JAISHREE HALLUR

Drama Tragedy Others

4  

JAISHREE HALLUR

Drama Tragedy Others

ಹೆಣ್ಣೆಂದರೆ ತಾತ್ಸಾರವೇಕೆ?.. ಭಾಗ-

ಹೆಣ್ಣೆಂದರೆ ತಾತ್ಸಾರವೇಕೆ?.. ಭಾಗ-

3 mins
344



   ಹೆಣ್ಣು ಮಕ್ಕಳಿಗೆ ಯಾವಾಗಲೂ ತಾಯಿ ಹೇಳುವ ಮಾತು ಪದೇ ಪದೇ ಇದೇನೆ.." ನೋಡೆ!, ಬೆಳೆದು ದೊಡ್ಡವಳಾಗಿದ್ದೀಯೆ. ಸ್ವಲ್ಪ ತಗ್ಗಿ ಬಗ್ಗಿ ನಡಿಯೋದು ಕಲಿ. ನಾಳೆ ದಿವಸ ಹೋದ ಮನೇಲಿ ಹೀಗೆ ಆಡಿದರೆ, ನಮ್ಮ ಮಾನ ಮರ್ಯಾದೆ ಹೋಗುತ್ತಷ್ಟೇ.." ಅಂತ ಬೈಯ್ಯೋದು ಸರ್ವೇ ಸಾಮಾನ್ಯ. ನಾನೂ ಹೀಗೇ ಮಗಳಿಗೊಮ್ಮೆ ಗದರಿದಾಗ..

" ಅಂತಾ ಮನೇಗೆ ನಾ ಹೋದರೆ ಕೇಳು"  ಅನ್ನೋದಾ?


 ಹೌದು, ನಾ ಮಾಡಿದ್ದಾದರೂ ಏನು? ನನ್ನಮ್ಮ ಕಲಿಸಿದ್ದನ್ನೇ ಪುನರಾವರ್ಥನೆ ಮಾಡಿ ಹೇಳಿದ್ದು ನನಗೇ ಸರಿ ಎನಿಸಲಿಲ್ಲ. ನಾವು ಹಿರಿಯರು ಬೆಳೆದು ಬಂದ ದಾರಿ, ಪರಿಸ್ತಿತಿ ಬೇರೆಯದೇ ಇತ್ತು. ಕಡುಬಡತನ, ತಿಳುವಳಿಕೆಯಿಲ್ಲದ ತಂದೆತಾಯಿಗಳು, ಸಂಸಾರ ತಾಪತ್ರಯಗಳು..ಇತ್ಯಾದಿಗಳ ಮಧ್ಯೆ ಏನೇ ಕಷ್ಟಕೋಟಲೆಗಳು ಬಂದರೂ ಸಾವರಿಸಿಕೊಂಡು ಹೊಂದಿಕೊಂಡು ಹೋಗುವ ತಾಳ್ಮೆಯನ್ನೆ ಕಲಿಸಿದ್ದರು. ಹಾಗಾಗಿ, ನಾವು ನಮ್ಮ ಸುತ್ತಮುತ್ತಲಿನ ಜನ ಸುಖವಾಗಿದ್ದಾರೆ. ಇದರರ್ಥ ನಾವು ಸುಖವಾಗಿದ್ದೀವಿ ಎಂದಲ್ಲ. ನಮ್ಮಿಂದ ಎಲ್ಲರೂ ಸಂತೋಷವಾಗಿದ್ದಾರೆ. ಹಾಗಾಗಿ, ನಾವೂ ಸಂತೋಷವಾಗಿರಲೇ ಬೇಕು. ಅಲ್ವಾ..?


