Vijaya Bharathi

Abstract Inspirational Others

3  

Vijaya Bharathi

Abstract Inspirational Others

ಅಪ್ಪನೊಡನೆ ಒಂದು ಕ್ಷಣ

ಅಪ್ಪನೊಡನೆ ಒಂದು ಕ್ಷಣ

5 mins
217


ತಂದೆ (ಸ್ಟೋರಿಮಿರರ್)


ಅಪ್ಪನೊಡನೆ ಒಂದು ಕ್ಷಣ 


ಇಂದು ಮನೆಯಲ್ಲಿ ನನ್ನ ಮದುವೆಯ ಸಂಭ್ರಮ. ಮದುವೆಯ ಹಿಂದಿನ ದಿನದ ಶಾಸ್ತ್ರಗಳೆಲ್ಲವೂ ಸಾಂಗವಾಗಿ ನಡೆಯುತ್ತಿವೆ. ಮದುಮಗಳಾಗಿ ಹಸೆಮಣೆಯಲ್ಲಿ ಕುಳಿತಿದ್ದ ನನಗೆ ದುಃಖ ಉಮ್ಮಳಿಸಿಬರುತ್ತಿದೆ. ಯಾಕೋ ನನಗೆ ಏನೂ ಬೇಡವೆನಿಸುತ್ತಿದೆ. ದೂರದಲ್ಲೆಲ್ಲೋ ನಿಂತಿದ್ದ ನನ್ನ ಅಮ್ಮನನ್ನು ನೋಡಿದಾಗ ಅವಳ ಬಾಡಿದ ಮುಖವನ್ನು ಕಂಡು ನನ್ನ ದುಃಖ ಹೆಚ್ಚಾಗಿ,ಹಸೆಮಣೆಯಲ್ಲಿ ಇನ್ನೊಂದು ಕ್ಷಣವೂ ಕುಳಿತುಕೊಳ್ಳಲಾಗದೆ, ಸೀದಾ ನನ್ನ ಅಪ್ಪನ ರೂಮಿಗೆ ಓಡಿಹೋಗಿ ಒಳಗಿನಿಂದ ಬೋಲ್ಟ್ ಮಾಡಿ, ಅಪ್ಪನ ಫೋಟೊ ಎದುರು ಸಶಬ್ದವಾಗಿ ಬಿಕ್ಕಿ ಬಿಕ್ಕಿ ಅಳುತ್ತಾ ನಿಂತೆ. ಆ ಸಮಯದಲ್ಲಿ ನನ್ನನ್ನು ಅಪ್ಪಿಕೊಂಡು, ತಲೆನೇವರಿಸಿ, ಕಣ್ಣಿರು ಒರೆಸುವ ನನ್ನ ಅಪ್ಪ ಅಲ್ಲಿ ಇರಲಿಲ್ಲ. ಅವನ ನೆನಪಿನ ನೆರಳು ಮಾತ್ರ ಆ ಗಾಜಿನ ಚೌಕಟ್ಟಿನ ಹಿಂದೆ ಇದ್ದವು. ಈಗ ನನಗೆ ಆ ನೆನಪುಗಳೇ ಸಾಂತ್ವನ ನೀಡಬೇಕು. ನನ್ನ ಕಣ್ಣೀರನ್ನುನಾನೇ ತೊಡೆದು ಕೊಳ್ಳುತ್ತಾ, ಅಪ್ಪನ ಮುಖವನ್ನೇ ನೋಡಿದೆ. ಆ ಮುಖ ನನ್ನನ್ನು ನೋಡಿ ನಕ್ಕಿದಂತಾಯಿತು.


ಆ ಸಮಯದಲ್ಲಿ ನನಗೆ ಅಪ್ಪನ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು. 

" ಏನಪ್ಪ, ನಾನು ಅಳುತ್ತಿದ್ದರೆ ನೀನು ನಗುತ್ತಿದ್ದೀಯ? ನೀನೇಕೆ ನಮ್ಮನ್ನೆಲ್ಲರನ್ನೂ ಬಿಟ್ಟು ದೂರ ಹೋದೆ? ಇಲ್ಲಿ ನಾನು ಮತ್ತು ಅಮ್ಮ ನಿನಗಾಗಿ ಕಣ್ಣೀರಿಡುತ್ತಿರುವುದನ್ನು ನೋಡುವುದಕ್ಕೆ ನಿನಗೆ ಇಷ್ಟಾನಾ? ನೋಡು ನೀನೇನೋ ನನ್ನ ಮತ್ತು ಅಮ್ಮನನ್ನು ನಡುನೀರಿನ ಮಧ್ಯೆ ಬಿಟ್ಟು  

ಓಡಿಹೋದೆ. ನಮಗೆಷ್ಟು ಕಷ್ಟ ಆಗುತ್ತಿದೆ ಗೊತ್ತಾ? 

