manjula g s

Abstract Inspirational Others

3.4  

manjula g s

Abstract Inspirational Others

ಜಿಜ್ಞಾಸೆ

ಜಿಜ್ಞಾಸೆ

3 mins
427


"'ರಾಮಣ್ಣಾ..... ಬೈಟು ಕಾಫಿ.........ಬೇಗ" ಎಂದು ಹೇಳಿ ಪ್ರತಿದಿನ ಹಾಜರಿ ಹಾಕಿ ಹೋಗುತ್ತಿದ್ದ ನಮ್ಮ ವಕೀಲ ಸಾಹೇಬರು ಏಕೋ ಇಂದು ಸಪ್ಪಗೆ ಬಂದು ತೆಪ್ಪಗೆ ಕೂತಿದ್ದಾರಲ್ಲ......! ಎಂದುಕೊಂಡು ಹೋಟೆಲ್ ರಾಮಣ್ಣನೇ ಅವರ ಬಳಿ ಹೋಗಿ......

"ನಮಸ್ಕಾರ ಸಾರ್...... ಏನು ಒಬ್ಬರೇ ಬಂದಿದ್ದೀರಿ, ನಂದೀಶ ಎಲ್ಲಿ? ಕಾಫಿಯನ್ನೂ ಆರ್ಡರ್ ಮಾಡ್ಲೇ ಇಲ್ಲವೇ.......!! ಮಾಮೂಲಿ ಬೈಟು ಕೊಡ್ಲೆ??" ಎಂದರು. 


ರಾಮಣ್ಣನವರ ಮಾತಿನಿಂದ ಎಚ್ಚರಗೊಂಡಂತೆ ನಂಜುಂಡಪ್ಪನವರು ತಮ್ಮ ಮೈ ಮೇಲಿದ್ದ ಕರಿಕೋಟನ್ನು ತೆಗೆದು ಕುರ್ಚಿಯ ನಿಲುವಿಗೆ ತಗುಲಿಸಿ, ಆಯ್ತೆಂಬಂತೆ ತಲೆಯಾಡಿಸಿದರು. 


ಸದಾ ಲವಲವಿಕೆಯಿಂದ ಇರುತ್ತಿದ್ದ ಲಾಯರ್ ನಂಜುಂಡಪ್ಪನವರು ಏನೋ ಇಂದು ಬೇಜಾರಿನಲ್ಲಿದ್ದಾರೆ..... ಯಾವುದೋ ಕೇಸ್ ವಿಷಯ ಚಿಂತಿಸುತ್ತಿರಬಹುದು! ಎಂದುಕೊಂಡು ಹೆಚ್ಚಿಗೇನೂ ಮಾತನಾಡದೆ ರಾಮಣ್ಣ ಕಾಫಿ ತರಲು ಹೋದರು. 


ಮೊದಲೆಲ್ಲಾ ಎಂತಹ ಭಾರಿ ಕೇಸ್ ಗಳನ್ನು ಸೋತರೂ, ಗೆದ್ದರೂ ಅವರ ಮುಖದ ಮೇಲಿನ ಮಂದಹಾಸ ಮಾಸುತ್ತಿರಲಿಲ್ಲ. ಅವರ ಮಾತಿನ ಗತ್ತು ಕಡಿಮೆಯಾಗುತ್ತಿರಲಿಲ್ಲ. 


ಒಂದು ಕಾಲಕ್ಕೆ ಪ್ರಸಿದ್ಧ ವಕೀಲರಾಗಿದ್ದ ಅವರಿಗೆ ಬಿಡುವೇ ಇರುತ್ತಿರಲಿಲ್ಲ. ಅದರಲ್ಲೂ 'ಜನಸೇವೆಯೇ ಜನಾರ್ಧನ ಸೇವೆ' ಎಂದು ನಂಬಿ ತಾವು ವಾದಿಸುತ್ತಿದ್ದ ಕೇಸ್ಗಳ ಪೂರ್ವಪರ ತಿಳಿದು, ಸತ್ಯ ಮಾರ್ಗದಲ್ಲಷ್ಟೇ ಅದನ್ನು ಮುನ್ನಡೆಸುವ ಅವರಿಗೆ "ಗಾಂಧಿ ಕೇಸ್ ಲಾಯರ್"" ಎಂಬ ಬಿರುದು ಜನ ನೀಡಿದ್ದರು..