ನನ್ನ ಗೆಳತಿ ಅಪರ್ಣಾಳ ಕತೆ ಬೇರೆಯೇ ಇತ್ತು. ಗಂಡ ದೊಡ್ಡ ಬಿಜಿನೆಸ್ ಮ್ಯಾನ್, ಐಶಾರಾಂ ಜೀವನ, ತವರುಮನೆಯಲ್ಲಿ ಅಷ್ಟು ಶ್ರೀಮಂತರಲ್ಲದಿದ್ದರೂ ಚಂದ ಮದುವೆ ಮದುವೆ ಮಾಡಿಕೊಟ್ಟಿದ್ದರು. ಎರಡೂ ಸಂಸಾರಗಳು ಸಂತಸದ ಹೊನಲಿನಲ್ಲಿ ತೇಲುವಂತಿದ್ದವು.

ಒಂದು ದಿನ, ಅವಳ ಗಂಡನಿಗೆ ಲಂಡನ್ ಗೆ ಹೋಗುವ ಪ್ರಮೇಯ ಬರುತ್ತದೆ. ಆಫೀಸಿನ ಮುಖ್ಯ ಕೆಲಸದ ನಿಮಿತ್ತವಾಗಿ ಅನಿವಾರ್ಯ ಪರಿಸ್ತಿತಿ. ಮೊದಮೊದಲು ತಾನೊಬ್ಬನೇ ಹೋಗುವ ಇರಾದೆಯಲ್ಲಿ, ತನ್ನ ಕೊಲೀಗ್ಸ್ ಗೆ ಸಂತಸಕೂಟವೊಂದನ್ನು ಏರ್ಪಡಿಸಿದ..ತನ್ನದೆ ಮನೆಯಲ್ಲಿ ಸಂಬ್ರಮದ ಆಚರಣೆ ಸಜ್ಜಾಯಿತು. ಸುಮಾರು ಇಪ್ಪತ್ತು ಸಹೋದ್ಯೋಗಿಗಳನ್ನು ಆಮಂತ್ರಿಸಲಾಯಿತು. ಆ ಸಂಜೆ ಖುಷಿಯ ಸಮಯ. ಎಲ್ಲ ಅಥಿತಿಗಳೂ ತಿಂದು ಉಂಡು ಕುಣಿದು ಕುಪ್ಪಳಿಸುವಾಗ, ಅಪರ್ಣಾಳ ಗಂಡನಿಗೆ ಕಂಪನೀಕೊಡುತ್ತ ಪೆಗ್ ಏರಿಸಿ, ಕೇಳಿ ಬಂದ ಮಾತು ಕಿವಿಗೆ ಬಿದ್ದವು.. 

" ನೀನು ನಿಜಕ್ಕೂ ಲಂಡನ್ ಗೆ ಹೋಗಬೇಕಾಗಿರಲಿಲ್ಲ. ಅದನ್ನು ಬಾಸ್ ಬೇಕೆಂತಲೇ ನಿನಗೆ ಒಪ್ಪಿಸಿ, ತಾನು ಮತ್ತೊಂದು ಮಹತ್ತರವಾದ ಪ್ರೋಜೆಕ್ಟ್ ಒಂದಕ್ಕೆ ಸಹಿಹಾಕಿದ್ದಾರೆ. ನೀನಿದ್ದರೆ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಗುಮಾನಿ.."

ಎಂದವನ ಕಡೆ ತೀಕ್ಷವಾಗಿ ನೋಡಿದ..

ನಿಜ ಎನ್ನುವಂತೆ ತಲೆಯಾಡಿಸಿದ..

ಅಪರ್ಣಾಳ ಗಂಡ ಬಾಸ್ ಮೇಲೆ ಬಹಳ ನಂಬಿಕೆಯಿಟ್ಟಿದ್ದರಿಂದ ಈತನ ಮಾತನ್ನು ನಂಬದಾದ‌ . 