ಅಪ್ಪ, ನೀನು ಮೇಲಿನ ಲೋಕಕ್ಕೆ ಹೋದ ಮೇಲೆ ನಮ್ಮಿಬ್ಬರಿಗೆ ದಿಕ್ಕೇ ತೋಚದಂತಾಯಿತು. ನನ್ನ ವಿದ್ಯಾಭ್ಯಾಸ ಮುಗಿದು ಒಂದು ಕೆಲಸ ಸಿಕ್ಕಿದ್ದರಿಂದ ಜೀವನಕ್ಕೇನೋ ದಾರಿಯಾಯಿತು. ಆದರೆ ನನ್ನ ಜೀವದ ಜೀವ ವಾಗಿದ್ದ ನೀನಿಲ್ಲದೆ ನನ್ನ ಮುಖದಲ್ಲಿ ನಗುವೇ ಮರೆಯಾಗಿಹೋಗಿದೆ. ನನಗೆ ಕೆಲಸದ ಆಫರ್ ಲೆಟರ್ ಬಂದಾಗ, ಅದನ್ನು ನೋಡಿ ನೀನೆಷ್ಟು ಖುಷಿ ಪಟ್ಟಿದ್ದೆ. ಆದರೆ ನಾನು ತರುವ ಸಂಬಳವನ್ನು ನೀನು ನೋಡಲೇ ಇಲ್ಲ. ನಿನಗೇನು ಅಷ್ಟೊಂದು ಅರ್ಜೆಂಟ್ ಇತ್ತು ನಮ್ಮನ್ನು ಬಿಟ್ಟು ಹೋಗಲು? ನೀನು ತುಂಬಾ ಮೋಸಗಾರ ಆಗಿಬಿಟ್ಟೆ. ಅಂದು ನಿನಗೆ ಸ್ವಲ್ಪ ಇರುಸುಮುರುಸಾಗಿ ಎದೆನೋವು ಕಾಣಿಸಿಕೊಂಡಾಗ, ನಾನೆಷ್ಟೇ ಹೇಳಿದರೂ ನೀನು ಆಸ್ಪತ್ರೆಗೆ ಹೊರಡಲೇ ಇಲ್ಲ, ನೀನೇ ಸ್ವಯಂ ವೈದ್ಯನಂತೆ ನಿನ್ನ ಹತ್ತಿರ ಇರುವ ಮಾತ್ರೆಗಳನ್ನೇ ನುಂಗುತ್ತಾ ’ನನಗೇನೂ ಆಗಲ್ಲ, ಹೆದರಬೇಡ,ಇನ್ನೊಂದು ಸ್ವಲ್ಪ ಹೊತ್ತಿಗೆ ಎಲ್ಲಾ ಸರಿ ಹೋಗತ್ತೆ’ ಎಂದು ನಮ್ಮನ್ನೆಲ್ಲಾ ನಂಬಿಸಿ, ಕಡೆಗೂ ಕೈ ಕೊಟ್ಟು ನಡೆದೇಬಿಟ್ಟೆ. ನನ್ನ ಮಾತುಗಳನ್ನು ಕೇಳಿ ಆ ಕ್ಷಣ ನೀನು ಹಾಸ್ಪಿಟಲ್ ಗೆ ಹೊರಟಿದ್ದರೆ, ಸಕಾಲಕ್ಕೆ ವೈದ್ಯಕೀಯ ನೆರವು ದೊರಕಿ ನೀನು ಬದುಕುಳಿಯುತ್ತಿದ್ದೆಯೇನೋ ? ನೀನು ತುಂಬಾ ತಪ್ಪು ಮಾಡಿಬಿಟ್ಟೆ ಅಪ್ಪ, ನಿನ್ನನ್ನು ಬಲವಂತವಾಗಿಯಾದರೂ ನಾನು ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಬೇಕಾಗಿತ್ತು,ನಾನು ತಪ್ಪು ಮಾಡಿದೆ ಎಂಬ ಗಿಲ್ಟ್ ನನ್ನನ್ನು ಇಂದಿಗೂ ಕಾಡುತ್ತಿದೆ. ಈ ಗಿಲ್ಟ್ ನನ್ನನ್ನು ಎಂದೆಂದಿಗೂ ಕಾಡುತ್ತಲೇ ಇರುತ್ತದೆ .