ಅವರೂ ಅಷ್ಟೇ...... ಕಕ್ಷಿದಾರರು ಕೊಟ್ಟಷ್ಟೇ ಹಣ ಪಡೆದು ಸುಮ್ಮನಾಗುತ್ತಿದ್ದರು. ಎಂದೂ ಯಾರಿಗೂ ಹಣಕ್ಕಾಗಿ ಪೀಡಿಸಿದವರಲ್ಲ ಮತ್ತು ಸುಳ್ಳು ವಾದಗಳನ್ನು ಮಂಡಿಸಿದವರಲ್ಲ. 


ಇವರ ಈ ನಡೆ ಮೆಚ್ಚಿದ್ದ ನಂದೀಶ ಆಗತಾನೆ ಎಲ್ ಎಲ್ ಬಿ ವ್ಯಾಸಂಗ ಪೂರ್ಣಗೊಳಿಸಿ, ಇವರ ಮಾರ್ಗದರ್ಶನದಲ್ಲಿ ತನ್ನ ವೃತ್ತಿ ಪ್ರಾರಂಭಿಸಿದ್ದ. ನ್ಯಾಯ, ನಿಷ್ಠೆ, ಸತ್ಯ, ಧರ್ಮ, ಪ್ರಾಮಾಣಿಕತೆ ಎಂದೆಲ್ಲಾ ಬಿಸಿ ರಕ್ತದ ಆವೇಶದಲ್ಲಿ ಅವನೂ ಬೊಬ್ಬೆ ಹೊಡೆಯುತ್ತಿದ್ದರೆ, 'ಸಹವಾಸ ದೋಷದಿಂದ ಮತ್ತೊಬ್ಬ ಗಾಂಧಿ ಇವರೊಂದಿಗೆ ಹುಟ್ಟಿದ! 'ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. 


ತಾವು ತೆಗೆದುಕೊಂಡ ಕೇಸ್ ಗಳ ವಿಚಾರಣೆ ಮುಗಿದ ನಂತರ ತಮ್ಮವರೇ ಆಗಲಿ ಅಥವಾ ಎದುರು ದೂರುದಾರರಾಗಲಿ ಅಪರಾಧಿ ಎಂದು ಶಿಕ್ಷೆಯಾಗುವ ವೇಳೆ ಅವರ ಬಳಿ ನಂಜುಂಡಪ್ಪನವರೇ ಹೋಗಿ ಅವರಿಗೆ ನಾಲ್ಕು ಬುದ್ಧಿ ಮಾತುಗಳನ್ನು ಹೇಳಿ, ತಪ್ಪನ್ನು ಮನವರಿಕೆ ಮಾಡಿಕೊಟ್ಟು ಮುಂದೆ ಸರಿದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶಿಸಿ ಬರುತ್ತಿದ್ದರು. ಮೊದಲೇ ಸೋತು ಅವಮಾನಗೊಂಡಿದ್ದ ಇವರ ಎದುರಾಳಿ ವಕೀಲರು ಇವರ ಈ ನಡೆಯನ್ನು ಸಾಕಷ್ಟು ವಿರೋಧಿಸುತ್ತಿದ್ದರೂ ನಂಜುಂಡಪ್ಪನವರ ಈ ಚಾಳಿ ಮಾತ್ರ ನಿಂತಿರಲಿಲ್ಲ. 


ಅಂದ ಹಾಗೆ ಬರಿಯ ಕೋರ್ಟಿನಲ್ಲಿ ಮಾತ್ರವಲ್ಲ, ತಾವು ವಾಸಿಸುವ ಮನೆಯ ಸುತ್ತಮುತ್ತ ಅಥವಾ ದಾರಿಯಲ್ಲಿ ಎಲ್ಲಿಯಾದರೂ ಸರಿ ತಪ್ಪನ್ನು ಕಂಡರೆ ಇವರಿಗೆ ಸಹಿಸಲಾಗದು! ತಮ್ಮ ತನು ಮನ ಧನದ ಜೊತೆಗೆ ಅಮೂಲ್ಯ ಸಮಯವನ್ನು ಅಲ್ಲಿಯೇ ವಿನಿಯೋಗಿಸಿ ಅದನ್ನು ತಿದ್ದುವ ಕಾಯಕಕ್ಕೆ ಇಳಿದುಬಿಡುತ್ತಿದ್ದರು. ಇದೇ ನಿಟ್ಟಿನಲ್ಲಿ "ಖಂಡಿತವಾದಿ ಲೋಕ ವಿರೋಧಿ" ಎಂಬಂತೆ ಹಲವಾರು ವರ್ಷಗಳ ಕಾಲ ಸಾಗಿ ಬಂದ ನಂಜುಂಡಪ್ಪನವರಿಗೆ ಹೆಚ್ಚಿನ ಸ್ನೇಹಿತರು ಇರಲಿಲ್ಲ. ಅವರೂ ಸಹ ಯಾರೊಂದಿಗೂ ಹೆಚ್ಚು ಮುಕ್ತವಾಗಿ ಬೆರೆಯದೆ ಹೋಗಿದ್ದರು. 


