Chethana Bhargav

Classics Inspirational Others

4.5  

Chethana Bhargav

Classics Inspirational Others

ಧರ್ಮರಾಯನ ಸ್ವಗತ

ಧರ್ಮರಾಯನ ಸ್ವಗತ

2 mins
272


ಆ ಕ್ಷಣ ಬಂದೇ ಬಿಟ್ಟಿತು . ನಾವು ಪಂಚ ಪಾಂಡವರು ದ್ರೌಪದಿಯ ಸಮೇತ ನಾರುಮಡಿಯುಟ್ಟು ಹಿಮವತ್ಪರ್ವತಕ್ಕೆ ಹೊರಡುವ ಸಮಯ . ಕೃಷ್ಣನು ನಮ್ಮನ್ನು ಅಗಲಿದಾಗಲೇ ನಾವು ಇದನ್ನು ಮಾಡಬೇಕಾಗಿತ್ತು .ಅಂತೂ ನಿರ್ಧಾರ ಮಾಡಿ ಹೊರಟಾಯಿತು . ಕಠಿಣ ಹಾದಿ . ಪರ್ವತವನ್ನು ಕ್ರಮಿಸುವ ಆಯಾಸ ಬೇರೆ . ಬದರಿನಾಥ ಪರ್ವತ ಸಾಲು ದಾಟುವಾಗಲೇ ಕುಸಿದುಹೋಗುವಷ್ಟು ಆಯಾಸ . ನನಗೆ ಅದೇನೂ ನಿರ್ಮೋಹದ ವ್ಯಸನ ತಗುಲಿತ್ತು . ಮೊದಲಿಗೆ ದ್ರೌಪದಿಯು ಕುಸಿದಳು , ಹೆಣ್ಣಾಗಿ ಹುಟ್ಟಿ ಎಷ್ಟೆಲ್ಲಾ ಕಷ್ಟ ಅವಮಾನ ಮೆಟ್ಟಿ ನಿಂತಿದ್ದ ಆಕೆ ಪರ್ವತದ ಕಿಬ್ಬಿಯೊಳಗೆ ಕುಸಿದು ಹೋದಳು , ನೋವುಂಡ ಶರೀರ ಈ ಪರ್ವತದ ಏರು ತ್ರಾಸದ ಪ್ರಯಾಣ ತಾಳಲಿಲ್ಲವೋ ಅಥವಾ ಕರ್ಮದ ಗಂಟು ಕಳೆಯುತ್ತಾ ದೇಹ ಕಳಚುವ ಇಳಿಜಾರಿನ ಹಾದಿಯಲ್ಲಿ ಬಿದ್ದು ಮಣ್ಣಾದಳೋ ಈ ವ್ಯಾಖ್ಯಾನ ಕರ್ಮದ ಫಲಾನುಫಲದ ಜಿಜ್ಞಾಸೆಗೆ ಬಿಟ್ಟದ್ದು . ಈ ಭಾರಕ್ಕೆ ಕುಸಿದು ಬೀಳುವ ಸರದಿ ಈಗ ನನ್ನ ತಮ್ಮಂದಿರದು . ಎಲ್ಲವನ್ನೂ ತಿಳಿದಿದ್ದ ಸಹದೇವ , ಶೂರ ನಕುಲ , ಉಗ್ರ ಪ್ರತಾಪಿ ಅರ್ಜುನ , ಕೊನೆಗೆ ಬಲ ಭೀಮನೂ ಬೆಟ್ಟದ ಏರಿಯನ್ನು ಕ್ರಮಿಸಲಾಗದೆ ಕುಸಿದುಹೋದರು . ಆದರೆ ಆಶ್ಚರ್ಯವೆಂದರೆ ಊರಿನಿಂದ ಹಿಂಬಾಲಿಸಿಕೊಂಡು ಬಂದ ಒಂದು ನಾಯಿಯ ಬಿಟ್ಟು . ಅದಾವುದೋ ಮಾಯೆ ನನ್ನನ್ನು ನಡೆಸಿಕೊಂಡು ಹೋಗುತ್ತಲೇ ಇದೆ ತಮ್ಮಂದಿರ ಅಗಲಿಕೆಯ ಮಡದಿಯ ಮರಣಕ್ಕೂ ಶೋಕಿಸದಷ್ಟು . ಅಥವಾ ಕವಿದ ಮಾಯೆ ಸರಿದ ಪ್ರಭಾವವೋ ಆ ಕೃಷ್ಣನೇ ಬಲ್ಲ . ಅದೋ ಅಲ್ಲಿ ಇಂದ್ರ ರಥ ಸಮೇತನಾಗಿ ಸ್ವರ್ಗಕ್ಕೆ ಕರೆಯುತ್ತಿದ್ದಾನೆ , ಆದರೆ ಈ ನಾಯಿಯ ಹೊರತು ನನಗೆ ಹೋಗಲು ಮನಸಿಲ್ಲ . ಈ ಏಕಾಂಗಿ ಪಯಣದಲ್ಲಿ ಮನೆಯವರೆಲ್ಲಾ ಮರೆಯಾದರೂ ನನ್ನ ಜೊತೆಗಿದ್ದದು ಇದೊಂದೇ , ಇದು ಮಮಕಾರದ ಪ್ರಶ್ನೆಯಲ್ಲ . ಸಹ ಪ್ರಯಾಣಿಕನಿಗೆ ಕೊಡುವ ಸೌಜನ್ಯ , ಗೌರವ , ಒಂದು ತೆರನಾದ ನ್ಯಾಯವೇ , ನಂತರ ನಡೆದದ್ದೇ ಬೇರೆ , ನಾಯಿಯ ಜಾಗದಲ್ಲಿ ಯಮಧರ್ಮ ನಿಂತಿದ್ದಾನೆ , ಇಂದ್ರ ನಗುತ್ತಿದ್ದಾನೆ , ಇದು ನನ್ನ ಧರ್ಮನಿಷ್ಠತೆಯ ಪರೀಕ್ಷೆಯಂತೆ !. ದೊಡ್ಡವರು ಪರೀಕ್ಷೆ ಮಾಡುತ್ತಾರೆ ...