ನೀನು ಯಾಕೆ ಹಾಗೆ ಮಾಡಿದೆ ? ನನಗೆ ನಿನ್ನ ಮೇಲೆ ತುಂಬಾ ಕೋಪ ಬರುತ್ತಿದೆ. ಆದರೆ ನನ್ನ ಈ ಕೋಪವನ್ನು ನೋಡಿ,ನನ್ನನ್ನು ಛೇಡಿಸಲು ನೀನೇ ಇಲ್ಲ ಬಿಡು. 


ನೀನು ಹೋದ ಮೇಲೆ ನಾನು ಮತ್ತು ಅಮ್ಮ ಎಷ್ಟೊಂದು ಅತ್ತೆವು ಗೊತ್ತಾ? ನಿನಗೆ ಹೇಗೆ ಗೊತ್ತಾಗಬೇಕು ನಮ್ಮ ಸಂಕಟ? ಅಲ್ವ? .


 ಈಗ ನಿನಗೆ ಮುಂದಿನ ಕಥೆ ಹೇಳ್ತೀನಿ. 


ಅಪ್ಪ, ನೀನು ಹೋದ ಮೇಲೆ ಒಂದೆರಡು ತಿಂಗಳು ಕಳೆಯುವುದನ್ನೇ ಕಾದಿದ್ದು ನಿನ್ನ ಅಣ್ಣ ಅಂದರೆ ನನ್ನ ದೊಡ್ಡಪ್ಪ, ನಿನ್ನ ಅಕ್ಕ ತಂಗಿಯರೆಲ್ಲಾ ಸೇರಿ, ನೀನು ಹೋದ ವರ್ಷದೊಳಗೆ ನನಗೆ ಮದುವೆ ಮಾಡಿದರೆ ನಿನಗೆ ಕನ್ಯಾದಾನದ ಫಲ ದೊರೆಯುತ್ತದೆಂದು ಹೇಳಿ ನನಗೆ ಮದುವೆ ಗೊತ್ತು ಮಾಡಿದರು. ನಿನಗೆ ಒಳ್ಳೆಯದಾಗುವುದೆಂದರೆ ಅದಕ್ಕಿಂತ ನನಗೇನು ಬೇಕು ? ಮನಸ್ಸಿಲ್ಲದ ಮನಸ್ಸಿನಿಂದ ಮದುವೆಗೆ ಸಮ್ಮತಿಸಿದೆ. 

ಅಪ್ಪ ನಿನಗೆ ಗೊತ್ತಾ ನನ್ನನ್ನು ಮದುವೆಯಾಗುತ್ತಿರುವ ರಾಹುಲ್ ನನ್ನ ಚಿಕ್ಕಂದಿನ ಗೆಳೆಯ. ನಾವೆಲ್ಲ ಮೈಸೂರಿನಲ್ಲಿದ್ದಾಗ, ನನ್ನ ಜೊತೆಗೇ ಶಾಲೆಗೆ ಬರುತ್ತಿದ್ದನಲ್ಲ, ಅವನೆ. ನಿನಗೆ ಖುಶಿನಾ? 