ಆದರೂ ಅಂಗಡಿ ರಾಮಣ್ಣನೊಂದಿಗೆ ಯಾವುದೋ ಒಂದು ಅವಿನಾಭಾವ ಸಂಬಂಧ ಅವರದು. ತಾವು ವಕೀಲಿ ವೃತ್ತಿ ಪ್ರಾರಂಭಿಸಿದ ದಿನದಿಂದಲೂ ಕೋರ್ಟಿನ ಮುಂಭಾಗದಲ್ಲಿ ಇದ್ದ ಪುಟ್ಟ ಹೋಟೆಲ್ ರಾಮಣ್ಣನದು. ಸಣ್ಣಪುಟ್ಟ ಬದಲಾವಣೆಗಳು ತಮ್ಮಲ್ಲೂ ಹೋಟೆಲ್ ನಲ್ಲೂ ಆದಾಗ್ಯೂ ಇವರಿಬ್ಬರ ಲೋಕಾರಾಭಿರಾಮದ ಮಾತುಕತೆಗೆ ಎಂದೂ ತೊಡಕಾಗಿರಲಿಲ್ಲ. 


ರಾಮಣ್ಣ ಕಂಡಂತೆ ಅವರು ತಾವು ಕೇಸನ್ನು ಗೆದ್ದ ದಿನವೂ ಬೀಗುತ್ತಿರಲಿಲ್ಲ; ಸೋತ ದಿನವೂ ಕುಗ್ಗುತ್ತಿರಲಿಲ್ಲ! ಜೊತೆಗೆ ಅದೇ ಆತ್ಮೀಯತೆಯಿಂದ ನಡೆದದ್ದೆಲ್ಲವನ್ನು ರಾಮಣ್ಣನವರ ಬಳಿ ಹಂಚಿಕೊಳ್ಳುತ್ತಿದ್ದರು. ಅವರೊಂದಿಗೆ ಸಮಯ ಕಳೆಯುವುದು ರಾಮಣ್ಣನಿಗೂ ಖುಷಿಯೇ. ಆದರೆ ಈ ದಿನ ಅವರ ಮೌನ ರಾಮಣ್ಣನಿಗೆ ಸಹಿಸಲಾಗಿರಲಿಲ್ಲ! 


ಎರಡು ಲೋಟ ಕಾಫಿ ಹಿಡಿದು ಬಂದ ರಾಮಣ್ಣನವರು 'ಅರೆ.... ನಂದೀಶ ಇನ್ನೂ ಬರಲಿಲ್ಲವೇ?? ಶಿವನ ಹಿಂದೆ ನಂದಿಯಂತೆ ಬಾಲ ಅಲ್ಲಾಡಿಸಿ ಬರುತ್ತಿದ್ದ ಅವ ಎಲ್ಲಿ ಹೋದ...??' ಎಂದರು . 


'ಇಲ್ಲ ರಾಮಣ್ಣ...... ನಂದೀಶ ಬರಲಿಲ್ಲ! ಇನ್ನೊಂದು ಕಾಫಿ ನೀವೇ ಕುಡಿಯಿರಿ ನನ್ನೊಂದಿಗೆ ಕುಳಿತು!' ಎಂದರು. 


 'ಓಹೋ..... ಕೆಲಸದ ಮೇಲೆ ಎಲ್ಲಿಯಾದರೂ ಕಳಿಸಿರುವಿರೇ....?' ಎಂದರು ರಾಮಣ್ಣ. 