" ನಿಮಗೆ ನಾನು ಲಂಡನ್ ಹೋಗೋದು ಇಷ್ಟವಿಲ್ಲಾಂತ ಅನಿಸುತ್ತೆ. ಅದಕ್ಕಾಗಿ ನನ್ನ ಹಾಗೂ ಬಾಸ್ ಮಧ್ಯ ವಿಷ ಬೆರೆಸುವ ಕೆಲಸ ಬೇಡ ಪ್ಲೀಜ್" ಎಂದಾಗ, 

" ಇಲ್ಲ ಗುರು, ನಾ ಹೇಳೋದು ನಿಜ.." ಎಂದಾಗ ಕೋಪಗೊಂಡು ಆತನ ಅಂಗಿಪಟ್ಟಿ ಹಿಡಿದು ಯಾವ ಆಧಾರದ ಮೇಲೆ ಹೀಗೆ ಒಬ್ಬರ ಮೇಲೆ ಆರೋಪ ಹೊರಿಸ್ತಿದೀರಿ ನೀವೆಲ್ಲಾ..? ಛೆ! ನನ್ನ ಸಹೋದ್ಯೋಗಿಗಳು ಎಂದು ಹೇಳಿಕೊಳ್ಳೋಕೂ ನಾಚಿಕೆಯಾಗುತ್ತದೆ ಎಂದು ಕಂಠವೇರಿಸಿ ನುಡಿದಾಗ, ಅಲ್ಲಿ ನೆರೆದ ಇತರರ ನೋಟ ಇತ್ತ ಹರಿದಿತ್ತು. ಅಪರ್ಣಾ ಅದೆಲ್ಲಿಂದಲೋ ಓಡೋಡಿ ಬಂದಳು..ಗಂಡನನ್ನು ಏನೂ ಆವಾಂತರವಾಗದಂತೆ ಬೇರೆಡೆಗೆ ಕರೆದೊಯ್ಯಲು ಕೈಹಿಡಿದು ಎಳೆದಳು...

" ಬನ್ನಿ, ಎಲ್ಲರೂ ಕಾಯ್ತಿದ್ದಾರೆ,,"

ಅವಳ ಕಡೆ ಗಮನ ಕೊಡದೇ ಒಂದೇ ಸಮನೆ ಕೂಗಾಡಿದ್ದ. ಎದುರಿಗಿನ ಆಸಾಮಿಗೂ ಕೊಂಚ ತಲೆಗೇರಿತ್ತು. ಇಬ್ಬರ ಮಾರಾಮಾರಿಯನ್ನು ತಡೆಯಲು ಮಧ್ಯೆ ನುಗ್ಗಿದ ಅಪರ್ಣಾಳನ್ನು ಸುಮ್ಮನಾಗಿಸಲಾರದೇ ಅವಳ ಕೆನ್ನೆಗೊಂದು ರಪ್ಪನೆ ಬಾರಿಸಿದ ಗಂಡನನ್ನು ಆ ಒಂದು ಕ್ಷಣ ಅವಾಕ್ಕಾಗಿ ನೋಡಿದಳು...ತಲೆಸುತ್ತು ಬಂದಂತಾಗಿತ್ತು. ಬಂದ ಅಥಿತಿಗಳೆದುರು ತನಗೆ ಅವಮಾನವಾಗಿತ್ತು..ಎಲ್ಲರೂ ಸ್ತಬ್ಧರಾಗಿ ಹೋದರು. 

ಸಂತಸಕೂಟ ಶೋಕತಪ್ತವಾಯಿತು. ಅವಮಾನವನ್ನು ತಾಳದೇ ಅಪರ್ಣಾ ಒಳಗೋಡಿದಳು. ಬಂದವರೆಲ್ಲಾ ನಿಧಾನವಾಗಿ ತಮ್ಮ ಮನೆಗಳಿಗೆ ತೆರಳಿದ್ದರು. 

ರಾತ್ರಿಯಿಡಿ ಮೌನ ಛಾಯೆ ಇಬ್ಬರಲ್ಲೂ...