ಆದರೆ ಅಪ್ಪ, ನೀನಿಲ್ಲದೇ ನನಗೆ ಎಲ್ಲವೂ ಶೂನ್ಯವೆನಿಸುತ್ತಿದೆ. ಇಂದು ಹಸೆಮಣೆಯಲ್ಲಿ ನಿನ್ನ ಜಾಗದಲ್ಲಿ ದೊಡ್ಡಪ್ಪ ಕುಳಿತುಕೊಳ್ಳುವಂತಾಯಿತು. ನನಗೆಷ್ಟು ಬೇಸರವಾಗಿದೆ ಗೊತ್ತ? ನನ್ನ ಮದುವೆಯನ್ನು ನನ್ನ ಅಪ್ಪನೇ ಮಾಡಬೇಕಾಗಿತ್ತು. ಅಪ್ಪ, ನಾನೇ ದುರದೃಷ್ಟದ ಮಗಳಾಗಿಬಿಟ್ಟೆನಲ್ಲಾ? ತಪ್ಪು ಯಾರದೋ? ಒಟ್ಟಿನಲ್ಲಿ ಅದರ ಫಲವನ್ನು ನಾನು ಮತ್ತು ಅಮ್ಮ ಅನುಭವಿಸುವಂತಾಯಿತು. ನನಗಂತೂ ಇಂದು ಅಮ್ಮನ ಮುಖವನ್ನು ದಿಟ್ಟಿಸಿ ನೋಡಲಾಗುತ್ತಿಲ್ಲ. ಅವಳಿಗೂ ತುಂಬಾ ಬೇಜಾರು. ಒಬ್ಬಳೆ ಮಗಳ ಮದುವೆಯಲ್ಲಿ ತಾನು ಮೂರನೆಯವಳಂತೆ ದೂರ ನಿಂತು ನೋಡಬೇಕಾಗಿದೆಯಲ್ಲ ? ತಂದೆ ತಾಯಿಯರಿಬ್ಬರೂ ಸೇರಿ ಸಂಭ್ರಮದಿಂದ ಮಗಳ ಮದುವೆ ಮಾಡಿಕೊಡಲಾಗುತ್ತಿಲ್ಲವಲ್ಲ? ಎಂಬ ನೋವು ಅವಳನ್ನು ನುಂಗುತ್ತಿದೆ. ನಾವಿಬ್ಬರೂ ಒಬ್ಬರಿಗೋಸ್ಕರ ಮತ್ತೊಬ್ಬರು ನಮ್ಮ ದುಗುಡವನ್ನು ಒಳಗೇ ಹಿಡಿದಿಟ್ಟು ಕೊಂಡಿದ್ದೀವಿ. ಅಪ್ಪ, ನೀನೇನೋ ಹೋಗಿಬಿಟ್ಟೆ, ಬದುಕಿರುವ ನಮ್ಮ ಮುಂದಿನ ರಥಯಾತ್ರೆ ನಡೆಯಲೇ ಬೇಕಲ್ಲ. ಹೀಗಾಗಿ ಎಲ್ಲವೂ ಸಾಂಗೋಪಾಂಗವಾಗಿಯೇ ನಡೆಯುತ್ತಿದೆ. ನೀನು ಈ ಫೋಟೊ ಒಳಗಿನಿಂದಲೇ ನೋಡಿಕೊ ಆಯ್ತ, ನೀನು ನನಗೆ ಯಾವಾಗಲೂ ಹೇಳುತ್ತಿದ್ದೆಯಲ್ಲ,ನೆನಪಿದೆಯಾ? ಎಷ್ಟೇ ಕಷ್ಟ ಬಂದರೂ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಾ ಕೂರಬಾರದು. ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕೆಂದು. ಅದರಂತೆಯೇ ನಾನು ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತಿದ್ದೇನೆ. ನನಗೆ ನೀನೇ ಗುರು, ಮಾರ್ಗದರ್ಶಕ, ಆದರ್ಶಪುರುಷ ,ಫಿಲಾಸಫರ್, ಗೈಡ್ ಎಲ್ಲವೂ ಕೂಡ.ನನ್ನ ಗಾಡ್ ಫಾದರ್. ನನ್ನ ಚಿಕ್ಕ ವಯಸ್ಸಿನಿಂದ ದೊಡ್ಡವಳಾಗಿ ಬೆಳೆಯುವವರೆಗೂ, ನೀನು ನನಗಾಗಿ ಎಷ್ಟೊಂದು ಮಾಡಿದ್ದೀಯ, ಅದನ್ನು ನಾನೆಂದಿಗೂ ಮರೆಯಲಾರೆ.