'ಇಲ್ಲ ರಾಮಣ್ಣ..... ನಾನು ಕಳಿಸಿಲ್ಲ, ಅವನೇ ಹೋದ! ಇಷ್ಟು ದಿನ ನಾನು ಗುರು; ಅವನು ಶಿಷ್ಯ ಎಂದು ತಿಳಿದಿದ್ದೆ! ಆದರೆ ಇಂದು ಅವನೇ ನನಗೆ ಗುರುವಿನಂತೆ ಬೋಧನೆ ಮಾಡಿ ನನ್ನ ಬಿಟ್ಟು ಹೊರಟುಹೋದ' ಎಂದರು ಗಂಭೀರವಾಗಿ. 


'ಅರೆ ಏನಾಯ್ತು?....... ಅವನ್ಯಾವ ಗುರು ನಿಮಗೆ'! ಎಂದರು ರಾಮಣ್ಣ. 


'ಹೌದು ರಾಮಣ್ಣ..... ನಾನಿನ್ನೂ ಹಳೆಯ ಕಾಲದಲ್ಲಿ ಇರುವೆನಂತೆ... ಸರಿಯಾಗಿ ವಕೀಲಿ ವೃತ್ತಿ ಮಾಡಲು, ಕೇಸುಗಳನ್ನು ಹಿಡಿಯಲು, ಸಾಕ್ಷ್ಯಗಳನ್ನು ಒದಗಿಸಲು ನನಗೆ ಬರುವುದಿಲ್ಲವಂತೆ! ಕಾಲಕ್ಕೆ ತಕ್ಕಂತೆ ನಾನು ಬದಲಾಗದ ಓಲ್ಡ್ ಮಾಡಲ್ಲಂತೆ...... ಹೀಗೆ ಇದ್ದರೆ ನಯಾ ಪೈಸೆ ಗಿಟ್ಟುವುದಿಲ್ಲವಂತೆ..... "ನ್ಯಾಯ ನೀತಿ ಧರ್ಮ ಎಂದು ಈ ಕಾಲದಲ್ಲಿ ನೋಡುತ್ತಾ ಹೋದರೆ ಯಾವ ಕೇಸನ್ನು ಗೆಲ್ಲಲು ಆಗುವುದಿಲ್ಲ...... ಅಷ್ಟೇ ಅಲ್ಲದೆ ಊರಿನ ಉಸಾಬರಿಗೆ ಹೋಗಿ ಲೋಕ ತಿದ್ದಲು ಸಮಯ ವ್ಯಯಿಸುವುದ ವ್ಯರ್ಥ" ಎಂದು ಅವನಿಗೆ ಅರ್ಥವಾಯಿತಂತೆ.....! ಈಗ ನನ್ನಂತೆ ಇರಲು ಅವನಿಗೆ ಆಗುವುದಿಲ್ಲವಂತೆ.... "ಊರು ಉಪಕಾರ ಅರಿಯದು ಹೆಣ ಶೃಂಗಾರ ಅರಿಯದು" ಎಂದು ಏನೇನೋ ಸೂಕ್ತಿಗಳನ್ನು ಬೇರೆ ಹೇಳಿದ!" ಎಂದು ಮೌನವಾದರು. 