ಗಂಡನ ಲಂಡನ್ ಪ್ರೋಗ್ರಾಮ್ ಒಂದು ಛಾಲೆಂಜಾಯಿತು. ಹೆಂಡತಿಯ ನೋವು ಅವನ ಲೆಕ್ಕಕ್ಕಿರಲಿಲ್ಲ. ಏನೂ ಆಗೇ ಇಲ್ಲವೆಂಬಂತೆ ಮಲಗಿದ್ದವನ ನೋಡಿದ ಅಪರ್ಣಾಳ ಮನ ನೊಂದು ಹೋಯಿತು. ಇಷ್ಟೇನಾ ಬದುಕು? ಇದಕ್ಕೇನಾ ನಾನು ಹಗಲಿರುಳೂ ಪ್ರೀತಿಸಿದ್ದು? ಅತ್ತೆಯವರು ಜೊತೆಯಲ್ಲಿದ್ದು, ಅವರ ಆರೋಗ್ಯ , ಆರೈಕೆ ನೋಡಿಕೊಳ್ಳುವ ನಡುವೆ, ಗಂಡನ ಜವಾಬ್ಧಾರಿಯುತ ಕೆಲಸದಲ್ಲಿ ತಾನದೆಷ್ಟು ದುಡಿದಿದ್ದಳು. ಹಗಳಿರುಳೂ ಅದೇ ಗುಂಗಿನಲ್ಲಿ. ಬೆಳಗಿನ ಜಾವದಲ್ಲೇ ಎದ್ದು ಅಡಿಗೆ ತಿಂಡಿ, ಡಬ್ಬಿ, ಮನೆಗೆಲಸ, ಅತ್ತೆಯ ಚಾಕರಿ, ಇತ್ಯಾದಿಗಳ ನಡುವೆ ತನ್ನ ಬಗ್ಗೆ ಯೋಚಿಸುವವರೇ ಇಲ್ಲವೇ? ತನ್ನ ತಪ್ಪೇನೂ ಇಲ್ಲದವಳ ಮೇಲೆ ಹಲ್ಲೆ ನಡೆದಿದ್ದರೂ ಯಾರಿಗೂ ಅದರ ಸುಳಿವೇ ಇಲ್ಲದಂತೆ ಆರಾಮಾಗಿದ್ದರು. ಅಪರ್ಣಾ ಮಾತ್ರ ಮೌನಿಯಾದಳು. ಎರಡು ದಿನ ಕಳೆದರೂ ಮಾತಿಲ್ಲ. ಇದು ಅತ್ತೆಯ ಕಣ್ಣಿಗೂ ಗೋಚರಿಸಿತು. ಹತ್ತಿರ ಕರೆದು ಕೇಳಿದರು..

" ಮಾತಾಡಿದ್ನಾ..ಅವ್ನು?"

ಅವಳ ಮೌನವೇ ಉತ್ತರವಾಗಿತ್ತು..

ಮೂರು ದಿನ ಕಳೀತು..ಆಗಲೂ ಮೌನ. 

ಗಂಡನಿಗೇ ಸಾಕಾಯಿತು. "ಏನಾಯಿತು ಅಂತ ಇಷ್ಟೊಂದು ದೊಡ್ಡದು ಮಾಡ್ತಿದ್ದೀಯಾ ವಿಷಯಾನ?" ಕೇಳಿದವನ ಮುಖವನ್ನೇ ನಿರ್ಲಿಪ್ತ ಭಾವನೆಯಿಂದ ನೋಡಿದಳೇ ಹೊರತು ಮಾತು ಬರಲಿಲ್ಲ. ಅವಳ ಮನ ರೋಸಿಹೋಗಿತ್ತು..ತಾನೇನು ಮಹಾ ತಪ್ಪು ಮಾಡಿದೆನೆಂದು ಇವಳು ಕೋಪಿಸಿಕೊಂಡು ಮೌನವಾಗಿರಬೇಕು? ಇಷ್ಟಕ್ಕೂ ಅವಳೇ ಬಂದು ಮೂಗು ತೂರಿಸಿದ್ದಲ್ಲವಾ ನಮ್ಮ ಜಗಳದಲ್ಲಿ? ಕೋಪದಲ್ಲಿ ಒಂದೇಟು ಹೊಡೆದದ್ದು ನಿಜ. ಅದೇ ದೊಡ್ಡದೇನಲ್ಲ. ಹೀಗೆ ದಿನಗಟ್ಟಲೇ ಮಾತುಬಿಡೋದು ಯಾವ ನ್ಯಾಯ..? ಎಂಬ ತರ್ಕ ಅವನದಾದರೆ, ಇವಳ ಮನಸಲ್ಲಿ ಬೇರೆಯದೇ ದ್ವಂದ್ವ. 