ಅಪ್ಪ, ನಾನು ನಡೆಯಲು ಪ್ರಾರಂಭಿಸಿದಾಗ ನನ್ನ ಕೈ ಹಿಡಿದು ನಡೆಯುವುದನ್ನು ಕಲಿಸಿದೆ, ನನ್ನ ಬೆರಳುಗಳನ್ನು ಹಿ ಡಿದು ಅಕ್ಷರಗಳನ್ನು ತಿದ್ದಿಸಿದೆ. ನಾನು ಶಾಲೆಗೆ ಹೋಗುವಾಗ, ತಿಂಡಿ ತಿನ್ನಲು ಹಠ ಮಾಡಿದರೆ , ನನ್ನ ಹಿಂದೆ ಹಿಂದೆಯೇ ಓಡಾಡುತ್ತ, ತಿಂಡಿ ತಿನ್ನಿಸುತ್ತಿದ್ದೆ. ನಾನು ಖಾಯಿಲೆ ಬಿದ್ದಾಗ, ನೀನೆಷ್ಟು ಒದ್ದಾಡಿದ್ದೆ?.ಒಂದು ಬಾರಿ ನನಗೆ ವಿಷಮಶೀತ ಜ್ವರ ಬಂದಾಗ, ನನ್ನ ಬಳಿಯೇ ಕುಳಿತು, ರಾತ್ರಿಯಿಡೀ ಎಚ್ಚರವಾಗಿದ್ದು ನನ್ನ ಶುಶ್ರೂಷೆ ಮಾಡುತ್ತಾ, ಎಷ್ಟು ರಾತ್ರಿ ನೀನು ಜಾಗರಣೆ ಮಾಡಿದ್ದೆಯೋ? ಅಮ್ಮನಿಗೆ ನಿದ್ರೆಗೆಟ್ಟರೆ ಆಗುವುದಿಲ್ಲವೆಂದು ನೀನೇ ಎಚ್ಚರವಾಗಿರುತ್ತಿದ್ದೆ. ಮಗಳೆಂದರೆ ನಿನಗೆ ಎಂತಹ ಮಮಕಾರ ? ನನ್ನ ಬಾಯಿಯಲ್ಲಿ ಬಂದ ತಕ್ಷಣ ನಾ ಕೇಳಿದ ವಸ್ತುಗಳನ್ನು ತಂದು ನನ್ನ ಮುಂದೆ ಇಡುತ್ತಿದ್ದೆ. ಆ ನಿನ್ನ ಪ್ರೀತಿ ವಾತ್ಸಲ್ಯಗಳಿಗೆ ಬೇರಾವುದೂ ಸಾಟಿಯಲ್ಲ.

ನಾನು ಪ್ರೈಮರಿ ಶಾಲೆಯ ಕೊನೆಯ ವರ್ಷದಲ್ಲಿದ್ದಾಗ, ನನಗೆ ಎರಡು ಚಕ್ರದ ದೊಡ್ಡ ಬೈಸಿಕಲ್ ತೆಗೆಸಿಕೊಟ್ಟು ಅದನ್ನು ಓಡಿಸುವುದನ್ನು ಕಲಿಸಿದೆ. ನಿನಗೆ ಜ್ಞಾಪಕ ಇದೆಯ ಅಪ್ಪ, ನನಗೆ ಬೈಸಿಕಲ್ ಬ್ಯಾಲೆನ್ಸ್ ಮಾಡಲು ಬರದೇ ಇದ್ದಾಗ,ನನ್ನ ಹಿಂದೆ ಹಿಂದೆ ಓಡುತ್ತಾ ಓಡುತ್ತ,ಬರುತ್ತಿದ್ದೆ. ಒಂದು ಬಾರಿ ನೀನು ಕೈ ಬಿಟ್ಟಾಗ, ನಾನು ಬ್ಯಾಲೆನ್ಸ್ ತಪ್ಪಿ ಬೈಸಿಕಲ್ ಅನ್ನು ಮೈಮೇಲೆ ಬೀಳಿಸಿಕೊಂಡು ನೆಲದ ಮೇಲೆ ಬಿದ್ದಾಗ, ನನ್ನ ಮೊಳಕೈ ತರಚಿ ರಕ್ತ ಸುರಿಯಿತು, ನಾನು ಜೋರಾಗಿ ಅಳುತ್ತಿದ್ದಾಗ,ನನ್ನನ್ನು ಹೆಗಲಲ್ಲಿ ಹಾಕಿಕೊಂಡು ಒಂದು ಕೈಯಲ್ಲಿ ನನ್ನ ಸೈಕಲ್ ತಳ್ಳಿಕೊಂಡು ಬಂದೆ. ನಂತರ ನನ್ನ ಕೈಗೆ ಔಷಧಿ ಹಚ್ಚಿ ಬ್ಯಾಂಡೆಜ್ ಮಾಡುವಾಗ ನಾನು ಹೋ ಎಂದು ಕಿರುಚುತ್ತಾ ಅಳುತ್ತಿದ್ದಾಗ, ನೀನು ತಕ್ಷಣ ನನಗೊಂದು ಡೈರಿಮಿಲ್ಕ್ ಚಾಕೊಲೆಟ್ ಕೊಟ್ಟು ಅಳುನಿಲ್ಲಿಸಿದ್ದೆ.ಮುಂದೆ ನಾನು ಸೈಕಲ್ ಕಲಿತು ಒಬ್ಬಳೇ ಬೀದಿಯಲ್ಲಿ ಓಡಿಸುತ್ತಿದ್ದಾಗ, ನೀನು ಗೇಟ್ ಗೆ ಒರಗಿ ನಿಂತು ನನ್ನನ್ನೇ ಗಮನಿಸುತ್ತಿದ್ದೆ. ಅಪ್ಪ, ಆ ದಿನಗಳು ಎಷ್ಟು ಚೆನ್ನಾಗಿದ್ದವಲ್ಲ? 