ಆದರೆ ನನಗೆ ಅರ್ಥವಾದ ಧರ್ಮದ ಹರಹೆ ಬೇರೆ ,, ನಾನು ನನ್ನವರೆಂಬ ಮಮಕಾರವಿಲ್ಲದೆಯೇ ಎಲ್ಲರೂ ಸುಖವಾಗಿರಲಿ ಎಂಬ ಆರ್ಧ್ರತೆಯೇ ಧರ್ಮದ ಉಗಮ . ಯುದ್ಧವಾಗದೆ ಎಲ್ಲರೂ ಚೆನ್ನಾಗಿರಲಿ ಎಂದು ನಾನು ಆಸೆ ಪಟ್ಟಿದ್ದು ಅದಕ್ಕೆ . ಅದರಲ್ಲಿ ಮಮಕಾರವಿದ್ದಿತ್ತು . ಆದರೆ ಇಂದು ಜೊತೆ ಬಂದ ನಾಯಿಯ ವಿಚಾರ ಹಾಗಲ್ಲ . ಇದು ಮಮಕಾರವನ್ನು ಮೀರಿದ್ದು . ಅದಕ್ಕೆ ಇರಬೇಕು ಅವರು ನನ್ನನ್ನು ಧರ್ಮ ಪರೀಕ್ಷೆಯಲ್ಲಿ ತೇರ್ಗಡೆಗೊಳಿಸಿದ್ದು .. 

ದಯೆಯೇ ಧರ್ಮದ ಮೂಲ .. ಧರ್ಮದ ಪಾಲನೆಯೇ ಮಾನವನ ನಿಜಬಲ 

ತಮ್ಮಂದಿರನ್ನು ನೋಡುವ ಬಯಕೆಯಾಗುತ್ತಿದೆ . ಸಶರೀರವಾಗಿ ಸ್ವರ್ಗಕ್ಕೆ ಏರುವ ಅವಕಾಶ .. ಶರೀರ ಇರುವಷ್ಟು ಬಂಧನ ಸಹಜ ,,ಇದೆಲ್ಲವನ್ನು ಮೀರುವ ಕೃಷ್ಣ ಸಾಯುಜ್ಯ ಸೇರುವ ಪರಿ ಎಂತು ..ಅದು ಮತ್ತೊಂದು ಭಾರತದ ಕಥೆಯೇ ..



Rate this content
Log in

Similar kannada story from Classics