ಏನೂ ತಪ್ಪೇ ಇಲ್ಲದೇ ನಾನು ಅವಮಾನಿತಳಾಗುವುದು ಎಷ್ಟು ಸರಿ? ಬಂದವರೆದುರು, ಅಷ್ಟು ಅಪಮಾನವಾಗಿ ಹೋಯಿತಲ್ಲಾ..ಅದನ್ನು ಮರಳಿ ತರಲು ಸಾಧ್ಯವಾ..? ನಮ್ಮ ಜಗಳ ಬೇರೆಯವರಿಗೆ ನಗೆಪಾಟಲಾಗಿಲ್ಲವಾ? ಈ ರೀತಿ ಕೈಯೆತ್ತುವುದಾದರೆ, ನಮ್ಮಿಬ್ಬರ ಮಧ್ಯೆ ಪ್ರೀತಿ ಹುಟ್ಟುವುದಾದರೂ ಹೇಗೆ? ಛೆ! ನನಗೇ ಅಸಹ್ಯವಾಗುತ್ತಿದೆ...ಎನ್ನುವ ಒಳಮನಸ್ಸು ಅವಳದು...

....


ಅತ್ತೆಗೆ ಸಕ್ಕರೆ ಕಾಯಿಲೆಗೆ ಬೆಳಗಿನ ಮಾತ್ರೆಗಳನ್ನು ಕೊಡುತ್ತಾ, " ಅಮ್ಮಾ, ನಾನು ತವರಿಗೆ ಹೋಗುವ ಮನಸಾಗಿದೆ. ಒಂದಷ್ಟು ದಿನ ಇದ್ದು ಬರ್ತೀನಿ.." ತಲೆತಗ್ಗಿಸಿಯೇ ನುಡಿದಿದ್ದಳು...ಅವಳ ಮುಖವನ್ನೇ ದಿಟ್ಟಿಸಿದ ಅತ್ತೆಗೆ ಏನು ಹೇಳಲೂ ತೋಚದೆ, "ನಿನಗೆ ಸಮಾಧಾನವಾಗುವಂತಿದ್ದರೆ ಹೋಗಿ ಬಾ..ಆದರೆ, ಇದನ್ನೇ ದೊಡ್ಡದು ಮಾಡಿಕೊಂಡು ಜೀವನ ಹಾಳು ಮಾಡಿಕೋಬೇಡಮ್ಮಾ.." ಅದೇ ಬುದ್ದಿವಾದ..

ರಾತ್ರಿ ಗಂಡನಲ್ಲೂ ಕೋರಿಕೆಯಿಟ್ಟಳು..ಅವನು ಬೇಡವೆಂದ. ಇವಳಿಲ್ಲದೇ ಮನೆ ಮನೆಯಾಗಿರೋಲ್ಲವೆಂದು ಗೊತ್ತು. ಅಮ್ಮನ ಆರೈಕೆ ಮಾಡಲಾಗೋಲ್ಲ. ತಾನು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗುವುದು ಕಷ್ಟವಾದೀತೆಂಬ ಆತಂಕ. ಅವಳದು ಒಂದೇ ಹಟ. 

ಬೆಳಿಗ್ಗೆ ಟ್ಯಾಕ್ಸೀ ಬಂತು. ಸೂಟ್ಕೇಸ್ ಪ್ಯಾಕ್ ಮಾಡಿ ರೆಡಿ ಆಗಿದ್ದಳು. ಅವನು ಅವಳನ್ನು ಅಡ್ಡಗಟ್ಟಿ ನಿಂತ. 