ನೀನು ಅಮ್ಮನಾಗಿಯೂ ನನ್ನನ್ನು ನೋಡಿಕೊಂಡ ಆ ದಿನಗಳನ್ನು ನಾನು ಹೇಗೆ ಮರೆಯಲಿ ತಂದೆ? ಅಮ್ಮ ಆಫೀಸ್ ನ ಕೆಲಸದ ಮೇಲೆ ಕೆಲವು ದಿನಗಳು ಆಗಾಗ್ಗೆ ಪರಸ್ಥಳಕ್ಕೆ ಹೋಗುತ್ತಿದ್ದಾಗ, ನನಗೆ ಕಷ್ಟ ಗೊತ್ತಾಗದಂತೆ, ಅಮ್ಮ ಮಾಡುತ್ತಿದ್ದ ಎಲ್ಲಾ ಕೆಲಸಗಳನ್ನೂ ಮಾಡಿ, ನನ್ನನ್ನು ನೋಡಿಕೊಳ್ಳುತ್ತಿದ್ದ 

ನೀನು ನನಗೆ ಅಮ್ಮನೂ ಆಗುತ್ತಿದ್ದೆ. ಅಪ್ಪ,ನೀನ್ಯಾಕೆ ಅಷ್ಟೊಂದು ಒಳ್ಳೆಯವನಾಗಿದ್ದೆ? ಅದಕ್ಕೆ ಆ ದೇವರಿಗೂ ನೀನೇ ಬೇಕಾಯಿತು.  


 ನಾನು ಕಾಲೇಜ್ ಗೆ ಬಂದ ಕೂಡಲೇ ನನ್ನ ಟ್ಯೂಷನ್ ಗಳಿಗೆ ಓಡಾಡಲು ಕಷ್ಟವಾಗುತ್ತದೆಂದು ತಿಳಿದು,ನನಗೆ ಸ್ಕೂಟಿ ಕೊಡಿಸಿದಾಗ,ಅಮ್ಮ ಹೆದರಿ ಹೌಹಾರಿದರೂ 