 ನಂತರ ಇಬ್ಬರ ನಡುವಿನ ನಿಶಬ್ದ ಮೊದಲು ಅವರೇ ಭೇದಿಸಿ 'ಎಲ್ಲಕ್ಕಿಂತ ಮಿಗಿಲಾಗಿ ಪರರಿಗೆ ಬುದ್ಧಿ ಹೇಳುವ ನಿಮಗೆ ಯಾವ ನೈತಿಕತೆ ಇದೆ.....? ನಿಮ್ಮ ಮನೆಯ ಮಕ್ಕಳಿಗೆ ಸರಿಯಾದ ಬಾಳನ್ನು ಕೊಡದೆ, ಒಂದಷ್ಟು ಆಸ್ತಿ ಮಾಡಿಡದೆ, ಅವರ ಜೊತೆ ಸಮಯ ಕಳೆಯದೆ ನೀವು ಸಾಧಿಸಿರುವುದಾದರೂ ಏನು?? ಹೋಗಲಿ ನನಗೆ ಒಂದು ದಿನವಾದರೂ ಸರಿಯಾದ ಸಮಯಕ್ಕೆ ಹಣ ಸಹಾಯ ಮಾಡಿರುವಿರೇ.......?? ಎಂದು ನನ್ನನ್ನೇ ಪ್ರಶ್ನೆ ಮಾಡಿ ಹೋದ. ಇಷ್ಟು ವರ್ಷಗಳ ವಯಸ್ಸಾದ ನಿಮಗೆ ನಿಮ್ಮ ಮನೆಯವರ ಪ್ರೀತಿ ಮಮತೆ ಕಾಣುವುದೇ ಇಲ್ಲ...... ಬಿಡಿ ಸದಾ ಸಮಾಜ ಸೇವೆ ಅದೂ ಇದೂ ಎಂದು ಓಡಾಡುವ ನಿಮ್ಮೊಂದಿಗೆ ಇದ್ದರೆ ಮುಂದಿನ ನನ್ನ ಬಾಳು ಹೀಗೆಯೇ..... ನಿಮ್ಮಂತೆಯೇ ಆಗಿ ಬಿಡಬಹುದು! ಆದ್ದರಿಂದ ನಿಮ್ಮ ಸಹವಾಸ ಸಾಕು..... ಎಂದು ಹೇಳಿ ದೀರ್ಘ ದಂಡ ನಮಸ್ಕಾರ ಮಾಡಿ, ನನ್ನನ್ನು ಬಿಟ್ಟು ಹೊರಟುಹೋದ'!ಎಂದು ಹೇಳುತ್ತಿದ್ದ ನಂಜುಂಡಪ್ಪನವರ ಕಣ್ಣಂಚಲ್ಲಿ ನೀರು ಕಂಡಿತ್ತು; ಕಂಠ ಗದ್ಗದಿತವಾಗಿತ್ತು. 


'ಹೋಗಲಿ ಬಿಡಿ, ಅವನು ಹೋದರೆ ಇನ್ನೊಬ್ಬ ಸಿಗುವ; ನಿಮ್ಮ ಜೊತೆ ಇರುವ ಪುಣ್ಯ ಅವನಿಗಿಲ್ಲ' ಎಂದರು ರಾಮಣ್ಣ. 


ಅವನು ಹೇಳಿದ ಮೇಲೆ ನನಗೂ ಅನ್ನಿಸುತ್ತಿದೆ ನಾನು ಮಾಡುತ್ತಿರುವುದು ಪಾಪವೋ...... ಪುಣ್ಯವೋ ಈಗಲಾದರೂ ನಾನು ತಿದ್ದಿಕೊಳ್ಳಬೇಕೆ??ಆದರೂ ಇದು ನನ್ನ ಹುಟ್ಟು ಗುಣ...... ಬದಲಾಗುವುದಾದರೂ ಹೇಗೆ? ರಾಮಣ್ಣ'........ ಎಂದು ಹೇಳಿ ಎದ್ದರು. 


ಕುಡಿದ ಕಾಫಿ ಗಂಟಲಲ್ಲಿ ಪೊರೆ ಹೋಗಿ ಕೆಮ್ಮು ಬಂದಿತ್ತು..... ನಂಜುಂಡಪ್ಪನವರು ವಿಷ ಕುಡಿದ ವಿಷಕಂಠನಂತೆ ತಾವೇ ಸಾಕಿದ್ದ ಸರ್ಪ ಕಕ್ಕಿದ್ದ ವಿಷದ ಸತ್ಯವನ್ನು ಜೀರ್ಣಿಸಿಕೊಳ್ಳಲು ತಡಕಾಡುತ್ತಿದ್ದರು. 


ಇಬ್ಬರಲ್ಲೂ ಬದಲಾವಣೆಯ ಜಿಜ್ಞಾಸೆ!! 


ಅವರ ಪರಿಸ್ಥಿತಿ ಕಂಡ ರಾಮಣ್ಣನವರಿಗೆ.... 

"ಲೋಕ ತಿದ್ದುವ ಕೆಲಸ ಅದು ಸರ್ಪ ಸಹವಾಸ, ಹೆಡೆಯುತ್ತಿ ಯಾವಾಗ ಯಾರ ಕಚ್ಚುವುದೋ.....

ಬಿಡು ಜನರ ಅವರಂತೆ, ತಿದ್ದಿಕೋ ನೀ ನಿನ್ನ 

ತಿದ್ದುವಿಕೆ ಬಲು ಕಠಿಣ- ಮುದ್ದು ರಾಮ!"

ಎಂಬ ಮುದ್ದು ರಾಮನ ಮುಕ್ತಕ ನೆನಪಾಯಿತು! 


Rate this content
Log in

Similar kannada story from Abstract