊರ್ಫ ಬಡಿಗೇರ ಮಾನಪ್ಪ ಓಡಿಹೋಗಲು ಹವಣಿಸಿದ. ಆದರೆ ಈಗ ಆತನನ್ನು ಅಲ್ಲಾವುದ್ದೀನ ಗಟ್ಟಿಯಾಗಿ ಹಿಡಿದುಕೊಂಡು ಹೆಂಡತಿಗೆ ಓಣಿಯ ಜನರನ್ನು ಕರೆತರಲು ಹೇಳಿದ.


ಬಡಿಗೇರ ಮಾನಪ್ಪ ಊರಿಂದ ನಾಪತ್ತೆಯಾಗಿ ಮೂರು ವರುಷವಾಗಿದ್ದನ್ನು ಊರವರೆಲ್ಲ ಬಲ್ಲರು. ರಸೂಲನ ಕೊಲೆಗೂ, ಮಾನಪ್ಪನ ನಾಪತ್ತೆಗೂ ಯಾರೂ ತಾಳೆ ಹಾಕಿರಲಿಲ್ಲ ಅಷ್ಟೇ.


ಓಣಿಯ ಜನ,ಊರ ಜನ ಎಲ್ಲ ಬಂದು ಸೇರಿದರು. 

ಕ್ಷೌರಿಕನೊಬ್ಬನನ್ನು ಕರೆದು ಗಡ್ಡ, ಮೀಸೆ, ಜಡೆಗಳನ್ನು ಬೋಳಿಸಿದಾಗ ಎಲ್ಲರೂ ಕಂಡಿದ್ದು ಬಡಿಗೇರ ಮಾನಪ್ಪನನ್ನೇ.


ಖಾಜಾಬಿ ತನಗೆ ಹೆದರಿಕೆಯಾಗುತ್ತಿದ್ದದ್ದು, ಮೈ ನಡುಗುತ್ತಿದ್ದದ್ದು ಯಾಕೆ ಎನ್ನುವುದನ್ನು ಎಲ್ಲರೆದಿರು

ಹೇಳಿದಳು. ಜನರೆಲ್ಲ. ಸೇರಿ ಮಾನಪ್ಬನನ್ನು ಹೊಡಿಯತೊಡಗಿದಾಗ ಕೊಂದವ ತಾನೇ ಎಂದಾತ ಒಪ್ಪಿಕೊಂಡ ಮೇಲೆ ತಾಲೂಕಿನ ಪೋಲಿಸರನ್ನು ಕರೆತರುವ ವ್ಯವಸ್ಥೆಯಾಯ್ತು.


ಊರ ಜನರೆಲ್ಲ ಖಾಜಾಬಿಯ ಸಮಯಪ್ರಜ್ಞೆ ಮತ್ತು ಧೈರ್ಯಗಳನ್ನು ಹೊಗಳಿದ್ದೇ ಹೊಗಳಿದ್ದು.


 


Rate this content
Log in

Similar kannada story from Crime