ನೀನು ನನಗೆ ಧೈರ್ಯ ತುಂಬಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದೆ. ನಂತರ , ,ಇಂಜಿನಿಯರಿಂಗ್ ಗೆ ಸೇರಿದಾಗ, ನನಗೆ ಕಾರ್ ಡ್ರೈವಿಂಗ್ ಕಲಿಸಿ, ನನಗೆ ಹದಿನೆಂಟು ವರ್ಷ ತುಂಬಿದ ಕೂಡಲೇ ಡ್ರೈವಿಂಗ್ ಲೈಸೆನ್ಸ್ ತೆಗೆದುಕೊಳ್ಳುವವರೆಗೂ ನೀನು ನನ್ನ ಬೆಂಬಲವಾಗಿ ನಿಂತೆ,. ನಾನು ಕಾರ್ ಓಡಿಸುವುದನ್ನು ಹೆಮ್ಮೆಯಿಂದ ನೋಡುತ್ತಾ, ನಿನ್ನ ಎಲ್ಲಾ ಸ್ನೇಹಿತರೆದುರು ಜಂಭ ಕೊಚ್ಚಿಕೊಳ್ಳುತ್ತಿದ್ದೆ. ಆಗ ನಿನ್ನ ಮುಖ ಹೇಗೆ ಅರಳುತ್ತಿತ್ತು ಗೊತ್ತಾ? ಹೆಣ್ಣು ಮಕ್ಕಳು ಕಾಲಕ್ಕೆ ತಕ್ಕಂತೆ ಬದಲಾಗಿ, ಜೀವನದಲ್ಲಿ ಎಂತಹ ಕಷ್ಟ ಬಂದರೂ ಧೈರ್ಯದಿಂದ ಎದುರಿಸಬೇಕೆಂದು ನೀನು ನನಗೆ ಹೇಳುತ್ತಲೇ ಇದ್ದೆ. ಅದರ ಪ್ರತಿಫಲವೋ ಎಂಬಂತೆ, ನನ್ನ ಜೀವನದಲ್ಲೇ ಎಂತಹ ಕಷ್ಟ ತಂದು ಕೊಟ್ಟೆ ಅಪ್ಪ, ನಾನು ನೀನು ಹೇಳಿದಂತೆ ಧೈರ್ಯವಾಗಿರುತ್ತೇನೆ ಅಪ್ಪ.  ನಾನು ಮದುವೆಯಾಗುತ್ತಿರುವ ಹುಡುಗ ರಾಹುಲ್ ಇದ್ದಾನಲ್ಲ, ಅವನು ನನ್ನ ಸ್ಕೂಲ್ ಫ್ರೆಂಡ್. ನಾವು ಮೈಸೂರಿನಲ್ಲಿದ್ದಾಗ ಅವನು ನಮ್ಮ ಮನೆಗೆ ಆಟವಾಡಲು ಬರುತ್ತಿದ್ದ. ನನ್ನ ಸೈಕಲ್ ಅನ್ನು ಅವನು ಓಡಿಸುತ್ತಿದ್ದ. ಒಮ್ಮೆ ಅವನ ಹಿಂದೆ ಸೈಕಲ್ ಮೇಲೆ ಕುಳಿತು ಅವನೊಂದಿಗೆ ಹೋದಾಗ, ನನ್ನನ್ನು ಕೆಳಗೆ ಬೀಳಿಸಿಬಿಟ್ಟಿದ್ದ.ಆಗ ನೀನು ನನಗೆ ಸಮಾಧಾನ ಮಾಡಿದ್ದಲ್ಲದೇ, ಅವನಿಗೂ ಧೈರ್ಯ ಹೇಳಿ ಕಳುಹಿಸಿದ್ದೆ. ಈಗ ಅವನೂ ಸಹ ಒಂದು ಎಮ್.ಎನ್.ಸಿ.ಯಲ್ಲಿ ನನ್ನಂತೆ ಸಾಫ್ಟ್ವೆರ್ ಇಂಜಿನಿಯರ್. ಅವನು ನನ್ನ ಅಮ್ಮನನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ನನಗೆ ಪ್ರಾಮಿಸ್ ಮಾಡಿದ್ದಾನೆ ಗೊತ್ತ? ಆ ನಂತರವೇ ನಾನು ಈ ಮದುವೆಗೆ ಒಪ್ಪಿಕೊಂಡಿರುವುದು. ಆದರೂ ನನಗೆ ತುಂಬಾ ಅಳು ಬರ್ತಿದೆ ಅಪ್ಪ, ನೀನಿಲ್ಲದೆ,ನನ್ನ ಮದುವೆ ಅಂದರೆ ಹೇಗೆ? ಆ ದೇವರು ಎಷ್ಟು ಕೆಟ್ಟವನಪ್ಪ, ನಿನ್ನಂತಹ ಒಳ್ಳೆಯವರೇ ಅವನಿಗೂ ಬೇಕಾಗಿತ್ತೇನೋ?

 

ಅಪ್ಪ ನಿನಗೆ ಇನ್ನೊಂದು ವಿಷಯ ಗೊತ್ತಾ? ನನ್ನನ್ನ ನೋಡಿದವರೆಲ್ಲಾ ರೂಪಿನಲ್ಲಿ ನಾನು ನಿನ್ನನ್ನೇ ಹೋಲುತ್ತೇನೆಂದು ಹೇಳುತ್ತಿರುತ್ತಾರೆ. 

"ಧನ್ಯಾ ಪಿತೃಮುಖೀ ಕನ್ಯಾ" ಅಂತೆ. ಅಂದರೆ ತಂದೆಯನ್ನು ಹೋಲುವ ಹೆಣ್ಣುಮಕ್ಕಳು ತುಂಬಾ ಅದೃಷ್ಟವಂತರಂತೆ. ಆದರೆ ನನಗೇನೋ ಹಾಗನ್ನಿಸಲ್ಲ, ಯಾಕೆ ಗೊತ್ತ, ನಾನು ಅದೃಷ್ಟವಂತಳಾಗಿದ್ದಿದ್ದರೆ, ಇಂದು ನೀನು ಹಸೆಮಣೆಯಲ್ಲಿ ಕುಳಿತು ನನಗೆ ಮದುವೆ ಮಾಡುತ್ತಿದ್ದೆ. ಏನೇ ಆಗಲಿ, ನಾನು ನಿನ್ನಂತೆಯೇ ಇದ್ದೀನಿ ಎಂದು ಎಲ್ಲರೂ ಹೇಳುವಾಗ ನನಗೆಷ್ಟು ಖುಷಿ ಆಗುತ್ತದೆ ಗೊತ್ತಾ? " ಅಪ್ಪನೊಂದಿಗೆ ಮಾತನಾಡುತ್ತಿದ್ದ ನನಗೆ ಹೊರಗಿನಿಂದ ಅಮ್ಮನ ಧ್ವನಿ ಕೇಳಿಸಿದಾಗ, ವಾಸ್ತವದ ನೆನಪಾಯಿತು.  