" ಇನ್ನೊಮ್ಮೆ ಯೋಚಿಸು. ಹೋಗುವುದೇ ಕೊನೆಯ ತೀರ್ಮಾನವಲ್ಲ" 

" ನನಗೆ ಇಲ್ಲಿರಲು ಉಸಿರುಗಟ್ಟುವ ವಾತಾವರಣವಿದೆ. ಅಮ್ಮನ ಜೊತೆ ಕೊಂಚ ದಿನ ಕಳೆಯುವಾಸೆ" 

ಎಂದಳು..

" ಹೋಗೋದಾದರೆ ಹೋಗು, ಮತ್ತೆ ನಾ ಕರೆಯೋಲ್ಲ. ಕರೆಯಲು ಬರೋದೂ ಇಲ್ಲಾ..ತಿಳೀತಾ..?

ಆಕ್ರೋಶದ ನುಡಿಗೆ, 

" ಅದರ ಅವಶ್ಯಕತೆಯಿರೋಲ್ಲ. ಒಂದು ವೇಳೆ ಬಂದರೂ ಅಮ್ಮನಿಗೋಸ್ಕರ ಬರ್ತೀನಷ್ಟೇ"

"ಏನೂ ಬೇಕಿಲ್ಲ, ನಾನೇ ಎಲ್ಲಾ ನಿಭಾಯಿಸ್ತೀನಿ"

ಎನ್ನುತ್ತಾ ಇವಳಿಗೂ ಮುಂಚೇನೆ ರೆಡಿಯಾಗಿ ಆಫೀಸಿಗೆ ಹೊರಟುಹೋದವನನ್ನು ತಿರಸ್ಕಾರದಿಂದೊಮ್ಮೆ ನೋಡಿದಳು. ಇಂತವನ ಜೊತೆ ತಾನು ಹೇಗೆ ಬದುಕು ಸವೆಸಬೇಕಿತ್ತು? ಒಂದಿಷ್ಟೂ ಸಂಸ್ಕಾರವಿಲ್ಲದ ದರ್ಪದ ಮನೋಭಾವ..ತನಗೆ ಸಹಿಸಲಸದಳವೆಂದು ಅರಿತಳು..


ತೌರುಮನೆಯತ್ತ ಗಾಡಿ ಚಲಿಸಿತ್ತು...


ಅಪರ್ಣಾ ಮಾಡಿದ್ದು ಸರೀನಾ? ಇಲ್ಲಾ ಹಿರಿಯರು ಹೇಳುವಂತೆ ಸರಿದೂಗಿಸಿಕೊಂಡು ಬದುಕು ಸಾಗಿಸಬೇಕಿತ್ತಾ? ಗಂಡ ಏನೇ ಮಾಡಿದರೂ ಸರಿ. ಹೆಂಡತಿ ಸಹಿಸಿಕೋ ಬೇಕಾ..? ಅಥವಾ , ಗಂಡಸರಿಗೆ ಹೆಂಗಸರ ಮನಸು ಅರ್ಥೈಸಿಕೊಳ್ಳುವ ಸಾಮರ್ಥ ಇರೋಲ್ವಾ? ಅಥವಾ, ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗದೇ ಕಾಲಾಯ ತಸ್ಮೈ ನಮಃ ಎನ್ನುವಂತೆ ಕಾಲಕ್ರಮೇಣ ಹೆಂಡತಿಯರೇ ಸುಮ್ಮನಾಗಿಬಿಡುತ್ತಾರೆ..ಎಂಬ ಉದಾತ್ತ ದೋರಣೆನಾ..? 

ಅಪರ್ಣಾ ಹಾಗಿರಲಿಲ್ಲ. ಅವಳಿಗೆ ಸರಿಯೆನಿಸದ ವಿಷಯಗಳನ್ನು ಹಾಗೇ ಸಹಿಸಿಕೊಳ್ಳುವ ಜಾಯಮಾನದವಳಾಗಿರಲಿಲ್ಲ..

ಮುಂದೇನಾಗುತ್ತದೆಯೆಂದು ನಾಳೆ ಹೇಳುತ್ತೇನೆ...

...

ಮುಂದುವರಿಯುವುದು...



Rate this content
Log in

Similar kannada story from Drama