"ನಿಧಿ,ನಿಧಿ,ರೂಮಿನೊಳಗೆ ಏನು ಮಾಡುತ್ತಿದ್ದೀಯ? 

ಹೊರಗೆ ಬಾಮ್ಮ, ಶಾಸ್ತ್ರಿಗಳು ನಿನ್ನನ್ನು ಕರೆಯುತ್ತಿದ್ದಾರೆ"

ಹೊರಗಿನಿಂದ ಅಮ್ಮ ಬಾಗಿಲು ಬಡಿದಾಗ,

"ಅಪ್ಪ, ನೋಡು ನನ್ನನ್ನು ಹೊರಗೆ ಕರೆಯುತ್ತಿದ್ದಾರೆ. ಈಗ ಹೋಗಿ ಬರುತ್ತೇನೆ,ಮತ್ತೆ ರಾತ್ರಿ ಬಂದು ನಿನ್ನ ಹತ್ತಿರ ಮಾತನಾಡುತ್ತೇನೆ. ಅಪ್ಪ, ರಿಯಲಿ ಐ ಮಿಸ್ ಯು ಮೈ ಡ್ಯಾಡ್.....ಬೈ ಬೈ" ಫೋಟೊ ಒಳಗಿದ್ದ ಅಪ್ಪನ ಕೆನ್ನೆಗಳಿಗೆ ಮುತ್ತಿಕ್ಕಿ ತನ್ನ ದುಃಖವನ್ನು ಸಮಾಧಾನ ಮಾಡಿಕೊಳ್ಳುತ್ತಿರುವಾಗ ಮತ್ತೊಮ್ಮೆ ಹೊರಗಿನಿಂದ ಬಾಗಿಲು ಬಡಿಯುವ ಶಬ್ದ ಕೇಳಿಸಿದಾಗ, ಅಪ್ಪನಿಗೆ ಬೈ ಹೇಳಿ ಮನಸ್ಸಿಲ್ಲದ ಮನಸ್ಸಿನಿಂದ ಹೊರ ಬಂದೆ. 


ನನ್ನ ಮದುವೆಯಲ್ಲಿ ಯಾವ ಕುಂದುಕೊರತೆಗಳು ಬಾರದಂತೆ ನನ್ನ ಸೋದರಮಾವ, ಚಿಕ್ಕಪ್ಪ ಚಿಕ್ಕಮ್ಮಂದಿರು ಅಚ್ಚುಕಟ್ಟಾಗಿಯೇ ನೋಡಿಕೊಂಡರು. ಆದರೆ ನನಗೆ ಮಾತ್ರ ನನ್ನ ಅಪ್ಪನ ನೆನಪು ಸದಾ ಕಾಡುತ್ತಿತ್ತು. ಸುತ್ತಲೂ ಎಷ್ಟೇ ಜನರಿದ್ದರೂ ಅಪ್ಪನಿಲ್ಲದ ಕೊರಗು ನನ್ನನ್ನು ಒಳಗೊಳಗೇ ಭಾಧಿಸುತ್ತಲೇ ಇತ್ತು.ಮಂಟಪದಲ್ಲಿ ಸಪ್ಪೆಯಾಗಿದ್ದ  

ನನ್ನ ಮುಖವನ್ನೇ ಗಮನಿಸುತ್ತಿದ್ದ ರಾಹುಲ್ ಒಮ್ಮೆ ನನ್ನ ಕೈ ಅದುಮಿ,ಕಣ್ಣಿನಲ್ಲೇ "ಹೆದರಬೇಡ,ನಾನಿದ್ದೇನೆ" ಎಂದು ಭರವಸೆ ನೀಡಿದಾಗ, ದುಗುಡ ತುಂಬಿದ್ದ ಮನಸ್ಸು ಸ್ವಲ್ಪ ಹಗುರವಾದಂತಾಯಿತು.


Rate this content
Log in

Similar kannada story from Abstract